ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿಗೆ ಸಮೀಪದ ಒತ್ತಿನಣೆ ಬಳಿ ಕಂಟೇನರ್ ಹಾಗೂ ಸಾಂಟ್ರೊ ಕಾರಿನ ನಡುವಿನ ಭೀಕರ ಅಪಘಾತದಲ್ಲಿ ತಾಯಿ ಹಾಗೂ ಮೂರು ತಿಂಗಳ ಹಸುಗೂಸು ಸ್ಥಳದಲ್ಲಿಯೇ ಮೃತಪಟ್ಟು ಈರ್ವರು ಗಾಯಗೊಂಡ ದಾರುಣ ಘಟನೆ ವರದಿಯಾಗಿದೆ. ಕಾರಿನಲ್ಲಿದ್ದ ನಾಲ್ಕರ ಪೈಕಿ ಸಾರಾ (25), ಆಕೆಯ ಮಗಳು ಫಾತಿಮಾ ಸ್ಥಳದಲ್ಲಿಯೇ ಮೃತಪಟ್ಟಿದ್ದರೇ, ಆಕೆಯ ಪತಿ ಅಬು ಸಲ್ಮಾನ್ (35), ಹಾಗೂ ಮಗ ಮೊಹಮ್ಮದ್ ರಜೀಕ್ (5) ಗಂಭೀರ ಗಾಯಗೊಂಡಿದ್ದಾರೆ.
ಘಟನೆಯ ವಿವರ:
ಹೊನ್ನಾವರದ ಸಾರಾ ಅವರ ತವರು ಮನೆಯಿಂದ ಕುಂದಾಪುರದ ಹಂಗಳೂರಿಗೆ ತೆರಳುತ್ತಿದ್ದ ಸಂದರ್ಭ ಬೈಂದೂರು ಬಳಿಕ ಒತ್ತಿನಣೆಯಲ್ಲಿ ಈ ದುರ್ಘಟನೆ ನಡೆದಿದೆ. ಕಾರು ಚಲಾಯಿಸುತ್ತಿದ್ದ ಸಲ್ಮಾನ್ ಅವರಿಗೆ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಕಂಟೇನರ್‌ಗೆ ಢಿಕ್ಕಿ ಹೊಡೆದಿದ್ದರ ಕಾರು ಸೀದಾ ಕಂಟೇನರ್ ಹಿಂಭಾಗಕ್ಕೆ ನುಗ್ಗಿ ಜರ್ಜರಿತವಾಗಿದ್ದು ತಾಯಿ ಮಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ರಫೀಕ್‌ನಲ್ಲಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೇ, ಸಲ್ಮಾನ್ ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪ್ರ ಡಾಟ್ ಕಾಂ.
ಮೂರು ತಿಂಗಳ ಮಗು ಸಾವು:
ತಾಯಿಯೊಂದಿಗೆ ಇನ್ನೂ ಪ್ರಪಂಚವನ್ನೇ ಸರಿಯಾಗಿ ಅರಿಯದ ಮೂರು ತಿಂಗಳ ಹೆಣ್ಣು ಮಗಳು ಫಾತಿಮಾ ಘಟನೆಯಲ್ಲಿ ಮೃತಪಟ್ಟಿರುವುದು ನೆರೆದಿದ್ದವರ ಕಣ್ಣುಗಳನ್ನು ತೇವವಾಗಿಸಿತ್ತು. ನೂರಾರು ಅಫಘಾತಗಳನ್ನು ನೋಡುವ ಬೈಂದೂರು ಎಸೈ ಮಗುವನ್ನು ಕಾರಿನಿಂದ ಹೊರತೆಗೆಯುವಾಗ ಒಂದು ಕ್ಷಣ ವಿಚಲಿತರಾಗಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಲತಃ ಕೊಡಿಯವರಾದ ಅಬು ಸಲ್ಮಾನ್ ಕುಂದಾಪುರದ ಹಂಗಳೂರಿನಲ್ಲಿ ಟೈಲರಿಂಗ್ ವೃತ್ತಿ ನಿರ್ವಹಿಸುತ್ತಿದ್ದರು. ಪತ್ನಿಯನ್ನು ಮರಳಿ ಕರೆತರುವ ಸಲುವಾಗಿ ಹೊನ್ನಾವರಕ್ಕೆ ತೆರಳಿದ್ದರು. ಅಲ್ಲಿ ಮದುವೆ ಕಾರ್ಯ ಮುಗಿಸಿಕೊಂಡು ಇಂದು ಸಂಜೆ ವೇಳೆಗೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. © ಕುಂದಾಪ್ರ ಡಾಟ್ ಕಾಂ.