ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಎ.18: ಉಡುಪಿ ಜಿಲ್ಲೆ ಸದ್ಯ ಕೊರೋನಾ ಮುಕ್ತ ಜಿಲ್ಲೆ ಎಂದೆನಿಸಿಕೊಂಡಿದೆ. ಈವರೆಗೆ ವರದಿಯಾಗಿದ್ದ 3 ಕೊರೋನಾ ವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ. ಮೂರನೇ ವ್ಯಕ್ತಿಯು (ಪಿ-83) ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಯಾವುದೇ ಹೊಸ ಸಕ್ರಿಯ ಪ್ರಕರಣ ಈವರೆಗೆ ದಾಖಲಾಗಿಲ್ಲ.
ಮಾ. 24ರಂದು ಕೇರಳದಿಂದ ಆಗಮಿಸಿದ್ದ ಉಡುಪಿ ಮೂಲದ 29 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಆತನನ್ನು ಉಡುಪಿಯ ಟಿ.ಎಂ.ಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕದ ಎರಡು ವರದಿಯಲ್ಲಿ ನೆಗೆಟಿವ್ ವರದಿ ಬಂದಿದ್ದರಿಂದ ಶನಿವಾರ ಮಧ್ಯಾಹ್ನ ಆ ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಬಿಡುಗಡೆ ಬಳಿಕವೂ 14ದಿನಗಳ ಕಾಲ ಹೋಮ್ ಕ್ವಾರೆಂಟೈನ್‌ನಲ್ಲಿ ಇರುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಜಿಲ್ಲೆಗೆ ದುಬೈನಿಂದ ಬಂದಿದ್ದ ಕೊರೋನಾ ಸೋಂಕಿತ ಮೊದಲು ಹಾಗೂ ಎರಡನೇ ವ್ಯಕ್ತಿಗಳು ಇತ್ತಿಚಿಗಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಕೊರೋನಾ ಪಾಸಿಟಿವ್‌ನಿಂದ ಚಿಕಿತ್ಸೆಗಾಗಿ ದಾಖಲಾಗಿದ್ದ ಭಟ್ಕಳದ ಮಹಿಳೆಯು ಗುಣಮುಖರಾಗಿದ್ದು, ಎರಡನೇ ವರದಿ ಬಂದ ನಂತರ ಬಿಡುಗಡೆಗೊಳಿಸಲಾಗುತ್ತದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/
ಕೊರೊನಾ ಮಾದರಿ ಪರೀಕ್ಷೆಯಲ್ಲಿ ಉಡುಪಿ ನಂಬರ್ ಒನ್
ಕೊರೊನಾ ಸೋಂಕು ಮಾದರಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಕೊರೊನಾ ಮಾದರಿ ಟೆಸ್ಟಿಂಗ್ ಕುರಿತು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಜಿಲ್ಲಾವಾರು ಮಾಹಿತಿಯ ಬಿಡುಗಡೆಯಾಗಿದ್ದು, ಉಡುಪಿ ಜಿಲ್ಲೆ 11,77,361 ಜನಸಂಖ್ಯೆ ಹೊಂದಿದ್ದು, 403 ಕೊರೊನಾ ಮಾದರಿ ಪರೀಕ್ಷೆ ಮಾಡಲಾಗಿದ್ದು, ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಹೋಲಿಸಿದರೆ 34 ಮಾದರಿ ಪರೀಕ್ಷೆಗಳನ್ನು ನಡೆಸಿದಂತಾಗಿದೆ. ಈ ಪ್ರಮಾಣ ರಾಜ್ಯದಲ್ಲೇ ಅತಿ ಹೆಚ್ಚು ಎನ್ನಲಾಗಿದೆ.
ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು ಇಲ್ಲದಿದ್ದರೂ ಲಾಕ್‌ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದೆ.
ತೀವ್ರ ಉಸಿರಾಟ ತೊಂದರೆ ಇರುವ ರೋಗಿಗಳು ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡಿ: ಜಿಲ್ಲಾಧಿಕಾರಿ
ಜಿಲ್ಲೆಯ ಯಾವುದೇ ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳಿಗೆ ತೀವ್ರ ಉಸಿರಾಟ ತೊಂದರೆ , ಜ್ವರ ಮತ್ತು ಶೀತ ಕೆಮ್ಮು ಇರುವ ರೋಗಿಗಳು ಕಂಡುಬಂದಲ್ಲಿ ಅವರ ವಿವರಗಳನ್ನು ಜಿಲ್ಲಾಡಳಿತಕ್ಕೆ ನೀಡುವಂತೆ , ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ಗಳ ವೈದ್ಯರಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಕೋವಿಡ್ -19 ನಿಯಂತ್ರಣ ಕುರಿತಂತೆ ರಚಿಸಲಾಗಿರುವ ಜಿಲ್ಲಾ ತಜ್ಞರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದಾಖಲಾಗಿದ್ದ 3 ಕೊರೋನಾ ರೋಗಿಗಳು ಆಸ್ಪತ್ರೆಯಿಂದ ಗುಣಮುಖರಾಗಿ ತೆರಳಿದ್ದು, ಜಿಲ್ಲೆಯ ಒಳಗೆ ಇನ್ನು ಕೊರೋನ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದೆ ಆದ್ದರಿಂದ ಜಲ್ಲೆಯ ಗಡಿಗಳನ್ನು ಈಗಾಗಲೇ ಸೀಲ್ ಮಾಡಿದ್ದು, ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ, ತುರ್ತು ವೈದ್ಯಕೀಯ ಪ್ರಕರಣಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ, ಮುಂಜಾಗ್ರತೆಯಾಗಿ ಜಿಲ್ಲೆಯಲ್ಲಿ ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳಿಗೆ ತೀವ್ರ ಉಸಿರಾಟ ತೊಂದರೆ ಮತ್ತು ಶೀತ ಕೆಮ್ಮು ಇರುವ ರೋಗಿಗಳು ಚಿಕಿತ್ಸೆಗಾಗಿ ಬಂದಲ್ಲಿ, ಅವರ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ದಾಖಲಿಸಿಕೊಂಡು ಜಿಲ್ಲಾಡಳಿತಕ್ಕೆ ನೀಡುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಇದನ್ನೂ ಓದಿ:
► ಉಡುಪಿ ಜಿಲ್ಲೆ: ಮೂವರು ಕೊರೋನಾ ಪಾಸಿಟಿವ್ ವ್ಯಕ್ತಿಗಳು ಗುಣಮುಖ – https://kundapraa.com/?p=36889 .