ನಾಳೆಗಳ ನಿರ್ಮಾಣದಲ್ಲಿ ಇಂದಿನ ತಪ್ಪು ಮರುಕಳಿಸದಂತೆ ಎಚ್ಚರ ವಹಿಸುವುದು ಅಗತ್ಯ: ಡಾ. ಬಿ.ಎನ್. ಸುಮಿತ್ರಾ ಬಾಯಿ

Click Here

Call us

Call us

ನಾಳೆಗಳ ನಿರ್ಮಾಣ ಎಂಬುದು ಹಿಂದಿನ ತಪ್ಪುಗಳ ಮರುಕಳಿಕೆಯೋ ಮುಂದುವರಿಕೆಯೋ ಆಗದಂತೆ ಎಚ್ಚರವಹಿಸುವುದೇ ಈಗ ಆಗಬೇಕಾದ ಮೊದಲ ಕೆಲಸ. ಹಿಂದಿನಿಂದ ಉಳಿದು ಬರುತ್ತಿರುವ ಸಾಂಸ್ಕೃತಿಕ ನೆನಪುಗಳು ಇಂದಿಗೂ, ಮುಂದಕ್ಕೂ ಮನುಕುಲಕ್ಕೆ ಎಷ್ಟು ಉಪಯುಕ್ತ, ಎಷ್ಟರಮಟ್ಟಿಗೆ ಅವು ನಮ್ಮನ್ನೂ, ನಾಳೆಗಳನ್ನೂ ಒಳಿತಿನತ್ತ, ಉನ್ನತಿಯತ್ತ ಕರೆದೊಯ್ಯಬಲ್ಲವು ಎನ್ನುವ ಎಚ್ಚರದ ವಿವೇಚನೆಯಿದ್ದಾಗ ಮಾತ್ರ ಸಾಂಸ್ಕೃತಿಕ ಸ್ಮೃತಿಯು ಒಂದು ಬೆಳಕಾಗಿ, ಒಂದು ಚೈತನ್ಯವಾಗಿ ಇಂದುಗಳನ್ನು ಎದುರಿಸಲು ನಮ್ಮ ಬೆನ್ನ ಬಲವಾಗಬಹುದು; ಹಾಗೆಯೇ ಭಾವೀ ಜನಾಂಗದ ಆತ್ಮಶಕ್ತಿಯನ್ನು ಕುಗ್ಗದ ಹಾಗೆ ಕಾಪಾಡುವ ಶಕ್ತಿಯೂ ಆಗಬಲ್ಲದು. – ಡಾ. ಬಿ.ಎನ್. ಸುಮಿತ್ರಾ ಬಾಯಿ, ಸಮ್ಮೇಳನಾಧ್ಯಕ್ಷೆ

Call us

Call us

Visit Now

ನಾಡು ನುಡಿ ಸಂಸ್ಸೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ೨೦೧೬ರ ಸಮ್ಮೇಳನಾಧ್ಯಕ್ಷೆ ಡಾ. ಬಿ.ಎನ್. ಸುಮಿತ್ರಾ ಬಾಯಿ ಅವರ ಭಾಷಣದ ಪೂರ್ಣಪಾಠ

Click here

Click Here

Call us

Call us

ಮೂಡುಬಿದಿರೆ, ರತ್ನಾಕರವರ್ಣಿ ವೇದಿಕೆ: ಆಳ್ವರ ನುಡಿಸಿರಿ ರಾಷ್ಟ್ರೀಯ ಸಮಾವೇಶಗಳು ಪ್ರತಿವರ್ಷವೂ ಕನ್ನಡ ಮನಸ್ಸನ್ನು ವಿವಿಧ ನಿಟ್ಟಿನಿಂದ ಶೋಧಿಸುವ ಯತ್ನಗಳನ್ನು ಮಾಡುತ್ತಾ ಬಂದಿವೆ. ಆ ಕನ್ನಡ ಮನಸ್ಸು ಎದುರಿಸುತ್ತಾ ಬಂದಿರುವ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸವಾಲುಗಳು, ಆ ಮನಸ್ಸಿನ ಶಕ್ತಿ ಮತ್ತು ವ್ಯಾಪ್ತಿ, ಅದರ ಸಮನ್ವಯಗುಣ ಮುಂತಾದ ಅಂತಶ್ಶಕ್ತಿಯೊಂದನ್ನು ಸುಪ್ತಾವಸ್ಥೆಯಿಂದ ಎಚ್ಚರದ ಸ್ಥಿತಿಗೆ ಕರೆತರುವುದು ಒಂದು ಹಂತದವರೆಗೆ ಮುಖ್ಯವಾಗಿ ಕಂಡಿತ್ತು.

ಆಮೇಲೆ ಜಾಗೃತ ಕನ್ನಡ ಮನಸ್ಸಿಗೆ ಬೌದ್ಧಿಕ ಸ್ವಾತಂತ್ರ್ಯದ ಪ್ರಶ್ನೆ, ಸಾಹಿತಿಗಳ ಜವಾಬ್ದಾರಿಯ ಪ್ರಶ್ನೆಗಳು ಎದುರಾದವು. ಭಾಷೆ, ಧರ್ಮ, ರಾಜಕಾರಣ ಮತ್ತು ಸಮಾಜಗಳ ನೆಲೆಗಳಲ್ಲಿ ಆದ ಅನ್ಯಾಕ್ರಮಣಗಳಿಗೆ ಕನ್ನಡ ಮನಸ್ಸು ತೋರಿದ ಪ್ರತಿರೋಧಗಳ ಜಿಜ್ಞಾಸೆ ಇಲ್ಲಿ ನಡೆದಿದೆ. ಅಂತಹ ಪ್ರತಿರೋಧದ ಇನ್ನೂ ವಿಸ್ತೃತವಾದ ರೂಪಗಳಾದ ಜನಪರ ಚಳವಳಿಗಳು ಹೇಗೆ ಕನ್ನಡ ಸಾಹಿತ್ಯ ಸಂಸ್ಕೃತಿಗಳನ್ನು ಪ್ರಭಾವಿಸಿದವು ಎಂಬುದೂ ನುಡಿಸಿರಿ ವೇದಿಕೆಯಲ್ಲಿ ವಿಶ್ಲೇಷಣೆಗೆ ಒಳಗಾಗಿರುತ್ತದೆ. ಜಾಗತೀಕರಣದ ಪರಿಣಾಮವಾಗಿ ಹುಟ್ಟಿರುವ ಸಾಂಸ್ಕೃತಿಕ ತಲ್ಲಣಗಳು ಕಳೆದ ವರ್ಷ ವಿವೇಚನೆಗೆ ಒಳಗಾಗಿದ್ದವು. ಇದೀಗ ಆ ಹಿಂದಿನ ಎಲ್ಲ ಅಂತರಂಗಿಕ ಚರ್ಚೆ, ಜಿಜ್ಞಾಸೆಗಳಿಗೂ ಸವಾಲಾಗುವ ಹಾಗೆ ಅತ್ಯಂತ ಮೂರ್ತರೂಪದ, ಭೌತಿಕವೂ ಭೌಗೋಳಿಕ ವಾಸ್ತವತೆಯೂ ಆಗಿರುವ ಕರ್ನಾಟಕವನ್ನೇ ಚರ್ಚೆಯ ಕೇಂದ್ರಕ್ಕೆ ತರಲು ಸಿದ್ಧವಾಗಿದೆ ನುಡಿಸಿರಿ ವೇದಿಕೆ. ಒಟ್ಟಾರೆಯಾಗಿ ಹೇಳುವುದಾದರೆ ನಮ್ಮ ನಾಡಿನ ಬಹುರೂಪದ ಸಾಂಸ್ಕೃತಿಕ ಶಕ್ತಿ ಸಾಮರ್ಥ್ಯಗಳ ಪುನರ್ ಶೋಧನೆಯೇ ಜೈನಕಾಶಿ ಎನಿಸಿರುವ ಈ ಮೂಡಬಿದರೆಯಲ್ಲಿ ಕಳೆದ ೧೧ ವರ್ಷಗಳಿಂದ ನಡೆಯುತ್ತಿದೆ. ಈ ಹುಡುಕಾಟವು ಸುಷುಪ್ತಿಯಿಂದ ಜಾಗೃತ ಮನಸ್ಸಿಗೂ ಜಾಗೃತ ಮನಸ್ಸಿನ ನೆಲೆಯಿಂದ ವಿಜ್ಞಾನಮಯ ಅವಸ್ಥೆಗೂ ವಿಕಾಸಕ್ರಮದಲ್ಲಿ ಬೆಳೆದು ಬಂದಿವೆ ಎಂದು ನನಗೆ ಅನ್ನಿಸುತ್ತದೆ.

ಬೇರೊಂದು ಮಾತಿನಲ್ಲಿ ಹೇಳುವುದಾದರೆ. ಕನ್ನಡ ಮನಸ್ಸನ್ನು ಕುರಿತೇ ಈವರೆಗೂ ಧ್ಯಾನಿಸುತ್ತಾ ಬಂದಿರುವುದಕ್ಕೆ ಬದಲಾಗಿ ಒಟ್ಟು ನಾಡನ್ನೇ ಕುರಿತ ಚಿಂತನ ಹಾಗೂ ಮಂಥನ ಇಂದು ಆರಂಭಗೊಂಡಿದೆ. ಕನ್ನಡ ಮನಸ್ಸೆಂಬ ಅಮೂರ್ತವೂ ಏಕರೂಪದ್ದೂ ಆದ ಅಸ್ಮಿತೆಯ ಪರಿಕಲ್ಪನೆಗೆ ಬದಲಾಗಿ ಕರ್ನಾಟಕವೆಂಬ ರಾಜಕೀಯಾರ್ಥಿಕ ಸಾಮಾಜಿಕ ಭೌತಿಕ ಅಸ್ತಿತ್ವಕ್ಕೆ ಈಗ ಬಹುಮುಖ ಮಾಡಿ ನಿಂತಿದ್ದೇವೆ ನಾವು. ನಾಡಿನ ಚರಿತ್ರೆಯ ಹಿಮ್ಮುಖ ಧ್ಯಾನದ ಜಾಗದಿಂದ ಅದರ ಭವಿಷ್ಯತ್ತಿನ ರೂಪಣದ ಸಾಧ್ಯತೆಗಳನ್ನು ವಿದ್ವಾಂಸರು, ಕವಿಗಳು, ಕತೆಗಾರರು ವೃತ್ತಿಕ್ಷೇತ್ರ ತಜ್ಞರು, ಕಲಾವಿದರು ಎಲ್ಲರೂ ಈಗ ಮುನ್ನೆಲೆಗೆ ತರಲಿದ್ದೀರೆಂದು ನಾನು ಆಶಿಸುತ್ತೇನೆ. ಈ ಪ್ರಕ್ರಿಯೆಯು ಅಂತರ್ಮುಖತೆ ಯಿಂದ ಬಹಿರ್ಮುಖ ಎಚ್ಚರದ ಕಡೆಗೆ; ಕನಸು, ಆದರ್ಶ, ನಂಬಿಕೆಗಳ ಅಮೂರ್ತ ಚಿಂತನೆಯಿಂದ ಮೂರ್ತ ಕ್ರಿಯಾಶೀಲತೆಯ ಕಡೆಗೆ; ಮಾತಿನಿಂದ ಕೃತಿಯ ಕಡೆಗೆ ನಡೆಯಬೇಕಾದ ತಾತ್ತ್ವಿಕ ವಿವೇಚನೆಯ ಪಲ್ಲಟದ ಕ್ರಿಯೆ ಆಗಬೇಕಾದದ್ದು ಇಂದಿಗೆ ತುಂಬ ಅವಶ್ಯಕವಿದೆ. ಇವು ಕೇವಲ ಮನೋ ಮಂಥನದಲ್ಲಿ ಮುಗಿದು ಹೋಗಬಾರದು. ಆಡಿದ ಮಾತು ಗಾಳಿಗೆ ಎಂಬಂತಾಗಕೂಡದು. ಈ ಚರ್ಚೆಗಳು ನಮ್ಮೆಲ್ಲರಲ್ಲೂ ಹೊಸ ‘ಉದ್ಯೋಗಪರ್ವ’ಕ್ಕೆ ದಾರಿ ತೋರಿಸಬೇಕಾಗಿದೆ.

ಈ ಹಿಂದೆಯೂ ಎರಡು ಬಾರಿ ನುಡಿಸಿರಿಯಲ್ಲಿ ಭಾಗವಹಿಸಿದ ನನ್ನ ಅನುಭವದಿಂದ ಹೇಳುವುದಾದರೆ ಎಡ ಮತ್ತು ಬಲ ಎಂಬ ಪಂಥೀಯವಾಗಿ ಧೃವೀಕರಣಗೊಂಡ ವೇದಿಕೆ ಇದಲ್ಲ. ಬದಲಾಗಿ ಅಂಥ ಯಾವುದೋ ಒಂದು ದೃಷ್ಟಿಗೆ ಬದ್ಧತೆ ತೋರುವುದಕ್ಕಿಂತಲೂ ತಟಸ್ಥವಾದ ಮೂರನೆಯ ಹಾದಿಯೊಂದನ್ನು ಸ್ವತಂತ್ರವಾಗಿ, ಮುಕ್ತವಾಗಿ ಆಳ್ವರ ನುಡಿಸಿರಿ ರೂಪಿಸಿಕೊಂಡು ಬಂದಿರುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಚಿಂತನೆಗಳ ತಾತ್ತ್ವಿಕ ವ್ಯತ್ತಾಸಗಳನ್ನು ವ್ಯಕ್ತಪಡಿಸುವ ಹಾಗೆ ಯಾರಮೇಲೂ ಯಾರೂ ಇಲ್ಲಿ ನಿರ್ಬಂಧಗಳನ್ನು ಹೇರುವುದಿಲ್ಲ. ನಿರ್ಬಂಧ ಎನ್ನುವುದು ನುಡಿಸಿರಿಯಲ್ಲಿ ಇರುವುದೇ ಆದರೆ ಅದು ಸಮಯದ ಮಿತಿಯನ್ನು ಉಲ್ಲಂಘಿಸುವುದರ ಬಗ್ಗೆ ಮಾತ್ರ ಇರುವ ನಿರ್ಬಂಧ! ಹಾಗೆ ಕಾಲಬದ್ಧತೆಯನ್ನು ಕಾಪಾಡಿಕೊಂಡಿದ್ದರಿಂದಾಗಿಯೇ ನುಡಿಸಿರಿ ಉಳಿದ ಎಷ್ಟೋ ಸಮ್ಮೇಳನಗಳಿಗಿಂತ ವಿಶಿಷ್ಟವೆನಿಸುತ್ತದೆ. ಹೀಗಾಗಿ ಈ ಬಾರಿಯ ನುಡಿಸಿರಿ ಸಮಾವೇಶಕ್ಕೆ ನನ್ನನ್ನು ಸರ್ವಾಧ್ಯಕ್ಷತೆ ವಹಿಸುವಂತೆ ಡಾ| ಮೋಹನ ಆಳ್ವರು ಕೋರಿದಾಗ ನಾನು ನನ್ನದೇ ಆದ ತಾತ್ತ್ವಿಕ ನಂಬಿಕೆಗಳಿಗೆ ಅನುಗುಣವಾಗಿಯೇ ಈ ಕಾರ್ಯ ನಿರ್ವಹಿಸಲು ಒಪ್ಪಿದೆ.ಮಹಿಳೆಯರಿಗೂ ಪುರುಷ ಸಮಾನವಾಗಿಯೇ ಎಲ್ಲ ಸ್ಥಾನ, ಮಾನ, ಮಾನ್ಯತೆಗಳು ದೊರಕಬೇಕೆಂದು ಹಕ್ಕೋತ್ತಾಯಿಸುತ್ತಾ ಬಂದವರ ಸಾಲಿಗೆ ಸೇರುವ ನಾನು, ಜನರೇ ಪ್ರೀತ್ಯಾದರಗಳಿಂದ ಅಂಥ ಒಂದು ಗೌರವಯುತ ಜವಾಬ್ದಾರಿಯನ್ನು ವಹಿಸಿಕೊಟ್ಟಾಗ ಹಿಂಜರಿಯುವುದು ಸೂಕ್ತವಲ್ಲ; ಬೃಹತ್ತಾದ ಮಹಿಳಾ ಸಮುದಾಯಕ್ಕೆ ಅದು ಒಂದು ನೇತ್ಯಾತ್ಮಕ ಅರ್ಥವನ್ನೂ ಸೂಚಿಸಬಹುದು, ಎಂಬುದು ನಾನು ಒಪ್ಪಿದ್ದಕ್ಕೆ ಒಂದು ಕಾರಣ. ಅದಲ್ಲದೆ ‘ಸರ್ವಾಧ್ಯಕ್ಷತೆ’ ಎಂಬುದು ಒಂದು ರಾಷ್ಟ್ರೀಯ ಮಟ್ಟದ ಸಮಾವೇಶವನ್ನು ಒಂದು ರೀತಿ ಉಸ್ತುವಾರಿ ಮಾಡಬೇಕಾದ ಗುರತರವಾದ ಜವಾಬ್ದಾರಿಯೇ ಹೊರತು ಅದೊಂದು ಕೇವಲ ಸನ್ಮಾನದ ಕಿರೀಟವಲ್ಲ ಎಂದು ನನ್ನ ನಂಬಿಕೆ. ಹಾಗಾಗಿ ನನಗಿಂತ ಹಿಂದೆ ಹಾಗೂ ನನ್ನೊಂದಿಗೆ ನಿಸ್ಪೃಹ ರೀತಿಗಳಿಂದ ಕನ್ನಡ ಸಾಹಿತ್ಯಕ್ಕೂ ನಾಡಿಗೂ ಸೇವೆ ಸಲ್ಲಿಸಿರುವ ಸಲ್ಲಿಸುತ್ತಿರುವ ಎಲ್ಲಾ ಮಹಿಳೆಯರ ಪರವಾಗಿ ನಾನು ಇಂದು ಇಲ್ಲಿ ಬಂದು ನಿಂತಿದ್ದೇನೆ. ಈ ನನ್ನ ಆಯ್ಕೆಯನ್ನು ಬೆಂಬಲಿಸಿ, ಪ್ರೀತಿ ವಿಶ್ವಾಸವನ್ನು ತೋರಿದ ಆಳ್ವರನ್ನೂ ಒಳಗೊಂಡಂತೆ ತಮ್ಮೆಲ್ಲರಿಗೂ ನಾನು ಹೇಳಬಹುದಾದ ಕೃತಜ್ಞತೆಯ ಒಂದು ಮಾತೆಂದರೆ ನಿಮ್ಮ ಮಂಡೆಗೆ ಹೂವತಾಹೆನಲ್ಲದೆ ಹುಲ್ಲತಾರೆನು.

ಕನ್ನಡ ಸಾಹಿತ್ಯಕ್ಕೆ ಬರಹಗಾರಳಾಗಿ ನಾನು ಕಾಲಿಟ್ಟಿದ್ದೂ ವಿಚಿತ್ರ ಸಂಯೋಗವೇ ಸರಿ. ಬಾಲ್ಯದಿಂದಲೂ ಕನ್ನಡದ ಸದಭಿರುಚಿಯ ಸಾಹಿತ್ಯದ ಓದುವ ಗೀಳು ಅಮ್ಮನ ಮೂಲಕವೇ ಅವರ ನಾಲ್ವರು ಹೆಣ್ಣು ಮಕ್ಕಳೆಲ್ಲರಲ್ಲೂ ಬೆಳೆಯಿತು. ಮಾಧ್ಯಮಿಕ ಶಾಲೆಯ ವೇಳೆಯಿಂದಲೇ ಕಾರಂತರು, ಅನಕೃ, ತರಾಸು, ತ್ರಿವೇಣಿ, ಗೋಕಾಕ್, ಇನಾಂದಾರ್, ರಾವ್ ಬಹದ್ದೂರು ಮತ್ತು ಕುವೆಂಪು ಅಂಥವರ ಕಾದಂಬರಿಗಳನ್ನು ಓದುವುದು ಅಭ್ಯಾಸವಾಗಿತ್ತು. ಈ ಓದುವ ಅಭ್ಯಾಸ ನಾನು ಸಂಸ್ಕೃತ ಎಂ.ಎ.ಗಾಗಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿದಾಗ ವ್ಯಾಪಕವಾಗಿ ಪೋಷಣೆ ಪಡೆಯಿತು. ಅದಕ್ಕೆ ವಿಜಯಾದಬ್ಬೆಯಂಥ ಅಂದಿನ ಪ್ರತಿಭಾವಂತ ಉದಯೋನ್ಮುಖ ಲೇಖಕಿ ನನಗೆ ಹಾಸ್ಟೆಲಿನಲ್ಲಿ ಕೋಣೆವಾಸಿಯಾಗಿ ದೊರೆತದ್ದೂ, ಮೈಸೂರಿನ ಸಾಹಿತ್ಯಮಯ ಸಾಂಸ್ಕೃತಿಕ ವಾತಾವರಣವೂ ಮುಖ್ಯಕಾರಣಗಳು ಎನ್ನಬಹುದು. ಕಾಲೇಜು ಅಧ್ಯಾಪಕಿಯಾದ ಮೇಲೆ ಸ್ತ್ರೀವಾದ, ಮಹಿಳಾ ಅಧ್ಯಯನಗಳ ತಾತ್ತ್ವಿಕತೆಗೆ ತೆರೆದು ಕೊಂಡದ್ದು ಇನ್ನೊಂದು ಆಕಸ್ಮಿಕ ಯೋಗ. ಆ.ನೇ. ಉಪಾಧ್ಯೆಯಂಥ ಮೇರುಸ್ತರದ ಜೈನ ಪ್ರಾಕೃತ ವಿದ್ವಾಂಸರ ಪ್ರಭಾವವು ಜೈನ ಸಾಹಿತ್ಯ ಸಂಶೋಧನೆಯತ್ತ ನನ್ನನ್ನು ಒಯ್ದರೆ, ನವ್ಯ ಸಾಹಿತ್ಯದ ತೀಕ್ಷ್ಣವಾದ ಪ್ರಭಾವವು ನನ್ನೊಳಗಿನ ವಿಮರ್ಶಕ ಬುದ್ಧಿಯನ್ನು ವಿಸ್ತಾರಗೊಳಿಸಿತು. ಮೈಸೂರಿನ ಮಹಿಳಾ ಸಮತಾವೇದಿಕೆಯ ವಾರ್ತಾಪತ್ರಿಕೆಗೆ ಲೇಖನಗಳನ್ನು ಬರೆಯತೊಡಗಿ, ಕೊನೆಗೆ ವಿಮರ್ಶಕಿಯಾಗಿಯೇ ನನ್ನನ್ನು ಗುರುತಿಸಿಕೊಂಡೆ. ಸಂಸ್ಕೃತದಿಂದ ದೊರೆತ ಭಾರತೀಯ ಕಾವ್ಯಮೀಮಾಂಸೆಯ ಜ್ಞಾನ, ಇಂಗ್ಲಿಷ್ ಎಂ.ಎ. ಮೂಲಕ ಗಳಿಸಿಕೊಂಡ ಸಾಹಿತ್ಯ ವಿಮರ್ಶೆಯ ವಿಧಾನಗಳಿಂದ ಪೂರ್ವ-ಪಶ್ಚಿಮಗಳೆರಡರ ವಿದ್ಯೆಗಳನ್ನೂ ನನ್ನ ಸ್ತ್ರೀವಾದಿ ಬತ್ತಳಿಕೆಗೆ ಸೇರಿಸಿಕೊಂಡು ಕನ್ನಡ ಸಾಹಿತ್ಯಕ್ಕೆ ಆ ಬಾಣಬಿಡಲು ಪ್ರಜ್ಞಾಪೂರ್ವಕವಾಗಿಯೇ ಹೊರಟವಳು ನಾನು. ಮಹಿಳೆಯರೇನಿದ್ದರೂ ಕಥೆ, ಕಾದಂಬರಿಗಳನ್ನು ಬರೆಯಲು ಲಾಯಕ್ಕು, ಅವರು ವಿಮರ್ಶೆಯನ್ನೇನು ಮಾಡಬಲ್ಲರು? ಎಂಬ ಅವಹೇಳನೆಯೇ ಗಾಳಿಯಾಡುತ್ತಿದ್ದ ಕಾಲದಲ್ಲಿ ಸ್ವಂತ ಆಯ್ಕೆಯಿಂದಲೇ ಬೇರೆ ಪ್ರಕಾರಗಳನ್ನು ಬಿಟ್ಟು ನಾನು ವಿಮರ್ಶೆಯ ಕ್ಷೇತ್ರಕ್ಕೆ ಬಂದೆ. ಒಮ್ಮೆ ಕಾಲಿಟ್ಟ ಬಳಿಕ ಹಿನ್ನಡೆಯುವುದು ಎಂಬುದಿಲ್ಲ. ಇಂದಿನವರೆಗೂ ಕನ್ನಡ ಸಾಹಿತ್ಯದ ಸಮೃದ್ಧ ಅನುಭವ ಲೋಕವನ್ನು ಎಷ್ಟು ಬಗೆಯಾಗಿ ಶೋಧಿಸಿದರೂ, ವಿಶ್ಲೇಷಿಸಿದರೂ ನನಗೆ ಅದೇ ತೃಪ್ತಿಕರ ಸಂಗಾತಿ ಎನ್ನಬಹುದು. ಕನ್ನಡದ ಔಪಚಾರಿಕ ಶಿಕ್ಷಣ ಪಡೆದ ವಿದ್ಯಾರ್ಥಿನಿ ಆಗದೆ ಹೋದರೂ ಕನ್ನಡ ಸಾಹಿತ್ಯದ ನಿರಂತರ ವಿದ್ಯಾರ್ಥಿನಿ ಆಗಿದ್ದೇನೆ; ಇಂಥಿಂಥವರ ಶಿಷ್ಯೆ ಎನ್ನುವ ಗುರುಪರಂಪರೆ ಇಲ್ಲದಿದ್ದರೂ, ಸ್ವಾಧ್ಯಾಯದ ಏಕಲವ್ಯಳಾಗಿ ಕನ್ನಡ ಸಾಹಿತ್ಯವನ್ನೇ ಗುರುವೆಂದು ಸ್ವೀಕರಿಸಿದೆ. ಇಂಥ ಸಾಮಾನ್ಯಳಾದ ನನ್ನನ್ನು ಇಲ್ಲಿ ಕರೆದು ಪೀಠಕೊಟ್ಟು ಗೌರವಿಸುವ ಮೂಲಕ ಆಳ್ವರು ತಾವು ಗುಣಗ್ರಾಹಿಗಳು ಎನ್ನವುದನ್ನೇ ಮತ್ತೊಮ್ಮೆ ತೋರಿಸಿದ್ದಾರೆಂದು ನನ್ನ ನಂಬಿಕೆ.

ಈ ಹೊತ್ತು ನುಡಿಸಿರಿ ಸಮಾವೇಶಕ್ಕಾಗಿ, ನಿಗದಿಯಾಗಿರುವ ವಿಷಯ ‘ಕರ್ನಾಟಕ; ನಾಳೆಗಳ ನಿರ್ಮಾಣ’ ಎಂದಿದ್ದರೂ ಆ ‘ನಾಳೆ’ ಎನ್ನುವುದು ತನ್ನಷ್ಟಕ್ಕೇ ಸಂಭವಿಸುವ ಸ್ವತಂತ್ರವಾದ ಅಸ್ತಿತ್ವವಿರುವ ಕಾಲದ ಘಟಕವೇನೂ ಅಲ್ಲ. ನಾವು ಈಗ ಇರುವಂಥ ಜಗತ್ತಿನ ಸ್ಥಿತಿ ನಮಗೆ ಅಹಿತಕರವಾಗಿದೆ, ಅದನ್ನು ತಿದ್ದಿ, ಅನುಕೂಲಕರವಾಗಿ ಬದಲಿಸಿಕೊಳ್ಳಬೇಕೆಂಬ ಮಾನವರ ಹಂಬಲವೇ ನಾಳೆಯೆನ್ನುವ ಕಾಲವನ್ನು ಕಲ್ಪಿಸಿರುತ್ತದೆ. ಆದರೆ ವಾಸ್ತವದಲ್ಲಿ ಆ ನಾಳೆಯು ನೆನ್ನೆ ಮತ್ತು ಇಂದು ಎಂಬುದನ್ನು ತನ್ನೊಳಗೇ ಹೊಂದಿರುತ್ತದೆ. ಟಿ. ಎಸ್. ಎಲಿಯಟ್ ಕವಿಯ ಪ್ರಸಿದ್ಧ ಸಾಲುಗಳು ಹೇಳುವಂತೆ:

“Time prsent and time past
Are both perhaps prsent in time future
And time future contained in time past. ”

ನೆನ್ನೆ, ಇಂದುಗಳಿಂದಾಗಿಯೇ ನಾಳೆ ಹುಟ್ಟುವುದು ಎಂದಾದರೆ ನಾವು ಹೊಸ ನಾಳೆಗಳನ್ನು ಸೃಷ್ಟಿಸುತ್ತೇವೆಂದು ಕನಸಿಸುವುದೆಲ್ಲ ಚರಿತ್ರೆಯ ನೆನ್ನೆಗಳದೇ ಪುನರುಕ್ತಿಯೇ ಆಗಿರುವುದೇ ಎಂದರೆ ಹಾಗಲ್ಲ. ಚರಿತ್ರೆಯಲ್ಲಿ ಬೇರೆ ಕಾಲದಲ್ಲಿ, ಬೇರೊಂದು ಸಂದರ್ಭದಲ್ಲಿ, ಬೇರೆ ಯಾವುದೇ ತಲೆಮಾರಿನಲ್ಲಿ ಜರುಗಿ ಹೋದ ಘಟನೆ, ಸನ್ನಿವೇಶಗಳನ್ನೇ ಹೋಲುವ ಸಂಗತಿಗಳು ಇಂದು ನಮ್ಮೆದುರಲ್ಲೂ ಉದ್ಭವಿಸಿರಬಹುದು. ಅವುಗಳಿಂದ ನಮ್ಮ ಹಳಬರು ಪಟ್ಟ ಅನುಭವಗಳೇನು? ಅವುಗಳನ್ನು ಆ ಹಿಂದಿನವರು ಎದುರಿಸಿ ನಿರ್ವಹಿಸಿದ ಬಗೆಗಳೇನು ಎಂಬುದು ನಮ್ಮ ಸಂಸ್ಕೃತಿಯ ಧೀರತೆಯ ಸ್ಮೃತಿಗಳು. ಅಂಥವುಗಳನ್ನು ವಿಸ್ಮೃತಿಯಲ್ಲಿ ನಷ್ಟವಾಗಿ ಹೋಗಲು ಬಿಡದೆ, ಆ ನೆನಪುಗಳಿಂದ ನಮ್ಮ ಇಂದಿನ ಅಂಥವೇ ಸಂದರ್ಭಗಳನ್ನು ನಿಭಾಯಿಸಲು ಬೇಕಾದ ಚೈತನ್ಯ ಬಲವನ್ನಾಗಿ ಮಾಡಿಕೊಳ್ಳುವುದರಲ್ಲೇ ಇಂದಿನ ಧೀಮಂತಿಕೆ ಇರುತ್ತದೆ. ಹಾಗೆ ಇಂದಿನ ಅನುಭವಗಳೊಳಗಿನ ಧೀಮಂತ ಅಂಶಗಳೇ ನಾಳಗೆ ಪಾಥೇಯ ಅಥವಾ ದಾರಿ ಬುತ್ತಿ ಆಗಬೇಕಾಗುತ್ತದೆ. ಈ ಹೊತ್ತಿಗೆ ಧೀಮಂತ ಸಂದರ್ಭಗಳನ್ನು ಹೇಗೆ ಕಂಡುಕೊಳ್ಳಬಹುದು ಎನ್ನುವುದೇ ಮುಖ್ಯಪ್ರಶ್ನೆ.

ಸಾಂಸ್ಕೃತಿಕ ಸ್ಮೃತಿಯಲ್ಲಿ ಎಲ್ಲವೂ ಧೀರತೆಯ ಉದಾರ ಚರಿತೆಯ ದಾಖಲೆಗಳೇ ಆಗಲಾರವು. ಒಳಿತಿನ ಮಗ್ಗಲಲ್ಲೇ ಮಾನವರ ಘನತೆಗೆ ಧಕ್ಕೆ ತರುವಂಥಹ ಕ್ರೂರವೂ, ಅನಾಗರಿಕವೂ ಆದ ಎಷ್ಟೋ ಆದಿಮ ಆಚರಣೆಗಳೂ ನಮ್ಮದೇ ಸಂಸ್ಕೃತಿಯಲ್ಲಿ ಹೂತು ಕೊಂಡಿರುತ್ತವೆ. ಅವುಗಳನ್ನು ಮೇಲೆಬ್ಬಿಸಿ, ಭೂತಕಾಲವನ್ನು ಆರಾಧಿಸ ತೊಡಗಿದರೆ, ಹಿಂದೆ ಆದಂಥ ತಪ್ಪುಗಳನ್ನೇ ಮತ್ತೆ ಮತ್ತೆ ಮಾಡುತ್ತಿರುವ ಮೂರ್ಖರಾಗುತ್ತೇವೆ; ಕೆಲವು ಸಲ ಹಿಂದಿನವರಿಗಿಂತಲೂ ಕಳಪೆ ಮನುಷ್ಯರೂ ಆಗಿಬಿಡಬಹುದು. ಆದ್ದರಿಂದ ನಾಳೆಗಳ ನಿರ್ಮಾಣ ಎಂಬುದು ಹಿಂದಿನ ತಪ್ಪುಗಳ ಮರುಕಳಿಕೆಯೋ ಮುಂದುವರಿಕೆಯೋ ಆಗದಂತೆ ಎಚ್ಚರವಹಿಸುವುದೇ ಈಗ ಆಗಬೇಕಾದ ಮೊದಲ ಕೆಲಸ. ಹಿಂದಿನಿಂದ ಉಳಿದು ಬರುತ್ತಿರುವ ಸಾಂಸ್ಕೃತಿಕ ನೆನಪುಗಳು ಇಂದಿಗೂ, ಮುಂದಕ್ಕೂ ಮನುಕುಲಕ್ಕೆ ಎಷ್ಟು ಉಪಯುಕ್ತ, ಎಷ್ಟರಮಟ್ಟಿಗೆ ಅವು ನಮ್ಮನ್ನೂ, ನಾಳೆಗಳನ್ನೂ ಒಳಿತಿನತ್ತ, ಉನ್ನತಿಯತ್ತ ಕರೆದೊಯ್ಯಬಲ್ಲವು ಎನ್ನುವ ಎಚ್ಚರದ ವಿವೇಚನೆಯಿದ್ದಾಗ ಮಾತ್ರ ಸಾಂಸ್ಕೃತಿಕ ಸ್ಮೃತಿಯು ಒಂದು ಬೆಳಕಾಗಿ, ಒಂದು ಚೈತನ್ಯವಾಗಿ ಇಂದುಗಳನ್ನು ಎದುರಿಸಲು ನಮ್ಮ ಬೆನ್ನ ಬಲವಾಗಬಹುದು; ಹಾಗೆಯೇ ಭಾವೀ ಜನಾಂಗದ ಆತ್ಮಶಕ್ತಿಯನ್ನು ಕುಗ್ಗದ ಹಾಗೆ ಕಾಪಾಡುವ ಶಕ್ತಿಯೂ ಆಗಬಲ್ಲದು.

ಹಿಂದಿನ ಚರಿತ್ರೆಯಿಂದ ಕಳೆದ ಶತಮಾನದಿಂದ ಸಾಮಾಜಿಕ ಚಳವಳಿಗೆ ಸ್ಫೂರ್ತಿ ಒದಗಿಸುತ್ತಿರುವ ಒಂದು ಧೀಮಂತ ನೆನಪು ಭಕ್ತಿಪಂಥಗಳ ಪರಂಪರೆಯದು. ಅವುಗಳನ್ನು ಚಳವಳಿ ಎಂದು ಕರೆದು, ಆಧುನಿಕ ಪ್ರಜಾಪ್ರಭುತ್ವದ ಸೆಕ್ಯುಲರಿಸಂಗೆ ಸಂವಾದಿಯಾಗಬಲ್ಲ ಅನೇಕ ಲಕ್ಷಣಗಳನ್ನು ಸಾಮಾಜಿಕ ಚಿಂತಕರೂ, ಕನ್ನಡ ಬರಹಗಾರರೂ ಗುರುತಿಸಿದರು. ಸಮಾನತೆ, ಸ್ವಾತಂತ್ರ್ಯ, ಜಾತಿ ಭೇದ, ಲಿಂಗಭೇದ, ವರ್ಗಭೇದ ಮುಂತಾದ ತಾರತಮ್ಯಗಳೆಲ್ಲವನ್ನೂ ನಿರಾಕರಿಸುವ ವಿಚಾರಗಳನ್ನು ಬಿತ್ತರಿಸಿದ ಶಿವಶರಣರ ಮಾತುಗಳಲ್ಲಿ ನಾವು ಕಟ್ಟಬಯಸುವ ಸಮಾಜದ ಅರ್ಥವನ್ನು ಕಂಡೆವು. ಆದರೆ ಕೆಲವನ್ನು ಬೇಕಾಗಿಯೇ ನೋಡಲು ನಿರಾಕರಿಸುತ್ತಲೂ ಬಂದಿದ್ದೇವೆ. ಶರಣರು ಅರಸೊತ್ತಿಗೆಯನ್ನು ತಿರಸ್ಕರಿಸಿದ್ದು, ಪರತತ್ತ್ವದ ಪಾರಮ್ಯವನ್ನು ಎತ್ತಿಹಿಡಿಯಲಿಕ್ಕೆ. ಸಾಮಾಜಿಕ ಹಾಗೂ ಧಾರ್ಮಿಕ ಕರ್ಮಠತೆ, ಆಚಾರಗಳನ್ನು ಧಿಕ್ಕರಿಸಿದ್ದು, ವೈಯಕ್ತಿಕ ನೈತಿಕ ನಿಲುವನ್ನು ಸಾಧಿಸಲಿಕ್ಕೆ. “ಛಲಬೇಕು ಶರಣಂಗೆ ಪರಸತಿಯ ನೊಲ್ಲೆನೆಂಬ, ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ” ಎಂಬ ನುಡಿಯಾಗಲಿ “ಕಳಬೇಡ, ಕೊಲಬೇಡ, ಹುಸಿಯನುಡಿಯಲುಬೇಡ” ಎಂದದ್ದಾಗಲಿ ಕಠೋರ ಸಂಯಮದ ವ್ರತಗಳೇ ಆಗಿದ್ದವು. ಈ ವ್ರತವನ್ನು ಒಲ್ಲದವರನ್ನು ಭ್ರಷ್ಟರನ್ನು ಆ ಸಮಾಜ ಎಂದೂ ಒಪ್ಪಲೇ ಇಲ್ಲ. ಇದು ಅಂದಿನವರ ಸೆಕ್ಯುಲರಿಸಂನ ಇನ್ನೊಂದು ಮುಖವೇ ಆದರೂ ನಾವು ಆ ಬಗ್ಗೆ ಕುರುಡರು. ಗತಕಾಲವನ್ನು ನೆನೆದರೆ ಸಾಲದು ಅನುಸರಿಸಲೂಬೇಕಲ್ಲವೆ? ಹೀಗೆ ‘ಮರಳೆ ಕಲ್ಯಾಣಕ್ಕೆ’ ಎಂದು ನಾವು ಹೇಳುವಾಗ ಕೂಡ ಅಕ್ಕಮಹಾದೇವಿ ಹೇಳಿದ್ದ ಕಲ್ಯಾಣವನ್ನಾರೂ ಹೊಗಬಾರದು, ಅಸಾಧ್ಯವಯ್ಯ…|| ಎನ್ನುವ ಎಚ್ಚರಿಕೆಯೂ ನಮಗೆ ಬೇಕು ಅನ್ನಿಸುತ್ತದೆ.

ಕರ್ನಾಟಕಂಗಳ ಕಂಗಾಲು ಸ್ಥಿತಿ
ಈಗ ಕರ್ನಾಟಕ ಎಂಬ ನಮ್ಮ ಭೌತಿಕ, ಪ್ರಾದೇಶಿಕ ವಾಸ್ತವ್ಯದತ್ತ ಬರೋಣ. ‘ಕರ್ನಾಟಕ’ ಎಂದು ಈಗ ನಾವು ಅಂದರೆ, ಕೂಡಲೆ ಯಾರಾದರೂ ಕೇಳಬಹುದು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಹೈದರಾಬಾದು ಕರ್ನಾಟಕ, ಕರಾವಳಿ ಕರ್ನಾಟಕ – ಇವುಗಳಲ್ಲಿ ನೀವನ್ನೋದು ಯಾವ ಕರ್ನಾಟಕ ರೀ? ಎಂದು. ನಾಡಿನ ಒಳಗೇ ಜನ ಪರಸ್ಪರ ಇಂಥ ವಿಚ್ಛಿದ್ರತೆ, ಪ್ರತ್ಯೇಕತೆಗಳನ್ನು ಭಾವಿಸುವಂತೆ ಆಗಿರುವಾಗ ನಾವು `ಕರ್ನಾಟಕ ಅನ್ನಬೇಕೋ’, ‘ಕರ್ನಾಟಕಂಗಳು’ ಅನ್ನಬೇಕೋ? ಎಂದು ನಾಳಿನ ಪೀಳಿಗೆಗಳಿಗೆ ಗೊಂದಲಗಳು ಉಂಟಾದರೆ ಆಶ್ಚರ್ಯವಿಲ್ಲ.
ಕವಿ ಶ್ರೀವಿಜಯನು ವರ್ಣಿಸಿದ್ದ ಕನ್ನಡದ್ದೆಂದು ಭಾವಿಸಿದ್ದ ಜನಪದದ ಆಕಾರ, ವ್ಯಾಪ್ತಿ, ಗಡಿರೇಖೆಗಳೆಲ್ಲ ಕಾಲದಿಂದ ಕಾಲಕ್ಕೆ ಬದಲಾಗುತ್ತ ಬಂದಿವೆ. ಆದರೂ ಬಹು ದೀರ್ಘಕಾಲದಿಂದ ಒಂದೇ ಪ್ರದೇಶದಲ್ಲೇ ನೆಲೆಸಿದ್ದೇವೆ ಎಂಬುದರಿಂದ ಊಟ, ಮಾತು, ಬಟ್ಟೆ ಬರೆ, ವ್ಯವಹಾರ, ನಂಬಿಕೆ, ಆಚರಣೆಗಳಲ್ಲಿ ಎಷ್ಟೋ ಚಿಕ್ಕ ಪುಟ್ಟ ವ್ಯತ್ಯಾಸಗಳಿದ್ದರೂ ನಾವೆಲ್ಲ ಈ ಪ್ರದೇಶಕ್ಕೆ ಸೇರಿದವರೇ ಎಂಬ ಒಮ್ಮತದ ಭಾವನೆಯೊಂದು ಬೆಳದಿರುತ್ತವೆ. ಅದರಿಂದಾಗಿ ನಾವು ಕರ್ನಾಟಕದವರು, ನಮ್ಮ ನುಡಿ ಕನ್ನಡ, ನಮ್ಮೊಳಗೆ ಕನ್ನಡತನ ಎಂಬ ಗುಣವಿದೆ ಎನ್ನುವಂಥ ಅಸ್ಮಿತೆಯೊಂದನ್ನು ನಾವು ರೂಢಿಸಿಕೊಂಡು ಬಂದಿದ್ದೇವೆ. ಆದರೆ ವಾಸ್ತವದಲ್ಲಿ ಆ ಅಸ್ಮಿತೆ ಕೂಡ ಕಾಲ್ಪನಿಕ ರೀತಿಯದು. ಇಂದಿನ ವ್ಯಾಪಾರೀಕರಣಗೊಂಡ ಸಾಂಸ್ಕೃತಿಕ ವಾತಾವರಣದಲ್ಲಿ ಆ ಅಸ್ಮಿತೆಗೇ ಎಲ್ಲಾ ದಿಕ್ಕುಗಳಿಂದಲೂ ಒದೆತ ಬೀಳುತ್ತಿದೆ. ಹಾಗಾಗದಾಗಲೆಲ್ಲ ದೊಡ್ಡ ಗಂಟಲು ತೆರೆದು ‘ಜಯ ಹೇ ಕರ್ನಾಟಕ ಮಾತೇ’ ಎಂದು ಹಾಡುತ್ತಾ ಉದ್ವೇಗಗೊಳ್ಳುತ್ತೇವೆ.

ಆದರೆ ಈ ಕಲ್ಪಿತ ಕನ್ನಡತನ, ಕರ್ನಾಟಕತ್ವ ಎಂಬ ಬಗ್ಗೆ ಕನ್ನಡ ಸಾಹಿತ್ಯದ ಸುದೀರ್ಘ ಚರಿತ್ರೆಯುದ್ದಕ್ಕೂ ಕವಿಗಳು ವಿಚಾರ ಮಾಡಿದ್ದಾರೆ. ಅಷ್ಟೇ ಏಕೆ ಇದೇ ನುಡಿಸಿರಿ ವೇದಿಕೆಯಲ್ಲೂ ಅನೇಕ ಬಾರಿ ಅಂಥ ವಿಚಾರಗಳು ಚರ್ಚೆಗೆ ವಸ್ತುವಾಗಿ ದಾಖಲೂಗೊಂಡಿರುತ್ತವೆ. ಅಂಥ ಕವಿಗಳ ಉಕ್ತಿಗಳನ್ನು ಈಗ ಪುನಃ ಹೇಳಬೇಕಾದ ಅಗತ್ಯವಿಲ್ಲ. ಆದರೆ ಈಗ ನಾವು ಇಂದು ಪ್ರಶ್ನಿಸಿಕೊಳ್ಳಬೇಕಾದ ಒಂದು ಮುಖ್ಯ ಸಂಗತಿಯತ್ತ ತಮ್ಮ ಗಮನ ಸೆಳೆಯಲು ಇಚ್ಛಿಸುತ್ತೇನೆ. ಕವಿರಾಜಮಾರ್ಗದಲ್ಲಿ ಹೇಳಿದ ಹಾಗೆ ‘ವಸುಧಾ ವಲಯ ವಿಲೀನ ವಿಷಯ’-ಅಂದರೆ ಭೂಮಂಡಲದಲ್ಲಿ ಸೇರಿಹೋಗಿರುವ ಪ್ರದೇಶ ನಮ್ಮದೆಂದು (ಜಾಗತೀಕರಣದಿಂದಾಗಿ) ಬೇಕಾದರೆ, ಬಹುಶಃ ಧೈರ್ಯವಾಗಿ ನಾವು ಇಂದೂ ಹೇಳಬಲ್ಲೆವು. ನಾವು ಈಗ ಜಾಗತಿಕ ಗ್ರಾಮವಾಸಿ ಗಳಾಗಿದ್ದೇವಲ್ಲವೆ? ಆದರೆ ಶ್ರೀವಿಜಯ ಹೇಳಿದ್ದ ಮಾತಿನ ಉಳಿದರ್ಧವನ್ನೂ ವಿಚಾರ ಮಾಡಬೇಕು. ಆ ಅಂಶವನ್ನು ಕೆ.ವಿ. ಸುಬ್ಬಣ್ಣನವರು ಬಹು ಸೊಗಸಾಗಿ ವಿವರಿಸುತ್ತಾರೆ:

ಕನ್ನಡವೆಂಬ ವಿಷಯ (ನಾಡು)ವು ವಸುಧಾವಲಯದಲ್ಲಿ ‘ವಿಲೀನ’ವಾಗಿದೆ. ಸಮರಸವಾಗಿ ಬೆರೆತುಕೊಂಡಿದೆ. ಹಾಗೆಂದ ಮಾತ್ರಕ್ಕೆ ಇದು ಸ್ವಂತಿಕೆಯ ಚಹರೆಯಿಲ್ಲದೆ ವಸುಧೆಯಲ್ಲಿ ಗುರುತು ಸಿಗದಂತೆ ಮುಳುಗಿ ಹೋದದ್ದಲ್ಲ; ತನ್ನದೇ ವಿಶೇಷ (ವೈಶಿಷ್ಟ್ಯ) ಇರುವ ನಾಡು. ಅಷ್ಟೇ ಅಲ್ಲ-ಇದು ‘ವಿಶದ’ವಾದದ್ದು; ವಸುಧೆ ಅಥವಾ ಬ್ರಹ್ಮಾಂಡದಷ್ಟೇ ವ್ಯಾಪಕವಾದದ್ದು…. ವಸುಧೆಯ ಒಂದು ಕಿರುಬಿಂದುವಾಗಿದ್ದೂ ತನ್ನೊಳಗೆ ಆ ವಸುಧೆಯನ್ನೇ ಅರಗಿಸಿಕೊಂಡಿರುವ ನಾಡು ಇದು.

ಈ ಹೆಮ್ಮೆ, ಅಂದರೆ ತನ್ನದೇ ವಿಶಿಷ್ಟ ಲಕ್ಷಣಗಳಿಂದ ವಸುಧೆಯನ್ನೇ ತನ್ನೊಳಗೆ ಅರಗಿಸಿಕೊಳ್ಳಬಲ್ಲ ನಾಡು ಎಂಬ ಹೆಮ್ಮೆಯಲ್ಲಿ ಈಗಲೂ ಕರ್ನಾಟಕವು ಉಳಿದಿದೆಯೇ ಎಂಬುದೇ ಮುಖ್ಯ ಪ್ರಶ್ನೆ. ಜಾಗತಿಕವಾಗಿ ಹಾಗಿರಲಿ, ರಾಷ್ಟ್ರೀಯವಾಗಿ ನೋಡಿದರೂ ನೆರೆರಾಜ್ಯಗಳೊಂದಿಗೆ ಏರ್ಪಟ್ಟ ಸಂಬಂಧಗಳಲ್ಲಿ ಕೂಡ ಮತ್ತೆ ಮತ್ತೆ ಹೊಡೆತ ತಿನ್ನುತ್ತಾ ಕನ್ನಡಿಗರ ಅಸ್ಮಿತೆಯೇ ನಗೆ ಪಾಟಲಾಗುತ್ತಿರುವುದು ಈಗ ನಿತ್ಯನೋಟ. ಪ್ರಜಾತಂತ್ರದೊಳಗೆ, ನಮ್ಮನ್ನು ನಾವೇ ಆಳಿಕೊಳ್ಳುತ್ತಿರುವಾಗ ಇಂಥಾದ್ದನ್ನು ಮುತ್ಸದ್ದಿತನದಿಂದ ನಿಭಾಯಿಸಲು, ಇತರರರ ದುಂಡಾವರ್ತನೆಗಳನ್ನು ಪ್ರತಿರೋಧಿಸಲು ನಮ್ಮಿಂದ ಸಾಧ್ಯವಾಗದೆ ಎಂಬ ಅಪನಂಬಿಕೆಯಲ್ಲಿ ದಿನತಳ್ಳುತ್ತಿದ್ದೇವೆ. ಈ ಅವಮಾನಗಳ ಗಳಿಗೆಗಳನ್ನು ನಾಳಿನ ಜನಾಂಗದ ಸ್ಮೃತಿಯಾಗಲೆಂದು ಕಾಯ್ದಿಡಬೇಕೆ? ರಾಜಕೀಯ ಪ್ರಬುದ್ಧತೆಯ ಅಭಾವವನ್ನು ಮುಗ್ಧತೆಯೆಂದು ಕರೆದುಕೊಳ್ಳೋಣವೆ?

ಈ ಅವಸ್ಥೆಯ ಒಂದು ಮುಖದ ದರ್ಶನ ಕಾವೇರಿ, ಮಹದಾಯಿ ಜಲವಿವಾದಗಳ ಸಂದರ್ಭಗಳಲ್ಲಾಗಿದ್ದರೆ, ಅವರ ಇನ್ನೊಂದು ಮುಖವನ್ನು ನಾಡಿನ ವಿವಿಧ ಭಾಗಗಳು ಅಭಿವೃದ್ದಿಯಲ್ಲಿ ಉಂಟಾಗಿರುವ ಅಸಮತೋಲದಲ್ಲಿ ಕಾಣಬಹುದು. ಬಹು ಸಾಂಸ್ಕೃತಿಕ ಲಕ್ಷಣವುಳ್ಳ ನಾಡು ನಮ್ಮದು. ಆದರೆ ದೇಶವು ಸ್ವತಂತ್ರವಾಯಿತು; ನಾಡೂ ಏಕೀಕರಣಗೊಂಡು ಆರು ದಶಕಗಳೇ ತುಂಬಿವೆ. ಆದರೂ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಹೈದರಾಬಾದ್ ಕರ್ನಾಟಕ ಎನ್ನುವ ಬ್ರಿಟಿಷರು ಬಳುವಳಿ ನೀಡಿದ ಆಡಳಿತದ ಪರಿಭಾಷೆಯೇ ಇಂದಿಗೂ ಸರ್ಕಾರದ ಕಾನೂನುಗಳಲ್ಲಿ ಬಳಕೆಯಗುತ್ತದೆ. ಎಲ್ಲ ಕನ್ನಡಿಗರನ್ನೂ ಒಳಗೊಳ್ಳುವಂಥ ಅಡಳಿತ ಪರಿಭಾಷೆಯನ್ನು ಏಕೆ ನಾವು ಸೃಷ್ಟಿಸಲೇ ಇಲ್ಲ? ಏಕೀಕರಣ ಎಂಬುದನ್ನು ಏಕಚಕ್ರಾಧಿಪತ್ಯವೆಂದು ಭ್ರಮಿಸಿ, ವಿಧಾನ ಸೌಧವೇ ಈ ಅಧಿಪತ್ಯದ ಕೇಂದ್ರವೆಂದು ತಿಳಿದಿರುವುದೇ ಮೊದಲು ಮಾಡಿದ ತಪ್ಪು ಲೆಕ್ಕಾಚಾರ. ಏಕೆಂದರೆ ನಮ್ಮ ಸಾಂಸ್ಕೃತಿಕ ಬಹುತ್ವವನ್ನು ಅಧಿಕಾರದ ವಿಕೇಂದ್ರೀಕರಣದ ಮೂಲಕ ಮಾತ್ರ ಕಾಪಾಡಬೇಕಾದದ್ದು ಯಾವಾಗಲೂ ಸಮಾಜವಾದದ ಮೊದಲ ಹೆಜ್ಜೆಯಾಗುಬೇಕಿತ್ತು. ಆದನ್ನು ಮರೆತು ಆಯಾ ಪ್ರದೇಶಗಳೆಲ್ಲ ಇದ್ದಂತೆಯೇ ಇರಲೆಂದು ನಿರ್ಲಕ್ಷಿಸಿದ್ದು ಎರಡನೆಯ ತಪ್ಪು. ಜನತಾಂತ್ರಿಕ ಆಳುವ ವ್ಯವಸ್ಥೆಯು ಸ್ವತಃ ಎಷ್ಟೇ ಬಲವುಳ್ಳದ್ದಾದರೂ ಅದರ ಸಮರ್ಪಕ ಕಾರ್ಯಾಚರಣೆ ಸಾಧ್ಯವಾಗಬೇಕಾದರೆ ರಾಜನೈತಿಕ ವಿಜ್ಞಾನದ ಅರಿವು ಅವಶ್ಯಕ. ಈ ವಿಷಯದಲ್ಲಿ ಕಳೆದ ೬೦ ವರ್ಷಗಳಿಂದಲೂ ಉದಾಸೀನ ನೀತಿಯನ್ನೇ ಬೇರೆ ಬೇರೆ ಆಡಳಿತಗಳು ತೋರಿರುವುದರಿಂದಲೇ ಭಿನ್ನರಾಜ್ಯವೇ ಬೇಕೆಂಬ ಕೂಗು ಇಂದು ಬಲವಾದ ಚಳವಳಿಯಾಗಿ ಬೆಳೆದಿದೆ. ಒಟ್ಟಾಗಿದ್ದಾಗಲೇ ನೆರೆ ರಾಜ್ಯಗಳ ಒದೆತಗಳನ್ನುಎದುರಿಸಲು ತತ್ತರಿಸುವ ನಾಡು ಇನ್ನು ಬೇರೆಯಾಗಿ ವಿಭಾಗಗೊಂಡರೆ ಈಗಿರುವ ಸಂಕಟಗಳೆಲ್ಲ ಪರಿಹಾರಗೊಳ್ಳುತ್ತವೆಯೆ?

ಉತ್ತರಭಾಗದ ಕರ್ನಾಟಕದ ಜಿಲ್ಲೆಗಳು ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿರುವುದರ ವೈಪರೀತ್ಯಗಳ ಅಧ್ಯಯನ ಹಾಗೂ ಪರಿಹಾರ ಕಾರ್ಯ ಸೂಚಿಯನ್ನು ಒದಗಿಸಲೆಂದೇ ಒಂದು ‘ಹೈಪವರ್ ಕಮಿಷನ್’ ಅನ್ನು ನೇಮಕ ಮಾಡಲಾಗಿತ್ತು. ಆ ಆಯೋಗವು ತನ್ನ ವರದಿಯನ್ನೂ, ಅನೇಕ ಪರಿಹಾರಗಳನ್ನೂ ಸೂಚಿಸಿ, ವರದಿ ಸಲ್ಲಿಸಿದ್ದು ಕಳೆದ ಚುನಾವಣೆಗೂ ಎಷ್ಟೋ ಮೊದಲು. ಆದರೆ ಇದುವರೆಗೆ ಆ ಸಲಹೆಗಳಲ್ಲಿ ಯಾವುದೂ ಕಾರ್ಯಗತವಾಗಲಿಲ್ಲ. ಸರ್ಕಾರಗಳು ಬರುತ್ತವೆ; ಸರ್ಕಾರಗಳು ಹೋಗುತ್ತವೆ. ಆದರೆ ನಾಡಿನ ಅಭಿವೃದ್ಧಿಯು ಮಾತ್ರ ಫೈಲುಗಳಲ್ಲಿ ಧೂಳುತಿನ್ನುತ್ತಾ ಬಿದ್ದಿರುತ್ತದೆ.

ಇದೇ ರೀತಿ, ಕುಡಿಯುವ ನೀರಿನ ಸಮಸ್ಯೆ ಈಗ ಪರಾಕಾಷ್ಠೆ ಮುಟ್ಟಿದೆ. ಜಲಸಂಪನ್ಮೂಲ ತಜ್ಞರು ೧೭೫ ತಾಲ್ಲೂಕುಗಳಲ್ಲಿ ಭೀಕರವಾಗಿ ಕುಡಿವ ನೀರಿನ ಕೊರತೆ ಉಂಟಾಗಲಿರುವುದರ ಬಗ್ಗೆ ಎಷ್ಟೋ ವರ್ಷಗಳ ಮೊದಲೇ ಎಚ್ಚರಿಸಿದ್ದರು. ಆದರೆ ಚುನಾವಣೆಯ ಹೊತ್ತಿನಲ್ಲಿ ಕೂಡ ಇಂಥ ಸಮಸ್ಯೆಗಳು ಪರಿಹರಿಸಬೇಕಾದ ವಿಷಯಗಳೇ ಆಗದೆ ಹೋದವು. ಆದರೆ ‘`ನೆಲನಮ್ಮದು, ಜಲ ನಮ್ಮದು ನಾವೊಡೆಯರು ನಮಗೆ” ಎನ್ನುವುದು ಈಗ ಕೇವಲ ಅಧಿಕಾರಕ್ಕೆ ಏರುವ ರಾಜಕಾರಣಿಗಳ ಸ್ವಂತ ಅಭಿವೃದ್ಧಿಗೆ ಮಾತ್ರ ಅನ್ವಯಿಸುವುದೇ ಹೊರತು ಕರ್ನಾಟಕದ ಜನಸ್ತೋಮದ ಮಾತು ಇದಾಗಲೇ ಇಲ್ಲ.

ಕನ್ನಡತನ, ಕರ್ನಾಟಕತ್ವ ಮೊದಲಾದ ಭಾವನಾತ್ಮಕ ಹೆಮ್ಮೆಗಳನ್ನು ಅನ್ಯಭಾಷಿಗರಿಗೆ ಮುಖಾಮುಖಿಯಾಗಲಿಕ್ಕಾಗಿ ನಮ್ಮ ಶಸ್ತ್ರಾಗಾರಗಳಲ್ಲಿ ಇಟ್ಟುಕೊಂಡಿದ್ದೇವೆಯೇ ಹೊರತು ಸಾಮೂಹಿಕವಾದ ಒಮ್ಮತದ ಭಾವದಿಂದ ನಾಡಿನ ಕಠಿಣ ಸಮಸ್ಯೆಗಳ ನಿವಾರಣೆಗಾಗಿ ಯತ್ನಿಸಲು ಅಲ್ಲ. ಇದು ಉತ್ತರ ಕರ್ನಾಟಕದವರದು, ಇದು ಕರಾವಳಿಯವರದುಎಂಬ ವಿಭಕ್ತ ರೀತಿಗಳಲ್ಲೇ ನಮ್ಮನ್ನು ನಾವು ಭಾವಿಸುತ್ತಿರುವುದೇ ಮೊದಲು ಬದಲಾಗಬೇಕಾಗಿದೆ.

ಸಮೂಹ ಚಳವಳಿಗಳು ಮತ್ತು ಜನಹಿತರಕ್ಷಣೆ
ನಮ್ಮ ಜೀವನ ವ್ಯವಸ್ಥೆಯಲ್ಲಿ ರೂಢಿಗತವಾಗಿರುವ ಅಸಮಾನತೆ, ಅನ್ಯಾಯ, ಶೋಷಣೆಗಳನ್ನು ಸರಿಪಡಿಸುವುದಕ್ಕೆಂದು, ಅಥವಾ ನಿವಾರಿಸುವುದಕ್ಕೆಂದು, ಪರ್ಯಾಯ ಜೀವನಕ್ರಮವೊಂದನ್ನು ನಾಳೆಗಾಗಿ ನಿರ್ಮಿಸಬಹುದೆಂದೂ ರಾಜಕೀಯ, ಆರ್ಥಿಕ, ಸಾಮಾಜಿಕ ಹೋರಾಟಗಳು ಹುಟ್ಟಿರುತ್ತವೆ. ಹೊಸಕಾಲ ಬರುತಲಿದೆ; ಆ ಬರಲಿರುವ ಹೊಸಕಾಲಕ್ಕೆ ನಮ್ಮ ಈಗಿರುವ ಸಾಮಾಜಿಕ ಕೊಳಕನ್ನು ಗುಡಿಸಿ ಚೊಕ್ಕಟ ಮಾಡಬೇಕು ಎನ್ನುವ ಧ್ಯೇಯಾದರ್ಶವೇ ಗಾಢವಾಗಿದ್ದ ಚಳವಳಿಗಳನ್ನು ಈ ನಾಡು ಕಂಡಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಕಾಲದಲ್ಲಿ ಮೊದಲು ಆಮೇಲೆ ಕಳೆದ ಶತಮಾನದಲ್ಲಿ ತುರ್ತು ಪರಿಸ್ಥಿತಿ ವಿರುದ್ಧವಾಗಿ ಹುಟ್ಟಿದ್ದ ನವ ನಿರ್ಮಾಣಕ್ರಾಂತಿಯ ಹೋರಾಟಗಳಲ್ಲೂ, ಭಾವೀ ಆದರ್ಶರಾಜ್ಯವೊಂದನ್ನು ಕಟ್ಟುವ ಆಶಾವಾದವೇ ಬಲವಾಗಿತ್ತು. ಆದರೆ ಹೋರಾಟಗಳು ಸಫಲವಾಗಿ, ಸ್ವತಂತ್ರ ಜನತಂತ್ರಗಳ ಆಳ್ವಿಕೆಗಳು ಸ್ಥಾಪನೆಗೊಂಡ ಮೇಲೆ ಅತ್ಯಲ್ಪ ಕಾಲದಲ್ಲೇ ಜನರು ಕಟ್ಟಿಕೊಂಡಿದ್ದ ಹೊಸ ನಾಡಿನ ಆಶಾಗೋಪುರಗಳು ಕಳಚಿಬಿದ್ದವು. ೫೦ರ ದಶಕಕ್ಕೆ ಮೊದಲು ಕವಿ ಗೋಪಾಲಕೃಷ್ಣ ಅಡಿಗರು ಬರೆದಿದ್ದ ‘`ಕಟ್ಟವೆವು ನಾವು ಹೊಸ ನಾಡೊಂದನು/ ರಸದ ಬೀಡೊಂದನು” ಎಂಬುದು ಕನ್ನಡಿಗರೆಲ್ಲರ ಆಶೋತ್ತರಗಳ ಮಿಡಿತವಾಗಿತ್ತು. ಆದರೆ ದಶಕವೊಂದು ಕಳೆಯುವುದರ ಒಳಗೇ ಅದೇ ಅಡಿಗರು ನಾಡಿನ ಅತ್ಯಂತ ದುರ್ಭರ ಸಂಕಟಗಳ ಬಗ್ಗೆ ಜನರ ಸಂತ್ರಸ್ತ ಸ್ಥಿತಿಯ ಬಗ್ಗೆ ಕಟುವಿಷಾದದಿಂದ ‘ಇಂದು ನಮ್ಮಿನಾಡು’ ಎಂಬ ಹೆಸರಿನ ಮೂರು ಸರಣಿ ಕವಿತೆಗಳನ್ನು ಬರೆದರು. ಅದೇ ಹೊತ್ತಿನಲ್ಲಿ ನಾಟಕಕಾರ ಶ್ರೀರಂಗರು ‘ಶೋಕಚಕ್ರ’ ಎಂಬ ನಾಟಕದಿಂದ ಸ್ವತಂತ್ರ ಭಾರತದ ರಾಜಕಾರಣದ ಕಡು ವ್ಯಂಗ್ಯಚಿತ್ರವನ್ನು ರಚಿಸಿದ್ದರು. ಆದರೆ ಅಂಥ ನಿರಾಶಾದಾಯಕ ಪರಿಸರದಲ್ಲೂ ‘ಇಂದು ನಮ್ಮೀನಾಡು-೩’ ಎಂಬ ಕವಿತೆಯಲ್ಲಿರುವ ಈ ಸಾಲುಗಳು ನಾಡಿನ ಸಂಸ್ಕೃತಿಯ ವೃಕ್ಷವನ್ನು ಕಾಪಾಡಲು ಕರೆಕೊಡುವ ಬಗೆ ಇಂದಿಗೂ ಅರ್ಥಪೂರ್ಣ.
ಬೇರು ಸತ್ತೀಮರವನೆತ್ತಿನಿಲ್ಲಿಸು ಮಗೂ
ಕೊಂಬೆರೆಂಬೆಗಳಿರಲಿ ಇದ್ದ ಹಾಗೆ;

‘ಇತ್ತು’ಗಳ ಧ್ವಜವ ಹಿಡಿದೆತ್ತಿ ನಿಲ್ಲೋ ಮಗೂ,
‘ಇದೆ’ಯಾ ಹೃದಯದ್ರಾವ ಬೇಡ ನಿನಗೆ.
ಮರವುಂಟು ಮರಕೆ ಬಂಗಾರವುಂಟಲ್ಲದೆಯೆ
ಕಟ್ಟೆಯುಂಟಲ್ಲ ! ನೀರಿಕ್ಕು ಅದಕೆ !
ಭಾವನಾತ್ಮಕವಾಗಿ ಜನರನ್ನು ಮೀಟಿ, ಅವರನ್ನು ಒಂದು ಶಕ್ತಿಯಾಗಿಸಿ ಆಳುವ ವ್ಯವಸ್ಥೆಗಳ ವಿರುದ್ಧ ಹಾಗೂ ನಾಡಿನ ಸಾಂಸ್ಕೃತಿಕ ವ್ಯವಸ್ಥೆಯೊಳಗಿನ ಯಜಮಾನಶಕ್ತಿಗಳ ವಿರುದ್ಧದ ಒತ್ತಡ ಸೃಷ್ಟಿಸಲು ಬಳಸುವುದು ಚಳವಳಿಗಳ ಒಂದು ರಣನೀತಿ. ಆದರೆಈಗ ಕರ್ನಾಟಕದಲ್ಲಿ ಕಡ್ಡಿಗೀರಿದರೆ ಹೊತ್ತಿ ಸಿಡಿವ ಸರಣಿ ಪಟಾಕಿಗಳ ಹಾಗೆ ಬಹುರೂಪದಲ್ಲಿ ಚಳವಳಿಗಳು ಆಸ್ಫೋಟಿಸುತ್ತವೆ. ಅವುಗಳಲ್ಲಿ ಎಲ್ಲ ಚಳವಳಿಗಾರರೂ ಸಮಾನವಾಗಿ ಬಳಸಿಕೊಳ್ಳುವ ಒಂದು ನೀತಿಯೆಂದರೆ ಜನರು ಒಟ್ಟಾದರೆ ಎಂಥ ಶಕ್ತಿಗಳನ್ನೂಮಣಿಸಿ, ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂಬುದು. ಸ್ವಾತಂತ್ರ್ಯ ಹೋರಾಟದಿಂದಲೇ ಈ ಪದ್ಧತಿ ಬೆಳೆದಿದೆ. ಆದರೆ ಹುಟ್ಟುವ ಎಲ್ಲ ಚಳವಳಿಗಳೂ ದೀರ್ಘದರ್ಶಿಯಾದ ಸಮಾಜ ಪರಿವರ್ತನೆಯ ಧ್ಯೇಯವನ್ನೇ ಎದುರಿಗೆ ಇಟ್ಟುಕೊಂಡಿರುತ್ತವೆ ಎಂದೇನೂ ಇಲ್ಲ. ಮೇಲುನೋಟಕ್ಕೆ ಸಮಾಜದ ಅಮಾನವೀಯ ಧಾರ್ಮಿಕ, ಸಾಮಾಜಿಕ ಆಚರಣೆಗಳನ್ನು ವಿರೋಧಿಸುವಂತೆ ಕಾಣಿಸುತ್ತಿರುವ ಇಂದಿನ ಎಷ್ಟೋ ಚಳವಳಿಗಳು ಆಂತರ್ಯದಲ್ಲಿ ರಾಜಕೀಯ ಪಕ್ಷಗಳ ಹೋರಾಟದ ಧ್ಯೇಯಗಳಿಗೆ ಬದ್ಧವಾಗಿರುತ್ತವೆ. ಮಾಧ್ಯಮಗಳ ಮುಖಾಂತರ ಜನ ಸಾಮಾನ್ಯರಿಗೆ ತಲುಪುವ ಹೋರಾಟದ ಚಿತ್ರವೇ ಬೇರೆ; ಒಳ ಉದ್ದೇಶಗಳಲ್ಲಿ ಚಳವಳಿಗಳು ವ್ಯೂಹತಂತ್ರವಾಗಿ ರಚಿತವಾಗಿರುವ ಉದ್ದೇಶಗಳೇ ಬೇರೆ ಆಗಿರುವುದು ಸಾಧ್ಯ. ಉದಾಹರಣೆಗೆ ಹೇಳುವುದಾದರೆ ಪಕ್ಷವೊಂದರ ರಾಜನೈತಿಕ ಅಸಾಮರ್ಥ್ಯ, ಅದರ ಆಡಳಿತಾತ್ಮಕ ವೈಫಲ್ಯಗಳು ಕಣ್ಣಿಗೆ ರಾಚುವಷ್ಟು ಕಾಣುತ್ತಿದ್ದಾಗಲೂ ಅಂಥ ರಾಜಕೀಯ ಪ್ರಶ್ನೆಗಳಾವುದೂ ಮುನ್ನೆಲೆಗೆ ಬರದ ಹಾಗೆ ಮತಗಳು, ಮಠಗಳು, ಧಾರ್ಮಿಕಾದಿ ಆಚರಣೆಗಳಂಥ ವಿಷಯಗಳನ್ನೇ ವೈಭವೀಕರಿಸಿ ಪ್ರತಿಭಟನೆಗೆ ಇಳಿಯುವುದು ಇಂದಿನ ಒಂದು ಸಾಮಾನ್ಯ ವಿದ್ಯಮಾನ.

ಜನರ ನಂಬಿಕೆಗಳಿಗೆ ಯಾವ ವಿಚಾರವಾದವೂ ಬೇಡಿಗಳನ್ನು ಸೃಷ್ಟಿಸಲಾರದು. ಏಕೆಂದರೆ ನಂಬಿಕೆ ಎಂಬುದು ಸಮಷ್ಟಿಯ ಸುಪ್ತಮನಸಿನ ಮೂಲಕ ಎದ್ದು ಬರುತ್ತಿರುತ್ತದೆ. ವಿಚಾರದ ಕೆಲಸ ಏನಿದ್ದರೂ ಪ್ರಜ್ಞೆಯ ಸ್ತರಕ್ಕೆ ಸಂಬಂಧಿಸಿರುವಂಥದು. ಈ ಮನಶ್ಶಾಸ್ತ್ರೀಯ ಮೂಲಪಾಠದ ಅರಿವಿದ್ದರೂ ವಿಚಾರವಾದಿಗಳು ವೇದಿಕೆಗಳ ಚರ್ಚೆಗಳಿಂದ ಜನರನ್ನು ಬದಲಿಸಬಹುದೆಂದು ತಿಳಿಯುವುದೂ ದೈನಂದಿನ ನೋಟವೇ. ಆದರೆ ಕಾರ್ಲ್ ಜಿ. ಯೂಂಗ್‌ರಂಥ ಆಧುನಿಕ ಮನಶ್ಶಾಸ್ತ್ರಜ್ಞರು, ಪ್ರಾಚೀನ ಭಾರತೀಯ ಯೋಗಶಾಸ್ತ್ರಜ್ಞರೂ ಚೆನ್ನಾಗಿ ಗ್ರಹಿಸಿದ್ದ ಒಂದು ಸತ್ಯವೆಂದರೆ ಒಂದು ಕಾಲದಲ್ಲಿ ಅತಿಹೆಚ್ಚು ಮೇಲೆದ್ದು ಬರುವ ವೈಚಾರಿಕತೆಗೆ ಅದರ ತಳದಲ್ಲಿರುವ ಸುಪ್ತಪ್ರಜ್ಞೆಯ ನಂಬಿಕೆಗಳೇ ಗತಿತಾರ್ಕಿಕ ಸಂಘರ್ಷವನ್ನು ಒಡ್ಡುತ್ತಿರುತ್ತವೆ ಎಂಬುದು. ಹಾಗಾಗಿ ನಂಬಿಕೆ ಶ್ರದ್ಧೆಗಳ ಭಾವನಾತ್ಮಕ ವಲಯವು ಇಂದು ಪ್ರಬಲವಾಗಿ ಮೇಲೆದ್ದಿರುವುದಕ್ಕೆ ಜಾಗತೀಕರಣದ ಫಲವಾಗಿ ರೂಢಿಗತ ಜೀವನವು ಪಲ್ಲಟಗೊಳ್ಳುತ್ತಿರುವುದೂ ಒಂದು ಕಾರಣ. ಏಕೆಂದರೆ ಅದು ಜನಕ್ಕೆ ‘ಸಂಸ್ಕೃತಿ ಆಘಾತ’ವನ್ನು ಉಂಟು ಮಾಡಿರುತ್ತದೆ. ಸಂಸ್ಕೃತಿ ಆಘಾತಕ್ಕೆ ಒಳಗಾದ ಸಮಾಜದಲ್ಲಿ ಸಮಷ್ಟಿಯ ಸುಪ್ತಪ್ರಜ್ಞೆಯಲ್ಲಿ ಹೂತುಹೋಗಿದ್ದ ನಂಬಿಕೆಗಳೆಲ್ಲ ಉಬ್ಬರಿಸಿ ಮೇಲೆದ್ದು ಬರುವುದು ಒಂದು ವಿಶಿಷ್ಟ ಲಕ್ಷಣ. ವೈಚಾರಿಕತೆ ಎಷ್ಟೆಷ್ಟು ಶಿಖರಕ್ಕೇರುವುದೋ ಅಷ್ಟೇ ಬಲವಾಗಿ ಅವೈಚಾರಿಕ ಭಾವಗಳು, ಮೌಢ್ಯಗಳೂ ಉಕ್ಕಿಬರುವುದು ಒಂದು ಅನಿವಾರ್ಯ ವಿದ್ಯಮಾನ. ಈ ಪಲ್ಲಟಗಳು ಹುಟ್ಟಿಸಿರುವ ಆತಂಕಗಳಿಗೆ ಸ್ಥಿತಿಸ್ಥಾಪಕತೆ ತರಲು ಇನ್ನೂ ಬಲಿಷ್ಠವಾದ ಮೌಲಿಕ ಜೀವನ ಕ್ರಮಗಳು, ಅವುಗಳನ್ನು ಆಚರಿಸಿ ತೋರಿಸುವಂಥ ಮಾದರಿ ವ್ಯಕ್ತಿತ್ವಗಳೂ ಬೇಕು. ಅವೆಲ್ಲ ಇದ್ದರೂ ಸಾಂಸ್ಕೃತಿಕ ಉಲ್ಬಣಾವಸ್ಥೆ ಹೋಗಿ ಸ್ಥಿತಿಸ್ಥಾಪಕತ್ವವು ಉಂಟಾಗುವುದು ತೀರ ನಿಧಾನದ ಪ್ರಕ್ರಿಯೆ. ಬಾಹ್ಯರೂಪದಲ್ಲಿ ಕಾನೂನು ಜಾರಿಗೊಳಿಸಿ ಜನರನ್ನು ಹಿಡಿತದಲ್ಲಿಟ್ಟರೂ ಯಾವುದೇ ಅಪರಾಧ ನಾಶವಾದ ಉದಾಹರಣೆ ನಮ್ಮಲ್ಲಿದೆಯೆ? ವಿಚಾರ ಮಾಡಬೇಕಾದ ಸಂಗತಿ ಇದು. ಸ್ವತಃಚಳವಳಿಗಳೇ ತಮ್ಮ ತಮ್ಮ ರಾಜಕೀಯ ಮೇಲುಗೈ ಸಾಧನೆಯ ಒಳೋದ್ದೇಶವಿಟ್ಟು ಕೊಂಡಿದ್ದಾಗ, ಮೇಲ್ಮುಖದ ಇಂಥ ಸುಧಾರಣಾ ಯತ್ನಗಳು ಇನ್ನಷ್ಟು ದುರ್ಬಲವಾಗಲೂ ಸಾಧ್ಯ.

ಹೀಗೆಂದ ಮಾತ್ರಕ್ಕೆ ಇಂದು ಉಲ್ಬಣಿಸುತ್ತಿರುವ ಮೂಲಭೂತವಾದ ಹಾಗೂ ಅದರ ಅಸ್ತ್ರವಾದ ಕೋಮುವಾದಗಳನ್ನು ಜನರು ಸುಮ್ಮನೆ ಅನುಭವಿಸಬೇಕೆಂದು ಅರ್ಥವಲ್ಲ. ಆಧುನಿಕತೆಯ ಆರ್ಭಟಕಾರಿ ಆರ್ಥಿಕ ಮುಕ್ತ ನೀತಿಯ ಫಲವಾದ ಸಾಂಸ್ಕೃತಿಕ ಪ್ರತ್ಯೇಕತಾಭಾವನೆಗಳನ್ನು ಎದುರಿಸಲು ಸಮಷ್ಟಿಯ ಸುಪ್ತ ಮನಸ್ಸು ಕಂಡುಕೊಳ್ಳುತ್ತಿರುವ ಒಂದು ಅಭಿವ್ಯಕ್ತಿ ಗತಕಾಲದಲ್ಲಿ ರೂಢಿಯಲ್ಲಿ ಭದ್ರವೆಂದು ಕಂಡಿದ್ದ ಜೀವನಕ್ರಮಗಳನ್ನೂ, ಅಂದಿನ ಸಂಪ್ರದಾಯ, ನಂಬಿಕೆಗಳನ್ನೂ ಮೇಲೆಬ್ಬಿಸಿ, ಮತ್ತೆ ಜಾರಿಗೆ ತರುವ ಮೂಲಕ ಆಧುನಿಕತೆಯನ್ನೂ ಪ್ರಗತಿಗಳನ್ನೂ ತಡೆಗಟ್ಟಲು ಯತ್ನಿಸುವುದು, ಇದನ್ನೇ ಮೂಲಭೂತವಾದವೆನ್ನವುದು. ಇಂಡಿಯಾದ ರಾಜಕೀಯ ವ್ಯವಸ್ಥೆಯ ಎರಡು ಪ್ರಮುಖ ಓಟಿನ ಬ್ಯಾಂಕು ಕೋಮುಗಳು ಹೀಗೆ ಪುರಾತನವಾದ, ಚಾರಿತ್ರಿಕವಾಗಿ ಸತ್ತುಹೋದ, ಮಾನವರೇ ಅನಾಗರಿಕವೆಂದು ಬಿಟ್ಟುಬಂದಿರುವ ಸಂಪ್ರದಾಯಗಳ ದೆವ್ವ, ಭೂತಗಳನ್ನು ಮೇಲಕ್ಕೆ ಎಬ್ಬಿಸಿ ಮೈಮೇಲೆ ಬರಿಸಿಕೊಂಡು ಮತ್ತೆ ಪ್ರಚುರಗೊಳಿಸಲು ದುಡಿಯುತ್ತಿವೆ. ಗೋರಿಯಲ್ಲಿದ್ದ ಆಚರಣೆಗಳು ದುರ್ಬಲರನ್ನು ಅನ್ಯಾಯ, ತಿರಸ್ಕಾರ, ದಮನಗಳಿಗೆ ಗುರಿಮಾಡಿಯೇ ತಮ್ಮ ಧಾರ್ಮಿಕ ಅಧಿಕಾರವನ್ನು ಸ್ಥಾಪಿಸಿದ್ದಂಥವು. ಈಗ ಅವುಗಳಿಗೆ ಜೀವ ತುಂಬುವುದೆಂದರೆ ಮತ್ತದೇ ದುರ್ಬಲ ಜಾತಿ, ವರ್ಗ, ಲಿಂಗಗಳ ಮುನಷ್ಯರನ್ನೇ ನೊಗಕ್ಕೆ ಹೂಡಬೇಕಾಗಿರುತ್ತದೆ. ಈ ಕಾರಣದಿಂದಲೇ ಜಮೀನುದಾರಿ ಪಾಳೇಗಾರ ವ್ಯವಸ್ಥೆಯಲ್ಲಿ ಚಲಾವಣೆಯಲ್ಲಿದ್ದ ಯಜಮಾನ ಶಕ್ತಿಗಳೂ ಪುನಃ ಬಲಿಷ್ಠವಾಗುತ್ತಾ ಹೆಚ್ಚು ಹೆಚ್ಚಾಗಿ ದಲಿತರು, ಸ್ತ್ರೀಯರು ಹಿಂದಿದ್ದ ದಮನಿತ ಅವಸ್ಥೆಗಳಿಗೇ ಪುನಃ ತಳ್ಳಲ್ಪಡುತ್ತಿದ್ದಾರೆ. ಆದರೆ ಮಾನವತೆಯನ್ನು ಕಾಯ್ದುಕೊಳ್ಳುವುದೇ ಒಂದು ಪರಮಧರ್ಮ ಎಂದು ನಂಬುವ, ಎಲ್ಲ ಮಾನವರ ಸಮಾನತೆಯಲ್ಲಿ ಬಲವಾದ ಶ್ರದ್ಧೆಯಿರುವ ವಿವೇಕವಂತ ಜನಾಂಗ ಕನ್ನಡಿಗರದು. ಆದ್ದರಿಂದ ಹಳೆಯ, ಅರ್ಥಹೀನ, ಮೌಢ್ಯಗಳನ್ನು ಮತ್ತೆ ಜೀವಂತಗೊಳಿಸುವ ಇಲ್ಲವೆ ಇಂದಿಗೂ ಪಳೆಯುಳಿಕೆಯಾಗಿ ಬರುತ್ತಿರುವ ಅಮಾನವೀಯ ಕ್ರೂರ ಪದ್ಧತಿಗಳನ್ನು ವಿರೋಧಿಸಲು, ತಡೆಗಟ್ಟಲು ದೃಢವಾಗಿ ಯತ್ನಿಸುವುದು ನಮ್ಮೆಲ್ಲರ ಕರ್ತವ್ಯವಾಗಲೇಬೇಕು. ಆದರೆ ಅಂಥ ಗುರಿ ಸಾಧನೆ ನಿಷ್ಪಾಕ್ಷಿಕವಾಗುವಂತಹ ಎಚ್ಚರವೂ ಅಗತ್ಯ. ಸಮಾನತೆಯನ್ನು ಮತ್ತು ಪರಿವರ್ತನೆಯನ್ನು ಅಪೇಕ್ಷಿಸುವ ಹೋರಾಟಗಳು ಸಮಗ್ರವಾಗಿ ಅದೇ ಧ್ಯೇಯಕ್ಕೆ ಬದ್ಧವಾಗಿದ್ದರೆ ಮಾತ್ರ ಪ್ರಭಾವ ಬೀರಲು ಶಕ್ತವಾಗಿರುತ್ತವೆ. ಇದಕ್ಕೆ ಚರಿತ್ರೆಯೇ ಸಾಕ್ಷಿ.

Click Here

ಆರಂಭಕ್ಕೆ ನಾನು ಹೇಳಿದಂತೆ, ನಾಳೆಯು ಇಂದು ನಾವು ಏನಾಗಿದ್ದೇವೆ ಎಂಬುದರ ಮೇಲೆ ನಿಂತಿರುತ್ತದೆ. ನಾಡಿನ ಇಂದಿನ ದುರಂತಕರ ಸ್ಥಿತಿಯನ್ನು ಕೇವಲ ಈಗಿನದು ಎಂದು ಅಂದುಕೊಳ್ಳಬೇಕಿಲ್ಲ. ಹಿಂದೆಯೂ ಇಂಥವೇ ಅವಸ್ಥೆಗಳನ್ನು, ನಾಡಿನ ಜನರ ಇಂಥದೇ ಅನುಭವಗಳನ್ನು ಕವಿಗಳು ಚಿಂತಿಸಿದ್ದಾರೆ. ದಾಖಲೂಗೊಳಿಸಿದ್ದಾರೆ. ಕವಿಯೊಬ್ಬರು ತತ್ತರಿಸಿದ್ದ ಜನರ ಅವಸ್ಥೆಯನ್ನು ಬಹಳ ಹಿಂದೆ ಹೀಗೆ ಚಿತ್ರಿಸಿದ್ದರು.
ನಿಟ್ಟುಸಿರಿನ ತಿದಿಯಲ್ಲಿ
ಕುಟ್ಟುತಿರುವ ಎದೆಯಲ್ಲಿ
ಕಣ್ಣೀರಿನ ಕುದಿಯಲ್ಲಿ
ಜೀವ ಬೇಯುತಿರುವುದು”
ಈ ಚಿತ್ರ ಎಷ್ಟು ಹಿಂದಿನದೋ ಅಷ್ಟೇ ಇಂದಿಗೂ ಅನ್ವಯಿಸಬಹುದಾದದ್ದು. ಹಾಗೆಯೇ ಗೋಪಾಲಕೃಷ್ಣ ಅಡಿಗರು ಬರೆದಿದ್ದ ೫೦ರ ದಶಕದ ಒಂದು ಕವನ ‘ರಾಜ್ಯಬಂದರೇನು?’ ಎಂಬುದರ ಸಾಲುಗಳಿವು;
ಅವರ ರಾಜ್ಯ, ಇವರ ರಾಜ್ಯ, ನಮ್ಮ ರಾಜ್ಯ, ನಿಮ್ಮ ರಾಜ್ಯ-
ಏನಿದು ಕುಚೋದ್ಯ!
ಉರಿವ ಬೆಂಕಿ ಉರಿಯುತಿದೆ
ಹಾಕು ಹಾಕು ಆಜ್ಯ
ಬಂತು ಹೊಸತು ರಾಜ್ಯ,
ಈ ಹೊಸ ರಾಜ್ಯದೊಳಗಿನ ಸ್ಥಿತಿಯಾದರೂ ಏನು? ಅಡಿಗರೆನ್ನುತ್ತಾರೆ;
ಸರಕು ಹೊಸ ಹೊಸತು ಮಾರುತ್ತಲಿದೆ; ಕೂಸುಗಳ
ಕಂಕಾಲ, ಕಣ್ಣಗುಡ್ಡೆಗಳ ಗಾಜು;
ಕರುಳ ಮಾಲೆಯ, ತೊಗಲ ಚೀಲ, ಅಟ್ಟಿಯ ಬುಟ್ಟಿ
ಹೃತ್ಪಿಂಡ ಚೆಂಡು, ಬೆನ್ನಲುಬುದಾಂಡು
ತಟ್ಟುತಿದೆ ಮಸಣದಪಹಾಸ….
ಮಕ್ಕಳ ಆಟಿಗೆಯ ಅಂಗಡಿಯೊಂದರ ಈ ರೂಪಕದಲ್ಲಿ ಕೂಸುಗಳ ಅಸ್ಥಿಪಂಜರ, ಕಣ್ಣುಗುಡ್ಡೆ ಕರುಳು, ಚರ್ಮ, ಹೃದಯ, ಬೆನ್ನೆಲುಬುಗಳೇ ಆಟಿಗೆಗಳಾಗಿ ಆ ಅಂಗಡಿ ಮಸಣವನ್ನೂ ಅಪಹಾಸ್ಯ ಮಾಡುತ್ತಿದೆ.
‘ಲಾಭದಾಸೆ ನೇಣಿನಲ್ಲಿ ಗೋಣ್ಮುರಿಯುತ್ತಿರುವ’ ‘ನರನ ದಿವ್ಯರೂಪ’ದ ಈ ಚಿತ್ರವು ಇಂದಿನ ಜಾಗತಿಕ ಗ್ರಾಮೀಕರಣಗೊಂಡ ಕರ್ನಾಟಕಕ್ಕೆ ಅಷ್ಟೇ ಅರ್ಥವತ್ತಾಗಿ ಅನ್ವಯಿಸದೆ? ಆದ್ದರಿಂದ ಇದನ್ನು ಸರಿಪಡಿಸುವುದಕ್ಕಾಗಿಯೇ ಚಳವಳಿಗಳು ಬೆಳೆಯಲಿ; ಆದರೆ ಅವುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನಾಡಿನ ಜನರ ಅಂತಃಕರಣಗಳು ಗಾಢವಾಗಿ ಈ ಸ್ಥಿತಿಗೆ ಸ್ಪಂದಿಸುವಂತೆ ನಮ್ಮೊಳಗಿನ ಮನುಷ್ಯತ್ವಗಳು ಮೇಲೆದ್ದು ಬರಲಿ. ಆ ಬರುವಿಕೆಗೆ ಇಂದೇ ಸಕಾಲ; ನಾಳೆಯವರೆಗೆ ಕಾಯುವ ಅಗತ್ಯವಿಲ್ಲ.

ವಿಚಾರ, ವಿಮರ್ಶೆಗಳು ಅಂತಸ್ಥವಾಗಲಿ
ರಾಜಕೀಯ ವ್ಯವಸ್ಥೆಯಾಗಲಿ, ಸಾಹಿತ್ಯವಾಗಲಿ, ಕಲೆಯಿರಲಿ, ಸಂಸ್ಕೃತಿಯಿರಲಿ, ಎಲ್ಲವನ್ನು ಸಮಗ್ರವಾಗಿ ವಿಚಾರಮಾಡಬಲ್ಲ, ವಿಮರ್ಶಿಸಲೂ ಬಲ್ಲ ಸ್ವತಂತ್ರ ವಿಚಾರಶಕ್ತಿಯ ಅಭಾವ ಇಂದು ಈ ಎಲ್ಲಾ ಕ್ಷೇತ್ರಗಳಲ್ಲೂ ಎದ್ದು ತೋರುತ್ತದೆ. ಬೆನ್ನ ಹಿಂದೆ ಕಟುವಾಗಿ ಟೀಕಿಸಿ ವಿಮರ್ಶಿಸುವಂಥ ಹೆಸರಾಂತ ವ್ಯಕ್ತಿಗಳು ಈ ಯಾವುದೇ ಕ್ಷೇತ್ರದವರಾಗಿರಲಿ, ತಾವು ವಿಮರ್ಶಿಸಿದಂಥ, ಟೀಕಿಸಿದ್ದಂಥ ವ್ಯಕ್ತಿಗಳಿಗೆ ಮುಖಾಮುಖಿ ಆಗಬೇಕಾದಾಗ ಏನೂ ಆಗದವರಂತೆ ಸ್ನೇಹ, ಹೊಗಳಿಕೆ ಹಾಗೂ ಮುಖಸ್ತುತಿಗಳಲ್ಲಿ ತೊಡಗಿ ಆತ್ಮವಂಚನೆ ಮಾಡಿಕೊಳ್ಳುವುದನ್ನು ವ್ಯಾವಹಾರಿಕ ಜಾಣ್ಮೆ ಎಂದುಕೊಳ್ಳುವುದು ಇಂದು ಸಹಜವೆನಿಸಿದೆ. ಸಾಹಿತ್ಯ ವಿಮರ್ಶೆಯನ್ನು ಗಾಢವಾದ ವೃತ್ತಿಪರತೆಯಿಂದ ನಡೆಸುವವರು ಭಾಷೆಯ ಸೂಕ್ಷ್ಮ ಬಳಕೆಯ ಅರಿವನ್ನು ಹೊಂದಿರುವುದರಿಂದ ಅವರು ಸಮಾಜ ವಿಜ್ಞಾನಿಗಳು ಮತ್ತು ರಾಜಕೀಯ ವಿಜ್ಞಾನಿಗಳಿಗಿಂತ ಚಿಂತನೆಯಲ್ಲಿ ಮುಂದಿರುತ್ತಾರೆ ಎಂದು ನಂಬುತ್ತಿದ್ದ ಕಾಲವೊಂದು ಇತ್ತು. ೧೯೬೦-೭೦ರ ದಶಕಗಳಲ್ಲಿ ಸಾಹಿತಿಗಳು, ವಿಮರ್ಶಕರು ಮತ್ತು ಪತ್ರಿಕಾ ಮಾಧ್ಯಮ ಕೂಡ ಇಡೀ ಸಮಾಜದಜನರ ಚಿಂತನೆಗಳನ್ನು ಪ್ರೇರೇಪಿಸಿ ಮುನ್ನಡೆಸುವ ಜವಾಬ್ದಾರಿ ತಮ್ಮದೆಂದು ತಿಳಿಯುತ್ತಿದ್ದುದು ಇತ್ತು. ಪತ್ರಿಕೆಗಳಲ್ಲಿ ಆಕಾಲದಲ್ಲಿ ತಾತ್ತ್ವಿಕ ವಾಗ್ವಾದಗಳನ್ನು ಮುಂದಿಟ್ಟವರಲ್ಲಿ ಅನಂತಮೂರ್ತಿ, ಲಂಕೇಶ್, ತೇಜಸ್ವಿಗಳಂಥ ಪ್ರಸಿದ್ಧ ನವ್ಯ ಬರಹಗಾರರಲ್ಲದೆ ಇತರ ಅನೇಕ ಕ್ಷೇತ್ರಗಳ ವೃತ್ತಿ ನಿರತರೂ ಸೇರುತ್ತಾರೆ. ಪವಾಡ (ಮೂಡನಂಬಿಕೆ)ಗಳ ಸತ್ಯಾಸತ್ಯತೆ ಪರೀಕ್ಷಿಸಲು ನೇತೃತ್ವ ವಹಿಸಿದ್ದ ಎಚ್. ನರಸಿಂಹಯ್ಯ ಮತ್ತು ಪುಟ್ಟಪರ್ತಿ ಸಾಯಿಬಾಬಾ ಅವರ ಮುಖಾಮುಖಿಯಾಗಲಿ, ಸತ್ಯಕಾಮರು ಪ್ರತಿಪಾದಿಸುತ್ತಿದ್ದ ತಂತ್ರಧರ್ಮದ ಅವರ ಅನುಭವಗಳಾಗಲಿ, ಪರಸ್ಪರ ಭಿನ್ನಮತಗಳದೇ ಆಗಿದ್ದರೂ ಪತ್ರಿಕೆಗಳ ಓದುಗರನ್ನು ಪುನಃ ಪುನಃ ವಿಚಾರ ಮಾಡಲು ಪ್ರೇರೇಪಿಸುವಷ್ಟು ಸಶಕ್ತವಾಗಿರುತ್ತಿದ್ದವು. ಓದಿನ ಸಂಸ್ಕೃತಿಯೇ ಜೀವನದಲ್ಲಿ ಬಹು ಮುಖ್ಯಪಾತ್ರ ವಹಿಸಿದ್ದ ಕಾಲಘಟ್ಟ ಅದು.

ಇಂದಿನ ಬಹುಮಾಧ್ಯಮಗಳು ಅದರಲ್ಲೂ ದೃಶ್ಯ ಮಾಧ್ಯಮಗಳೇ ವಿಜೃಂಭಿಸುತ್ತಿರುವ ಕಾಲದಲ್ಲಿ ಕಣ್ಣಿಗೆ ಕಂಡಿದ್ದಷ್ಟೇ ನಿಜ; ಮಾತ್ರವಲ್ಲ ಕಂಡಿದ್ದೆಲ್ಲವೂ ನಿಜವೇ ಎಂಬಂಥ ಭ್ರಮೆಯನ್ನು ಈ ಸಮೂಹ ಮಾಧ್ಯಮಗಳು ಬಿಂಬಿಸುತ್ತವೆ. ಮಾತಿಗೂ ಮೊದಲು ಶಬ್ದ ಮತ್ತು ದೃಶ್ಯಗಳು ನಮ್ಮ ಇಂದ್ರಿಯಗಳನ್ನು ಆಕ್ರಮಿಸುವುದರಿಂದ, ಅಲ್ಲಿಂದ ಪಡೆದ ಸಂಜ್ಞೆಗಳು ಮೆದುಳನ್ನು ತಲುಪಿ, ವಿಚಾರಕ್ಕೆ ಚೋದಿಸುವುದಕ್ಕೂ ಮೊದಲೇ ಐಂದ್ರೀಯಕ ಸಂತೃಪ್ತಿಯಲ್ಲಿ ಜನರು ರಂಜನೆ ಪಡೆದು ವಿರಮಿಸುತ್ತಾರೆ. ಹೀಗೆ ವಿಚಾರ ಪ್ರಚೋದನೆಗಿಂತ ಜನರ ಮನರಂಜಿಸಿ ಲಾಭಗಳಿಸುವುದೇ ಗುರಿಯಾಗಿರುವ ಬಹುರೂಪಿ ಮಾಧ್ಯಮಗಳು ವೈಚಾರಿಕ ಪ್ರವೃತ್ತಿಯ ವೈರಿಗಳು. ಅಕ್ಷರ ಮಾಧ್ಯಮವಾದ ಪತ್ರಿಕೋದ್ಯಮ ಇಷ್ಟು ಕ್ಷಿಪ್ರವಾಗಿ ಜನರನ್ನು ಸೆಳೆಯುವುದು ಕಷ್ಟ. ಅಲ್ಲದೆ ಅದು ಓದುವ ಮಾಧ್ಯಮವಾದ್ದರಿಂದ ದೃಶ್ಯಮಾಧ್ಯಮಗಳ ಸ್ಪರ್ಧೆಯನ್ನು ಎದುರಿಸುತ್ತಲೇ ತನ್ನ ಲಾಭವನ್ನೂ ಕಾಯ್ದುಕೊಳ್ಳಬೇಕಿರುತ್ತದೆ. ಅದಕ್ಕಾಗಿ ದೊಡ್ಡ ದೊಡ್ಡ ಜಾಹಿರಾತುಗಳು, ಜನಪ್ರಿಯ ವ್ಯಕ್ತಿಗಳ, ಚಲನ ಚಿತ್ರ ನಟನಟಿಯರ, ಮಾಡೆಲ್‌ಗಳ, ಕ್ರೀಡಾಪಟುಗಳ ಢಾಳಾದ ಫೋಟೋಗಳ ಜೊತೆ ರಂಜಕವಾದ ಭಾವುಕವಾದ ಭಾಷೆಯ ಬರಹಗಳನ್ನು ಅದು ತನ್ನ ತಂತ್ರವನ್ನಾಗಿ ಮಾಡಿಕೊಳ್ಳುತ್ತದೆ. ಭಿನ್ನಮತ, ಭಿನ್ನಾಭಿಪ್ರಾಯ ಹಾಗೂ ಪ್ರಚಲಿತವಿರುವ ವಿಚಾರಧಾರೆಯನ್ನು ವಿರೋಧಿಸುವವರನ್ನು ದೂರವಿರಿಸಿ, ವಿಚಾರದ ಒಂದೇ ಮುಖವೇ ಸದಾ ಜನರಿಗೆ ತಲಪುವಂತೆ ಮಾಡುವಲ್ಲಿ ಪತ್ರಿಕೆಯೂ ತನ್ನ ಅಧಿಕಾರ ಚಲಾಯಿಸುತ್ತದೆ. ಇಂತಹ ಮಾಧ್ಯಮಗಳ ಲೋಕವು ನಿಷ್ಪಕ್ಷಪಾತ ವೈಚಾರಿಕ ಸಾಮರ್ಥ್ಯವೊಂದನ್ನು ಹೊಸ ಪೀಳಿಗೆಯಲ್ಲಿ ಬೆಳೆಸುತ್ತದೆ ಎಂಬುದು ಅನುಮಾನಾಸ್ಪದ. ಹಾಗೆ ಬೆಳೆಸಲು ಮಾಧ್ಯಮ ತಂತ್ರಜ್ಞಾನ ಬಂಡವಾಳಶಾಹಿ ಹಿತಾಸಕ್ತಿಯಿಂದ ವಿಕೇಂದ್ರಿತಗೊಂಡು ಸೃಜನಶೀಲವಾದರೆ ಮಾತ್ರ ಸಾಧ್ಯ.

ಶೈಕ್ಷಣಿಕವಾಗಿ ಹಿಂದೆ ಇಂಥ ಕೆಲಸ ಸಾಧ್ಯವಾಗುತ್ತಿತ್ತು. ಚಿಂತನಶೀಲ ಪ್ರಾಧ್ಯಾಪಕರು ತಮ್ಮ ಬಹುಶ್ರುತತ್ವ, ಜ್ಞಾನ ವೈಶಾಲ್ಯಗಳಿಂದಾಗಿ ವಿದ್ಯಾರ್ಥಿಗಳಲ್ಲಿ ಹೊಸ ವಿಚಾರಗಳನ್ನು ಬಿತ್ತಿ ಬೆಳೆಸಲು ಸಮರ್ಥರಿರುತ್ತಿದ್ದರು. ಆದರೆ ಇಂದು ಜ್ಞಾನ, ವಿಚಾರಗಳ ಮುಕ್ತವಾದ ವಿನಿಯಮ ಶಿಕ್ಷಣಕ್ಷೇತ್ರದಲ್ಲಾಗಲೀ, ಸಾಹಿತ್ಯದಲ್ಲಾಗಲೀ ಸುಲಭವಲ್ಲ. ಯಾರು ಯಾರನ್ನು ಕುರಿತು ಮಾತನಾಡುತ್ತಿದ್ದಾರೆ? ಅವರು ಸಾಮಾಜಿಕ ಜಾತಿಶ್ರೇಣಿಯಲ್ಲಿ ಎಲ್ಲಿ ಸಲ್ಲುತ್ತಾರೆ? ಅದರಿಂದ ಅವರ ಮಾತುಗಳು ಕೆಳಗಿನವರ ಇಲ್ಲವೆ ಮೇಲಿನವರ ಪರವೋ ವಿರುದ್ಧವೋ ಮುಂತಾಗಿ ಪ್ರತಿಯೊಂದು ಅಭಿವ್ಯಕ್ತಿಯನ್ನೂ ಕಳಂಕಿತಭಾವವಿಟ್ಟೇ ಗ್ರಹಿಸುವ ಮನೋಧರ್ಮ ಇಂದು ಉನ್ನತ ಶೈಕ್ಷಣಿಕ ವಿದ್ವತ್ತಿನ ವಲಯವನ್ನು ವ್ಯಾಪಿಸಿದೆ. ಜಾತಿ ಕಳಂಕದೊಂದಿಗೆ ನೋಡದೆ ಇದ್ದರೂ, ಮಾತನಾಡುತ್ತಿರುವವರು ಅಧಿಕಾರ ವಲಯಕ್ಕೆ ಎಷ್ಟು ಸಮೀಪ ಎಂಬುದರ ಮೇಲೆ ಓಲೈಸುವ, ಹುಸಿ ವಿನಯದ ತೋರಿಕೆ, ಹೊಗಳಿಕೆ, ಬಾಲಬಡುಕತನ ಶುರುವಾಗುತ್ತದೆ. ಸಂಶೋಧನೆ, ವಿಮರ್ಶೆ, ಅಧ್ಯಯನಗಳೆಲ್ಲ ಎಲ್ಲಿ ಯಾರಿಗೆ ಏನು ನೋವಾದೀತೋ ಎಂದು ಅಂಜುವಂತಾದರೆ, ಅಥವಾ ಮೇಲಿನವರ ಅವಗ್ರಹದಿಂದ ಎಲ್ಲಿ ಭಡ್ತಿ ತಪ್ಪಿಹೋದೀತೋ ಎಂಬ ಭೀತಿ, ಸ್ವಾರ್ಥಗಳಿಂದ ಕೂಡಿದ್ದರೆ, ಅಂಥ ಶಿಕ್ಷಣ ವಿಶ್ವವಿದ್ಯಾಲಯಗಳನ್ನೇ ಅವೈಚಾರಿಕ ಸಾಮ್ರಾಜ್ಯಗಳನ್ನಾಗಿಸದೆ ಮತ್ತೇನಾದೀತು? ಸಾಹಿತ್ಯದ ಅಧ್ಯಾಪಕರಿಗೇ ಸಾಹಿತ್ಯವು ಬದುಕಿನ ಎಲ್ಲ ವಲಯಗಳನ್ನೂ ಒಳಗೊಳ್ಳುವ ವಿಶಾಲವಾದ ಸೃಷ್ಟಿಶೀಲ ಚಟುವಟಿಕೆ ಎಂಬುದರ ಬಗ್ಗೆ ವಿಶ್ವಾಸ ಇಲ್ಲವಾದರೆ, ವಿದ್ಯಾರ್ಥಿಗಳಿಗೆ ಅವರು ಇನ್ನೇನು ಜ್ಞಾನವನ್ನು ರವಾನಿಸಿಯಾರು? ಶೈಕ್ಷಣಿಕ ಕ್ಷೇತ್ರ ಬಿಡುವಿಲ್ಲದೆ ಪ್ರಶ್ನೆ ಪತ್ರಿಕೆ ತಯಾರಿಕೆ, ಪರೀಕ್ಷೆ, ಮೌಲ್ಯಮಾಪನಗಳನ್ನಷ್ಟೇ ಅಧ್ಯಾಪಕ ವರ್ಗದ ಬಹು ಮುಖ್ಯ ಕಾರ್ಯಭಾರ ವಾಗಿಸಿದ್ದರಿಂದ ಬೌದ್ಧಿಕತೆ ನಿದ್ದೆ ಮಾಡದೆ ಇನ್ನೇನು ಮಾಡಬಲ್ಲದು?

ಇದೇ ರೀತಿ ರಾಜಕೀಯದ ಕ್ಷೇತ್ರದಲ್ಲಿ ಬಲಿಷ್ಠರೂ, ಪ್ರಭಾವಶಾಲಿಗಳೂ ಎಂದು ತೋರುವ ನಾಯಕವರ್ಗಕ್ಕೆ ಸಮಾಜದ ಸ್ಥಿತಿಗತಿಗಳನ್ನಾಗಲಿ, ವಿವಿಧ ರಾಜಕೀಯ ಬೆಳವಣಿಗೆಗಳನ್ನು ವಿಮರ್ಶಿಸಿ ನೋಡುವ ಸಾಮರ್ಥ್ಯವಾಗಲಿ ಇಂದು ಮುಖ್ಯವೆನಿಸುವುದಿಲ್ಲ. ಅಂಥವರ ವರ್ಚಸ್ಸು ಅಧಿಕಾರ ಮತ್ತು ಧನಬಲಗಳಿಂದ ಸೃಷ್ಟಿಸಿಕೊಂಡದ್ದಾಗಿದ್ದು ಅವರ ಹಿಂಬಾಲಕರಾದ ಯುವ ಪೀಳಿಗೆಯವರು ತಮ್ಮ ಪಕ್ಷಗಳ ಧರ್ಮಾಂಧ ವಕ್ತಾರರಷ್ಟೇ ಆಗಲು ಸಾಧ್ಯ. ಏಕೆಂದರೆ ಆತ್ಮ ವಿಮರ್ಶೆಯನ್ನೂ, ರಾಜಕೀಯದ ಆಗು ಹೋಗುಗಳ ವಿಮರ್ಶೆಯನ್ನೂ ನಡೆಸಲು ಮನೋಬೌದ್ಧಿಕವಾದ ಯಾವುದೇ ಶಿಕ್ಷಣ ಅವರಿಗೆ ತಮ್ಮ ನಾಯಕರಿಂದ ದೊರೆತಿರುವುದಿಲ್ಲ. ರಾಜಕಾರಣಕ್ಕೂ, ತತ್ತ್ವಶಾಸ್ತ್ರಕ್ಕೂ, ಸಾಹಿತ್ಯ ಸಂಸ್ಕೃತಿಗಳ ಜ್ಞಾನಕ್ಕೂ ಗಾಢವಾದ ಒಳ ಸಂಬಂಧ ಇದ್ದವರೇ ಜಗತ್ತಿನಲ್ಲಿ ಶ್ರೇಷ್ಠ ರಾಜಕಾರಣಿಗಳೆನಿಸಿದ್ದಾರೆ. ಆ ಬಗೆಯ ಸಮಗ್ರತೆಗಾಗಿ ಅಧ್ಯಯನ ಶೀಲತೆಯನ್ನು ಬೆಳೆಸಿಕೊಳ್ಳುವುದು ರಾಜಕಾರಣಿಗಳಿಗೆ ಎಷ್ಟು ಅವಶ್ಯಕ ಎಂಬುದನ್ನು ಲೋಹಿಯಾ ಪ್ರತಿಪಾದಿಸಿದ್ದರು.

ಬಾಣಮಹಾಕವಿ ಸಂಸ್ಕೃತ ಗದ್ಯ ಕಾವ್ಯದಲ್ಲೂ ನಾಗವರ್ಮನು ಕನ್ನಡ ಚಂಪೂ ರೂಪದಲ್ಲೂ ರಚಿಸಿರುವ ‘ಕಾದಂಬರೀ’ಯಲ್ಲಿ ರಾಜ್ಯದ ಆಡಳಿತಕ್ಕೆ ರಾಜಪುತ್ರ ಚಂದ್ರಾಪೀಡನನ್ನು ತಯಾರು ಮಾಡಲು ೧೮-೨೦ ಬಗೆಯ ಶಾಸ್ತ್ರಗಳನ್ನು ಕಲಿಸಲಾಯಿತೆಂದು ಚಿತ್ರಿಸಲಾಗಿರುತ್ತದೆ. ಅದರಲ್ಲಿ ಅನ್ವೀಕ್ಷಕೀ ಎಂದರೆ ತರ್ಕಶಾಸ್ತ್ರ ಮತ್ತು ದಂಡನೀತಿಗಳಂತೂ ಕಡ್ಡಾಯ. ನಮ್ಮ ಈಗಿನ ಸ್ಥಿತಿ ಎಂದರೆ ಅಧಿಕಾರದಲ್ಲಿರುವ ವ್ಯಕ್ತಿಗಳ ಪುತ್ರ ಇಲ್ಲವೆ ಪುತ್ರಿ ಆಗಿದ್ದರೆ ಸಾಕು, ರಾಜ್ಯ ದೇಶಗಳನ್ನು ಆಳಲು ಅದಕ್ಕಿಂತ ಅರ್ಹತೆ ಬೇಕಿಲ್ಲ!

‘ವಿಮರ್ಶೆಯ ಸೋಲೆಂದರೆ ಪ್ರಜಾಪ್ರಭುತ್ವದ ಸೋಲು’ ಎಂಬ ಮಾತೊಂದು ಇದೆ. ಕುರಿಗಳಂತೆ ತಮ್ಮ ಪಕ್ಷನಾಯಕರನ್ನು ಹಿಂಬಾಲಿಸುತ್ತ, ಅವರವರ ಪಕ್ಷದ ಪರವಾಗಿ ವಾಚಾಳಿಗಳಾಗುವ ಯುವ ಜನರು ಹೊಸ ರಾಜ ನೈತಿಕ ಸಮಸ್ಯೆಗಳನ್ನು ಎದುರಿಸಲು ಹೊಸ ನೀತಿಗಳನ್ನು ರೂಪಿಸಲು ಬೇಕಾದ ಆತ್ಮಬಲ ಮತ್ತು ಧೀಶಕ್ತಿಗಳೇ ಇಲ್ಲದವರಾಗುತ್ತಾರೆ. ಅಂಥ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕೆಂದರೆ ವಿಚಾರಗಳನ್ನೆಲ್ಲ ಧೃವೀಕರಿಸಿ ಎರಡು ಬಣಗಳನ್ನಾಗಿಸಿ ಪರಸ್ಪರ ಕಚ್ಚಾಡುವುದರಿಂದ ಸಾಧ್ಯವಾಗದು. ಅದಕ್ಕಾಗಿ ಯಾವ ಗುಂಪಿಗೂ ಸೇರದ, ಆದ್ದರಿಂದಲೇ ಬಿಚ್ಚುಮನಸ್ಸಿನಿಂದ ವಿಚಾರ ಮಾಡಬಲ್ಲ ಹಲವು ಜನರಾದರೂ ಸರಿಯಾದ ದಿಗ್ದರ್ಶನ ಮಾಡಬಲ್ಲವರು ಇದ್ದೇ ಇರುತ್ತಾರೆ. ಅಂಥವರ ವಿಚಾರಗಳ ಬಗ್ಗೆ ಯುವ ಪೀಳಿಗೆಗೆ ಆಸಕ್ತಿ ಹುಟ್ಟಿಸಬೇಕಾದದ್ದು ಇಂದಿನ ಅಗತ್ಯಗಳಲ್ಲಿ ಒಂದು.

ನಿಷ್ಪಕ್ಷಪಾತವಾದ ವೈಚಾರಿಕತೆ ಅಷ್ಟೊಂದು ಅಪರೂಪದ್ದೇನೂ ಅಲ್ಲ. ಕಳೆದ ೧೯ನೆಯ ಶತಮಾನದ ಕೊನೆಯಿಂದ ೨೦ನೆಯ ಶತಮಾನದ ಮೊದಲ ೨-೩ ದಶಕಗಳ ಅವಧಿಯಲ್ಲಿ ಪ್ರಕಟವಾಗಿರುವ ಕನ್ನಡ ಗ್ರಂಥಗಳತ್ತ ಒಮ್ಮೆ ಗಮನ ಹರಿಸಿದಲ್ಲಿ ಹೊಸದಾಗಿ ಇಂಗ್ಲಿಷ್ ಶಿಕ್ಷಣ ಪಡೆದ ತಲೆಮಾರಿನ ಎಷ್ಟೋ ಜನರು, ಶಿಕ್ಷಣವೇತ್ತರು, ವಿಜ್ಞಾನಿಗಳು, ವೈದ್ಯರು, ವಿವಿಧ ಶಾಸ್ತ್ರವೇತ್ತರು, ನಿಘಂಟುಕಾರರು, ಭಾಷಾ ಪಂಡಿತರು, ಸರಕಾರಿ ಅಧಿಕಾರಿಗಳೂ ಅಂದಿನ ಸಾಹಿತಿಗಳಂತೆಯೇ ಕನ್ನಡದಲ್ಲಿ ಕೃತಿಗಳನ್ನು ಬರೆದರು, ತಮ್ಮ ತಮ್ಮ ಕ್ಷೇತ್ರಗಳ ಜ್ಞಾನ, ಅನುಭವಗಳನ್ನು ಕನ್ನಡಕ್ಕೆ ತಂದರು, ಮಾತ್ರವಲ್ಲ; ತಮ್ಮ ಆಸಕ್ತಿಯ ಜ್ಞಾನ ಕ್ಷೇತ್ರಗಳ ಮಾಹಿತಿಗಳನ್ನೂ ಕನ್ನಡಕ್ಕೆ ತಂದರು. ವೈಯಕ್ತಿಕ ಬದುಕಿನಲ್ಲಿ ಅವರಲ್ಲಿ ಅನೇಕರು ಅತ್ಯಂತ ಧಾರ್ಮಿಕರೂ ಸಂಪ್ರದಾಯ ನಿಷ್ಠರೇ ಇರಬಹುದು. ಆದರೆ ಅವರ ಜ್ಞಾನ ವಿತರಣೆಯ ಧ್ಯೇಯದಲ್ಲಿ ಜಾತಿಭೇದ, ಮಡಿವಂತಿಕೆ ಇಲ್ಲದ ವಿಶಾಲ ಮನೋಭಾವದಿಂದಲೇ ಜನರೆಲ್ಲರ ಹಿತದೃಷ್ಟಿಯನ್ನು ಧ್ಯೇಯವಾಗಿ ಇಟ್ಟುಕೊಂಡಿದ್ದುದನ್ನು ಕಾಣಬಹುದು. ಅಂದರೆ, ನಾನು ಹೇಳ ಬಯಸುವುದು ಇಷ್ಟು; ವಿಚಾರವಾದ ಎಂದರೆ ಜನರ ಬುದ್ಧಿಯನ್ನು ಕೆಡಿಸುವ, ಅಥವಾ ಅವರನ್ನು ಭಾವನಾತ್ಮವಾಗಿ ರೊಚ್ಚಿಗೆಬ್ಬಿಸುವ ಹೇಳಿಕೆಗಳನ್ನು ನೀಡುವುದಲ್ಲ, ನಿಜವಾದ ವೈಚಾರಿಕತೆ ಮತ್ತು ಪ್ರಗತಿ ಮನೋಧರ್ಮವು ತನಗಿಂತ ಭಿನ್ನವಾದ ತನ್ನದಕ್ಕೆ ವಿರುದ್ಧವೂ ಅನ್ನಬಹುದಾದ ಚಿಂತನೆಯನ್ನೂ ತಾಳ್ಮೆಯಿಂದಲೇ ಪರಿಶೀಲಿಸಬಲ್ಲ ಪ್ರಬುದ್ಧ ಪ್ರಜ್ಞಾವಂತಿಕೆ ಆಗಿರುತ್ತದೆ. ಅಂಥ ಶಕ್ತಿಯ ಕಡೆಗೆ ತರುಣ ತರುಣಿಯರಿಗೆ ಮಾರ್ಗದರ್ಶನದ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ.

ಪ್ರಜ್ಞಾವಂತಿಕೆಯ ವರ್ಧನೆ ಮತ್ತು ಸೃಷ್ಟಿ ಸೌಂದರ್ಯದ ಅರಿವು
ಒಂದು ಸಮಾಜದ ಎಲ್ಲ ಸ್ತರಗಳೂ ಚಲನಶೀಲವಾಗಿದ್ದಾಗ ಜನರು ಉದಾರ ದೃಷ್ಟಿಯಿಂದ ತಮ್ಮ ಕಲೆಯನ್ನು ಸಮಾಜಕ್ಕೆ ಕೊಡಬಲ್ಲವರಾಗಿದ್ದಾಗ ಅತಿ ಶ್ರೇಷ್ಠ ಸಾಹಿತ್ಯ, ಕಲೆಗಳೂ ಉಚ್ಚಮಟ್ಟದ ಕಲಾ ಸೌಂದರ್ಯತತ್ತ್ವಗಳೂ ಹೊಮ್ಮಿ ಬರಲು ಸಾಧ್ಯ. ಆ ಬಗೆಯ ಶ್ರೇಷ್ಠ ಕಲೆಯ ಮೌಲ್ಯವು ಅದನ್ನು ಸೃಷ್ಟಿಸಿದವರಿಗಿಂತಲೂ ಹೆಚ್ಚಿನದು ಎಂದು ಗ್ರಹಿಸಲು ಜನರು ಪ್ರಜ್ಞಾವಂತರಾಗಿದ್ದರೆ ಮಾತ್ರ ಸಾಧ್ಯ. ಕವಿಗಿಂತಲೂ ಕಾವ್ಯಮುಖ್ಯ, ಕಲಾವಿದರಿಗಿಂತ ಅವರ ಸೃಷ್ಟಿಯಾದ ಕಲೆ ಮುಖ್ಯ. ಆದರೆ ಅಂಥ ಮಾನಸಿಕ ಪರಿಪಕ್ವತೆಗೆ ಈಗಿರುವ ಅಡ್ಡಿಗಳೇನು? ವಿಚಾರಕ್ರಾಂತಿಗೆ ಆಹ್ವಾನ ನೀಡಿ ವಿಶ್ವ ಮಾನವ ತತ್ತ್ವವನ್ನು ಸಾರಿದ ಕುವೆಂಪು ಅಂಥವರನ್ನು ಒಕ್ಕಲಿಗರ ಆಸ್ತಿಯೆಂದು ನೋಡುವುದು, ಬೇಂದ್ರೆಯಂಥ ಸಾರ್ವಕಾಲಿಕ ದಾರ್ಶನಿಕ ಕವಿಯನ್ನು ಬ್ರಾಹ್ಮಣ ಡಾನ್ ಎಂದು ಭಾವಿಸುವುದು, ಹಾಗೆಯೇ ಕನಕದಾಸರನ್ನು ಕುರುಬರ ಕುಲದ ಸಂತನೆನ್ನುವುದು ಕಾಳಿದಾಸ, ವ್ಯಾಸ, ವಾಲ್ಮೀಕಿಗಳನ್ನು ಕುರುಬರ, ಬೆಸ್ತರ, ಬೇಡರ ಕವಿಗಳೆಂದು ತಮ್ಮ ಆಸ್ತಿಯಾಗಿ ಮಾಡಿಕೊಳ್ಳುವುದು – ಮುಂತಾದ ವಿಲಕ್ಷಣ ವಿಕೃತ ವ್ಯಕ್ತಿ ಆರಾಧನೆಯು ಪ್ರಜ್ಞೆಯ ಒಂದು ಅಸಮಗ್ರತೆಯನ್ನು ಸೂಚಿಸುವುದೇ ಹೊರತು ಆಯಾ ಜನಸಮುದಾಯಗಳ ಪ್ರಜ್ಞಾವಂತಿಕೆಯ ಲಕ್ಷಣವನ್ನಲ್ಲ.

ಪುರಾತನರಲ್ಲಿ ಮಹತ್ತಾದ ಸಾಧನೆ ಮಾಡಿದವರನ್ನು, ಚಾರಿತ್ರಿಕ ವ್ಯಕ್ತಿಗಳನ್ನು ಕೊನೆಗೆ ಸಿನಿಮಾ ನಟರನ್ನೂ ದೈವೀಭಾವನೆಯಿಂದ ಕಂಡು ಆರಾಧಿಸುವುದು ಕೇವಲ ಖಾಸಗಿ ಆರಾಧನೆಯ ಸ್ತರದಲ್ಲೇ ಉಳಿದಿದ್ದಾಗ ಹೆಚ್ಚು ಅಪಾಯಕಾರಿ ಆಗಲಾರದು, ಆದರೆ ಖಾಸಗಿ ನೆಲೆಯನ್ನು ಮೀರಿ ಸಾಮುದಾಯಿಕ ರಾಜಕೀಯ ಅಸ್ಮಿತೆಗಾಗಿ ಅಂಥ ಆರಾಧನಾಭಾವವನ್ನು ವೈಭವೀಕರಿಸಿದ್ದಾದರೆ, ಅದು ಸಾಹಿತ್ಯ, ಕಲೆಗಳ ಸಾರ್ವತ್ರಿಕ ಮೌಲ್ಯವನ್ನೇ ಇಲ್ಲವಾಗಿಸುತ್ತಾ ಅವುಗಳ ಸೃಷ್ಟಿಕರ್ತರನ್ನು ಅವರವರ ಸಾಮಾಜಿಕ ವಾಸ್ತವದ ಸಂದರ್ಭಗಳಿಗೇ ಗಂಟು ಹಾಕಿ, ಅವುಗಳಿಂದಲೇ ಅವರ ವ್ಯಕ್ತಿತ್ವಗಳನ್ನು ತೀರ್ಮಾನಿಸಿಬಿಡುವಂತೆ ದೃಷ್ಟಿಯನ್ನು, ವಿಚಾರ ದೃಷ್ಟಿಯನ್ನು ಸಂಕುಚಿತಗೊಳಿಸಿ ಬಿಡಬಲ್ಲದು. ಕಲೆ, ಸಾಹಿತ್ಯಗಳ ಸೌಂದರ್ಯದ ಆಸ್ವಾದನೆ ಹೋಗಿ ರಾಜಕೀಯ ಅಸ್ಮಿತೆ ಅಲ್ಲಿ ತನ್ನ ಠರಾವುಗಳನ್ನು ಮುಂದಿಡಬಹುದು.

ಪ್ರಜ್ಞಾವಂತಿಕೆ, ಬುದ್ಧಿವಂತಿಕೆಯ ಒಂದು ಆರೋಗ್ಯಪೂರ್ಣ ಅಭಿವ್ಯಕ್ತಿ ತಮಾಷೆ, ವ್ಯಂಗ್ಯ, ವಿಡಂಬನೆಗಳ ರೂಪದಲ್ಲೂ, ಸಾಮಾಜಿಕ ವಿಮರ್ಶೆಯಾಗಿಯೂ ಕಲೆ ಮತ್ತು ಸಾಹಿತ್ಯಗಳಲ್ಲಿ ಹೊಮ್ಮಿರುತ್ತದೆ. ನೈಜ ಬದುಕಿನಲ್ಲಿ ಪರಸ್ಪರರ ಬಗ್ಗೆ ಜನರು ಹೊಂದಿರುವ ತಿರಸ್ಕಾರ, ಕುಹಕ, ತಿರಸ್ಕಾರ, ಕೊನೆಗೆ ದ್ವೇಷ – ಇಂಥ ನೇತ್ಯಾತ್ಮಕ ಭಾವನೆಗಳನ್ನು ಗೇಲಿಯ ಮೂಲಕ, ನಗೆ ಚಟಾಕಿಯ ಮೂಲಕ ಸಹನೀಯವಾಗಿಸಿಕೊಳ್ಳುವುದರಿಂದ ಮನುಷ್ಯ ಸಂಬಂಧಗಳನ್ನು ಚೊಕ್ಕಟವಾಗಿ ಇಟ್ಟುಕೊಳ್ಳಬಹುದು.

ಆದರೆ ಇಂದು ಜನರಿಗೆ ಯಾವುದೇ ವ್ಯಂಗ್ಯ, ತಮಾಷೆ, ವಿಡಂಬನೆ ಮತ್ತು ವಿಮರ್ಶೆಗಳನ್ನು ಅದರ ಹಿಂದೆ ಒಂದು ರಾಜಕೀಯ ಸಂಚು ಇದ್ದೇ ಇರುವುದೆಂದು ಸಂದೇಹಿಸುವುದೇ ಸಹಜ ವರ್ತನೆ ಅನ್ನಿಸುತ್ತದೆ. ಬಹಳ ಸಲ ನಮ್ಮ ಜನತಾಂತ್ರಿಕ ಆಳುವ ಶಕ್ತಿಗಳು, ಬಹುರೂಪಿ ಸಂಸ್ಕೃತಿಗಳ ಅಸ್ಮಿತೆಯ ರಾಜಕೀಯ, ತಳಮೂಲದ ಜನಾಂಗಗಳ ಸ್ವಾಭಿಮಾನ ಹಾಗೂ ಅಸ್ತಿತ್ವದ ಪ್ರಶ್ನೆಗಳು ಬೇರೆ ಬೇರೆ ರಾಜಕೀಯ ಹಿತಾಸಕ್ತಿಗಳನ್ನು ಹುಟ್ಟು ಹಾಕಿರುತ್ತವೆ. ಈಗ ”ಸತ್ತಂತಿಹರನು ಬಡಿದೆಚ್ಚರಿಸು” ಎಂದು ಯಾರೂ ಕರ್ನಾಟಕ ಹೃದಯ ಶಿವನನ್ನು” ಪ್ರಾರ್ಥಿಸುವ ಅಗತ್ಯವೇ ಇಲ್ಲ. ಏಕೆಂದರೆ ಮುಟ್ಟಿದರೆ, ಮುಟ್ಟದಿದ್ದರೂ ಜನ ಈಗ ಮುನಿದೇಳಲು ಕಲಿತಿದ್ದಾರೆ. ಕೆಲವು ಜನ ಸಮುದಾಯಗಳಿಗೆ ನೋವಾಗುವುದು ಎಂಬ ನೆಪವೊಡ್ಡಿ ಸೃಜನಶೀಲ ಸಾಹಿತ್ಯ ಕೃತಿಗಳನ್ನೇ ರದ್ದುಪಡಿಸುವುದು ಕನ್ನಡಿಗರಿಗೆ ಚೆನ್ನಾಗಿ ರೂಢಿಸಿದೆ. ಬಲಾಢ್ಯರಾದ ಸಮುದಾಯಗಳ ಜನರು ಸಾಹಿತ್ಯ-ಕಲೆಗಳ ತಾತ್ತ್ವಿಕತೆ ತಾವು ಆತುಕೊಂಡ ಧಾರ್ಮಿಕತೆಗೂ ಮಿಗಿಲಾದ ಸತ್ಯಕ್ಕೆ ಬದ್ಧವಾಗಿರಬಲ್ಲದು ಎಂಬುದನ್ನು ನಂಬಲು ಸಿದ್ದರಿರುವುದಿಲ್ಲ. ಏಕೆಂದರೆ ರಾಜಕೀಯದಲ್ಲಿ ತಮ್ಮ ಶಕ್ತಿ, ಸಾಮರ್ಥ್ಯಗಳಿಗೆ ಎಷ್ಟು ಬೆಲೆಯಿದೆ ಎಂಬುದು ಅವರಿಗೆ ಗೊತ್ತಿರುತ್ತದೆ. ನಿರ್ದಿಷ್ಟ ಧಾರ್ಮಿಕ ಲಕ್ಷಣವುಳ್ಳ ಪ್ರಾಚೀನ ಸಾಹಿತ್ಯ ಘಟ್ಟಗಳ ವಿಷಯದಲ್ಲೂ ಇದೇ ರೀತಿ ಮತೀಯ ಮತಶಕ್ತಿಗಳು ಕೈಹಾಕಿ ಸಂಶೋಧನೆ, ಚಿಂತನೆಗಳನ್ನು ನಿಲ್ಲಿಸಿದ ನಿದರ್ಶನ ಕರ್ನಾಟದಲ್ಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ದೊಡ್ಡದಾಗಿ ಘೋಷಣೆಗಳನ್ನು ಮಾಡಬಲ್ಲ ಸಮೂಹ ಮಾಧ್ಯಮಗಳು ಕೂಡ ಧರ್ಮಕಾರಣದ ಸಂದರ್ಭಬಂದ ಕೂಡಲೆ `ಬಲವಿದ್ದಲ್ಲಿ ಗೆಲುವಿದೆ’ ಎಂದು ತೋರಿಸುವುದೂ ಇದೆ, ಆದರೆ ನಿಜವಾದ ವೈಚಾರಿಕ ಸಂವಾದವು ಭಿನ್ನ ವಿಚಾರಗಳಿಗೂ ಅವಕಾಶಕೊಟ್ಟು, ಜನರೇ ಅವುಗಳ ಬಗ್ಗೆ ಚಿಂತಿಸುವಂತೆ ಮಾಡುವುದಾದರೇ ಮಾತ್ರವೇ ಅರ್ಥವತ್ತಾಗಬಲ್ಲದು.

ಮಹಿಳೆ : ಸಾಹಿತ್ಯ ಮತ್ತು ಚಳವಳಿ
ಸಮಾವೇಶದಲ್ಲಿ ನಾನು ಪ್ರಸ್ತಾಪಿಸಲೇಬೇಕಾದ್ದು, ನನ್ನದೇ ಬರವಣಿಗೆಯ ಕ್ಷೇತ್ರವೂ ಆಗಿರುವ ಮಹಿಳಾ ಪ್ರಶ್ನೆಯನ್ನು ಕುರಿತದ್ದು. ಮಹಿಳಾ ಸಾಹಿತ್ಯ, ಮಹಿಳಾ ಚಳವಳಿ ಎರಡೂ ಜನರ ಕಣ್ಣಿಗೆ ಕಾಣಿಸುವಂತಾದದ್ದು ೧೯೮೦ರ ದಶಕದಲ್ಲಿ, ಕಳೆದ ಮೂವತ್ತೈದು ವರ್ಷಗಳಲ್ಲಿ ಈ ಎರಡೂ ಎಂದರೆ ಮಹಿಳಾ ಸಾಹಿತ್ಯವೂ ಮಹಿಳಾ ಚಳುವಳಿಯೂ ಎಷ್ಟು ವಿಶಾಲವಾಗಿ, ವೈವಿಧ್ಯಮಯವಾಗಿ ಬೆಳೆದಿವೆ ಎಂದರೆ ಇಂದು ಯಾರೂ ಒಂದು ಮಹಿಳಾ ಚಳವಳಿ ಎನ್ನುವುದಿಲ್ಲ; ಮಹಿಳಾ ಚಳವಳಿಗಳು ಎಂದು ಬಹುತ್ವದಿಂದಲೇ ಅದನ್ನು ಗುರುತಿಸುತ್ತಾರೆ. ‘ಮಹಿಳಾ ಸಾಹಿತ್ಯ’ ಮತ್ತು ‘ಮಹಿಳಾ ಚಳವಳಿ’ ಇವೆರಡು ಪರಿಕಲ್ಪನೆಗಳೂ ಸಾಕಷ್ಟು ವಾಗ್ವಾದ, ಚರ್ಚೆಗಳಿಗೆ ವಸ್ತುಗಳಾಗುತ್ತಲೇ ಬೆಳೆದು ಪ್ರಬುದ್ಧವೂ ಆಗಿರುತ್ತವೆ. ಪುರುಷರ ಸಾಹಿತ್ಯ ಎಂದು ಕರೆಯುವುದಿಲ್ಲ; ಹಾಗಿರುವಾಗ ಮಹಿಳಾ ಸಾಹಿತ್ಯವೆಂದು ಏಕೆ ಪ್ರತ್ಯೇಕ ಹೆಸರು ಬೇಕು ಎಂಬುದರಿಂದ ಹಿಡಿದು, ಅಭಿವ್ಯಕ್ತಿಯಲ್ಲಿ ಭಾವನೆ, ವಿಚಾರಗಳಲ್ಲಿ ಇದು ಹೆಣ್ಣಿನದು, ಇದು ಗಂಡಿನದೆಂದು ಯಾವ ಭೇದವೂ ಇಲ್ಲವೆಂದು ಹೇಳುವವರೆಗೂ ಈ ವಾದಗಳಿವೆ, ಬಗೆ ಬಗೆಯ ತಾರ್ಕಿಕ ವಿರೋಧ, ಪ್ರತಿರೋಧಗಳ ನಡುವೆಯೂ ಮಹಿಳೆಯರ ಸಾಹಿತ್ಯಕ ಅಭಿವ್ಯಕ್ತಿ ಇಂದು ಒಂದು ಬಲವಾದ ಅಸ್ಮಿತೆಯನ್ನು ಪಡೆದಿದ್ದರೆ ಅದರ ಹಿಂದೆ ಸ್ತ್ರೀವಾದಿ ತಾತ್ತ್ವಿಕತೆಯ ವ್ಯಾಪಕವಾದ ಪ್ರಭಾವ ಬರೆಯುವವರ ಪ್ರಜ್ಞಾಸ್ತರದಲ್ಲಿ ಚಲಾವಣೆಗೆ ಬಂದದ್ದು ಒಂದು ಕಾರಣ. ಹಾಗಾಗಲು ಮಹಿಳೆಯರು ರಾಜಕೀಯಾರ್ಥಿಕ ಹಕ್ಕುಗಳಿಗಾಗಿ ನಡೆಸಿಕೊಂಡು ಬಂದ ಚಳವಳಿಯು ಸೃಷ್ಟಿಸಿದ ಅರಿವಿನ ಸಾಂಸ್ಕೃತಿಕ ವಾತಾವರಣ ಕೂಡ ಕೆಲಮಟ್ಟಿಗೆ ಕಾರಣವಾಗಿರುತ್ತದೆ. ಜಾಗತಿಕವಾದ ಬಹುಮುಖ್ಯ ವಿದ್ಯಮಾನ ಇದು. ಹಾಗಾಗಿ ಈ ಸಂಬಂಧವಾದ ಕೆಲವು ತಾತ್ತ್ವಿಕ ವಿಚಾರಗಳನ್ನು ಇಲ್ಲಿ ಮುಂದಿಡುವುದು ಅತ್ಯಂತ ಅವಶ್ಯಕವೆಂದು ನಾನು ತಿಳಿದಿದ್ದೇನೆ.

ನನ್ನಂಥವರು ಸ್ತ್ರೀವಾದಿ ಚಿಂತನೆಗೂ, ಮಾರ್ಕ್ಸ್‌ವಾದಿ ವಿಚಾರಗಳಿಗೂ ತೆರೆದುಕೊಳ್ಳುವುದಕ್ಕೂ ಎಷ್ಟೋ ಹಿಂದೆಯೇ ನಾಡಿನ ಮೇರು ಚಿಂತಕರಲ್ಲಿ ಒಬ್ಬರಾದ ಗೌರೀಶ ಕಾಯ್ಕಿಣಿಯವರು ಬರೆದಿದ್ದ ‘ಗಂಡು-ಹೆಣ್ಣು ಎಂಬ ಪ್ರಬಂಧ ಕೃತಿಯಲ್ಲಿ ಹೇಳಿರುವ ಮಾತುಗಳಿವು; ಹೆಣ್ಣು-ಗಂಡಿನ ವ್ಯತ್ಯಾಸಗಳೆಲ್ಲಾ ಶಾರೀರಿಕ ರಚನೆಯ ಹಾಗೂ ದೈಹಿಕ ಧರ್ಮಗಳ ಹುಚ್ಚು ಚಟಗಳೊಂದಿಗೆ ಕೂಡಿ ಬಂದಿವೆಯಾದರೂ ಅವು ಬಹುಭಾಗ ಸಾಮಾಜಿಕ ಸಂಸ್ಕಾರದ ಫಲವಾಗಿ ಬಂದು ವೈಯಕ್ತಿಕವಾಗಿ ಸಂಪಾದಿಸಲ್ಪಟ್ಟಿರುವುವು. ಕೆಲವೊಂದು ಕಾಲದಲ್ಲಿ ಕೆಲವೊಂದು ಭೂಖಂಡದಲ್ಲಿ ಗಂಡು ಸಾವಿರಾರು ಬಗೆಯ ಪಾರಿವಾರಿಕ ಪರಿಸ್ಥಿತಿಗಳನ್ನು ಬೀರಿ ತನ್ನ ಉಪಯೋಗ, ಉಪಭೋಗಗಳಿಗಾಗಿ ಕೆಲವೊಂದು ಆದರ್ಶಗಳನ್ನು ಹೆಣ್ಣು ಜೀವನ ಮೇಲೆ ಹೇರಿಬಂದುದರ ಪರಿಣಾಮವಾಗಿ, ಪರಿಪಾಕವಾಗಿಯೆ ಹೆಣ್ಣು-ಗಂಡಿನ ಮೂಲ ವ್ಯತ್ಯಾಸವು ಜಟಿಲ, ಕುಟಿಲ, ವೈಷಮ್ಯಗಳ ವಿಕೃತರೂಪ ತಾಳಿದೆ, ಗಂಡಿಗೆ ವ್ಯಕ್ತಿತ್ವದ ಸರ್ವಸ್ವತಂತ್ರಕ್ಕೆ ಆಸ್ಪದವಾಗಿದೆ. ಹೆಣ್ಣಿಗೆ ಶತಮಾನಗಳಿಂದಲೂ ವಿಧೇಯತೆ, ವಿನಯ, ಒನಪು, ಒಯ್ಯಾರಗಳನ್ನೇ ಕಲ್ಪಿಸಲಾಗಿದೆ.”

ಮಾರ್ಕ್ಸ್‌ವಾದದ ವಿಚಾರಗಳನ್ನೂ ಮನೋವಿಜ್ಞಾನವನ್ನೂ ಬೆಸೆದು ಗೌರೀಶರು ನೀಡಿರುವ ಈ ವಿಶ್ಲೇಷಣೆಯಲ್ಲಿ ಬಹುಶಃ ಕಳೆದ ೪೦ ವರ್ಷಗಳಿಂದ ನಾವು ಹೇಳಿಕೊಂಡು ಬಂದಿರುವ ಸ್ತ್ರೀ ಶೋಷಣೆಯ ಚರಿತ್ರೆಯೇ ಅಡಗಿದೆ. ಅಂದರೆ ನಮ್ಮ ನಾಡಿನ ನಾಗರಿಕತೆಯ ನಿರ್ಮಾಪಕರಾದ ಗೌರೀಶ್ ಕಾಯ್ಕಿಣಿ, ಶಿವರಾಮಕಾರಂತರು, ಗೋವಿಂದ ಪೈಗಳೇ ಮುಂತಾದವರು ಇಲ್ಲಿ ಇದ್ದುದರಿಂದಲೇ ಆಧುನಿಕ ಕಾಲದ ಸ್ತ್ರೀವಾದಿ ಚಿಂತನೆಯ ಬೇರುಗಳೂ ಈ ನೆಲದಲ್ಲಿದ್ದುವು. ಅವು ಬೆಳೆದು ಚಿಗುರಿ ಅರಳಿಕೊಳ್ಳಲು ಕಳೆದ ಎಂಭತ್ತರ ದಶಕದವರೆಗೂ ಕಾಯಬೇಕಾಯಿತು. ಆರಂಭದಲ್ಲೇ ನಾನು ಪ್ರಸ್ತಾಪಿಸಿದ ನೆನ್ನೆ, ಇಂದುಗಳು, ನಾಳೆಯೊಳಗಿರುತ್ತವೆ ಎಂಬುದಕ್ಕೆ ಇದೂ ಒಂದು ನಿದರ್ಶನ.

ದೇಶದ ಇತರ ಭಾಗಗಳಲ್ಲಾದಂತೆ ಕರ್ನಾಟಕದಲ್ಲೂ ಮಹಿಳೆಯರು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ರಾಜಕೀಯಾರ್ಥಿಕ ಹೋರಾಟಕ್ಕೆ ತೊಡಗಿದ್ದು ೧೯೭೦ರ ದಶಕದ ಕೊನೆಯಲ್ಲಿ. ಶಿಕ್ಷಣದ ಮೂಲಕ ನಗರಗಳ ಮಧ್ಯಮವರ್ಗದ ಮಹಿಳೆಯರ ಸ್ವಪ್ರಜ್ಞೆ ಜಾಗೃತಿಗೊಳ್ಳುತ್ತಿದ್ದ ಕಾಲವೂ ಅದಾಗಿತ್ತು. ವ್ಯಕ್ತಿವಾದದ ಫಲವಾಗಿ ಸ್ವಂತಿಕೆ, ಸ್ವಾತಂತ್ರ್ಯ ಹಾಗೂ ಸ್ವಾಭಿವ್ಯಕ್ತಿಗಾಗಿ ಹೆಚ್ಚು ಜನ ಮಹಿಳೆಯರು ಕಾವ್ಯರಚನೆಗೆ ತೊಡಗಿದ್ದೂ ಅದೇ ಕಾಲದಲ್ಲಿ. ಮಹಿಳೆಯರ ಬರಹಗಾರಿಕೆಗೆ ಪ್ರಧಾನ ಸಾಹಿತ್ಯ ವಾಹಿನಿಯಲ್ಲಿ ನ್ಯಾಯವಾದ ಸ್ಥಾನವನ್ನು ದೊರಕಿಸಿಕೊಡುವ ಉದ್ದೇಶದಿಂದಲೂ, ಸಾಂಸ್ಕೃತಿಕವಾಗಿ ಸ್ತ್ರೀತ್ವವನ್ನು ಪುನರ್ ಸ್ಥಾಪಿಸಬೇಕೆನ್ನುವ ಹಂಬಲದಿಂದಲೂ ಸ್ತ್ರೀವಾದಿ ಸಾಹಿತ್ಯ ವಿಮರ್ಶೆ ಹೊಮ್ಮಿ ಬಂದದ್ದೂ ಅದೇ ಕಾಲದಲ್ಲಿ. ವಾಸ್ತವದಲ್ಲಿ ಆರಂಭದ ಆ ದಿನಗಳಲ್ಲಿ ಸ್ತ್ರೀವಾದಿ ತಾತ್ತ್ವಿಕ ಚಿಂತನೆ, ಮಹಿಳಾ ಬರಹಗಾರಿಕೆ, ಹಾಗೂ ಮಹಿಳಾ ಹೋರಾಟ-ಇವು ಬೇರೆ ಬೇರೆ ಆಗಿರದೆ, ಎಲ್ಲವೂ ಒಗ್ಗೂಡಿದ್ದ ಸ್ಥಿತಿಯಿಂದಲೇ ಮಹತ್ವಪೂರ್ಣ ಯತ್ನಗಳು ನಡೆದಿದ್ದವು. ಹೀಗೆ ಸ್ತ್ರೀಯರಲ್ಲಾದ ಪ್ರಜ್ಞಾಜಾಗೃತಿಗೂ, ಮಹಿಳಾ ಹೋರಾಟ ಗಳಿಗೂ ಅವರ ಅನುಭವಗಳ ಸಾಹಿತ್ಯಕ ಅಭಿವ್ಯಕ್ತಿಗೂ ನಿಕಟವಾದ ಸಂಬಂಧವಿದೆ.

ಸ್ತ್ರೀವಾದಿ ಚಿಂತನೆ ಇಲ್ಲಿ ಪ್ರಾಬಲ್ಯಕ್ಕೆ ಬರುವ ಮೊದಲು ಎಷ್ಟೋ ಮಹಿಳೆಯರು ತುಂಬ ಉತ್ಕಟವಾದ ಹಾಗೂ ಉತ್ತಮವೂ ಆದ ಸಾಹಿತ್ಯವನ್ನು ರಚಿಸಿದ್ದರು. ಕನ್ನಡ ಸಾಹಿತ್ಯವಲಯದಲ್ಲಿ ಅವರಿಗೆ ಅಷ್ಟಿಷ್ಟು ಗೌರವ ಮಾನ್ಯತೆಗಳೂ ಇದ್ದವು. ಉದಾಹರಣೆಗೆ ಹೊಸಗನ್ನಡದ ಮೊದಲ ಪೀಳಿಗೆಯ ಅನೇಕ ಲೇಖಕಿಯರ ಪುಸ್ತಕಗಳು ಶಾಲಾ ಕಾಲೇಜುಗಳಲ್ಲಿ ಪಠ್ಯ ಪುಸ್ತಕಗಳಾಗುವಷ್ಟು ಅವರಿಗೆ ಖ್ಯಾತಿ ದೊರೆತಿತ್ತು. ಆದರೂ ಮಾಸ್ತಿಯಂಥವರು ತಿರುಮಲಾಂಬಾ ಅವರ ಕೃತಿಗಳನ್ನು, ಎಂ.ಆರ್. ಶ್ರೀಯವರು ಕಲ್ಯಾಣಮ್ಮನವರ ರಚನೆಗಳನ್ನೂ ಸಾಹಿತ್ಯವೇ ಅಲ್ಲ ಎಂಬಂತೆ ತಿರಸ್ಕರಿಸಿ ವಿಮರ್ಶಿಸಿದ್ದೂ ನಮ್ಮೆದುರು ಇದೆ. ಕೊಡಗಿನ ಗೌರಮ್ಮ, ಬೆಳಗೆರೆ ಜಾನಕಮ್ಮನವರನ್ನು ಸೋದರಿಯರೆಂದು ಮೆಚ್ಚಿ ಬೇಂದ್ರೆಯವರು ಕವನ ಬರೆದಿದ್ದರೆ, ಶ್ಯಾಮಲಾದೇವಿಯವರ ಕತೆಗಾರಿಕೆಯ ಸ್ತ್ರೀ ಸಂವೇದನೆ ಕುರಿತು ಸ.ಸ. ಮಾಳವಾಡರು ಹೊಗಳಿದ್ದರು. ಗಿರಿಬಾಲೆ ಹೊಗಳಿಕೆ, ಟೀಕೆ ಎರಡನ್ನೂ ಕಂಡಿದ್ದರು. ಅಂದರೆ ಕನ್ನಡ ಬರಹಗಾರರು ಆರಂಭದ ಲೇಖಕಿಯರನ್ನು ನಿರ್ಲಕ್ಷಿಸಿರಲಿಲ್ಲ. ಆದರೆ ಅಪರೂಪಕ್ಕೆ ಸ್ತ್ರೀಯರೂ ಬರೆದಿದ್ದಾರೆ. ಪಾಪ! ನಾಲ್ಕು ಒಳ್ಳೆಯ ಮಾತಾಡಬೇಕು ಎಂಬ ಅನುಕಂಪದ ಆಚೆಗೆ ಅವರಾರ ಗಮನವೂ ಇವರ ಬರಹಗಳತ್ತ ಹರಿದಿರಲಿಲ್ಲ.

ಇಂಥ ಹಳೆಯ ಲೇಖಕಿಯರ ಬರಹಗಳು ಸ್ತ್ರೀಕೇಂದ್ರಿತವಾಗಿದ್ದು, ಮಹಿಳೆಯರ ಅನುಭವದ ಅಪ್ಪಟ, ಸಾಚಾ ಅಭಿವ್ಯಕ್ತಿಗೆ ಯತ್ನಿಸಿವೆ, ಇಂಥ ಅಭಿವ್ಯಕ್ತಿಗೆ ಅದರದೇ ಆದ ಪರಂಪರೆಯಿದೆ. ಪಿತೃಪ್ರಾಧಾನ್ಯದ ಸಾಂಸ್ಕೃತಿಕ ಪರಿಸರದ ಜೀವನಕ್ರಮದಿಂದ ಇಂಥ ಅನುಭವ ಹಾಗೂ ಅಭಿವ್ಯಕ್ತಿ ಹುಟ್ಟಿರುತ್ತದೆ ಎಂದು ಗುರುತಿಸಲು ಸ್ತ್ರೀವಾದಿ ವಿಮರ್ಶೆ ಮೊದಲ ಬಾರಿಗೆ ಯತ್ನಿಸಿತು. ಇದರಿಂದ ನವ್ಯ ಬರಹಗಾರರ ದೃಷ್ಟಿಯಲ್ಲಿ ‘ಜನಪ್ರಿಯ ಲೇಖಕಿಯರು’ ಎಂದೇ ತಿರಸ್ಕೃತರಾಗಿದ್ದ ತ್ರಿವೇಣಿ, ಅನುಪಮಾ ನಿರಂಜನ, ಎಂ.ಕೆ. ಇಂದಿರಾ ಮುಂತಾದವರ ಬರಹಗಳ ಸತ್ವವೂ ಮುನ್ನೆಲೆಗೆ ಬರುವುದು ಸಾಧ್ಯವಾಯಿತು. ಆಧುನಿಕ ವಿದ್ಯಾವಂತ ಮಹಿಳೆಯರ ಮನೋಲೋಕದ ಅನಾವರಣಕ್ಕೆ ಅವರೆಲ್ಲ ಹೇಗೆ ಯತ್ನಿಸಿದ್ದಾರೆಂದು ಗ್ರಹಿಸಲು ಸಾಧ್ಯವಾಯಿತು. ತ್ರಿವೇಣಿಯವರಿಗೆ ನ್ಯಾಯವಾಗಿ ಸಲ್ಲಬೇಕಿದ್ದ ವಿಮರ್ಶಾ ಗೌರವ ಸಲ್ಲಿಸಲು ವಿಜಯಾದಬ್ಬೆಯವರು ಹುಟ್ಟಿ ಬರಬೇಕಾಯಿತು ಎಂದು ಸ. ಉಷಾ ಒಂದೆಡೆ ಹೇಳಿರುವುದು ಗಮನಾರ್ಹ.

ಮಹಿಳಾ ಸಾಹಿತ್ಯಕ್ಕೆ ಒಂದು ಗಟ್ಟಿ ಆಯಾಮವಿದೆ ಎಂದು ಕಂಡುಕೊಳ್ಳುವುದು ಆರಂಭವಾದ ಕೂಡಲೆ ‘ಮಹಿಳಾ ಸಾಹಿತ್ಯ’ ಎಂಬ ಪ್ರತ್ಯೇಕ ಪರಿಕಲ್ಪನೆಯ ಬಗ್ಗೆ ವಿರೋಧ, ಟೀಕೆಗಳೂ ಶುರುವಾದವು. ಸ್ತ್ರೀವಾದದ ಅರಿವು ಎಲ್ಲ ಸ್ತರಗಳ ಮಹಿಳಾ ಬರಹಗಾರರಿಗೂ ಒಂದು ಅಸ್ಮಿತೆಯ ತಾಣವಾಯಿತು. ಅದನ್ನೊಪ್ಪಿದವರು, ಒಪ್ಪದವರು, ಟೀಕಿಸಿದವರೂ ಆ ನಿಟ್ಟಿನ ಸವಲತ್ತನ್ನು ಇಂದಿಗೂ ಬಳಸಿಕೊಳ್ಳುತ್ತಾರೆ. ಸಮಾಜದ ವಿಭಿನ್ನ ಸ್ತರದವರು, ದಲಿತರಿರಲಿ, ಮುಸ್ಲಿಮರಿರಲಿ, ಬಂಡಾಯದವರೆಂದು ಹೊರಟವರೇ ಇರಲಿ ಎಲ್ಲರೂ ಅಂತಿಮವಾಗಿ ಮಹಿಳಾ ಬರಹಗಾರರೆಂದು ‘ಮಾನ್ಯತೆಯ’ ಛತ್ರಿಯಡಿ ಬರಲು ಹಿಂಜರಿದಿಲ್ಲ ಎಂಬುದೇ ಸ್ತ್ರೀವಾದದ ಹೆಗ್ಗಳಿಕೆ ಎಂದು ನಾನು ಭಾವಿಸಿದ್ದೇನೆ. ಆದರೂ ಸ್ತ್ರೀವಾದವಂತೂ ನಾನಾ ರೀತಿಯ ತಪ್ಪುಗ್ರಹಿಕೆಗೂ, ತಿರಸ್ಕಾರಗಳಿಗೂ ಗುರಿಯಾಯಿತು. ಎಲ್ಲ ವಿರೋಧಗಳನ್ನು ದಾಟಿ ಅದು ಬೆಳದಿದೆ. ‘ಮಹಿಳಾ ಸಾಹಿತ್ಯ’ ಎಂಬ ಪ್ರತ್ಯೇಕ ಪರಿಗಣನೆಗೆ ಮಹಿಳೆಯನ್ನು, ಅವಳಿಗೆ ಹೊಂದಿಕೊಂಡ ಎಲ್ಲವನ್ನೂ ಕೀಳಾಗಿಸಿರುವ ವ್ಯವಸ್ಥೆಯೇ ಮೂಲಕಾರಣ. ಆ ವ್ಯವಸ್ಥೆಯ ತಾರತಮ್ಯಗಳೆಲ್ಲ ನಾಶವಾದಾಗ ಇಂಥ ಪ್ರತ್ಯೇಕ ಪರಿಗಣನೆ ಕೂಡ ತಾನಾಗಿಯೇ ಇಲ್ಲವಾಗುತ್ತದೆ.

ಆರಂಭದಲ್ಲಿ ನಗರದ ಮಧ್ಯಮವರ್ಗದ ವಿದ್ಯಾವಂತ ಮಹಿಳೆಯರಷ್ಟೇ ಸ್ತ್ರೀಸಮಸ್ಯೆಗಳ ಬಗ್ಗೆ ಚಿಂತಿಸಿ, ಹೋರಾಟ, ಹಕ್ಕೊತ್ತಾಯಗಳಲ್ಲೂ ತೊಡಗಿದ್ದರು. ಬಹುಶಃ ಅದು ಆ ಕಾಲದ ಅಗತ್ಯವೂ ಆಗಿತ್ತು. ಆದರೆ ಕಳೆದ ಮೂರು ದಶಕಗಳಲ್ಲಿ ಸಮಾಜದ ಬೇರೆ ಬೇರೆ ಸ್ತರಗಳ ಮಹಿಳೆಯರೂ ಹೆಚ್ಚು ಹೆಚ್ಚು ಶೈಕ್ಷಣಿಕ ಹಾಗೂ ಔದ್ಯೋಗಿಕ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಅವರ ಪ್ರಜ್ಞಾಸ್ತರದ ವಿಸ್ತರಣೆಯೊಂದಿಗೆ ಹೆಚ್ಚು ಹೆಚ್ಚು ವಿಭಿನ್ನ ಸ್ತರಗಳ ಮಹಿಳಾ ಅನುಭವಗಳೂ ಕನ್ನಡ ಸಾಹಿತ್ಯಕ್ಕೆ ಎಲ್ಲ ದಿಕ್ಕುಗಳಿಂದಲೂ ಬಂದು ಸೇರುತ್ತಿವೆ. ಅವರ ಬರಹಗಳು ಉಪಭಾಷಿಕ ವೈವಿಧ್ಯದೊಂದಿಗೆ ಸಾಹಿತ್ಯರೂಪ ತಳೆಯುತ್ತಿರುವುದು ಮಹತ್ವದ ಆಶಾಸ್ಪದವಾದ ವಿಚಾರ.

ಮಹಿಳಾ ಚಳವಳಿ ಬಗ್ಗೆ ಕೂಡ ಇದೇ ಮಾತನ್ನು ಹೇಳಬಹುದೇ? ಎಂದು ವಿಚಾರ ಮಾಡಬೇಕು. ನಗರಗಳಿಂದ ತೃಣಮೂಲದ ನೆಲೆಗಳಿಗೆ ಮಹಿಳಾ ಹೋರಾಟಗಳು ಇಂದು ಹಬ್ಬಿರುತ್ತವೆ. ಕೆಲವೇ ಜನರ ಬೆರಳೆಣಿಕೆಯಷ್ಟು ಸ್ತ್ರೀವಾದಿಗಳ ಹೋರಾಟವಾಗಿ ಅದು ಇಂದು ಉಳಿದಿಲ್ಲ. ಬದಲಾಗಿ ಬೇರೆ ಬೇರೆ ರಾಜಕೀಯ ತಾತ್ತ್ವಿಕತೆಗಳ ಹಿನ್ನೆಲೆಗಳಿಂದ ಸ್ತ್ರೀಯರು ಇಂದು ಸಂಘಟಿತರಾಗುತ್ತಿದ್ದಾರೆ. ಸರ್ಕಾರಗಳೂ ಅನೇಕ ಮಹಿಳಾಪರ ಕಾರ್ಯಯೋಜನೆಗಳನ್ನು ಮುನ್ನೆಲೆಗೆ ತಂದಿರುತ್ತವೆ. ಬೇರೆ ಬೇರೆ ಧನ ಮೂಲಗಳಿಂದ ವೇತನ ಪಡೆಯುವ ಎನ್.ಜಿ.ಓ.ಗಳು, ಸರ್ಕಾರಿ ಯೋಜನೆಗಳ ನಡುವೆ ಪ್ರವೇಶಿಸಿ, ಅವುಗಳ ಅನುಕೂಲ ಸಾಮಾನ್ಯ ಮಹಿಳೆಯರಿಗೆ ದೊರಕುವಂತೆ ಕ್ರಿಯಾಶೀಲವಾಗಿವೆ. ಹೀಗೆ ಮಹಿಳಾ ಚಳವಳಿಯದೇ ಸಾವಿರಾರು ನದಿಗಳು ಇಂದು ರೂಪುಗೊಳ್ಳುತ್ತಿವೆ. ತನ್ನಿಂದ ತಾನೇ ಮಹಿಳಾ ಚಳವಳಿ ಹೀಗೆ ಹಬ್ಬುತ್ತಿರುವುದರ ಮೂಲ ಭೌತಿಕ ಕಾರಣಕ್ಕೆ ಜಾಗತೀಕರಣದ ಬಂಡವಾಳಶಾಹಿಯತ್ತಲೇ ನೋಡಬೇಕಾಗುತ್ತದೆ.

ಜಾಗತೀಕರಣದಿಂದ ಒಂದೆಡೆ ಹೀಗೆ ಸ್ತ್ರೀಯರ ಸಮಾನತೆ, ಸ್ವಾತಂತ್ರ್ಯದ ಪ್ರಶ್ನೆಗಳು ಮುನ್ನೆಲೆಗೆ ಬಂದಿದ್ದರೆ, ಮತ್ತೊಂದೆಡೆ ಜೀವನೋಪಾಯಗಳ ವಿನಾಶದಿಂದ ಸ್ತ್ರೀಯರು ಬಡತನ ಹಾಗೂ ನಿರ್ಗತಿಕತೆಗೆ ತಳ್ಳಲ್ಪಟ್ಟು ಊರುಬಿಟ್ಟು ಉದ್ಯೋಗ ಹುಡುಕುತ್ತಾ ದೇಶಾಂತರ ವಲಸೆ ಹೋಗುತ್ತಿದ್ದಾರೆ. ಸ್ತ್ರೀದೇಹದ ಸರಕೀಕರಣ, ಹೆಣ್ಣುಗಳ ಮತ್ತು ಬಾಲಕಿಯರ ಟ್ರಾಫಿಕಿಂಗ್, ಬಲವಂತದ ಅಥವಾ ಸ್ವೇಚ್ಛೆಯ ವೇಶ್ಯಾಗಾರಿಕೆ-ಟೂರಿಸಂ ಮೂಲದ ಲಂಪಟತನ, ಇಂದಿನ ಮಹಿಳೆಯರು ಎದುರಿಸುತ್ತಿರುವ ಲೈಂಗಿಕತೆಯ ದುರಾಚಾರ, ದೌರ್ಜನ್ಯ, ಅತ್ಯಾಚಾರಗಳ ಪ್ರಮಾಣ ಶಿಖರಕ್ಕೇರಿದೆ. ಈ ಎಲ್ಲ ವಿಷಮಾವಸ್ಥೆಗಳ ವಿರುದ್ಧವಾಗಿ ಸಂಘಟಿತ ಮಹಿಳಾ ಹೋರಾಟಗಳೂ ಇಂದು ಬಲಗೊಳ್ಳುತ್ತಿವೆ.

ಸ್ತ್ರೀವಾದದ ತಾತ್ತ್ವಿಕತೆ ಇಂದು ವಿಶ್ವವಿದ್ಯಾಲಯಗಳ ಮಹಿಳಾ ಅಧ್ಯಯನದ ಭಾಗವಾಗಿದ್ದು, ನಮ್ಮ ನಾಡಿನ ಹಲವಾರು ವಿಶ್ವವಿದ್ಯಾಲಯಗಳು, ಪ್ರಾಂತೀಯ, ಸ್ಥಳೀಯ ಮಹಿಳಾ ಸಮಸ್ಯೆಗಳ ಹಾಗೂ ಅವರ ಸಾಮುದಾಯಿಕ ಸಂಸ್ಕೃತಿಗಳ ಅಧ್ಯಯನಕ್ಕೆ ಆದ್ಯತೆ ನೀಡಿರುತ್ತವೆ. ಆದರೂ ಈ ಬಗೆಯ ಕ್ಷೇತ್ರಕಾರ್ಯ ಇನ್ನೂ ತೀವ್ರವೂ ವ್ಯಾಪಕವೂ ಆಗಬೇಕಿದೆ. ಭವಿಷ್ಯ ಜಗತ್ತಿನ ಮನಸ್ಸಿಗೆ ಶಾಂತಿ, ಸಂತೃಪ್ತಿ ಸಾವಧಾನಗಳು ಅತ್ಯಂತ ತುರ್ತಿನ ಅವಶ್ಯಕತೆಯಾಗಿದ್ದು, ಯುದ್ಧ ವಿರೋಧಿಯೂ, ಶಾಂತಿ ಪ್ರೇಮಗಳ ಸತ್ತ್ವವನ್ನು ಎತ್ತ್ತಿಹಿಡಿಯುವಂಥದೂ ಆದ ಸಮಗ್ರ ಮಾನವತಾವಾದಿಯಾದ ತಾತ್ತ್ವಿತೆಯೊಂದು ಇರುವುದಾದರೆ ಅದು ಮಹಿಳಾ ವಾದ, ಮಹಿಳಾ ಹೋರಾಟಗಳದ್ದೇ ಆಗಿದೆ ಎಂದು ದೃಢವಾಗಿ ಹೇಳಬಹುದು. ಆದರೆ ಇಂದಿನ ಬಹುಮುಖ ಮಹಿಳಾ ಹೋರಾಟ ಇತರ ರಾಜಕೀಯ ಚಳವಳಿಗಳ ಮೂಲಕವೇ ತನ್ನ ತಾತ್ತ್ವಿಕತೆ, ವ್ಯೂಹತಂತ್ರ ಹಾಗೂ ಕಾರ್ಯವಿಧಾನಗಳನ್ನು ಪಡೆದುಕೊಳ್ಳುತ್ತಿರುವುದರಿಂದ, ರಾಜಕೀಯ ಚಳವಳಿಗಳು ರೈತ, ದಲಿತ, ಕಾರ್ಮಿಕ, ಧಾರ್ಮಿಕ-ಅಲ್ಪಸಂಖ್ಯಕ ಇಲ್ಲದೆ ಬಹುಸಂಖ್ಯಕ ಮುಂತಾದ ಪುರುಷ ಚಿಂತಿತ ಮಾದರಿಗಳೇ ಆಗಿರುವುದರಿಂದ ಅವುಗಳು ಒಳ ಹಿತಾಸಕ್ತಿಗಳಲ್ಲೂ ತಮ್ಮ ಮಾದರಿಗಳನ್ನೂ ಅವುಗಳಿಂದಲೇ ಸ್ವೀಕರಿಸುತ್ತಿರುವುದು ಎದ್ದು ಕಾಣುವಂತಿದೆ. ಸ್ವಾಯಕ್ತ ಮಹಿಳಾ ಸಂಘಟನೆಗಳು ಭಿನ್ನರೂಪದಲ್ಲಿ ಮಹಿಳಾ ಚಳವಳಿಗಳನ್ನು ಕಟ್ಟಲು ಯತ್ನಿಸಿದ್ದರೂ, ಅವೆಲ್ಲವೂ ಅನಾಯಕತೆ, ಗೊಂದಲಗಳಲ್ಲಿ ಕೊನೆಗೊಂಡ ಹಾಗೆಯೇ ಇಂದು ಕಾಣುತ್ತವೆ. ಹೀಗಾಗಿ ಭಾವೀ ಕರ್ನಾಟಕದಲ್ಲಿ ಸ್ತ್ರೀವಾದಿ ಚಿಂತನೆ ಮತ್ತು ಮಹಿಳಾ ಚಳವಳಿಗಳಾಗಲೀ ಮಹಿಳಾ ಸಾಹಿತ್ಯದ ಗೊತ್ತುಗುರಿಗಳಾಗಲೀ ಇನ್ನೂ ಹೆಚ್ಚಿನ ಸ್ಪಷ್ಟ ಸ್ವರೂಪಕ್ಕೆ ಬರುತ್ತವೆಯೇ? ಎಂಬ ಸಂದಿಗ್ಧತೆಯೊಂದಿಗೆ ಕಾಯಬೇಕಾಗಿದೆ.

‘Today’s problems were yesterday’’s solutions,
Todays solutions will be tomorrows problems’

ಎಂದು ಒಬ್ಬ ನಿರ್ವಹಣಾ ವಿಜ್ಞಾನದ ತಜ್ಞರು ಬರೆದಿದ್ದಾರೆ. ಆದ್ದರಿಂದ ಇಂದಿನ ಸಮಸ್ಯೆಗಳಿಗೆ ಸೂಕ್ತವೂ ಸಮರ್ಪಕವೂ ಆದ ಪರಿಹಾರಗಳನ್ನು ಹುಡುಕುವುದೇ ಬುದ್ಧಿವಂತಿಕೆ. ಗತಕಾಲವನ್ನು ನಾವು ಬದಲಾಯಿಸಲಾರೆವು. ಆದರೆ ಆ ಗತಕಾಲದಿಂದ ನಾವು ಏನನ್ನೂ ಕಲಿಯದೆ ಹೋದರೆ ನಾವು ಆ ಹಿಂದಿನ ಎಲ್ಲ ಸಮಸ್ಯೆಗಳೊಂದಿಗೆ ಅದೇ ಕಾಲವನ್ನು ಮತ್ತೆ ಸೃಷ್ಟಿಸುವ ಬಲೆಗೆ ಸಿಕ್ಕಿಬೀಳಬಹುದು.

ಮಹಿಳಾ ಸಾಹಿತ್ಯ ಎಂಬ ಗ್ರಹಿಕೆ ಹೋಗಬೇಕೆಂದು ಹೇಳುವವರಿಗೆ ನನ್ನ ಸಲಹೆ ಇಷ್ಟೆ. ಸಾಹಿತ್ಯ ಮಹಿಳೆಯರು ಬರೆದಿದ್ದಾದರೆ, ಅದರೊಳಗಿನ ಲೋಕಾನುಭವ ಮಹಿಳೆಯರೂ ಪುರುಷರೂ ಸೇರಿಯೇ ಕಟ್ಟಿರುವಂಥದು ತಾನೆ? ಹಾಗಿರುವಾಗ ಆ ಅನುಭವ ಕೇವಲ ಸ್ತ್ರೀಯರದು ಎಂದು ನೋಡುವುದು ತಪ್ಪಬೇಕು. ವೈದೇಹಿ, ನಾಗವೇಣಿ ಮುಂತಾದ ಎಲ್ಲಾ ಲೇಖಕಿಯರು ಅಪ್ಪಟ ಸ್ತ್ರೀ ಸಂಸ್ಕೃತಿಯನ್ನೇ ತಮ್ಮ ಬರಹದಲ್ಲಿ ಅನಾವರಣಗೊಳಿಸುತ್ತಾರೆ. ಆದರೆ ಅವರು ಚಿಂತಿಸಿ, ಭಾವಿಸಿರುವುದೆಲ್ಲ ಎಲ್ಲ ಮನುಷ್ಯರನ್ನೂ ಕುರಿತಿರುತ್ತದಲ್ಲವೆ? ಹಾಗೆ ‘ಇವರು ಸ್ತ್ರೀವಾದಿಯಲ್ಲ; ಇವರು ಸ್ತ್ರೀಯರ ಪರವಹಿಸಿ ಬರೆಯುವುದಿಲ್ಲ ಎಂದು ಕೆಲವು ಲೇಖಕಿಯರಿಗೆ ವಿಶೇಷಣ ಹಚ್ಚುವ ಬದಲಾಗಿ ಎಲ್ಲ ಮಹಿಳೆಯರೂ ಒಟ್ಟಾರೆ ಮಾನವರನ್ನು ಕುರಿತೇ ಬರೆಯುತ್ತಾರೆಂದು ಅರ್ಥಮಾಡಿಕೊಳ್ಳಬಲ್ಲ ಸಂವೇದನಾ ವೈಶಾಲ್ಯ ನಮ್ಮಲ್ಲಿ ಇನ್ನೂ ಬೆಳೆಯಬೇಕು. ಮಾನವಿ ಎಂದರೂ ಮಾನವನೇ ಎಂದು “ಎಂದು ತಿಳಿಯುವುದೋ ಮನುಜಕುಲ”? ಬಹುಶಃ ನಾಳೆಗಳಲ್ಲಿ ಅದು ಸಾಧ್ಯವಾದೀತು ಎಂದು ಆಶಿಸುತ್ತೇನೆ.

ನಾನು ಈ ಹಿಂದೆ ನುಡಿಸಿರಿಯಲ್ಲಿ ಸರ್ವಾಧ್ಯಕ್ಷ ಸ್ಥಾನದಿಂದ ಮಾತನಾಡಿದ ಹಲವಾರು ವಿದ್ವಾಂಸರ ವಿಚಾರಗಳನ್ನು ಪರಿಶೀಲನೆ ಮಾಡಿದೆ. ಅನೇಕರು ಕನ್ನಡದ, ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯ ಮಹತ್ವದ ಅಂಶಗಳನ್ನು ಹೇಳಿಬಿಟ್ಟಿದ್ದಾರೆ; ಈಗಾಗಲೇ ಹೇಳಿರುವಂಥದ್ದನ್ನೇ ಮತ್ತೆ ಮತ್ತೆ ಹೇಳುವುದು ಉಚಿತವಲ್ಲವೆನಿಸಿತು. ಹಾಗಾಗಿ ಕನ್ನಡ-ಸಂಸ್ಕೃತಗಳ ಸಂಘರ್ಷದ ಸ್ವರೂಪಗಳು, ಕನ್ನಡ ತನ್ನ ಅಸ್ಮಿತೆಯನ್ನು ಕಾಯ್ದುಕೊಂಡಿದ್ದರೆ ಅದಕ್ಕೆ ಪ್ರಾಚೀನ ಕವಿಗಳ ಕಾಣಿಕೆಯೇನು ಮುಂತಾದ ವಿಷಯಗಳನ್ನೂ ನಾನು ಪ್ರಸ್ತಾಪಿಸಲು ಬಯಸಲಿಲ್ಲ. ಹಾಗೆಯೇ ಮತ್ತೆ ಮತ್ತೆ ವಿದ್ವಾಂಸರು ಒದಗಿಸಿರುವ ಕನ್ನಡ ಕಾವ್ಯದ ಪ್ರಸಿದ್ಧ ಉಲ್ಲೇಖಗಳನ್ನೂ ಇಲ್ಲಿ ಕೈ ಬಿಟ್ಟಿದ್ದೇನೆ. ಉದ್ದೇಶ ಪೂರ್ವಕವಾಗಿಯೇ ನನ್ನ ಭಾಷಣವನ್ನು ಚಿಕ್ಕದಾಗಿ ನಾಡಿನ ಪ್ರಚಲಿತ ಸಮಸ್ಯೆಗಳ ವಿವೇಚನೆಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದೇನೆ. ಈ ವಿಚಾರಗಳು ತಮ್ಮೆಲ್ಲರ ಮನವನ್ನು ಮುಟ್ಟಲಿ, ಅದರಿಂದ ಪ್ರಶ್ನೆಗಳೆದ್ದು ಚರ್ಚೆ, ಸಂವಾದಗಳಿಗೆ ಎಡೆಗೊಡಲಿ ಎಂಬುದು ನನ್ನ ಆಶಯ.

Leave a Reply

Your email address will not be published. Required fields are marked *

5 − 2 =