ಕನ್ನಡ ಭಾಷೆ ಮಾತ್ರವಲ್ಲ; ಅದೊಂದು ಶಕ್ತಿ: ಆಳ್ವಾಸ್ ವಿದ್ಯಾರ್ಥಿಸಿರಿ ಉದ್ಘಾಟಿಸಿ ಮಂಡ್ಯ ರಮೇಶ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ, ನ.೩೦: ‘ಇಂದಿನ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳನ್ನು ಕೇವಲ ಸಾಕ್ಷರರನ್ನಾಗಿಸುತ್ತಿದೆ. ಆದರೆ ವಿದ್ಯೆಯ ಆಶಯ ಪೂರ್ಣವಾಗುವುದು ಸಾಂಸ್ಕೃತಿಕ ಶಿಕ್ಷಣ ದೊರೆತಾಗ ಮಾತ್ರ. ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ, ಸಾಂಸ್ಕೃತಿಕ ತಳಹದಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜವಾಬ್ದಾರಿಯುತ ಕೆಲಸವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮಾಡುತ್ತಿದೆ. ಆಳ್ವಾಸ್ ವಿದ್ಯಾರ್ಥಿಸಿರಿಯಂತಹ ಸಮ್ಮೇಳನಗಳು ವಿಚಾರವಂತಿಕೆಯನ್ನು, ಸಾಕಷ್ಟು ವಿಷಯಗಳನ್ನು ಏಕಕಾಲಕ್ಕೆ ಲಕ್ಷಗಟ್ಟಲೇ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿವೆ’ ಎಂದು ಪ್ರಸಿದ್ಧ ರಂಗಕರ್ಮಿ ಮಂಡ್ಯ ರಮೇಶ್ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಆಳ್ವಾಸ್ ವಿದ್ಯಾರ್ಥಿಸಿರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಮಾನವೀಯತೆಯನ್ನು ತಿಳಿಸಿಕೊಡುವ, ಬೇರಿನ ಮಟ್ಟದಲ್ಲಿ ಆಪ್ತತೆಯನ್ನು ಹೆಚ್ಚಿಸುವ ಕೆಲಸ ಈ ಸಮ್ಮೇಳನದಲ್ಲಿ ನಡೆಯುತ್ತಿದೆ. ಇಲ್ಲಿರುವ ಅಚ್ಚುಕಟ್ಟನದ ಹಿಂದಿನ ಶ್ರಮ ವಿಸ್ಮಯಕಾರಿಯಾದುದು. ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯಗಳನ್ನು ಒಂದೇ ನೆಲೆಯಲ್ಲಿ ಕಟ್ಟಿಕೊಡುತ್ತಿರುವ ಆಳ್ವಾಸ್ ಬಹುತ್ವದ ನೆಲೆಯಲ್ಲಿ ಬೆಳೆಯುತ್ತಿರುವ ಸಂಸ್ಥೆ ಎಂದರು.

ಆಳ್ವಾಸ್ ವಿದ್ಯಾರ್ಥಿಸಿರಿ ಸರ್ವಾಧ್ಯಕ್ಷತೆ ವಹಿಸಿದ ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅರ್ಜುನ್ ಶೆಣೈ ಮಾತನಾಡಿ, ‘ಇಂದಿನ ವಿದ್ಯಾರ್ಥಿಗಳ ಮುಂದಿರುವ ದೊಡ್ಡ ಸಮಸ್ಯೆಯೆಂದರೆ ಅವ್ಯಕ್ತ ನಿಷ್ಕ್ರಿಯತೆ. ಇದು ವಿಚಾರ ಸ್ಪಷ್ಟತೆಗೆ ಬಹುದೊಡ್ಡ ತೊಡಕಾಗಿ ನಿಂತಿದೆ. ಈ ವಿಚಾರ ಸ್ಪಷ್ಟತೆಯ ಕೊರತೆ ನಮ್ಮ ಭಾಷಾಜ್ಞಾನದ ಕುರಿತಾಗಿಯೂ ಇದೆ. ನಮ್ಮಲ್ಲಿ ಕನ್ನಡದ ಮೂಲಭೂತ ಅಂಶಗಳ ಜ್ಞಾನದ ಕೊರತೆ ತಲೆದೋರುತ್ತಿದೆ. ಈ ಸಮಸ್ಯೆಗಳು ಕನ್ನಡದ ಪ್ರಸ್ತುತತೆಯ ಕುರಿತಾದ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕುಸಿಯುತ್ತಿರುವ ಕನ್ನಡ ಭಾಷೆಯ ಬಗೆಗೆ ಚರ್ಚಿಸಬೇಕಾದ ಅನಿವಾರ್ಯತೆಯನ್ನು ಹುಟ್ಟುಹಾಕಿದೆ’ ಎಂದು ಹೇಳಿದರು.

ಕನ್ನಡ ಕೇವಲ ಭಾಷೆಯಲ್ಲ; ಅದೊಂದು ಶಕ್ತಿ. ನಮ್ಮ ಮಾತೃಭಾಷೆಯೇ ನಮ್ಮನ್ನು ಸಾಂಸ್ಕೃತಿಕ ವ್ಯಕ್ತಿಯಾಗಿ ರೂಪುಗೊಳಿಸುತ್ತದೆ. ಜಾಗತೀಕರಣದ ವೇಗಕ್ಕೆ ಆಂಗ್ಲ ಭಾಷೆ ಅವಶ್ಯಕ. ಆದರೆ ಕನ್ನಡ ಪ್ರಜ್ಞೆಗೆ ಹಾನಿಯನ್ನುಂಟು ಮಾಡುವ ಆಂಗ್ಲಭಾಷೆಯ ವ್ಯಾಮೋಹ ಬೇಕೆ ಎನ್ನುವುದು ಒಂದಿನ ಜಿಜ್ಞಾಸೆಯಾಗಿದೆ. ಬೇರೆ ಭಾಷೆಗಳ ಜ್ಞಾನ ಇರಬೇಕೆ ಹೊರತು ಅದರ ಬಗ್ಗೆ ಅಂಧಾಭಿಮಾನ ಎಂದಿಗೂ ಸಲ್ಲದು. ಇಲ್ಲಿ ಹಿರಿಯರ ಮಾರ್ಗದರ್ಶನವೂ ತುಂಬಾ ಮುಖ್ಯವಾದುದು. ತಮ್ಮ ಅಭಿಪ್ರಾಯಗಳನ್ನು, ಅಭಿಲಾಷೆಗಳನ್ನು ಮಕ್ಕಳ ಮೇಲೆ ಹೇರುವುದಕ್ಕಿಂತ ಅವರ ಅಭಿಪ್ರಾಯಗಳು ಸ್ವತಂತ್ರವಾಗಿ ಅರಳುವಂತೆ ಪೋಷಿಸಬೇಕಾದ್ದು, ಅವರ ಯೋಚನೆಗೆ ಮಾರ್ಗದರ್ಶನ ನೀಡಬೇಕಾದ್ದು ತುಂಬಾ ಮುಖ್ಯ ಎಂದು ಅಭಿಪ್ರಾಯಪಟ್ಟರು. ಹರಿಹರನ “ಮಡಿಕೆ ಗುಂಡಯ್ಯನ ರಗಳೆ”, ಕಪ್ಪೆ ಅರೆಭಟ್ಟನ ಶಾಸನ ಹಾಗು ಕವಿರಾಜಮಾರ್ಗ ಕೃತಿಯ ಆಯ್ದ ಕೆಲವು ಸಾಲುಗಳು, ಜಿ.ಪಿ ರಾಜರತ್ನಂ ರ “ರತ್ನನ್ ಪದಗಳ್”ನ ಸಾಲುಗಳನ್ನು ಪ್ರಸ್ತಾಪಿಸಿ, ಕನ್ನಡ ಸಾಹಿತ್ಯದ ಕುರಿತು ತಮಗಿರುವ ವಿಚಾರಧಾರೆಗಳನ್ನು ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಮಾತನಾಡಿ, ಮುಗ್ಧ ಮನಸ್ಸಿನ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರಗಳನ್ನು ನೀಡಬೇಕಾದ ಬಹುದೊಡ್ಡ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ಅಕ್ಷರ ಜ್ಞಾನದ ಜೊತೆಗೆ ಮಾನವೀಯತೆ, ಹೋರಾಟದ ಗುಣ, ಸಂಬಂಧಗಳ ಮೌಲ್ಯ, ಸೌಂದರ್ಯಪ್ರಜ್ಞೆಗಳನ್ನು ಬೆಳೆಸಬೇಕು. ಈ ಮೂಲಕ ಈ ನಾಡನ್ನು ಸಮೃದ್ಧವಾಗಿ ಬೆಳೆಸುವ, ಔನ್ನತ್ಯಕ್ಕೇರಿಸುವ ಜವಾಬ್ದಾರಿಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕಿದೆ. ಸಮಾಜದಲ್ಲಿನ ಮನಸ್ಸುಗಳನ್ನು ಕಟ್ಟುವ, ಸೌಹಾರ್ದತೆಯನ್ನು ಬೆಳೆಸುವ ಮಹತ್ತರ ಕಾರ್ಯ ವಿದ್ಯಾರ್ಥಿಗಳಿಂದಾಗಬೇಕಿದೆ ಎಂದರು.

ಆಳ್ವಾಸ್ ವಿದ್ಯಾರ್ಥಿಸಿರಿ ಪ್ರಸಸ್ತಿ
ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಹತ್ತರ ಕಾರ್ಯಗಳನ್ನು ನಿರ್ವಹಿಸಿದ ಸಾಧಕರಿಗೆ ಆಳ್ವಾಸ್ ವಿದ್ಯಾರ್ಥಿಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಾಹಿತ್ಯ-ಸಂಸ್ಕೃತಿ ಸಂಘಟನೆಗಾಗಿ ಮುರಳಿ ಕಡೆಕಾರ್, ಶೈಕ್ಷಣಿಕ ಸಾಂಸ್ಕೃತಿಕ ಸಾಧನೆಗಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಬಾಲ ಪ್ರತಿಭೆ ವಂಶಿ ರತ್ನಕುಮಾರ್‌ರವರಿಗೆ ೨೦೧೭ರ ಆಳ್ವಾಸ್ ವಿದ್ಯಾರ್ಥಿಸಿರಿ ಪ್ರಶಸ್ತಿ ನೀಡಲಾಯಿತು.

ಕಾಸರಗೋಡು ಉತ್ತಮ ಕನ್ನಡ ಶಾಲೆ ಗೌರವ
ಗಡಿನಾಡಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ನಾಲ್ಕು ಶಾಲೆಗಳಿಗೆ ‘ಕಾಸರಗೋಡು ಉತ್ತಮ ಕನ್ನಡ ಶಾಲೆ ಗೌರವ’ವನ್ನು ನೀಡಲಾಯಿತು. ಕುಂಬಳೆ ಉಪಜಿಲ್ಲೆಯ ಎಸ್‌ಎಪಿ ಪ್ರೌಢಶಾಲೆ, ಬಿಇಎಂಎಚ್‌ಎಸ್‌ಎಸ್ ಕಾಸರಗೋಡು, ಜಿಎಚ್‌ಎಸ್ ಉದುಮ, ಉದ್ಯಾವರದ ಸರಕಾರಿ ಪ್ರೌಢಶಾಲೆಗಳಿಗೆ ಈ ಗೌರವ ಸಿಕ್ಕಿದೆ. ಮುಂದಿನ ಬಾರಿ ಕರ್ನಾಟಕದ ಇತರೆ ಗಡಿಜಿಲ್ಲೆಗಳ ಕನ್ನಡ ಶಾಲೆಗಳನ್ನು ಗುರುತಿಸುವುದಾಗಿ ಡಾ. ಎಂ. ಮೋಹನ್ ಆಳ್ವ ತಿಳಿಸಿದರು.

ಆಳ್ವಾಸ್ ಸಿನಿಸಿರಿ ಉದ್ಘಾಟನೆ
ಇದೇ ಸಂದರ್ಭದಲ್ಲಿ ಆಳ್ವಾಸ್ ಸಿನಿಸಿರಿಯನ್ನು ಮುಹೂರ್ತ ಕ್ಲಾಪ್ಪಿಂಗ್ ಮಾಡುವ ಮೂಲಕ ಮಂಡ್ಯ ರಮೇಶ್ ಉದ್ಘಾಟಿಸಿದರು. ಪುಟ್ಟಣ್ಣ ಕಣಗಾಲ್ ವೇದಿಕೆಯಲ್ಲಿ ನಡೆಯುತ್ತಿರುವ ಸಿನಿಸಿರಿಯಲ್ಲಿ ನಾಲ್ಕು ದಿನಗಳ ಕಾಲ ಚಿತ್ರಪ್ರದರ್ಶನ ನಡೆಯಲಿದೆ.

ಪುಸ್ತಕ ಬಿಡುಗಡೆ
ಸಾಹಿತ್ಯಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳ ಸಾಹಿತ್ಯಕೃತಿಗಳನ್ನು ಇದೇ ವೇದಿಕೆಯಲ್ಲಿ ಬಿಡುಗಡೆಗೊಳಿಸಲಾಯಿತು. ಆಳ್ವಾಸ್ ವಿದ್ಯಾರ್ಥಿಸಿರಿ ೨೦೧೬ರ ಸರ್ವಾಧ್ಯಕ್ಷತೆ ವಹಿಸಿದ್ದ ಅನನ್ಯ ಬೆಳ್ತಂಗಡಿಯವರ ‘ನಾ ಕಂಡ ಬೆಳಕು’ ಹಾಗೂ ಈ ಬಾರಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿಕೊಂಡಿರುವ ಸನ್ನಿಧಿ ಟಿ. ರೈ ಪೆರ್ಲರವರ ‘ಶೇಡ್ಸ್’ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಲಾಯಿತು.

ಇತ್ತೀಚೆಗೆ ದಿವಂಗತರಾದ ಯುವವಿಜ್ಞಾನಿ ಹರೀಶ್ ಭಟ್ ಹೆಸರಲ್ಲಿ ವೇದಿಕೆಯೊಂದನ್ನು ಅರ್ಪಣೆ ಮಾಡಲಾಗಿದ್ದು, ಅವರ ಪುತ್ರಿ ಹಂಸ ಭಟ್‌ರವರಿಗೆ ಡಾ. ಎಂ.ಮೋಹನ್ ಆಳ್ವ ೨ಲಕ್ಷ ರೂ.ಗಳ ಸಹಾಯಧನವನ್ನು ನೀಡಿದರು.

ವಿದ್ಯಾರ್ಥಿಸಿರಿಗೆ ಭೂತಾನ್ ಮೆರುಗು
ಆಳ್ವಾಸ್ ನುಡಿಸಿರಿಯನ್ನು ಕಣ್ತುಂಬಿಕೊಳ್ಳಲು ಭೂತಾನ್ ಸಾಂಸ್ಕೃತಿಕ ತಂಡವೊಂದು ಆಳ್ವಾಸ್‌ಗೆ ಬಂದಿದೆ. ಭೂತಾನ್‌ನ ಮಾಜಿ ಸಂಸದ ಶೇರಿಂಗ್ ದೊರ್ಜಿ ನೇತೃತ್ವದಲ್ಲಿ ವಿದ್ಯಾರ್ಥಿಸಿರಿ ದಿನವೇ ಈ ತಂಡ ಆಗಮಿಸಿದೆ. ಆಳ್ವಾಸ್ ಸಾಂಸ್ಕೃತಿಕ ಅನನ್ಯತೆಗೆ, ಅದರ ವಿಸ್ತಾರ ವ್ಯಾಪ್ತಿಗೆ ಈ ತಂಡದ ಭೇಟಿ ಸಾಕ್ಷಿಯಾಯಿತು.

Leave a Reply

Your email address will not be published. Required fields are marked *

1 + nine =