ಅನುಪಮಾ ಪ್ರಸಾದ್ ಅವರಿಗೆ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಈ ವರ್ಷದ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು 2019ರಲ್ಲಿ ಮೊದಲ ಆವೃತ್ತಿಯಾಗಿ ಬಂದ ಅನುಪಮಾ ಪ್ರಸಾದ್ ಕಾಸರಗೊಡು ಅವರ ‘ಪಕ್ಕಿಹಳ್ಳದ ಹಾದಿಗುಂಟ’ ಕಾದಂಬರಿಗೆ ದೊರಕಿದೆ.

ಕನ್ನಡ ಸಾಹಿತ್ಯ ಲೋಕದಲ್ಲಿ ಈಗಾಗಲೇ ತಮ್ಮ ಕತೆಗಳ ಮೂಲಕ ಪ್ರಸಿದ್ಧರಾಗುರುವ ಅನುಪಮಾ ಪ್ರಸಾದ್ ಅವರ ಚೊಚ್ಚಲ ಕಾದಂಬರಿ ಇದಾಗಿದೆ.

ಕನ್ನಡದ ಪ್ರಮುಖ ಲೇಖಕರಾದ ಓ. ಎಲ್. ನಾಗಭೂಷಣ ಸ್ವಾಮಿ, ದೇವು ಪತ್ತಾರ್, ಮತ್ತು ನರೇಂದ್ರ ರೈ ದೇರ್ಲರವರು ನಿರ್ನಾಯಕರಾಗಿ ಸಹಕರಿಸಿರುತ್ತಾರೆ. ಪ್ರಶಸ್ತಿಯು ಹದಿನೈದು ಸಾವಿರರೂಪಾಯಿ ನಗದಿನೊಂದಿಗೆ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ.

ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾದ ಅನುಪಮಾ ಪ್ರಸಾದ್ ಬಾಲ್ಯದಲ್ಲಿಯೇ ದಕ್ಷಿಣ ಕನ್ನಡದ ಉಜಿರೆಗೆ ಬಂದು ಅಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಗಡಿನಾಡು ಕಾಸರಗೋಡಿನಲ್ಲಿ ತಮ್ಮ ವೈದ್ಯ ವೃತ್ತಿಯ ಪತಿಯೊಂದಿಗೆ ನೆಲೆಸಿದ್ದಾರೆ.

ತಮ್ಮ ಸಾಹಿತ್ಯ ಕೃಷಿಯನ್ನು ಕಥಾರಚನೆಯ ಮೂಲಕ ಆರಂಭಿಸಿದರು. ಕನ್ನಡದ ದಿನಪತ್ರಿಕೆಗಳಾದ ಪ್ರಜಾವಾಣಿ, ವಿಜಯವಾಣಿ ಇವರ ಕಥೆಗಳು ಪ್ರಕಟವಾಗಿವೆ. ಚೇತನಾ, ಕರವೀರದಗಿಡ, ದೂರತೀರ, ಜೋಗತಿ ಜೋಳಿಗೆ ಇವರಕಥಾ ಸಂಕಲನಗಳಾಗಿವೆ. ಎಮ್ ವ್ಯಾಸರ ಕುರಿತಾದ ನಿರೂಪಣಾ ಕೃತಿ ಅರ್ಧಕಥಾನಕ ಇವರ ಕೃತಿಗಳಲ್ಲಿ ಒಂದಾಗಿದೆ. ಇವರ ಕಿರುನಾಟಕಗಳು, ಬಿಡಿಕವಿತೆಗಳು ಮತ್ತು ಹಲವಾರು ಲೇಖನಗಳು ಪ್ರಕಟಗೊಂಡಿವೆ. ಪಕ್ಕಿಹಳ್ಳದ ಹಾದಿಗುಂಟ ಇವರ ಮೊದಲ ಕಾದಂಬರಿಯಾಗಿದೆ.

ಇವರ ಸಾಹಿತ್ಯ ಕೃಷಿಗೆ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಇವರ ಅತ್ಯತ್ತಮ ಕಥಾಸಂಕಲನ ಜೋಗತಿ ಜೋಳಿಗೆ ಕೃತಿಗೆ 2015ನೇ ಸಾಲಿನ ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ, ಕರಾವಳಿ ಲೇಕಕಿಯರ ಸಂಘದ ‘ಸಾರಾಅಬೂಬಕರ್’ ಪ್ರಶಸ್ತಿ ಮತ್ತು ಅಡ್ವೈಸರ್ ಪ್ರಶಸ್ತಿ ಸಂದಿದೆ.

ದೂರತೀರ ಕೃತಿಗೆ 2012ನೇ ಬೆಸಗದ ಹಳ್ಳಿ ರಾಮಣ್ಣಕಥಾ ಪ್ರಶಸ್ತಿ, ಮಾಸ್ತಿ ಕಥಾ ಪ್ರಶಸ್ತಿ, ‘ವಸುದೈವ ಭೂಪಾಲಂ’ ಕಥಾ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ದತಿ ‘ತ್ರಿವೇಣಿ’ ಪುರಸ್ಕಾರ ದೊರೆತಿದೆ. ಕರವೀರದಗಿಡ ಕೃತಿಗೆ 2010ನೇ ಸಾಲಿನ ಬೇಂದ್ರೆ ಗ್ರಂಥ ಬಹುಮಾನ ಬಂದಿದೆ.

ಮುಂಬೆಳಕು ಕಥಾ ಪುರಸ್ಕಾರ, ಅತ್ತಿಮಬ್ಬೆ ಕಥಾ ಪುರಸ್ಕಾರ, ಅರ್ಧ ಕಥಾನಕ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ‘ನೀಳಾದೇವಿ’ ಪ್ರಶಸ್ತಿ, ಕನ್ನಡದ ದಿನಪತ್ರಿಕೆಗಳಾದ ಪ್ರಜಾವಾಣಿ, ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆಗಳ ಬಹುಮಾನಗಳು, ತಿಂಗಳು, ತುಷಾರ, ತರಂಗ ಕಥಾಸ್ಪರ್ಧೆಗಳ ಬಹುಮಾನಗಳು ಸಂದಿವೆ.

ಕೇರಳಾ ಪುರದಲ್ಲೊಂದು ದಿನ ಎಂಬ ಕಥೆ ಇಂಗ್ಲೀಷ್ ಮತ್ತು ಮಲಯಾಳಕ್ಕೆ ಅನುವಾದಗೊಂಡಿದೆ. ಅಗೋಚರ ವಿಪ್ಲವಗಳು ಎಂಬ ಕಥೆ ಇಂಗ್ಲೀಷಿಗೆ ಅನುವಾದಗೊಂಡಿದೆ. ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಗ್ರಹಗಳಲ್ಲಿ ಈ ಕಥೆಗಳಿವೆ.

ಪಕ್ಕಿಹಳ್ಳದ ಹಾದಿಗುಂಟ ಕಾದಂಬರಿ 2019ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚದುರಂಗದತ್ತಿ ಪುರಸ್ಕಾರ ಪಡೆದಿದೆ.

Leave a Reply

Your email address will not be published. Required fields are marked *

eighteen + seven =