ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ‘ಪರೀಕ್ಷಾ ಪೇ ಚರ್ಚಾ’ ಸಂವಾದಕ್ಕೆ ಆಲ್ಬಾಡಿ-ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಅನುಷಾ ಆಯ್ಕೆ ಆಗಿದ್ದಾರೆ.
ದೇಶಾದ್ಯಂತ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹತ್ತು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಅರ್ಜಿ ಹಾಕಿದ್ದು, ಅಂತಿಮವಾಗಿ 1500 ವಿದ್ಯಾರ್ಥಿಗಳ ಆಯ್ಕೆಯಾಗಿದ್ದಾರೆ. ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ 30 ವಿದ್ಯಾರ್ಥಿಗಳು ಪ್ರಧಾನಮಂತ್ರಿ ಜೊತೆ ನೇರ ಸಂವಾದ ನಡೆಸಲಿದ್ದಾರೆ.
ಮಡಾಮಕ್ಕಿ ನಿವಾಸಿ ಕೃಷ್ಣ ಕುಲಾಲ ಮತ್ತು ಜಯಲಕ್ಷ್ಮೀ ಕುಲಾಲರ ನಾಲ್ವರು ಹೆಣ್ಣು ಮಕ್ಕಳಲ್ಲಿ ಅನುಷಾ ಕೊನೆಯವಳು. ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದ್ದಾಳೆ. ತಂದೆ ಗಾರೆ ಕೆಲಸ ಮಾಡಿಕೊಂಡಿದ್ದರೆ, ತಾಯಿ ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮಗಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕನಸು ಅವರದ್ದು. ಇದೀಗ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮಕ್ಕೆ ಮಗಳು ಆಯ್ಕೆಯಾಗಿರುವುದು ಕುಟುಂಬದಲ್ಲಿ ಸಂತಸ ಮೂಡಿಸಿದೆ.
ಕೆಲ ದಿನಗಳ ಹಿಂದಷ್ಟೇ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಹಾಗೂ ಶಿಕ್ಷಕರು ನಿರ್ಮಿಸಿದ್ದ ‘ಪರಿಕ್ಷೇ ಪೇ ಚರ್ಚಾ’ ಪ್ರೋಮೋ ವೀಡಿಯೋ ಎಲ್ಲೆಡೆ ಸುದ್ದಿಯಾಗಿತ್ತು. ಇದೀಗ ಇದೇ ಶಾಲೆಯ ವಿದ್ಯಾರ್ಥಿನಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ಶಿಕ್ಷಕವರ್ಗ ಹಾಗೂ ಊರಿನವರಿಗೆ ಸಂತಸ ತಂದಿದೆ.
ಇದನ್ನೂ ಓದಿ:
► ಆರ್ಡಿ ಪ್ರೌಢ ಶಾಲೆಯ ‘ಪರೀಕ್ಷಾ ಪೇ ಚರ್ಚಾ’ ಪ್ರೋಮೋಗೆ ದೇಶಾದ್ಯಂತ ಪ್ರಶಂಸೆ – https://kundapraa.com/?p=46233 .