ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಾರ್ಜಾ,ಅ.7: ಅರಬ್ ರಾಷ್ಟ್ರದಲ್ಲಿರುವ ಎಲ್ಲ ಕನ್ನಡಿಗರ ಪರವಾಗಿ, ಚಂದನವನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಶನಿವಾರ ಸಂಜೆ ಶಾರ್ಜಾ ದ ಮಕಾನಿ ರೆಸ್ಟೋರೆಂಟ್ ಆಯೋಜಿಸಲಾಗಿತ್ತು.
ಪುನೀತ್ ಅವರ ಅಭಿಮಾನಿಗಳಾದ ಸದನ್ ದಾಸ್, ಮಧು ಗೌಡರ್ ಹಾಗೂ ವಿಜಯ್ ಗುಜ್ಜರ್ ಇವರ ಮುಂದಾಳ್ವತದಲ್ಲಿ ನಡೆಸಿದ ಈ ಕಾರ್ಯಕ್ರಮದಲ್ಲಿ ಅರಬ್ ರಾಷ್ಟ್ರದಲ್ಲಿ ನೆಲೆಸಿರುವಂತಹ ಅನೇಕ ಕನ್ನಡ ಪ್ರಿಯರು ಹಾಗೂ ಪುನೀತ್ ಅಭಿಮಾನಿಗಳು ಸೇರಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಭಾವಪೂರ್ಣವಾಗಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಪುನೀತ್ ರವರ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ಹಾಗೂ ಮೌನಾಚರಣೆ ಮಾಡುವುದರ ಮೂಲಕ ಮನದಾಳದ ಮೂಕವೇದನೆಯನ್ನು ಅಭಿವ್ಯಕ್ತಗೊಳಿಸಿದರು. ನಂತರ ಅಭಿಮಾನಿಗಳು, ಪುನೀತ್ ಅವರ ಗುಣಗಾನ ಮಾಡುವುದರ ಮೂಲಕ, ಅವರು ಮಾಡಿರುವಂತಹ ಒಳ್ಳೆಯ ಕಾರ್ಯಕ್ರಮವನ್ನು ತಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದೆಂದು ಚರ್ಚಿಸಿದರು. ಆದಷ್ಟು ಬೇಗ ಬ್ಲಡ್ ಡೊನೇಷನ್ ಕ್ಯಾಂಪ್ ಮಾಡುವುದರ ಜೊತೆಗೆ, ಮುಖ್ಯವಾಗಿ ದೇಹದ ಅಂಗಾಂಗಗಳನ್ನು ದಾನ ಮಾಡುವುದರ ಬಗ್ಗೆ ಮಹತ್ವದ ಕಾರ್ಯಕ್ರಮಕ್ಕೆ ನಾಂದಿಯನ್ನು ಆಡಿದರು. ಅರಬ್ ರಾಷ್ಟ್ರದಲ್ಲಿ ಈ ಕುರಿತಾದ ಹೆಚ್ಚಿನ ವಿವರವನ್ನು “ಯು ಎ ಇ” ಆರೋಗ್ಯ ಇಲಾಖೆಯಿಂದ ಸಂಗ್ರಹಿಸಿ, ಆದಷ್ಟು ಬೇಗ ಶಿವರಾಜ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಾಗಿ ತೀರ್ಮಾನಿಸಲಾಯಿತು.