ಭಯೋತ್ಪಾದಕರ ಜನ್ಮಸ್ಥಾನ ನರಕವಲ್ಲವೆ? ನಾಕವನ್ನು ಅರಿಯದೆ ನರಕವನ್ನೇ ಹೊಗಳಿದರೆ?

Call us

Call us

ಶ್ರೇಯಾಂಕ್ ಎಸ್. ರಾನಡೆ | ಕುಂದಾಪ್ರ ಡಾಟ್ ಕಾಂ ಲೇಖನ
ನಿಮಗೆ ಮಂಗಳೂರು ನರಕವಾದರೆ ನೀವು ಇಸ್ಲಾಮಾಬಾದ್‍ನಲ್ಲಿಯೇ ಸುಖವಾಗಿರಿ. ಪಾಕಿಸ್ತಾನಕ್ಕೆ ”ಅದೃಷ್ಟದ ನಕ್ಷತ್ರ”ವಾದರೆ ಸಂತೋಷ. ಆದರೆ ಭಾರತದ ಪಾಲಿಗೆ ದುರಾದೃಷ್ಟವಾಗದಿರಿ.

Click Here

Call us

Call us

ಎರಡು ದೇಶಗಳ ನಡುವೆ ಸರಕಾರಗಳ ಮಟ್ಟದಲ್ಲಿ ನೇರವಾದ ಮಾತುಕತೆ, ವ್ಯವಹಾರ ಫಲಿಸದೇ ಇದ್ದಾಗ ಎರಡೂ ದೇಶಗಳ ಸರಕಾರೇತರ ವ್ಯಕ್ತಿಗಳು, ಸಂಘ ಸಂಸ್ಥೆಗಳು ಪರಸ್ಪರರ ನಡುವಿನ ಸಂಬಂಧವನ್ನು ಉತ್ತಮಗೊಳಿಸಿ, ಆ ಮೂಲಕ ದೇಶದೊಳಗೆ ಗುಣಾತ್ಮಕ ವಾತಾವರಣವನ್ನು ನಿರ್ಮಿಸಿ ಕುಸಿದ ಮಾತುಕತೆ-ಸಂಬಂಧವನ್ನು ಪುನಚ್ಛೇತನಗೊಳಿಸಲು ಸರಕಾರಗಳ ಮೇಲೆ ಒತ್ತಡ ಹೇರುವ ಮಾರ್ಗವೇ ಟ್ರಾಕ್ 2, ಟ್ರಾಕ್ 3 ರಾಜತಾಂತ್ರಿಕತೆ. ಎರಡು ದೇಶಗಳ ಪ್ರಜೆಗಳ ನಡುವಿನ, ಸರ್ಕಾರೇತರ ಗುಂಪುಗಳು ಸಮಾನ ಸಂಗತಿಗಳ ಕುರಿತು ಪರಸ್ಪರ ಸಂಬಂಧವನ್ನು ಉತ್ತಮಗೊಳಿಸಲು ನಡೆಸುವ ಇಂತಹ ಮಾರ್ಗಗಳು ಒತ್ತಡ ತಂತ್ರವಾಗಿ, ಕೆಲವೊಮ್ಮೆ ಸ್ವಹಿತಕ್ಕಾಗಿ ಬಳಕೆಯಾಗುವ ಅಪಾಯವಿದೆಯಾದರೂ ಇಂತಹ ಸಂಪರ್ಕ ಮಾರ್ಗಗಳು ದೇಶ,ದೇಶಗಳ ನಡುವಿನ ಬಾಂಧವ್ಯ ವೃದ್ಧಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಯಾರೂ ಕೇಳದಿದ್ದರೂ ಸ್ವಯಂಘೋಷಿತವಾಗಿ ಎಡಬಿಡಂಗಿತನ ಪ್ರದರ್ಶಿಸುವುದು ಶುದ್ಧ ಅಧಿಕಪ್ರಸಂಗಿತನ. ಇಂತಹ ಪೆದ್ದು ನಡೆಗಳಿಂದ ಸ್ವದೇಶದಲ್ಲೂ, ವಿದೇಶದಲ್ಲೂ ಅಪಹಾಸ್ಯಕ್ಕೆ ಗುರಿಯಾಗುವ ಹೊರತು ಮತ್ಯಾರಿಗೂ ಲಾಭವಾಗುವುದಿಲ್ಲ. ಬಹಳ ಕಾಳಜಿಯುಳ್ಳವರಂತೆ, ಪಾಕಿಸ್ತಾನದ ವಕ್ತಾರರಂತೆ ಪಾಕಿಸ್ತಾನದ ಕುರಿತಾದ ನಟಿಯ ವಿವಾದಾತ್ಮಕ ಹೇಳಿಕೆ ರಾಜತಾಂತ್ರಿಕವಲ್ಲ. ರಾಜಕೀಯ ಕುತಂತ್ರದಿಂದ ಕೂಡಿದ್ದು. ಕೊನೆಗೆ ಮಂಗಳೂರನ್ನೂ ನರಕ ಎಂದ ನಿಮ್ಮ ಬುದ್ಧಿಮತ್ತೆಯೇ, ನೈತಿಕ ಬದ್ಧತೆಯೇ ಪ್ರಶ್ನಾರ್ಹ. ಅಷ್ಟಕ್ಕೂ ಪಾಕಿಸ್ತಾನದ ಬಗ್ಗೆಯಾಗಲಿ, ಮಂಗಳೂರಿನ ಬಗ್ಗೆಯಾಗಲಿ ನಿಮಗೇನು ಗೊತ್ತು?

Click here

Click Here

Call us

Visit Now

ಭಾರತ-ಪಾಕಿಸ್ತಾನದ ಸಂದರ್ಭದಲ್ಲಿಯೇ ಹೇಳುವುದಾದರೆ ರಾಜತಾಂತ್ರಿಕ ಪ್ರಯತ್ನಗಳು ಗುಣಾತ್ಮಕವಾಗಿರಬೇಕು. ಸಕಾರಾತ್ಮಕ ಬೆಳವಣಿಗೆ ಎರಡೂ ಕಡೆಯಿಂದ ಬರಬೇಕು. ಭಾರತ ಎಲ್ಲಾ ರೀತಿಯಿಂದಲೂ ಸ್ನೇಹಕ್ಕಾಗಿ ಹಸ್ತ ಚಾಚುವುದು ಆದರೆ ಅದಕ್ಕೆ ಬದಲಾಗಿ ಅತ್ತಲಿಂದ ನಂಬಿಕೆ ದ್ರೋಹವೇ ಉಡುಗೊರೆಯಾಗಿ ಬರುತ್ತಿದ್ದರೆ ಮಾತುಕತೆಗಳಿಗೆ, ಭವಿಷ್ಯಕ್ಕೆ ಅರ್ಥವೇನು? ಇಂತಹ ಪರಿಸ್ಥಿತಿಗಳ, ವಾಸ್ತವ ಸಂಗತಿಗಳ ಪರಿಚಯವಿಲ್ಲದ ”ಸ್ವಯಂಘೋಷಿತ” ಮಧ್ಯವರ್ತಿಗಳು ಸುಖಾಸುಮ್ಮನೆ ಹಿನ್ನೆಲೆ, ಮುನ್ನೆಲೆ ಗೊತ್ತಿಲ್ಲದವರಂತೆ ಭಾರತ ಸರಕಾರದ ಮಂತ್ರಿಯೋರ್ವರ ಸಮಯೋಚಿತ, ಆಯಕಟ್ಟಿನ, ರಾಜತಾಂತ್ರಿಕ ಹೇಳಿಕೆಯನ್ನು ತಮಗೆ ಬೇಕಾದಂತೆ ಊಹಿಸಿ, ಅರ್ಥೈಸಿ ಪಾಕಿಸ್ತಾನದ ವಕ್ತಾರರಂತೆ ನೀಡುವ ಬೇಜವಾಬ್ದಾರಿ, ದಾರಿತಪ್ಪಿಸುವ ಹೇಳಿಕೆಗಳು ಭಾರತದ ಬದ್ಧತೆಯನ್ನೇ ಪ್ರಶ್ನಿಸುವಂತೆ ತೋರುತ್ತವೆ. ಅಷ್ಟಕ್ಕೂ ಎರಡು ದಿನ ಸುರಕ್ಷಿತವಾಗಿ ಮುಚ್ಚಿದ ಕೋಣೆಯಲ್ಲಿ ಶಾಂತಿಯ ಮಾತುಗಳನ್ನಾಡಿದ ಮಾತ್ರಕ್ಕೆ ಮೂಲ ಚಿತ್ರಣ ಬದಲಾಗುವುದಿಲ್ಲ. ಅಂದ ಚಂದದ ಮಾತುಗಳನ್ನು ಕೇಳಿಸಿಕೊಂಡು ಬಂದ ಮಾತ್ರಕ್ಕೆ ಅಲ್ಲಿನ ಕನಿಷ್ಟ ಚಿತ್ರಣವೂ ದೊರೆಯುವುದಿಲ್ಲ. ಸತ್ಯದ ಅರಿವೂ ಆಗುವುದಿಲ್ಲ. ಮೇಲಾಗಿ ಈ ವರ್ಷದ ಪ್ರಾರಂಭದಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದ ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖರ್ಷಿದ್ ಹಾಗೂ ದಿವಂಗತ ಪ್ರಧಾನಿಗಳ ಆಪ್ತಮಿತ್ರರೂ, ಕಾಂಗ್ರೆಸ್ ಪಕ್ಷದ ಪಾಕಿಸ್ತಾನ ನೀತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮಣಿಶಂಕರ್ ಅಯ್ಯರ್ ಭಾರತ-ಪಾಕಿಸ್ತಾನದ ನಡುವೆ ಶಾಂತಿ ನೆಲೆಗೊಳ್ಳಬೇಕಾದರೆ ಭಾರತದ ಪ್ರಚಲಿತ ಪ್ರಧಾನಿ ಕೆಳಗಿಳಿಯಬೇಕು ಎಂದು ರಾಜತಾಂತ್ರಿಕತೆಯ ಹೆಸರಿನಲ್ಲಿ ಕೊಳಕು ರಾಜಕೀಯ ಮಾಡಿ ಬಂದಿದ್ದು ಇನ್ನೂ ಹಸನಾಗೇ ಇದೆ. ಅದರ ಸುಧಾರಿತ ರೂಪವೇ ಈಗಿನ ಹೇಳಿಕೆ.

ಅಷ್ಟಕ್ಕೂ ತಕರಾರು ಇರುವುದು ಪಾಕಿಸ್ತಾನದಲ್ಲೂ ಒಳ್ಳೆಯವರಿದ್ದಾರೆ ಎಂದಿದ್ದಕ್ಕಲ್ಲ ಆದರೆ ಅದನ್ನು ರಕ್ಷಣಾ ಸಚಿವರು ವ್ಯಂಗ್ಯವಾಗಿ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ತಮ್ಮ ದಡ್ಡತನದ ಬುದ್ದಿವಂತಿಕೆಯನ್ನು ತೋರಿಸಿದ್ದಕ್ಕೆ. ನಮ್ಮ ಪ್ರಧಾನಿಗಳು ವಿಶ್ವಸಂಸ್ಥೆಯಿಂದ ಹಿಡಿದು ಭಯೋತ್ಪಾದನೆಯಿಂದ ಬಳಲುತ್ತಿರುವ ಮತ್ತು ಭಯೋತ್ಪಾದನೆಯ ವಿರುದ್ಧ ಹೋರಾಡಲು ಸಜ್ಜಾಗಿರುವ ಎಲ್ಲಾ ದೇಶಗಳ ಜೊತೆಗಿನ ಒಪ್ಪಂದಪೂರ್ವಕ ಮಾತುಕತೆಯಲ್ಲಿ ಹೇಳುವ ಮತ್ತು ಎಲ್ಲರೂ ಒಮ್ಮತದಿಂದ ಒಪ್ಪುತ್ತಿರುವ ಹಾಗೂ ಆ ನಿಟ್ಟಿನಲ್ಲಿ ಕಾರ್ಯಯೋಜನೆ ನಿರೂಪಿಸುತ್ತಿರುವ ಒಂದೇ ಮಾತು ”ಭಯೋತ್ಪಾದನೆಯನ್ನು ಪೋಷಿಸುತ್ತಿರುವ ರಾಷ್ಟ್ರಗಳನ್ನು ಏಕಾಂಗಿಗೊಳಿಸಿ ಪ್ರತ್ಯೇಕಗೊಳಿಸಬೇಕು”. ಆಗ ತಾನೇ ತಾನಾಗಿ ಭಯೋತ್ಪಾದನೆಗೆ ದೊರಕುತ್ತಿರುವ ಆರ್ಥಿಕ, ತಾಂತ್ರಿಕ, ಶಸ್ತ್ರಾಸ್ತ್ರ, ಸಾಮಾಜಿಕ, ತಾತ್ವಿಕ, ಮಾನಸಿಕ, ಧಾರ್ಮಿಕ, ಹೀಗೆ ಎಲ್ಲಾ ಬಗೆಯ ಪೋಷಕ ಮೂಲಗಳಿಗೆ ತೆರೆ ಎಳೆದು ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯಬಹುದು. ಇದು ವಿಶ್ವದ ಗಮನಕ್ಕೆ ಬರಬೇಕಾದರೆ ಭಯೋತ್ಪಾದನೆಯನ್ನು ಹುಟ್ಟಿಸಿ, ಪೋಷಿಸಿಕೊಂಡು ಬರುತ್ತಿರುವ ಪಾಕಿಸ್ತಾನದ ನಿಜವಾದ ಬಣ್ಣ ಬಯಲಾಗಬೇಕಾದರೆ, ಅದು ಭಯೋತ್ಪಾದನೆಯ ಕುರಿತು ಅನುಸರಿಸುತ್ತಿರುವ ”ಒಳ್ಳೆಯ ಹಾಗೂ ಕೆಟ್ಟ ಭಯೋತ್ಪಾದನೆ”(ಭಯೋತ್ಪಾದನೆ ಪಾಕಿಸ್ತಾನಕ್ಕೆ ವಿರುದ್ಧವಾಗಿದ್ದರೆ ಅದು ಕೆಟ್ಟ ಭಯೋತ್ಪಾದನೆ ಆದರೆ ಅದು ಭಾರತದಂತಹ ದೇಶದ ವಿರುದ್ಧವಾಗಿದ್ದರೆ, ಪಾಕಿಸ್ತಾನ ತನ್ನ ಲಾಭಕ್ಕಾಗಿ ಬಳಸಿಕೊಳ್ಳುವುದು ಪಾಕಿಸ್ತಾನಕ್ಕೆ ಒಳ್ಳೆಯ ಭಯೋತ್ಪಾದನೆ. ಅಮೇರಿಕಾ ಭಯೋತ್ಪಾದನಾ ನಿಗ್ರಹಕ್ಕೆ ನೀಡುತ್ತಿರುವ ಮಿಲಿಟರಿ ಹಣಕಾಸಿನ ನೆರವನ್ನು ಪಾಕಿಸ್ತಾನ ”ಕೆಟ್ಟ” ಭಯೋತ್ಪಾದಕರನ್ನು ಹಣೆಯಲು ಬಳಸುತ್ತಿದೆ. ಈ ಷಡ್ಯಂತ್ರದ ದ್ವಿಮುಖ ನೀತಿಯ ಕಾರಣದಿಂದ ಗಿಲ್ಗಿಟ್-ಬಲೂಚಿಸ್ತಾನ ಪ್ರಾಂತ್ಯದವರಿಗೆ, ಅಫಘಾನಿಸ್ತಾನ ಮತ್ತು ಭಾರತಕ್ಕೆ ಇದರ ಬಗ್ಗೆ ತೀವ್ರ ವಿರೋಧವಿದೆ.) ಎಂಬ ದ್ವಿಮುಖ ನೀತಿ ಬದಲಾಗಬೇಕಾದರೆ ಇಂತಹ ಅನೇಕ ಹೇಳಿಕೆಗಳು, ಆಯಕಟ್ಟಿನ ನಡೆಗಳು ತೀರಾ ಅನಿವಾರ್ಯ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನತ್ತಾರಲ್ಲ ಹಾಗೆಯೇ ಪಾಕಿಸ್ತಾನಕ್ಕೆ ಅದರ ರೀತಿಯಲ್ಲಿಯೇ ಉತ್ತರಿಸಬೇಕು. ಅಂತಹ ಒಂದು ಬಿಸಿ ಮುಟ್ಟಿಸುವ ಪ್ರಯತ್ನವೇ ರಕ್ಷಣಾ ಸಚಿವರ ಹೇಳಿಕೆಯಾಗಿತ್ತು. ಆದರೆ ಭಾರತೀಯ ರಾಯಭಾರಿ ಕಚೇರಿ ತನ್ನೆಲ್ಲ ಕೆಲಸವನ್ನು ಬಿಟ್ಟು, ಹಗಲು ರಾತ್ರಿ ಶ್ರಮಪಟ್ಟು, ಎರಡು ದಿನ ಅತಿಥಿಗಳಾಗಿ ಬರುವವರನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ಮಾಡುವ ಅತ್ಯಂತ ಕಿಷ್ಟ ಪ್ರಯತ್ನ ಏನೂ ಅಲ್ಲ ಎಂಬಂತೆ ಸೆಲೆಬ್ರೆಟಿಯಂತೆ ಹಾಗೆ ಹೋಗಿ ಹೀಗೆ ಬರುವವರಿಗೆ ಇದೆಲ್ಲ ಅರ್ಥವಾಗುವುದಿಲ್ಲ.

ಪಾಕಿಸ್ತಾನದ ಯಾರೋ ಹೊಸ ‘ಮಿತ್ರರ’ ಮಾತನ್ನು ನಂಬುವ ನಿಮಗೆ, ಭಾರತೀಯ ರಾಯಭಾರಿ ಕಚೇರಿ ಎಂತಹ ದುಸ್ತರ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದು ತಿಳಿದಿದೆಯಾ? ಅವರೊಂದಿಗಾದರೂ ಮಾತನಾಡಿ ಅವರು ಅಲ್ಲಿ ಎದುರಿಸುತ್ತಿರುವ ಸವಾಲು-ಸಮಸ್ಯೆಗಳೇನು ಎಂದು ಅರಿಯುವ ಕನಿಷ್ಟ ಪ್ರಯತ್ನ ಮಾಡಿದ್ದೀರಾ? ನಾನಿಲ್ಲಿ ನೀವು ಕರಿಯಬಹುದಾದ ‘ಪಿತೂರಿ ನೀತಿ’ ಅಥವಾ ದೃಢಪಡದ!? ಸಂಗತಿಗಳ ಬಗ್ಗೆ ಮಾತನಾಡುತ್ತಿಲ್ಲ. ಭಾರತೀಯ ರಾಯಭಾರಿಗಳು ಅಲ್ಲಿ ಎಂತಹ ವಿಷಮ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಸತ್ಯ ನಿಮಗೆ ತಿಳಿದಿದ್ದರೆ ಸಾಕಿತ್ತು. ಅಂತರಾಷ್ಟ್ರೀಯ ಕಾನೂನುಗಳು ಅಲ್ಲಿ ಕಾಗದದ ಮೇಲಷ್ಟೇ ಇರುವುದು ಎಂದು ವಿಶೇಷವಾಗಿ ಹೇಳಬೇಕಿಲ್ಲ. ನಿಮಗೆ ಪಾಕಿಸ್ತಾನ ಕಾಣುತ್ತದೆ. ಆದರೆ ನಮ್ಮ ದೇಶದ ಪ್ರಯತ್ನ, ನಮ್ಮ ದೇಶದವರು ಕಾಣುವುದಿಲ್ಲ. ನಿಮಗೆ ಪಾಕಿಸ್ತಾನದ ಎರಡು ದಿನಗಳ ಬಣ್ಣದ ಮಾತುಗಳ ಬಗ್ಗೆ ನಂಬಿಕೆಯಿದೆ. ಆದರೆ ನಮ್ಮದೇ ದೇಶದ ಸರಕಾರ, ರಕ್ಷಣಾ ಸಚಿವರು, ಸೈನ್ಯದ ಮೇಲೆ ವಿಶ್ವಾಸವಿಲ್ಲ. ನಿಮಗೆ ಇಸ್ಲಾಮಾಬಾದ್‍ನ ಮಾನವ ಕಸಾಯಿಖಾನೆ ಇಷ್ಟ. ಆದರೆ ಸರ್ವಧರ್ಮದ ನೆಲೆಬೀಡು ಮಂಗಳೂರು-ತುಳುನಾಡು ಕಷ್ಟ ಮತ್ತು ಕನಿಷ್ಟ. ನಿಮ್ಮ ವರ್ತನೆ ನಿಮಗೆ ಅಸಹ್ಯ ಎನ್ನಿಸುವುದಿಲ್ಲವೆ?

Call us

ನಿಮ್ಮ ಆತ್ಮಸಾಕ್ಷಿಯನ್ನೊಮ್ಮೆ ಕೇಳಿ ನೋಡಿ ಭಯೋತ್ಪಾದಕರು ಯಾಕೆ ಪಾಕ್ ಆಕ್ರಮಿತ ಕಾಶ್ಮೀರ ಅಥವಾ ಭಾರತ-ಪಾಕಿಸ್ತಾನದ ಗಡಿಗಳಿಂದಲೇ ಬರುತ್ತಾರೆ? ಯಾವುದೇ ಅಂತರಾಷ್ಟ್ರೀಯ ಗಡಿಗಳನ್ನು ಕಾಯಲು ಅದರಲ್ಲೂ ಸೂಕ್ಷ್ಮ ಹಾಗೂ ಪ್ರಮುಖ ಆಯಕಟ್ಟಿನ ಗಡಿಗಳನ್ನು ರಾಷ್ಟ್ರವೊಂದರ ಸೇನೆ ಕಾಯುತ್ತಿರುತ್ತದೆ. ಹಾಗಿದ್ದೂ ಪಾಕಿಸ್ತಾನದ ಅಂತರಾಷ್ಟ್ರೀಯ ಗಡಿಯಿಂದ ಭಯೋತ್ಪಾದಕರು ಮತ್ತೆ ಮತ್ತೆ ನುಸುಳಿಕೊಂಡು ಬರುತ್ತಾರೆಂದರೆ ಒಂದೋ ಪಾಕಿಸ್ತಾನದ ಸೇನೆಯೇ ಅವರನ್ನು ಮುಕ್ತವಾಗಿ ಕಳುಹಿಸಬೇಕು. ಅಥವಾ ಸೇನೆಯ ಕಣ್ಣುತಪ್ಪಿಸಿ ಬರಬೇಕು. ಎರಡನೆದ್ದು ಸತ್ಯಕೆ ದೂರ. ಆದರೂ ಎರಡೂ ಸಂದರ್ಭಗಳಲ್ಲೂ ದೋಷಿ ಪಾಕಿಸ್ತಾನ ಸರಕಾರವೇ. ಯಾಕೆಂದರೆ ಪಾಕಿಸ್ತಾನ ಸರಕಾರದ ನಿಜವಾದ ‘ಸೂಪರ್ ಬಾಸ್’ ಪಾಕಿಸ್ತಾನದ ಮಿಲಿಟರಿ ಸೇನೆ. ಪಾಕಿಸ್ತಾನಕ್ಕೆ ಹೋಗಿ ಬಂದ ಮೇಲೂ ಈ ಸಂಗತಿಗಳು ನಿಮಗೆ ತಿಳಿದಿಲ್ಲವೆ? ಇದಕ್ಕೆ ನೀವು ಯಾವುದೇ ಅಧ್ಯಯನ ನಡೆಸಬೇಕಿಲ್ಲ. 1947ರಲ್ಲೇ ಪಾಕಿಸ್ತಾನ ಬುಡಕಟ್ಟು ಜನರನ್ನು ಕಾಶ್ಮೀರದೊಳಕ್ಕೆ ನುಗ್ಗಿಸಿ, ಬಂದೂಕು ನೀಡಿ ಭಯೋತ್ಪಾದಕರನ್ನಾಗಿಸಿತ್ತು, ಅದರ ಹಿಂದೆಯೇ ಸೈನ್ಯವನ್ನು ಕಳುಹಿಸಿ ಇಂದಿನ ಆಕ್ರಮಿತ ಕಾಶ್ಮೀರವನ್ನು ತನ್ನದಾಗಿಸಿಕೊಂಡಿತ್ತು. ಇಂದೂ ಕಾಶ್ಮೀರದ ಮುಗ್ಧ ಯುವಕರ ತಲೆಯಲ್ಲಿ ಧರ್ಮ, ಜಿಹಾದ್, ಪ್ರತ್ಯೇಕತೆ, ಸ್ವಾತಂತ್ರ್ಯ ಎಂಬಿತ್ಯಾದಿ ತಲೆತಿರುಗಿಸುವ ತಂತ್ರಗಳ ಮೂಲಕ ಅವರ ಕೈಯಲ್ಲಿ ಬಂದೂಕು ನೀಡಿ ಕಣಿವೆಯಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸುತ್ತಿದೆ. ಮುಂಬಯಿ ದಾಳಿ ಸೇರಿದಂತೆ ಭಾರತದಲ್ಲಿ ಇಂದಿನವರೆಗೂ ನಡೆದಿರುವ ಎಲ್ಲಾ ಭಯೋತ್ಪಾದನಾ ದಾಳಿಗಳ ಹಿಂದಿರುವುದು ಇದೇ ಪಾಕಿಸ್ತಾನ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ ನೀವೂ ಬೆಕ್ಕಿನಂತೆಯೇ ಯೋಚಿಸುತ್ತಿರುವುದು ವಿಪರ್ಯಾಸ. ಇತ್ತೀಚೆಗಷ್ಟೇ ವಿಶ್ವಸಂಸ್ಥೆ ಪಾಕಿಸ್ತಾನದಲ್ಲಿರುವ ದಾವೂದ್ ಇಬ್ರಾಹಿಂನ 6 ವಿಳಾಸಗಳನ್ನು ನಿಜವೆಂದು ದೃಢಪಡಿಸಿದೆ. ಮಿತ್ರರ್ಯಾರೂ ಮಿತ್ರರ ಶತ್ರುವಿಗೆ ರಕ್ಷಣೆ ನೀಡುವುದಿಲ್ಲ. ಚಾಣಾಕ್ಯ ಹೇಳಿರುವಂತೆ ಪಾಕಿಸ್ತಾನ ಪಾಲಿಸಿಕೊಂಡು ಬರುತ್ತಿರುವುದು “ಶತ್ರುವಿನ ಶತ್ರು ಮಿತ್ರ” ಎಂಬ ಯುದ್ಧತಂತ್ರವನ್ನು. ಭಾರತದ ಶತ್ರು ಭಯೋತ್ಪಾದನೆಯಾದರೆ ಅದು ಪಾಕಿಸ್ತಾನಕ್ಕೆ ಮಿತ್ರ. ವಿನಾಶವನ್ನು ಸಾರುವ ರಾಷ್ಟ್ರ ಸ್ವರ್ಗವಂತೂ ಆಗಿರಲಾರದು. ಅಂತಹ ಮನುಕುಲದ ಶತ್ರುವಾದ ಭಯೋತ್ಪಾದನೆಗೆ ಆಗರವಾದ ಆ ದೇಶದ ಅಬದ್ಧತೆಯ ಕುರಿತು ಹೇಳಿದ್ದ ಹೇಳಿಕೆಯನ್ನು ನಿಮ್ಮ ಕಲ್ಪನೆಯ ಮುಖೇನ ಪಾಕಿಸ್ತಾನದ ಜನರ ಮಟ್ಟಕ್ಕೆ ಇಳಿಸಿದ್ದು ನಿಮ್ಮ ಕುತ್ಸಿತ ಸಾಧನೆ.

ಭಾರತ ನಿಮ್ಮನ್ನು ಪಾಕಿಸ್ತಾನಕ್ಕೆ ಕಳುಹಿಸಿದ ತಪ್ಪಿಗೆ ನೀವು ಭಾರತವನ್ನೇ ತಪ್ಪಿತಸ್ಥರಂತೆ ಕಾಣುತ್ತಿದ್ದೀರಿ. ಶಾಂತಿ ಜಪಿಸುವ ನಿಮ್ಮ ಹೊಸ ಪಾತ್ರ ನಿಮಗೆ ಹೊಸದಿರಬಹುದು ಭಾರತಕ್ಕಲ್ಲ. ಪಾಕಿಸ್ತಾನದೊಂದಿಗೆ ಭಾರತದ ಮಾತುಕತೆ ಪ್ರಯತ್ನ ಇಂದು ನಿನ್ನೆಯದ್ದಲ್ಲ. 1965ರ ಯುದ್ಧದಲ್ಲಿ ಪಾಕಿಸ್ತಾನವನ್ನು ಮಣ್ಣುಮುಕ್ಕಿಸಿದ್ದರೂ ತಾಷ್ಕೆಂಟ್‍ನಲ್ಲಿ ನಡೆದ ಮಾತುಕತೆಯಲ್ಲಿ ಭಾರತ ಆಕ್ರಮಿಸಿಕೊಂಡಿದ್ದ ಪಾಕಿಸ್ತಾನದ ಅನೇಕ ಭಾಗಗಳನ್ನು ಉಳಿಸಿಕೊಳ್ಳದೆ ಅದಕ್ಕೆ ತನ್ನ ತಪ್ಪಿನ ಅರಿವಾಗಬಹುದೆಂದು ಆ ಪ್ರದೇಶಗಳನ್ನು ಪ್ರೀತಿಯಿಂದಲೇ ಪಾಕಿಸ್ತಾನಕ್ಕೆ ಹಿಂತಿರುಗಿಸಿತು. 1971ರ ಬಾಂಗ್ಲಾ ವಿಮೋಚನೆಯಾದಾಗ ಭಾರತದ ಕೈ ಮೇಲಿದ್ದರೂ, ಯುದ್ಧದಲ್ಲಿ ಗೆದ್ದು ಅತಿಯಾದ ನಂಬಿಕೆಯಿಂದ ಮಾತುಕತೆಯಲ್ಲಿ ಸೋತೆವು. ಆಗ ಭಾರತ ಪಾಕಿಸ್ತಾನಕ್ಕೆ ಸಮಾನ ಸ್ಥಾನಮಾನ ನೀಡಿದ್ದಲ್ಲದೆ, ಪಾಕ್ ಆಕ್ರಮಿತ ಕಾಶ್ಮೀರವನ್ನು ಪಡೆದುಕೊಳ್ಳುವ ಅವಕಾಶವಿದ್ದರೂ ಪಾಕಿಸ್ತಾನವೇ ಅದನ್ನು ಬಿಟ್ಟು ಹೋಗಬಹುದು ಎಂಬ ವಿಶ್ವಾಸ ನೀರಸವಾಗಿ ಪರಿಣಮಿಸಿತು. 1999ರ ಕಾರ್ಗಿಲ್ ಯುದ್ಧದಲ್ಲಿನ ಪಾಕ್ ದುಷ್ಕøತ್ಯಕ್ಕೆ ತಕ್ಕ ಉತ್ತರ ನೀಡಿಯೂ ಪಾಕಿಸ್ತಾನಕ್ಕೆ ಸಮಾನ ಸ್ಥಾನ ನೀಡುವ ಮೂಲಕ ಭಾರತ ತನ್ನ ಮಾತುಕತೆಯ ಬಾಗಿಲನ್ನು ಮುಚ್ಚಲಿಲ್ಲ. ಪಾಕ್ ಮೂಲದ ಮುಂಬಯಿ ದಾಳಿಕೋರರಿಗೆ ಶಿಕ್ಷೆಯಾಗದಿದ್ದರೂ ಶಾಂತಿ ಮಾತುಕತೆ ಎಂದಿಗೂ ನಿಲ್ಲಬಾರದು ಎಂಬ ಏಕೈಕ ಉದ್ದೇಶದಿಂದ, ರಾಜತಾಂತ್ರಿಕ ಮಾತುಕತೆಯಲ್ಲಿಯೇ ಎಲ್ಲದಕ್ಕೂ ಪರಿಹಾರವಿದೆ ಎಂಬ ನಂಬಿಕೆಯಿಂದಲೇ ಹೊಸ ಸರಕಾರದ ಪ್ರಧಾನಿಯವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಪಾಕ್ ಒಳಗೊಂಡಂತೆ ಎಲ್ಲಾ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಲಾಗಿತ್ತು. ಮತ್ತು ಮೈತ್ರಿ ಬೆಳೆಸಲು ಮಾತುಕತೆಯನ್ನು ಮುಂದುವರೆಸುವ ಪ್ರಯತ್ನ ಮಾಡಲಾಗಿತ್ತು. ಆಗೆಲ್ಲಾ ಪಾಕಿಸ್ತಾನ ಪ್ರತ್ಯೇಕವಾದಿಗಳ ಜೊತೆಗೆ ಸಭೆನಡೆಸಿ ಭಾರತದ ಪ್ರಯತ್ನವನ್ನು ಹಾಳುಮಾಡುತ್ತಲೇ ಬಂದಿದೆ. ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಾ, ಭಯೋತ್ಪಾದಕರನ್ನು ನಿರಂತರವಾಗಿ ನುಸುಳಿಸುತ್ತಾ ಬಂದಿದೆ. ಇದೆಲ್ಲಾ ಸಭ್ಯರು, ಯೋಗ್ಯರು ಮತ್ತು ನಿರುಪದ್ರವಿಗಳು ಮಾಡುವ ಕೆಲಸವಲ್ಲ. ಇದೆಲ್ಲವೂ ಜಾಣಕುರುಡರಿಗೆ ಎಂದಿಗೂ ಕಾಣಿಸುವುದಿಲ್ಲ.

ಭಾರತಕ್ಕೆ ಬೇಕಿರುವುದು ಶಾಂತಿ, ಸುವ್ಯವಸ್ಥೆ. 21ನೇ ಶತಮಾನ ಏಷ್ಯಾ ಖಂಡದ್ದಾಗಬೇಕಾದರೆ ಅದಕ್ಕೆ ಏಷ್ಯಾ ಖಂಡದ ಪ್ರತಿ ದೇಶವೂ ತನ್ನ ನೆರೆ ರಾಷ್ಟ್ರಗಳೊಂದಿಗೆ ಪರಸ್ಪರ ಶಾಂತಿ, ಸುವ್ಯವಸ್ಥೆ ಮತ್ತು ಸ್ನೇಹವನ್ನು ಕಾಯ್ದುಕೊಳ್ಳಬೇಕು. ಪರಸ್ಪರ ಸಹಕಾರದಲ್ಲಿಯೇ ಏಳಿಗೆ ಅಭಿವೃದ್ಧಿಯನ್ನು ಕಾಣಬೇಕು. ಈ ಸತ್ಯ ಭಾರತಕ್ಕೆ ತಿಳಿದಿದೆ. ಅದಕ್ಕೆ ತನ್ನ ವಿದೇಶಾಂಗ ನೀತಿಯನ್ನು “ನೆರೆಹೊರೆಯವರು ಮೊದಲು” ಎಂದು ಮಾರ್ಪಾಟುಪಡಿಸಿಕೊಂಡಿರುವುದು. ಪಕ್ಕದ ದೇಶಗಳು ಅಭಿವೃದ್ಧಿ ಹೊಂದಿದರೆ ವಿಶ್ವಮಟ್ಟದಲ್ಲಿ ಭಾರತ ಸಹಜವಾಗಿಯೇ ಮುನ್ನೆಲೆಗೆ ಬರುತ್ತದೆ. ಇದು ಪರಸ್ಪರ ಗೆಲುವಿನ ಒಪ್ಪಂದ. ಪಾಕಿಸ್ತಾನವೂ ಇದಕ್ಕೆ ಸಹಮತವನ್ನು ವ್ಯಕ್ತಪಡಿಸಿದರೆ ಕಾಶ್ಮೀರದಲ್ಲಿನ ಹಿಂಸೆ, ಅಶಾಂತಿ, ದಂಗೆಗಳು ಸಹಜವಾಗಿಯೇ ಕಡಿಮೆಯಾಗುತ್ತವೆ. ಮತ್ತೊಂದು ಸಂಗತಿಯನ್ನು ನೀವು ಗಮನಿಸಬೇಕು. ಭಾರತಕ್ಕೆ ಪಾಕಿಸ್ತಾನ ಅನಿವಾರ್ಯವಲ್ಲ. ಆದರೆ ಪಾಕಿಸ್ತಾನವನ್ನೂ ಜೊತೆಯಲ್ಲಿ ಕೊಂಡೊಯ್ಯಬೇಕೆಂಬ ಹಂಬಲ ಅಗಾಧವಾಗಿದೆ. ಆದರೆ ಈ ಎರಡೂ ಸಂಗಂತಿಗಳ ವಿಚಾರದಲ್ಲಿ ಪಾಕಿಸ್ತಾನದ್ದು ವ್ಯತಿರಿಕ್ತ ಧೋರಣೆ. ಅದರ ಬೆಳವಣಿಗೆಗೆ ಭಾರತ ಅನಿವಾರ್ಯ ಆದರೆ ಭಾರತವನ್ನು ವಿರೋಧಿಸುವುದನ್ನೇ ಅದು ಜಾಯಮಾನವಾಗಿಸಿಕೊಂಡಿದೆ. ಇಂತಹ ಅನೇಕಾನೇಕ ನೇರ ಮತ್ತು ಗೌಪ್ಯ ಸಂಗಂತಿಗಳನ್ನು ಗಮನದಲ್ಲಿಟ್ಟುಕೊಂಡೇ ಭಾರತ ಪಾಕಿಸ್ತಾನದೊಂದಿಗೆ ಸೂಕ್ಷ್ಮವಾಗಿ ವ್ಯವಹರಿಸುವ ಪ್ರಯತ್ನ ಮಾಡುತ್ತಿದೆ. ಚಪ್ಪಾಳೆ ಒಂದು ಕೈಯಿಂದ ಹೊಡೆಯಲು ಸಾಧ್ಯವಿಲ್ಲ. ಅದರಲ್ಲೂ ನ್ಯೆತಿಕತೆ, ಸ್ಥಿರತೆ, ಬದ್ಧತೆಯಿಲ್ಲದ ಪಾಕಿಸ್ತಾನದೊಂದಿಗೆ ವ್ಯವಹರಿಸುವುದು ನಿತ್ಯ ನೂತನವಾದ ಸಮಸ್ಯೆ. ಪ್ರತೀ ಹಂತದಲ್ಲೂ ಉದ್ಭವವಾಗುವ ಸವಾಲು.

ಒಳ್ಳೆಯವರು ಎಲ್ಲಾ ಕಡೆ ಇರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದು ಗೊತ್ತಿಲ್ಲದಷ್ಟು ದಡ್ಡರಲ್ಲ ಭಾರತೀಯರು ಹಾಗೂ ದೇಶದ ರಕ್ಷಣಾ ಸಚಿವರು. ಆದರೆ ಅವರಿಗೆ ಆ ವಿಷಯ ಗೊತ್ತಿಲ್ಲವೆಂದು ಭಾವಿಸುವುದು ಮಹಾ ಮೂರ್ಖತನ. ಯಾರು, ಯಾವುದನ್ನು ಯಾಕೆ ಹೇಳುತ್ತಾರೆ ಎಂಬುದನ್ನು ಅರಿತು ಮಾತನಾಡಬೇಕು. ಬಾಹ್ಯ ಶಕ್ತಿಗಳಿಂದ ದೇಶದ ಸುರಕ್ಷತೆ ಹೇಗೆ ಕಾಪಾಡಬೇಕು, ಪಾಕಿಸ್ತಾನದ ಯಾವ ನಡೆಗೆ ಹೇಗೆ ಉತ್ತರಿಸಬೇಕು ಎಂಬುದು ಇತಿಹಾಸ-ವರ್ತಮಾನಗಳನ್ನು ಅರಿತಿರುವ ಅವರಿಗಲ್ಲದೆ ಭಾರತ-ಪಾಕಿಸ್ತಾನದ ಎರಡು ದಿನದ ಸಾರ್ಕ್ ಯುವಜನ ಸಮ್ಮೇಳನದಲ್ಲಿ ಕುಳಿತು ಬಂದವರಿಗೆ ತಿಳಿದಿರಲು ಸಾಧ್ಯವಿಲ್ಲ. ಮೇಲಾಗಿ ಭಾರತ-ಪಾಕಿಸ್ತಾನದ ಕುರಿತಾಗಿ ನಿಮ್ಮ ಸಲಹೆಗಳಿದ್ದರೆ ಸರಕಾರಕ್ಕೇ ನೇರವಾಗಿ ನೀಡಬಹುದಿತ್ತು. ಕಾಳಜಿಯಿದ್ದರೆ ಖಂಡಿತವಾಗಿ ರಾಜತಾಂತ್ರಿವಾಗಿಯೂ ಸದೃಢವಾದ ಯಾವುದಾದರೂ ಗುಣಾತ್ಮಕ ಕೆಲಸ ಮಾಡುತ್ತಿದ್ದಿರಿ. ಆದರೆ ಅದನ್ನು ಬಿಟ್ಟು ಪಾಕಿಸ್ತಾನದ ಆತಿಥ್ಯವನ್ನು ಹೊಳಗುವ ಭರದಲ್ಲಿ ನಿಂತ ನೆಲವನ್ನೇ ಮರೆತು ಬಿಟ್ಟರೆ ಹೇಗೆ?

ಚಿತ್ರರಂಗ ಹಾಗೂ ರಾಜಕೀಯದಲ್ಲೂ ನಿಮ್ಮನ್ನು ಬೆಳೆಸಿದ ನಿಮ್ಮದೇ ಪಕ್ಷದ ಹಿರಿಯ ನಟ, ರಾಜಕಾರಣಿಯೂ ಒಳ್ಳೆಯವರೆ. ಆದರೆ ಯಾವುದೋ ಕಾರಣದಿಂದ ಉಂಟಾದ ಮನಸ್ತಾಪವನ್ನೇ ನಿಮಗಿನ್ನು ಸರಿಪಡಿಸಿಕೊಳ್ಳಲಾಗಲಿಲ್ಲ. ಏನೂ ಮಾಡದ ಮಂಗಳೂರೇ ನಿಮಗೆ ನರಕವಾಗಿ ಕಾಣುತ್ತಿದೆ. ಇನ್ನು ಇದು ಪರಸ್ಪರ ವಿರದ್ಧ ದಿಕ್ಕಿನಲ್ಲಿ ಚಲಿಸುತ್ತಿರುವ ಎರಡು ದೇಶಗಳ ನಡುವಿನ ಸಂಬಂಧ. ಮುಂದೆ ಸ್ನೇಹಕ್ಕೆ ಕೈಯೊಡ್ಡಿ ಹಿಂದಿನಿಂದ ಕತ್ತಿ ಮಸೆದರೆ ಹೇಗೆ ತಾನೆ ಸ್ನೇಹಾಭಿವೃದ್ಧಿಯಾಗಲು ಸಾಧ್ಯ. ರಕ್ಷಣಾ ಸಚಿವರು ರಾಜತಾಂತ್ರಿಕವಾಗಿ ಮತ್ತು ಸಂದರ್ಭೋಚಿತವಾಗಿ ಹೇಳಿದ್ದ ಮಾತನ್ನು ಒಪ್ಪದಿದ್ದರೆ ಪರವಾಗಿಲ್ಲ. ಅದನ್ನು ತನಗೆ ಬೇಕಾದಂತೆ ರಾಜಕೀಯಕ್ಕೆ ಬಳಸಿಕೊಳ್ಳುವುವುದಿದೆಯಲ್ಲ ಇದು ನಮ್ಮ ಭಾರತದ ರಕ್ಷಣಾ ನೀತಿಗೆ ಮಾಡುವ ಆರೋಪ. ನಿಮಗೆ ಪಾಕಿಸ್ತಾನದ ಜನರ ಬಗ್ಗೆ ಪ್ರೀತಿಯಿದ್ದರೆ ಅದಕ್ಕಾಗಿ ರಕ್ಷಣಾ ಸಚಿವರು ಸಕಾಲಿಕವಾಗಿ ಹೇಳಿದ ಹೇಳಿಕೆಯನ್ನು ಬಳಸಿಕೊಳ್ಳುವ ದರ್ದೇನಿತ್ತು? ಇದೇ ಕೆಲಸವನ್ನು ಪಾಕಿಸ್ತಾನಕ್ಕೆ ಹೋಗಿದ್ದಾಗ ಅಲ್ಲಿನ ದೇಶದ ನಡೆಯ ಬಗೆಗೆ, ಕ್ರೌರ್ಯ, ದುರ್ವರ್ತನೆಗಳ ಬಗೆಗೆ ಒಂದು ಮಾತನ್ನಾದರೂ ಆಡಿ ಬಂದಿದ್ದರೆ ಆಗ ನಿಜಕ್ಕೂ ನಿಮ್ಮನ್ನು ಭಾರತ ಏಕ ಮನಸ್ಸಿನಿಂದ ಕೊಂಡಾಡುತ್ತಿತ್ತು. ಎರಡು ದಿನ ಭಾರತ ದೇಶ, ಸಾರ್ಕ್ ರಾಯಭಾರಿ ಕಚೇರಿ ಮುತುವರ್ಜಿವಹಿಸಿ ಪಾಕಿಸ್ತಾನದಲ್ಲಿ ಏರ್ಪಡಿಸಿದ್ದ ರಾಜಾತಿತ್ಯವನ್ನು ಸ್ವೀಕರಿಸಿದ ತಕ್ಷಣ ನಿಮಗೆ ಪಾಕಿಸ್ತಾನ ಬಹು ಸುಂದರವಾಗಿ ಕಾಣತೊಡಗಿದೆ, ಅದು ಶಾಂತಿಧಾಮದಂತೆ ತೋರುತ್ತಿದೆ ಎಂದರೆ ನಿಮ್ಮ ಬಾಲಿಶತನಕ್ಕೆ ಏನನ್ನಬೇಕು? ಕಳೆದ ಕೆಲವು ದಿನಗಳಲ್ಲಿ ನೀವು ಸುದ್ಧಿ ಮಾಧ್ಯಮಗಳಿಗೆ ನೀಡುತ್ತಿರುವ ಹೇಳಿಕೆಗಳು, ಆಂಗ್ಲ ಪತ್ರಿಕೆಯೊಂದರಲ್ಲಿ ಬರೆದಿರುವ ನಿಮ್ಮ ಲೇಖನದ ಪ್ರಕಾರ ಭಾರತ-ಪಾಕಿಸ್ತಾನ ಬಾಂಧವ್ಯ ಬೆಳೆಸುವುದು ನಿಮ್ಮ ಗುರಿ ಹಾಗೂ ಈ ಪ್ರಯತ್ನದಲ್ಲಿ ನಿಮ್ಮನ್ನು ಬಲಿಪಶು ಮಾಡಲಾಗಿದೆ ಎಂಬಂತೆ ಚಿತ್ರಿಸಿಕೊಂಡಿದ್ದೀರಿ. ವಾಸ್ತವದಲ್ಲಿ ಭಾರತ-ಪಾಕಿಸ್ತಾನ ಇತಿಹಾಸದ ಬಗ್ಗೆ ನಿಮಗೇನು ಗೊತ್ತು? ಆ ಕುರಿತು ನಿಮ್ಮ ಅಧ್ಯಯನವೇನು? ರಾತ್ರೋರಾತ್ರಿ ಸ್ವಯಂಪ್ರೇರಣೆಯಿಂದ, ಸ್ವಹಿತಾಸಕ್ತಿಯಿಂದ ನಿಮ್ಮಂತೆ ಅನೇಕರು ಬಂದಿದ್ದಾರೆ. ಹೋಗಿದ್ದಾರೆ. ತಿಳುವಳಿಕೆಯಿಲ್ಲದೆ ಗುಡುಗಿಯೂ ಇದ್ದಾರೆ. ಆದರೆ ಸಮಸ್ಯೆಯ ಜಟಿಲತೆ, ಜ್ವಲಂತೆತೆ ಮಾತ್ರ ಹಾಗೆಯೇ ಮುಂದುವರೆದಿದೆ. ನೇರವಾಗಿ ಸ್ಥಳಕ್ಕೆ ತೆರಳಿ ಗಡಿ ವಿಭಜಿಸುವ ಬದಲು ಆಫ್ರಿಕಾ ಖಂಡದಲ್ಲಿ ಮಾಡಿದಂತೆ ಅಖಂಡ ಭಾರತದ ನಕ್ಷೆಯನ್ನು ಕೈಯಲ್ಲಿಟ್ಟುಕೊಂಡು ಭೌತಿಕವಾಗಿ ವಿಭಜಿಸಿದ ರ್ಯಾಡ್‍ಕ್ಲಿಫ್ ಗೆರೆಯಿಂದ ಪ್ರಾರಂಭವಾಗಿ ಮತ್ತು ಅದಕ್ಕೂ ಪೂರ್ವದಲ್ಲೇ ಪ್ರಾರಂಭವಾದ ಮಾನಸಿಕ ವಿಭಜನೆಯಿಂದ ಹಿಡಿದು ಇಂದಿನವರೆಗೂ ಅಂದರೆ ಪಾಕಿಸ್ತಾನದಿಂದ ನುಸುಳಿ ಬಂದಿದ್ದ ನಾಲ್ಕು ಉಗ್ರಗಾಮಿಗಳಿಗೆ ರಕ್ಷಣಾ ಪಡೆಗಳು ನರಕದ ಹಾದಿ ತೋರಿಸಿದ ನಂತರ ಮನೋಹರ್ ಪರಿಕ್ಕರ್ ಪಾಕಿಸ್ತಾನಕ್ಕೆ ಖಡಕ್ ಉತ್ತರ ನೀಡುವವರೆಗೂ ಸಾಗಿಕೊಂಡು ಬಂದ ಹಾದಿಯ ಬಗೆಗಿನ ಕಿಂಚಿತ್ ಅರಿವು ನಿಮಗಿದೆಯೆ?

ಮಾನವೀಯತೆಯಿರುವ ಯಾರನ್ನೂ ನರಕವೆನ್ನುವುದಿಲ್ಲ.
1. ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಮುಕ್ತ ಚಿಂತಕರು, ಬರಹಗಾರರು ಹಾಗೂ ಫತ್ವಾಗಳನ್ನು ಒಪ್ಪದವರನ್ನು ಹಾಡುಹಗಲೇ ಧರ್ಮರಕ್ಷಣೆಯ ಹೆಸರಿನಲ್ಲಿ ಕೊಲ್ಲಲಾಗುತ್ತಿದೆ. ಈ ವಿಷಯದಲ್ಲಿ ಬಾಂಗ್ಲಾದೇಶಕ್ಕೆ ಪಾಕಿಸ್ತಾನವೇ ಗುರು. ಬಾಂಗ್ಲಾದೇಶದಲ್ಲಿ ದೌರ್ಜನ್ಯ ಮೊದಲು ತಸ್ಲೀಮಾ ನಸ್ರೀನ್‍ರ ”ಲಜ್ಜಾ” ಕೃತಿಯಲ್ಲಿ ನಂತರ ಇತರ ಮಾಧ್ಯಮಗಳ ಮೂಲಕ ಅರ್ಧ ಸುದ್ದಿಗಳಾದರೂ ಇಂದು ವಿಶ್ವಕ್ಕೆ ತಿಳಿಯುತ್ತಿವೆ. ಆದರೆ ಪಾಕಿಸ್ತಾನದ ಉದಯವಾದ ಸಂದರ್ಭದಿಂದ ಇಂದಿನವರೆಗೂ ಅಲ್ಲಿ ನಡೆಯುತ್ತಿರುವ ಮನುಷ್ಯರೋದನೆಯ ಮಹಾಕಥನಗಳನ್ನು ದಾಖಲಿಸಲು ಸಾಧ್ಯವೇ? ಅಷ್ಟಕ್ಕೂ ಮುಖ್ಯವಾಹಿನಿಯಲ್ಲಿ ನಡೆಯುತ್ತಿರುವ ರಕ್ತಚರಿತ್ರೆಯೇ ಸುದ್ದಿಯಾಗಿ ಪ್ರಕಟವಾಗುವುದಿಲ್ಲ. ಇನ್ನು ಅನಕ್ಷರತೆಯ, ಧರ್ಮಾಂಧತೆ, ಉಲೇಮಾಗಳ ದಾರಿತಪ್ಪಿಸುವ ಅಧಿಕಾರ ಲೋಲುಪತೆಯಲ್ಲಿ ಭೂಗತವಾಗಿಯೇ ಭದ್ರವಾಗಿ ಆ ದೇಶವನ್ನೂ, ವಿಶ್ವವನ್ನೂ, ಮಾನವೀಯತೆಯನ್ನೂ ಅಂಧಕಾರದ ಸಮಾಧಿಯೊಳಗೆ ದಫನ್ ಮಾಡುತ್ತಿರುವ ಸಂಗತಿಗಳ ಬಗೆಗೆ ಯೋಚಿಸಲೂ ಸಾಧ್ಯವಿಲ್ಲ. ಪಾಕಿಸ್ತಾನದಲ್ಲಿ ನಡೆದ ಬಾಂಬ್‍ಸ್ಫೋಟಗಳ ಸರಾಸರಿಯನ್ನು ಲೆಕ್ಕಹಾಕಿದರೆ ಅಲ್ಲಿ ಬಾಂಬ್ ಸ್ಫೋಟ ನಡೆಯುವುದು ರಸ್ತೆಯಲ್ಲಿ ಅಪಘಾತ ನಡೆದಷ್ಟೇ ಸಹಜವೆಂಬುದು ತಿಳಿಯುತ್ತದೆ. ಪಾಕಿಸ್ತಾನ ಸರಕಾರದ ಅಧಿಕೃತ ದಾಖಲೆಗಳ ಪ್ರಕಾರ, 2003 ರಿಂದ 21 ಆಗಸ್ಟ್ 2016ರ ವರೆಗೆ ಪಾಕಿಸ್ತಾನದಲ್ಲಿ ಭಯೋತ್ಪಾದನಾ ದಾಳಿಯಲ್ಲಿ ಸತ್ತವರ ಸಂಖ್ಯೆ 60,967.. ವಿಶ್ವಸಂಸ್ಥೆಯ ದಾಖಲೆಯಂತೆ ಸಿರಿಯಾ-ಇರಾಕ್ ಬಿಟ್ಟರೆ ಪಾಕಿಸ್ತಾನದಲ್ಲಿಯೇ ಅತೀ ಹೆಚ್ಚು ಭಯೋತ್ಪಾದಕರಿರುವುದು. ಯಾವ ನೆಲ ಮನುಕುಲದ ಶತ್ರು ಭಯೋತ್ಪಾದಕರಿಗೆ ಕರ್ಮಭೂಮಿಯೋ ಈ ಲೋಕದಲ್ಲಿ ಅದೇ ನಿಜವಾದ ನರಕ.

2. ಇಂದಿಗೂ ಹಾಡುಹಗಲೇ ಅನೇಕ ಮಹಿಳೆಯರನ್ನು, ವಿಧವೆಯರನ್ನು, ಇಷ್ಟವಿಲ್ಲದಿದ್ದರೂ ಮೂರು ತಲಾಖ್‍ಗಳಿಗೆ ಬಲಿಯಾಗಿ ಜೀವಂತವಾಗಿದ್ದಾಗಲೇ ಮರಣಹಿಂಸೆಯನ್ನು ಅನುಭವಿಸುತ್ತಿರುವವರನ್ನು ನಡುರಸ್ತೆಯಲ್ಲೇ ಕಲ್ಲುಹೊಡೆದು ಸಾಯಿಸುವ, ರಸ್ತೆಯಲ್ಲೇ ಸುಟ್ಟುಹಾಕುವ ಆ ಅಮಾನುಷ ತಾಣಕ್ಕೆ ನರಕವನ್ನದೇ ಮತ್ತೇನನ್ನಬೇಕು? ಸ್ವಾತ್ ಕಣಿವೆಯ ಬಾಲಕಿಯೊಬ್ಬಳು ಮಹಿಳಾ ಶಿಕ್ಷಣಕ್ಕಾಗಿ ಧ್ವನಿಯೆತ್ತಿದ್ದಕ್ಕೆ ಸಾವಿನ ಜೋತೆಗೆ ಹೋರಾಡಬೇಕಾದ ಪರಿಸ್ಥಿತಿ ಎದುರಾಗಿ ಪಾಕಿಸ್ತಾನವನ್ನೇ ಬಿಡಬೇಕಾಗಿ ಬಂದ ನೋಬೆಲ್ ಶಾಂತಿ ಪ್ರಶಸ್ತಿ ಪಡೆದ ಮಲಾಲ ಕಥೆಯನ್ನಾದರೂ ಕೇಳಿರಬೇಕಲ್ಲ? ಮಲಾಲ ಒಂದು ಪ್ರಾತಿನಿಧಿಕ ವ್ಯಕ್ತಿ ಆದರೆ ಇಂತಹ ಅದೆಷ್ಟೋ ಪುಟ್ಟ ಮಲಾಲಗಳು ಅದಾಗಲೇ ಶಾಶ್ವತವಾಗಿ ದಮನಿಸಲ್ಪಟ್ಟಿದ್ದಾರೆ ಅಥವಾ ಇಂದಿಗೂ ತಮ್ಮೆದುರಿಗಿರುವ ಸಾವನ್ನು ಎದುರಿಸಿ ಹೋರಾಡುತ್ತಿದ್ದಾರೆ. ಈ ಎಲ್ಲಾ ಅನ್ಯಾಯ, ಹಿಂಸೆಗಳಿಗೆ ಪಾಕಿಸ್ತಾನದ ಯಾರಿಗೆ ತಾನೆ ಶಿಕ್ಷೆಯಾಗಿದೆ? ಅಲ್ಲಿನ ಮಹಿಳೆಯರ ಮೇಲೆ ನಿತ್ಯನಿರಂತರವಾಗಿ ನಡೆಯುತ್ತಿರುವ ಹಿಂಸೆ, ದೌರ್ಜನ್ಯ ಹೆಣ್ಣಾಗಿ ನಿಮಗೆ ತಿಳಿಯಲಿಲ್ಲವಲ್ಲ. ಅಥವಾ ಅವುಗಳ ಬಗ್ಗೆ ಅರಿಯುವ ಕನಿಷ್ಟ ಪ್ರಯತ್ನವನ್ನೂ ನೀವು ಮಾಡಿಲ್ಲವಲ್ಲ. ಕೊನೆಯಪಕ್ಷ ಸಮ್ಮೇಳನದಲ್ಲಿ ಪಾಲ್ಗೊಳ್ಳುವಾಗ ಪಾಕಿಸ್ತಾನದ ಶೋಷಿತ ಮಹಿಳೆಯರ ಒಂದು ಸಂಘಟನೆಯನ್ನಾದರೂ ಭೇಟಿಯಾಗುವ ಪ್ರಯತ್ನ ಮಾಡಿದ್ದೀರಾ? ಸಂಸದೆಯಾಗಿದ್ದಾಗಲೇ ನಿಮ್ಮ ಕ್ಷೇತ್ರಕ್ಕೆ ಅತಿಥಿಯಾಗಿದ್ದ ನಿಮಗೆ ಕಣ್ಣುಮುಚ್ಚಿಕೊಂಡು ಸಿಗುವ ಆತಿಥ್ಯ ಸ್ವೀಕರಿಸುವುದು ಹೊಸತೇನಲ್ಲ. ನಮ್ಮ ದೇಶ, ಪ್ರದೇಶಗಳ ಬಗ್ಗೆ ಏನೂ ತಿಳಿದಿರದ ಅತಿಥಿಗಳೇ ನಮ್ಮನ್ನಾಳುವಂತಾಗಿರುವುದು ನಮ್ಮ ದೇಶದ ದುರಂತ. ಇದು ಕಳೆದ 70 ವರ್ಷಗಳಿಂದ ನಡೆದುಕೊಂಡುಬಂದಿರುವ, ತ್ವರಿತವಾಗಿ ಕೊನೆಗೊಳ್ಳಬೇಕಿರುವ ಕೆಟ್ಟ ಪರಂಪರೆ.

3. ಅನೇಕ ಧರ್ಮಗಳಲ್ಲಿನ ನಂಬಿಕೆಯಂತೆ ನರಕದಲ್ಲಿ ಮಾಡಿದ ತಪ್ಪುಗಳಿಗನ್ವಯವಾಗಿ ಶಿಕ್ಷೆಗಳಾಗುತ್ತವೆ. ಆದರೆ ಪಾಕಿಸ್ತಾನ ಪುಣ್ಯಭೂಮಿಯೆಂದು ಹೆಸರಿಟ್ಟುಕೊಂಡು ಪಾಪಗಳನ್ನೇ ಮಾಡುತ್ತಿರುವ ನೆಲದಲ್ಲಿ ಅಲ್ಲಿನ ಪ್ರಜೆಗಳು ಅಲ್ಲಿ ಹುಟ್ಟಿದ ಕಾರಣಕ್ಕೆ ನರಕದ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಆ ದೇಶದ ಅನೇಕ ನಾಯಕರು, ಮೇಲ್ವರ್ಗದವರು ಅಷ್ಟೇ ಏಕೆ ನಿಮ್ಮಂತಹ ರಾಜಕಾರಣಿಗಳೂ ತಮ್ಮ ಮತ್ತೊಂದು ಕಾಲನ್ನೂ, ಮನೆ-ಸಂಸಾರಗಳನ್ನು ವಿದೇಶಗಳಲ್ಲಿ ನಿಭಾಯಿಸುತ್ತಿದ್ದಾರೆ. ಯಾಕೆಂದರೆ ಅವರೆಲ್ಲರಿಗೂ ಅಲ್ಲಿನ ವಸ್ತುಸ್ಥಿತಿ ಚೆನ್ನಾಗಿ ತಿಳಿದಿದೆ. ಪಾಕಿಸ್ತಾನ ಬೂದಿಮುಚ್ಚಿದ ಕೆಂಡ ಯಾವ ಕ್ಷಣದಲ್ಲಿ ಬೇಕಾದರೂ ಹೊತ್ತಿ ಉರಿಯಬಹುದು. ಹಾಗಾದಾಗ ಸುರಕ್ಷಿತರಿರಬೇಕಾದ್ದು ಅವರ ಮೊದಲ ಆದ್ಯತೆ. ಆ ದೇಶದ ಶತ್ರುಗಳು ಅಲ್ಲಿನ ಧರ್ಮಾಂಧ ಇಮಾಮ್, ಖಾಜಿ, ಉಲೇಮಾಗಳು; ಧರ್ಮದ ಹೆಸರಿನಲ್ಲಿ ಅಧಿಕಾರ, ಹಣದ ವ್ಯಾಮೋಹದಿಂದ ಪಾಕಿಸ್ತಾನವನ್ನು ಸಂಪೂರ್ಣವಾಗಿ ವಿನಾಶ ಮಾಡುವ ಕೊನೆಯ ಪ್ರಯತ್ನದಲ್ಲಿದ್ದಾರೆ.

4. ಪಾಕಿಸ್ತಾನದದಲ್ಲಿ ಇತರ ಅಲ್ಪಸಂಖ್ಯಾತ ಅನ್ಯಧರ್ಮಿಯರ ಸ್ಥಿತಿಯಂತು ವಿಶ್ವಕ್ಕೇ ತಿಳಿದಿದೆ. ಸುನ್ನಿ ಮುಸ್ಮಿಮರಿಂದ ಶಿಯಾ, ವಹಾಬಿಗಳು ಬದುಕುಳಿದರೆ ಅದೇ ವಿಸ್ಮಯ. ಅಲ್ಲಿ ಧರ್ಮಪ್ರಚಾರದಲ್ಲಿ ತೊಡಗಿಕೊಳ್ಳುವ ಕೈಸ್ತ ಪಾದ್ರಿಗಳನ್ನು ”ಬಾಸ್ಪೆಮಿ”(Blasphemy) ಹೆಸರಲ್ಲಿ ನಡು ರಸ್ತೆಯಲ್ಲಿಯೇ ಸುಟ್ಟು ಕೊಲ್ಲಲಾಗುತ್ತದೆ. ಸೇವೆ ಮಾಡಲು ವಿದೇಶಗಳಿಂದ ಬರುವ ಅನೇಕ ಸ್ವಯಂಸೇವಕರು ಇರಾಕ್-ಸಿರಿಯಾಗಳಲ್ಲಿ ಒತ್ತೆಯಾಳುಗಳಾಗಿ ಸಾಯುತ್ತಿರುವಂತೆ ಪಾಕಿಸ್ತಾನದಲ್ಲಿ ಅನೇಕ ವರ್ಷಗಳಿಂದ ಸಾಯುತ್ತಿದ್ದಾರೆ. ಭಾರತವೂ ಸೇರಿದಂತೆ ಯಾವುದೇ ವಿದೇಶಿ ರಾಯಭಾರಿ ಕಚೇರಿಗಳ ಮುಂದೆ ಹೆಚ್ಚು ಕಡಿಮೆ ನಿತ್ಯವೂ “Pakistan is a Living Hell for Hindus, Sikhs and Christians” ಎಂಬ ಫಲಕಗಳನ್ನು ಹೊತ್ತ ಅನ್ಯಧರ್ಮಿಯರು ತಮ್ಮ ಹಕ್ಕುಗಳಿಗಾಗಿ, ಧಾರ್ಮಿಕ ಸ್ವಾತಂತ್ರ್ಯವನ್ನು ಬೇಡುತ್ತಿರುವ ದೃಶ್ಯ ಧರ್ಮನಿರಪೇಕ್ಷ ದೇಶದಲ್ಲಿರುವ ನಿಮಗೆ ಕಣ್ಣಿಗೆ ಕಾಣಬೇಕಿತ್ತಲ್ಲ.

5. ವಿಶ್ವ ಆರೋಗ್ಯ ಸಂಸ್ಥೆ 2015ರಲ್ಲಿ ಭಾರತ ಪೋಲಿಯೋ ಮುಕ್ತ ದೇಶವೆಂದು ಘೋಷಿಸಿತು. ಅದನ್ನು ಪಾಕಿಸ್ತಾನಕ್ಕೂ ಸಾಧಿಸಲು ಸಾಧ್ಯವಿತ್ತು. ಆದರೆ ತಮ್ಮ ಧರ್ಮದಲ್ಲಿ ಲಸಿಕೆಗೆ ಅವಕಾಶವಿಲ್ಲ. ಇದು ಧರ್ಮವಿರೋಧಿ ಎಂದು ನಂಬಿರುವ ಕಾರಣದಿಂದಲೇ ವರ್ಷಕ್ಕೆ ಸಾವಿರಾರು ಮಕ್ಕಳು ಲಸಿಕೆ ಕಂಡುಹಿಡಿದ ದಶಕಗಳ ನಂತರವೂ ಪೋಲಿಯೋ ಎಂಬ ಮಾರಕಕ್ಕೆ ತುತ್ತಾಗಿ ಬಳಲುತ್ತಿರುವುದು. ಅಕಾಲಿಕ ಮರಣ ಹೊಂದುತ್ತಿರುವುದು. ಇದು ಯಾರ ತಪ್ಪಿಗೆ ಯಾರೋ ಅಮಾಯಕರು ಬಲಿಯಾಗುತ್ತಿರುವ ಕರಾಳ ಕಥೆಯಲ್ಲವೆ? ಯಾವ ಧರ್ಮ ಸಾಯುವವರನ್ನು ರಕ್ಷಿಸಬೇಡ ಎನ್ನುತ್ತದೆ? ಹಾಗೊಂದು ವೇಳೆ ಧರ್ಮ ಹಾಗೆ ಬೋಧಿಸುತ್ತದೆ, ಬೋಧಿಸಲಾಗುತ್ತಿದೆ ಎಂದಾದರೆ ಅಂತಹ ಧರ್ಮವಾಗಲಿ, ಧರ್ಮಬೋಧಕರನ್ನು ನಿರಾಕರಿಸಬೇಡವೆ? ಇದ್ಯಾವ ಮಾನವೀಯತೆ? ಪಾಕಿಸ್ತಾನವೇ ಇದನ್ನು ಪೋಷಿಸುತ್ತಿದೆ. ಬದುಕಿದ್ದಾಗ ಬದುಕಲು ಬಿಡದೆ ಸತ್ತ ಮೇಲೆ ಸಿಗಬಹುದಾದ ಕಾಲ್ಪನಿಕ ಸ್ವರ್ಗಕ್ಕೆ ಇರುವ ಬಾಳನ್ನು ಹಾಳುಮಾಡಿಕೊಳ್ಳುವುದೆಂದರೇನರ್ಥ. ಇದು ಕೇವಲ ಪೋಲಿಯೋ ಕಥೆಯಲ್ಲ ಡಿಪ್ಟೀರಿಯಾ, ಟೆಟನಸ್, ಟುಬ್ಯರಿಕೊಲಾಸಿಸ್, ಹೆಪಟೈಟಿಸ್ ಬಿ, ಹೆಪಟೈಟಿಸ್ ಎ ಮೊದಲಾದ ಖಾಯಿಲೆಗಳಿಗೆ ಲಸಿಕೆ ಕಂಡುಹಿಡಿಯಲಾಗಿದ್ದರೂ ಅವನ್ನು ನೀಡದೆ ರೋಗಿಗಳನ್ನು ಸಾಯಲು ಬಿಡುವ ಅಲ್ಲಿನ ಸಮಾಜ, ಸರಕಾರ, ವ್ಯವಸ್ಥೆಗೆ ಸ್ವರ್ಗವೆನ್ನಲು ಯಾವೊಬ್ಬ ಮೂರ್ಖನಿಂದಲೂ ಸಾಧ್ಯವಿಲ್ಲ. ಎಷ್ಟೆಂದರೂ ಅಮೇರಿಕಾ ಭಯೋತ್ಪಾದನೆಯನ್ನು ಕೊನೆಗೊಳಿಸಲು, ಶಕ್ತಿ ರಾಜಕೀಯವನ್ನು ಸಮಗೊಳಿಸಲು ನೀಡುತ್ತಿದ್ದ ಬಿಲಿಯನ್‍ಗಟ್ಟಲೆ ಡಾಲರ್‍ಗಳನ್ನು ಭಯೋತ್ಪಾದಕರ ಪೋಷಣೆ, ಬೆಳವಣಿಗೆ ಕಡೆಗೆ ಅಮೇರಿಕಾದ ಬದ್ಧ ವೈರಿಯಾಗಿದ್ದ ರಕ್ತಪಿಪಾಸು ಅಲ್‍ಖೈದಾ ಕಟ್ಟಿದ್ದ ಒಸಮಾ ಬಿನ್ ಲಾಡೆನ್‍ಗೇ ಅಬೋತಾಬಾದ್‍ನಲ್ಲಿ ಆಶ್ರಯನೀಡಿದ್ದ ದೇಶವದು. ಅದಕ್ಕೆ ನಿಯತ್ತೆಂಬುದು ಬಳಸಿ ಬಿಸಾಡುವ ಊಟದ ಎಲೆಯಂತೆ. ಕಿಂಚಿತ್ತು ಮಾನ, ಮರ್ಯಾದೆ, ಮನುಷ್ಯತ್ವ, ಆತ್ಮಸಾಕ್ಷಿಯೆಂಬುದಿದ್ದಿದ್ದರೆ ತಮ್ಮದೇ ದೇಶದ ಪೇಶಾವರದ ಶಾಲೆಯ 132 ಮಕ್ಕಳನ್ನು ಕೊಂದ ಭಯೋತ್ಪಾದಕರನ್ನು ಈ ಎರಡು ವರ್ಷಗಳಲ್ಲಿ ಕೊನೆಗೊಳಿಸಬೇಕಿತ್ತು. ಅದನ್ನು ಪಾಕಿಸ್ತಾನ ಮಾಡುವುದೂ ಇಲ್ಲ. ಫಾಕಿಸ್ತಾನದಿಂದ ಅದು ಸಾಧ್ಯವೂ ಇಲ್ಲ. ಭಯೋಂiÀತ್ಪಾದನೆ ಬಹುಶಃ ಪಾಕಿಸ್ತಾನದ ಜೊತೆಗೆ ಹೋಗುವ ಸೈತಾನ.

6. “Pakistan is involved in the genocide of around 100 innocent Baloch civilians every day. Women are raped, young people are abducted, their organs are sold and whole villages are burnt. Our struggle is for independence and we want Pakistan to stop genocide and quit Balochistan.” Naela Quadri Baloch, President, World Baloch Women’s Forum ಈ ಹೇಳಿಕೆಯನ್ನು ಮತ್ತೊಮ್ಮೆ ಓದಿ. ಇದನ್ನು ಹೇಳಿದ್ದು ಭಾರತವಲ್ಲ. ಅದೇ ದೇಶದ ಶೋಷಿತ ಪ್ರಜೆಗಳು. ಇರಾನ್ ಮತ್ತು ಪಾಕಿಸ್ತಾನದ ನಡುವಿನ ಬಲೂಚಿಸ್ತಾನ, ಗಿಲ್ಗಿಟ್ ಪ್ರಾಂತ್ಯದ ಹೆಸರುಗಳನ್ನು ಕೇಳಿರಬೇಕಲ್ಲ. ಅನೇಕ ದಶಕಗಳಿಂದ ಅಲ್ಲಿನ ಜನರು ಪಾಕಿಸ್ತಾನದಿಂದ ಮುಕ್ತಿಗಾಗಿ ಕಾಯುತ್ತಿದ್ದಾರೆ. ಆ ಪ್ರಾಂತ್ಯದಲ್ಲಿ ನಡೆಯುವ ಮಾನವ ಹಕ್ಕುಗಳ ಅಸೀಮಿತ ಉಲ್ಲಂಘನೆ, ನಿತ್ಯನಿರಂತರ ಶೋಷಣೆ, ಧ್ವನಿಗಳನ್ನು ದಮನಿಸುವ ಹಿಂಸೆಗೆ ಹೆದರಿ ಅಂತರಾಷ್ಟ್ರೀಯ ಪರ್ತಕರ್ತರೇ ಅಲ್ಲಿಗೆ ಹೋಗಲು ಹೆದರುತ್ತಾರೆ. ಅಂತಹ ವಿಷಮ ಸ್ಥಿತಿ ಅಲ್ಲಿನ ಹೋರಾಟಗಾರರದ್ದು. ಪ್ರಧಾನಿಯವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಮೇಲಂತೂ ಆ ಹೋರಾಟಕ್ಕೆ ವಿಶ್ವದಾದ್ಯಂತ ಬೆಂಬಲ, ಬಲ ವ್ಯಕ್ತವಾಗುತ್ತಿದೆ.

ಇನ್ನು ಭಯೋತ್ಪಾದನೆ, ಮಾನವ ಹಕ್ಕುಗಳ ಉಲ್ಲಂಘನೆ, ಮಾನವ ಕಳ್ಳಸಾಗಣೆ, ಕಳ್ಳ ನೋಟಿನ ದಂಧೆ, ಡ್ರಗ್ಸ್ ದಂಧೆ, ಮಾನವ ಅಭಿವೃದ್ಧಿ ಸೂಚ್ಯಂಕ, ಭ್ರಷ್ಟಾಚಾರ ಸೂಚ್ಯಂಕ, ಆರೋಗ್ಯ, ಶಿಕ್ಷಣದ ಗುಣಮಟ್ಟ ಸೂಚ್ಯಂಕ, ಬೆಳವಣಿಗೆಯ ಸೂಚ್ಯಂಕ… ಇತ್ಯಾದಿ, ಇತ್ಯಾದಿ ಪರಿಮಾಣಗಳಲ್ಲಿ ಪಾಕಿಸ್ತಾನದ ಸ್ಥಾನಗಳೇನು ಎಂಬುದನ್ನು ಲೇಖನವೊಂದರಲ್ಲಿ ಹಿಡಿದಿಡುವುದಕ್ಕೆ ಸಾಧ್ಯವಿಲ್ಲ. ಮೇಲೆ ಉಲ್ಲೇಖಿಸಿದ ಸಂಗಂತಿಗಳು ಕೇವಲ ಟೀಸರ್ ಅಷ್ಟೆ. ಟ್ರೇಲರ್ ಕೂಡ ಅಲ್ಲ. ಇದೇ ಇಷ್ಟು ಭಯಾನಕವಾಗಿದೆ. ಇನ್ನು ಪಾಕಿಸ್ತಾನ ಎಂಬ ಪಾರ್ಣ ಚಲನಚಿತ್ರ ಹೇಗಿರಬಹುದು? ಯಾಕೆಂದರೆ ಎಲ್ಲಾ ಕೆಡುಕುಗಳೂ ಅಲ್ಲಿವೆಯಲ್ಲ ಎಂಬಷ್ಟರ ಮಟ್ಟಿಗೆ ತನ್ನ ಹುಟ್ಟಿನ ದಿನದಿಂದಲೂ ಅದು ವಿನಾಶದ, ಅಧಃಪತನದ ಹಾದಿಯನ್ನೇ ಹಿಡಿದಿದೆ. ಈಗ ಸುದ್ದಿಯಲ್ಲಿರುವ ನಿಮ್ಮ ಹೇಳಿಕೆಗೂ ಮಹತ್ವ ಕೊಡುವ ಅಗತ್ಯವಿಲ್ಲ. ಆದರೂ ಮುಂದೊಂದು ಇದೇ ಮಾದರಿಯಾಗಿ ಇತರರು ನಿಮ್ಮನ್ನು ಪಾಲಿಸುವ ಅಡ್ಡದಾರಿಯನ್ನು ಹಿಡಿದು ಸೂತ್ರವಿಲ್ಲದ ಮಾತುಗಳನ್ನಾಡದಿರಲಿ ಎಂಬ ಕಾರಣದಿಂದ ಇವೆಲ್ಲವನ್ನು ಹೇಳಬೇಕಿದೆ.

Shreyank S Ranade
ಶ್ರೇಯಾಂಕ್ ಎಸ್. ರಾನಡೆ

”ನಾವು ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಬಹುದು ಆದರೆ ನೆರೆಯ ದೇಶದವರನ್ನಲ್ಲ.” ನಮ್ಮ ನೆರೆಯ ದೇಶ ಹೇಗೆಯೇ ಇದ್ದರೂ ಒಂದೋ ಸ್ನೇಹದಿಂದ ಮುಂದುವರೆಯಬೇಕು ಇಲ್ಲವಾದಲ್ಲಿ ಜಗಳವನ್ನೇ ಮುಂದುವರೆಸಬೇಕು. ಜಗಳದಿಂದ ಯಾರಿಗೂ ಲಾಭವಿಲ್ಲ. ಈ ಮಾತನ್ನು ಆಗ್ರಾದಲ್ಲಿ ನಡೆದ ಭಾರತ-ಪಾಕಿಸ್ತಾನ ಶೃಂಗಸಭೆಯಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಪಾಕಿಸ್ತಾನಕ್ಕೆ ಬಿಡಿಸಿ ಹೇಳಿದ್ದರು. ಆದರೂ ದಡ್ಡ ಪಾಕಿಸ್ತಾನ ಅದರಿಂದ ಯಾವುದೇ ಪಾಠವನ್ನು ಕಲಿಯಲಿಲ್ಲ. ಹಾಗೆಯೇ ಬೆನ್ನಿಗೆ ಚೂರಿ ಹಾಕುವ ತನ್ನ ಹಳೆಯ ಚಾಳಿಯನ್ನೂ ಬಿಡಲಿಲ್ಲ. ಯಾಕೆಂದರೆ ಶಾಂತಿಯುತ ಅಭಿವೃದ್ಧಿ ಅದರ ಗುರಿಯೇ ಅಲ್ಲ. ಆದರೆ ದೇಶ-ಪ್ರದೇಶಗಳ ಬೆಳವಣಿಗೆಗೆ ಶಾಶ್ವತ ಶಾಂತಿ-ಸುವ್ಯವಸ್ಥೆ ನೆಲೆಸುವುದು ಅನಿವಾರ್ಯ. ಹಾಗಾಗಿಯೇ ಭಾರತ ಈಗಲೂ ತಾಳ್ಮೆಯಿಂದ ವ್ಯವಹರಿಸುತ್ತಿರುವುದು. ಆದರೆ ಈ ಅರಿವು ಪಾಕಿಸ್ತಾನಕ್ಕೆ ಇದ್ದಂತಿಲ್ಲ. ಹಾಗಾಗಿ ತನ್ನ ನರಕಸದೃಶ್ಯ ನಡೆಗಳಿಂದ ತಾನೂ ಬೆಳೆಯದೆ, ಭಾರತಕ್ಕೂ ತೊಂದರೆಕೊಡುತ್ತಾ, ಇಡೀ ವಿಶ್ವಕ್ಕೇ ತೊಡಕಾಗಿ ಪರಿಣಮಿಸಿರುವುದು. ಭಾರತ ತನ್ನ ಸುತ್ತಲಿರುವ ದೇಶಗಳನ್ನೂ ತನ್ನೊಂದಿಗೆ ಮುಂದೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದರೆ ಪಾಕಿಸ್ತಾನ ಮಾತ್ರ ಹಿಮ್ಮಖವಾಗಿ ಚಲಿಸುತ್ತಿದೆ.

ಇಂತಹ ಪಾಕಿಸ್ತಾನದ ಬಗ್ಗೆ ಕಪೋಕಲ್ಪಿತ ತಪ್ಪುಮಾಹಿತಿಗಳನ್ನೂ, ಮೃದುಧೋರಣೆಯನ್ನು ತಾಳುವ ಪ್ರಯತ್ನದಿಂದ ಪಾಕಿಸ್ತಾನದ ಮಾಧ್ಯಮಗಳಿಗೆ ಆಪ್ತರಾಗಬಹುದೇ ಹೊರತು ಸತ್ವಶೀಲತೆಯನ್ನು ಮೆರೆಯಲು ಸಾಧ್ಯವಿಲ್ಲ. ವ್ಯಕ್ತಿಯೋರ್ವರ ಹೇಳಿಕೆಗಿಂತ ಅದರ ಹಿಂದಿನ ಮನಸ್ಥಿತಿಯ ವಿಕೃತಿ ವಿನಾಶವಾಗಬೇಕಿದೆ. ಭಾರತ ಸರಕಾರ, ಸೇನೆಗಳನ್ನು ಅರ್ಥವಿಹಿನವಾಗಿ ಟೀಕಿಸಿ ವಿರೋಧಿಸುತ್ತಿರುವ ಇಂತಹ ಅನೇಕ ಮನಸ್ಥಿತಿಗಳು ಅಳಿಯದ ಹೊರತು ದಿನಕ್ಕೊಂದು ಸುದ್ದಿಪ್ರಿಯರು ಹುಟ್ಟಿಕೊಳ್ಳುತ್ತಲೇ ಸಾಗುತ್ತಾರೆ. ಅಷ್ಟೊಂದು ಇಷ್ಟವಿದ್ದರೆ ಪಾಕಿಸ್ತಾನವನ್ನು ಅಪ್ಪಿಕೊಳ್ಳಲಿ ಆದರೆ ಅದಕ್ಕಿಂತ ಮೊದಲು ಬದುಕು ಕೊಟ್ಟ ಭಾರತದ ಘನತೆಯನ್ನೂ, ಧೋರಣೆಯನ್ನು ಎತ್ತಿ ಹಿಡಿಯುವುದನ್ನು ಕಲಿಯಿರಿ. ಪ್ರೀತಿ ನೀಡಿ ಬೆಳೆಸಿದ ಭಾರತ ದೇಶ, ಕರ್ನಾಟಕದ ಸುಂದರ ನಾಡು ಮಂಗಳೂರು ಹಾಗೂ ನಿಮ್ಮ ಸಮುದಾಯವೇ ನಿಮಗೆ ನರಕ ಎಂದಾದರೆ ನೀವು ಇಸ್ಲಾಮಾಬಾದ್‍ನಲ್ಲಿಯೇ ಸುಖವಾಗಿರಿ.

ಕೊನೆಯಲ್ಲಿ: ಅನೇಕರು ಮಾತು ಮಾತಿಗು ಕೆಲವರನ್ನು ಪಾಕಿಸ್ತಾನಕ್ಕೆ ಕಳಿಸುವ ಮಾತನ್ನಾಡುತ್ತಿರುತ್ತಾರೆ. ಆದರೆ ಇಲ್ಲೊಬ್ಬರು ತಾವೇ ಪಾಕಿಸ್ತಾನಕ್ಕೆ ತೆರಳುವ ಮಾತನಾಡುತ್ತಿದ್ದಾರೆ. ಸುಳ್ಳನ್ನು ಸತ್ಯ, ಸತ್ಯ ಎಂದು ಸಾಧಿಸುವಂತೆ, ಹೀಗೆ ಹೋಗಿ ಹಾಗೆ ಬಂದು ಎಲ್ಲವನ್ನೂ ಬಲ್ಲವರಂತೆ ಅದು ನರಕವಲ್ಲ, ನರಕವಲ್ಲ ಎಂದು ಸಾರುವ ಮೂಲಕ ತಮ್ಮ ಮನದ ಸೂಚ್ಯವಾಗಿ ಇಂಗಿಂತ ವ್ಯಕ್ತಪಡಿಸಿರುವಂತಿದೆ.

Short link: ಭಯೋತ್ಪಾದಕರ ಜನ್ಮಸ್ಥಾನ ನರಕವಲ್ಲವೆ? ನಾಕವನ್ನು ಅರಿಯದೆ ನರಕವನ್ನೇ ಹೊಗಳಿದರೆ? – http://kundapraa.com/?p=16974

ಇಲ್ಲಿ ಪ್ರಕಟಗೊಂಡಿರುವ ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿರುತ್ತದೆ.

Leave a Reply

Your email address will not be published. Required fields are marked *

14 − two =