ರಕ್ತಹೀನತೆಯಿಂದ ಬಳಲುತ್ತಿರುವ ಅಶ್ವಿತಾಗೆ ನೆರವಾಗುವಿರಾ?

ಪ್ರತೀ ತಿಂಗಳು ಎರಡು ಬಾಟಲಿ ರಕ್ತ ಕೊಡಬೇಕು : ಅಸ್ತಿಮಜ್ಜೆ ಜೋಡಣೆಯೇ ಇದಕ್ಕೆ ಪರಿಹಾರ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಬಾಲೆ ದೇಹದಲ್ಲಿ ರಕ್ತ ಉತ್ಪಾದನೆಯೇ ನಿಂತಿದೆ. ಹಾವಿನ ಪೊರೆಯಂತೆ ಮೈಚರ್ಮ ಕಿತ್ತು ಬರುತ್ತಿದೆ. ರಕ್ತ ಕೊಡದಿದ್ದರೆ ಮುಖ ಕಪ್ಪಡರಿ ಉಸಿರಾಟವೂ ಕಷ್ಟ. ಕಳೆದ ಒಂದು ವರ್ಷದಿಂದ ಇಂತಹ ಯಾತನಾದಾಯಕ ಬದುಕು ಸವೆಸುತ್ತಿದ್ದಾಳೆ ಈ ಹೆಣ್ಣು ಮಗಳು.

ಕುಂದಾಪುರ ತಾಲೂಕ್, ಹಕ್ಲಾಡಿ ಗ್ರಾಮ, ಹಕ್ಲಾಡಿ ಗುಡ್ಡೆ ನಿವಾಸಿ ಅಶ್ವಿತಾ (16) ಫ್ಯಾನ್ಕೋನಿ ಅನೇಮಿಯಾ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿ. ಎಲ್ಲರಂತೆ ಶಾಲೆಗೆ ಹೋಗಿ ಬರುತ್ತಿದ್ದ ಅಶ್ವಿತಾಗೆ ಏಕಾಏಕಿ ಜ್ವರ ಕಾಣಿಸಿಕೊಂಡು ಬರುಬರುತ್ತಾ ನಾಲ್ಕು ಹೆಜ್ಜೆ ನಡೆದರೂ ಎದುರುಸಿರು. ಅನಿವಾರ್ಯವಾಗಿ ಶಾಲೆಗೆ ವಿದಾಯ ಹೇಳಬೇಕಾಯಿತು. ತಿಂಗಳು ಸರಿಯಾಗಿ ಎರಡು ಬಾಟಲಿ ರಕ್ತ ಕೊಡಬೇಕು. ರಕ್ತ ಉತ್ಪತ್ತಿ ಮಾಡುವ ಅಸ್ತಿಮಜ್ಜೆ ಕೆಲಸ ನಿಲ್ಲಿಸಿದೆ. ಈ ಕಾಯಿಗೆ ವೈದ್ಯಲೋಕ ಇಟ್ಟ ಹೆಸರು ರಕ್ತ ಹೀನತೆ.

ಚಿಕಿತ್ಸೆಗೆ 25 ಲಕ್ಷ ಹಣ ಬೇಕು:
ಅಶ್ವಿತಾಳ ತಂದೆ ಕೃಷ್ಣ ಮೊಗವೀರ ಕೂಲಿ ಕೆಲಸಕ್ಕೆ ಹೋದರೆ, ಇನ್ನೊಂದು ಪುಟ್ಟ ಹೆಣ್ಣು ಮಗುವನ್ನು ಅಜ್ಜಿ ಜತೆ ಬಿಟ್ಟು ತಾಯಿ ಗುಲಾಬಿ ಬಂಟ್ವಾಡಿ ಗೇರು ಬೇಜ ಕಾರ್ಖಾನೆಯಲ್ಲಿ ದುಡಿಯುತ್ತಾರೆ. ಪ್ರತೀ ತಿಂಗಳು ಬಾಲೆಗೆ ರಕ್ತ ಹೊಂದಿಸಬೇಕು. ಮಣಿಪಾಲಕ್ಕೆ ಕರೆದುಕೊಂಡು ಹೋಗಿ ರಕ್ತ ಕೊಡಿಸಿ, ಕರೆತರಬೇಕು. ಮಗಳು ಚಿಕಿತ್ಸೆಗಾಗಿ ಪ್ರತೀ ತಿಂಗಳು 8 ಸಾವಿರಕ್ಕೂ ಮಿಕ್ಕ ಹಣ ಮೀಸಲಿಡಬೇಕು. ಮಗು ಸಂಪೂರ್ಣ ಗುಣ ಆಗಬೇಕಿದ್ದರೆ ಅಸ್ತಿಮಜ್ಜೆ ಜೋಡಣೆ ಮಾಡಬೇಕು. ಇದಕ್ಕೆ ಬರೋಬ್ಬರಿ 25 ಲಕ್ಷ ಹಣ ಬೇಕು. ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟವಾಗಿರುವಾಗಿ ಇಷ್ಟೊಂದು ಬಾರಿ ಮೊತ್ತ ಭರಿಸಲಾಗದೆ ತಾಯಿ ಗುಲಾಬಿ ಕಂಗಾಲಾಗಿದ್ದರೆ. ಪ್ರತೀ ತಿಂಗಳು ರಕ್ತ ಕೊಟ್ಟಾಗಲೂ ರಕ್ತ ಒಗ್ಗದೆ ಬಾಲೆ ಪಡುವ ಕಷ್ಟ ಭಗವಂತನಿಗೇ ಪ್ರೀತಿ. ಒಮ್ಮೊಮ್ಮೆ ಮೂಗು, ಬಾಯಲ್ಲಿ ಕೊಟ್ಟ ಹೊಸ ರಕ್ತ ಒಸರಿಸುವುದುಂಟು.

ಬೆಂಗಳೂರು ನಾರಾಯಣ ಹೃದಯಾಲಯದಲ್ಲೂ ಪರೀಕ್ಷೆ ಮಾಡಿದ ವೈದ್ಯರು ಅಸ್ತಿಮಜ್ಜೆ ಜೋಡಣೆ ಅನಿವಾರ್ಯ ಎಂದಿದ್ದಾರೆ. ಕಾರ್ಖಾನೆಯಲ್ಲಿ ತಾಯಿ ಕೆಲಸ ಮಾಡುತಿದ್ದು, ಇಎಸ್ಸೈ ಇದ್ದರೂ ಅವಧಿ ಆಗದ ಕಾರಣ ಚಿಕಿತ್ಸೆಗೆ ಸಹಕಾರಿ ಆಗುತ್ತಿಲ್ಲ. ಅಸ್ತಿಮಜ್ಜೆ ಜೋಡಿಸದಿದ್ದರೆ ಮಗುವಿನ ಪ್ರಾಣಕ್ಕೆ ಆಪಾಯವಿದೆ ಎಂಬುದನ್ನು ವೈದ್ಯರು ತಿಳಿಸಿದ್ದು, ತಾಯಿ ಮುಂದೆ ಏನೂ ಎಂಬ ಚಿಂತೆಗೆ ಒಳಗಾಗಿದ್ದಾರೆ. ಸಹೃದಯಿಗಳು ಸಹಕಾರ ನೀಡಿದರೆ ಬಡ ತಾಯಿಯ ಮಗು ಉಳಿಯುತ್ತದೆ. ಧನ ಸಹಾಯ ಮಾಡುವವರು ಸಿಂಡಿಕೇಟ್ ಬ್ಯಾಂಕ್, ಹೆಮ್ಮಾಡಿ ಶಾಖೆ ಅಕೌಂಟ್ ನಂ. 02682200071923 ಗೆ ಹಣ ವರ್ಗಾಯಿಸಬಹುದು.

ಅಪಾಯಕ್ಕೆ ಆಹ್ವಾನ:
ಮಗುವಿಗೆ ಕಾಡುವ ಕಾಯಿಲೆಗೆ ಫ್ಯಾನ್ಕೋನಿ ಅನೇಮಿಯ ಎಂಬ ಹೆಸರಿದ್ದು, ರಕ್ತ ಪ್ರತೀ ತಿಂಗಳು ಕೊಡ ಬೇಕಾಗುತ್ತದೆ. ಇದು ಅಷ್ಟ ಸರಳವಲ್ಲಾ. ಅಪಾಯವೂ ಉಂಟು. ಇದಕ್ಕೆ ಬೆನ್ನುಹುರಿಯಲ್ಲಿ ಬಾಲಕಿಗೆ ಹೊಂದುವ ಅಸ್ತಿಮಜ್ಜೆ ಜೋಡಣೆ ಮಾಡಬೇಕು. ಅಸ್ತಿಮಜ್ಜೆ ಜೋಡಣೆ ದುಬಾರಿಯಾದರೂ ಈ ರೋಗಕ್ಕೆ ಅದೊಂದೇ ಪರಿಹಾರ. – ಡಾ. ವಿಶ್ವೇಶ್ವರ, ವೈದ್ಯಾಧಿಕಾರಿ, ಸರ್ಜನ್ ಆಸ್ಪತ್ರೆ ಅಂಕದಕಟ್ಟೆ

ಸಿಂಡಿಕೇಟ್ ಬ್ಯಾಂಕ್ ಹೆಮ್ಮಾಡಿ ಶಾಲೆ
ಅಕೌಂಟ್ ನಂ.: 02682200071923
ಐಎಫ್‌ಎಸ್‌ಸಿ ಕೋಡ್: SYNB0000268

Leave a Reply

Your email address will not be published. Required fields are marked *

fourteen + 6 =