ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿಗೆ ಸಮೀಪದ ಖಂಬದಕೋಣೆ ಪ್ರಾಥಮಿಕ ಶಾಲೆ ಸಮೀಪದ ತೆಂಗಿನ ಮರಕ್ಕೆ ಕಟ್ಟಿದ್ದ ಗುರುಗುಂಜಿ ಹುಳುವಿನ ಗೂಡಿಗೆ ಹದ್ದು ಕುಕ್ಕಿದ ಪರಿಣಾಮ ಶಾಲಾ ವಠಾರದಲ್ಲಿ ನಿಂತಿದ್ದ ಮಕ್ಕಳಿಗೆ ಗುರುಗುಂಜಿ ಹುಳು ಕಚ್ಚಿ ಗಾಯಗೊಂಡ ಘಟನೆ ವರದಿಯಾಗಿದೆ. ಗಂಭೀರ ಗಾಯಗೊಮಡ ವಿದ್ಯಾರ್ಥಿಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳಿಗ್ಗೆ ವಿದ್ಯಾರ್ಥಿಗಳು ಶಾಲೆಯ ಆವರಣದೊಳಗಡೆ ನಿಂತಿಕೊಂಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗುರುಗುಂಜಿ ಹುಳುವಿನ ಗೂಡಿಗೆ ಹದ್ದು ಬಡಿದು ಚೆಲ್ಲಾಪಿಲ್ಲಿಯಾದ ಹುಳಗಳು ಸಮೀಪದ ಶಾಲೆಯ ಆವರಣದೊಳಗಿದ್ದ ಮಕ್ಕಳನ್ನು ಸುತ್ತುವರಿದು ಕಚ್ಚಿದೆ. ಘಟನೆ ನಡೆದ ತಕ್ಷಣ ಸಾರ್ವಜನಿಕರ ಸಹಕಾರದೊಂದಿಗೆ ಶಾಲಾ ಶಿಕ್ಷಕ ನಾಗ ದೇವಾಡಿಗ ವಿದ್ಯಾರ್ಥಿಗಳನ್ನು ಕೂಡಲೆ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಘಟನೆಯಲ್ಲಿ ವೀಕ್ಷಿತಾ(9) ಹಾಗೂ ಶಶಿಕಲಾ(13) ಎಂಬ ವಿದ್ಯಾಥಿಗಳಿಗೆ ಜಾಸ್ತಿ ಪ್ರಮಾಣದಲ್ಲಿ ಜೇನು ಕಚ್ಚಿದ್ದರಿಂದ ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಚೇತರಿಸಿಕೊಂಡಿದ್ದಾರೆ. ಉಳಿದಂತೆ ಪ್ರಜ್ವಿತಾ(7), ಸುಜನ್(8), ಆದರ್ಶ್(9), ಹರ್ಷಿತ್(10), ಅಂಜಲಿ(10) ಅಂಕುಶ್(12), ಸುಭಾಶ್(12), ಹರ್ಷ(12), ರಾಘವೇಂದ್ರ(12), ಪ್ರೀತೇಶ್(13), ಶಶಾಂಕ(13), ಮಣಿಕಂಠ(13), ಸುಶಾಂತ್(13), ಅಮೃತಾ(13), ಅನನ್ಯ(13), ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಶಾಲಾಗೆ ರಜೆ ಘೋಷಿಸಲಾಯಿತು.