ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಮರವಂತೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕ್ ಹಾಗೂ ಕಾರು ನಡುವಿನ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಖೇದಕರ ಘಟನೆ ವರದಿಯಾಗಿದೆ. ಬೈಂದೂರು ತಗ್ಗರ್ಸೆ ಮುತ್ತಯ್ಯ ಪೂಜಾರಿ ಎಂಬುವವರ ಪುತ್ರ ಪುನಿತ್ ಪೂಜಾರಿ (22) ಮೃತ ದುರ್ದೈವಿ. ಬೈಕ್ ಹಿಂಬದಿಯ ಸವಾರ ಆಕಾಶ್ ಪೂಜಾರಿ ಗಾಯಗೊಂಡಿದ್ದಾನೆ.
ಮರವಂತೆ ಬಸ್ ನಿಲ್ದಾಣ ಬಳಿ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಡಸ್ಕರ್ ಕಾರು ಹಾಗೂ ಬೈಂದೂರು ಕಡೆಗೆ ತೆರಳುತ್ತಿದ್ದ ಪಲ್ಸರ್ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಭ ನುಗ್ಗುಗುಜ್ಜಾಗಿದ್ದರೇ, ಬೈಕಿಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ. ಬೈಕ್ ಸವಾರನ ಪುನಿತ್ ಪೂಜಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದರೇ, ಹಿಂಬದಿಯ ಸವಾರ ಆಕಾಶ್ ಪೂಜಾರಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಪುನಿತ್ ಬೈಂದೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಹೊಸ ಬೈಕು ಖರೀದಿಸಿ ಮೂರು ದಿನವಷ್ಟೇ ಆಗಿತ್ತು. ಸ್ನೇಹಿತರೊಂದಿಗೆ ಕುಂದಾಪುರದಿಂದ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ನಿಖರ ಮಾಹಿತಿ ಕಲೆಹಾಕಲಾಗುತ್ತಿದೆ. ಬೈಂದೂರು ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ.