ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪ್ರ ಭಾಷಿ ಉಳ್ಸಕ್ ಬೆಳ್ಸಕ್ ಅಂದೇಳಿ ಮಾಡದ್ ಪ್ರಯತ್ನು ಖುಷಿ ಕೊಟ್ಟಿತ್. ಚಿತ್ರ ಹೌಸ್ಪುಲ್ ಪ್ರದರ್ಶನು ಕಾಣ್ತ್ಇತ್. ಜನ್ರ್ ಭಾಷಾಭಿಮಾನಕ್ಕೆ ತಲಿಬಾಗ್ತೆ. ದುಡ್ಡ್ ಮಾಡುಕ್ ಚಿತ್ರು ಮಾಡ್ಲ. ಚಟಕ್ಕಾಯಿ ಮಾಡದ್ ಚಿತ್ರಕ್ಕೆ ಜನ್ರ್ ಕೊಟ್ಟ್ ಬೆಂಬ್ಲು ಮಾತ್ರ ಬಾರಿ ದೊಡ್ಡದ್. ನಮ್ದೇನಾರೂ ತಪ್ಪ್ ಇದ್ರೇ ಹೇಳಿ ತಿದ್ದಕಂತು. ಆರೆ ದುಯ್ವಿಟ್ ಕಾಲ್ ಎಳಿಬೇಡಿ.
ಕುಂದಾಪುರದ ಶರೋನ್ ಹೋಟೆಲ್ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಖ್ಯಾತ ಸಂಗೀತ ನಿರ್ದೇಶಕ, ಬಿಲಿಂಡರ್ ಚಿತ್ರದ ನಿರ್ದೇಶಕ ರವಿ ಬಸ್ರೂರ್ ಭಾವುಕರಾಗಿ ಆಡಿದ ಮಾತುಗಳಿವು.
ಎ.22ರಂದು ಕುಂದಾಪುರದ ವಿನಾಯಕ ಹಾಗೂ ಉಡುಪಿ ಕಲ್ಪನಾ ಚಿತ್ರಮಂದಿರಗಳಲ್ಲಿ ತೆರೆಕಂಡ ಕುಂದಾಪುರ ಕನ್ನಡದ ಸಿನೆಮಾ ’ಬಿಲಿಂಡರ್’ಗೆ ಜನರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರನ್ನು ಅಭಿನಂದಿಸಿದ ಅವರು, ನಮ್ಮ ಹೊಸ ಪ್ರಯತ್ನಗಳನ್ನು ಮೆಚ್ಚಿ ಸಿನೆಮಾ ಮಂದಿರಗಳಿಗೆ ಬರುತ್ತಿರುವುದು ಸಂತೋಷ ನೀಡುತ್ತಿದೆ. ಥಿಯೇಟರ್ಗಳಿಗೆ ಪ್ರೇಕ್ಷಕರು ಬರುವುದಿಲ್ಲ ಎನ್ನುವ ಅಪವಾದದ ನಡುವೆ ನಮ್ಮ ಚಿತ್ರ ಹೌಸ್ಪುಲ್ ಪ್ರದರ್ಶನ ಕಾಣುತ್ತಿದೆ. ಇದು ನಮ್ಮ ತಂಡದ ಉತ್ಸಾಹವನ್ನ ಹೆಚ್ಚಿಸಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ದುಡ್ಡಿಗಾಗಿ ಸಿನೆಮಾ ಮಾಡಿಲ್ಲ.
ದುಡ್ಡು ಮಾಡುವುದಕ್ಕೆ ನನ್ನದೇ ಸಂಗೀತ ಕ್ಷೇತ್ರವಿದೆ. ಆದರೆ ಊರು ಹಾಗೂ ಭಾಷೆಯ ಮೇಲಿನ ಅಭಿಮಾನದಿಂದಲೇ ಇಂತಹ ಪ್ರಯತ್ನಕ್ಕೆ ಮುಂದಾಗಿದ್ದು. ನಮ್ಮ ಭಾಷೆ ಉಳಿದರೇ, ಭಾಷೆಯನ್ನು ಎಲ್ಲರೂ ಕೇಳುವಂತಾದರೇ ಅದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ. ಸಿನೆಮಾಗಳಿಗೆ ಕಮರ್ಶಿಯಲ್ ಟಚ್ ನೀಡಿರುವುದರ ಹಿಂದಿನ ಉದ್ದೇಶ ಎಲ್ಲರನ್ನು ತಲುಪುವುದಷ್ಟೇ. ಕುಂದಾಪ್ರ ಕನ್ನಡದಲ್ಲಿ ಸಿನೆಮಾ ಮಾಡಲೆಂದೇ ತನಗೆ ಬರುವ ಆದಾಯವನ್ನೆಲ್ಲಾ ಇಲ್ಲಿಯೇ ವಿನಿಯೋಗಿಸಿದ್ದೇನೆ. ಖರ್ಚು ಮಾಡಿದ ಹಣ ಮತ್ತೆ ವಾಪಾಸಾಗುವುದು ಎಂಬ ಬಗ್ಗೆ ನನಗೆ ಭರವಸೆ ಇಲ್ಲ. ಹಾಗಂತ ಸಿನೆಮಾ ಮಾಡುವುದನ್ನು ನಿಲ್ಲಿಸಲಾಗದು. ನಮ್ಮ ಭಾಷೆಗಾಗಿ ನಾವು ಕೆಲಸ ಮಾಡದೇ ಹೊದರೆ ಮತ್ಯಾರು ಮಾಡಿಯಾರು ಎಂದರು.
ಬಿಲಿಂಡರ್ 100ದಿನ ಓಡಲಿದೆ:
ಬಿಲಿಂಡರ್ ಬಿಡುಗಡೆಯಾದ ಇಲ್ಲಿಯವರೆಗೆ ನಿರಂತರವಾಗಿ ಹೌಸ್ಪುಲ್ ಆಗುತ್ತಿರುವುದನ್ನು ಗಮನಿಸಿದರೇ ಚಿತ್ರ ನೂರು ದಿನ ಯಶಸ್ವಿ ಪ್ರದರ್ಶನ ಕಾಣಲಿದೆ ಎಂಬ ಭರವಸೆಯನ್ನು ಥಿಯೇಟರ್ನವರೇ ನೀಡುತ್ತಿದ್ದಾರೆ. ಕುಂದಾಪುರ ಪ್ರೇಕ್ಷಕರು, ಭಾಷಾಭಿಮಾನಿಗಳು ಇದನ್ನು ಸುಳ್ಳು ಮಾಡುವುದಿಲ್ಲ ಎಂಬ ಭರವಸೆ ಇದೆ. ಕುಂದಾಪುರ ಸುತ್ತಮುತ್ತಲಿನವರು ಮಾತ್ರವಲ್ಲದೇ ಬೆಂಗಳೂರು, ಉತ್ತರ ಕನ್ನಡ, ಗೋವಾ ಮುಂತಾದೆಡೆ ಇರುವವರೂ ಕುತೂಹಲ ತಾಳಲಾರದೇ ಸಿನೆಮಾ ನೋಡಿ ಹೋಗುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದರೇ ನಮಗೂ ಚಿತ್ರ ಯಶಸ್ಸು ಕಾಣಲಿದೆ ಎಂಬ ಭರವಸೆ ಮೂಡಿಸಿದೆ ಎಂದರು. ಮುಂದಿನ ದಿನಗಳಲ್ಲಿ ಭಟ್ಕಳ, ತೀರ್ಥಹಳ್ಳಿ, ಸಾಗರ, ಮಂಗಳೂರು, ಹುಬ್ಬಳ್ಳಿ ಬೆಂಗಳೂರು ಮುಂತಾದೆಡೆ ಚಿತ್ರ ಬಿಡುಗಡೆಗೊಳ್ಳಲಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಪುನಿತ್ರಾಜ್ಕುಮಾರ್, ಶ್ರೀಮುರಳಿ ಸಹಕಾರ ಮರೆಯಲಾಗದು.
ಕುಂದಾಪುರ ಭಾಗಕ್ಕೆ ಸಾಕಷ್ಟು ಭಾರಿ ಭೇಟಿ ಕೊಟ್ಟ ಪುನಿತ್ ರಾಜ್ಕುಮಾರ್ ಅವರಿಗೆ, ಈ ಪ್ರದೇಶಕ್ಕೆ ಏನಾದರೂ ಮಾಡಲೇಬೇಕು ಎಂಬ ತುಡಿತವಿತ್ತು. ಅದೇ ಸಮಯಕ್ಕೆ ನಾವು ಬಿಲಿಂಡರ್ ಚಿತ್ರದ ಹಾಡನ್ನು ಹಾಡಲು ಕೇಳಿಕೊಂಡಾಗ ಸಂತೋಷದಿಂದ ಒಪ್ಪಿಕೊಂಡಿದ್ದರು. ಚಿತ್ರದ ಟೈಟಲ್ ಸಾಂಗ್ ಬಗ್ಗೆ ಶ್ರೀಮುರಳಿ ಅವರಲ್ಲಿ ಕೇಳಿಕೊಂಡಾಗ ಅವರೂ ಸಂತೋಷದಿಂದ ಒಪ್ಪಿಕೊಂಡು ಹಾಡಿದ್ದಾರೆ. ಸ್ಟಾರ್ ನಟರುಗಳು ಪ್ರದೇಶಿಕ ಚಿತ್ರವೊಂದಕ್ಕೆ ಹಾಡಿ ನಮ್ಮ ಬೆಂಬಲಕ್ಕೆ ನಿಂತದ್ದನ್ನು ಮರೆಯಲಾಗದು ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಸಾಮಾಜಿಕ ತಾಣದಲ್ಲಿ ಅಪಪ್ರಚಾರ ಬೇಸರ ತರಿಸಿದೆ:
ಕುಂದಾಪ್ರ ಕನ್ನಡದಲ್ಲಿ ನಮ್ಮ ಪ್ರಯತ್ನವನ್ನು ಮೆಚ್ಚಿ ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಆದರೆ ಇನ್ನೊಂದೆಡೆ ನಮ್ಮನ್ನು ತೇಜೋವಧೆ ಮಾಡುವ ಕೆಲಸ ಕೂಡ ನಡೆಯುತ್ತಿದೆ. ಫೇಸ್ಬುಕ್, ವಾಟ್ಸ್ಪ್ಗಳಲ್ಲಿ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಷೆ ಮಾಡುತ್ತಿರುವುದು ನಿಜಕ್ಕೂ ಬೇಸರ ತರಿಸಿದೆ. ಇದು ಮನಸ್ಸಿಗೆ ತುಂಬಾ ನೋವಾಗಿದೆ. ಊರು, ಭಾಷೆ ಎಂದು ದುಡಿಯುತ್ತಿರುವವರಿಗೆ ಪ್ರೋತ್ಸಾಹ ನೀಡದಿದ್ದರೂ ಪರವಾಗಿಲ್ಲ. ಆದರೆ ಉತ್ಸಾಹವನ್ನು ಕುಗ್ಗಿಸುವ ಕೆಲಸ ಮಾಡಬೇಡಿ. ಚಿತ್ರದಲ್ಲಿ ಕುಂದಾಪುರದ ಪ್ರತಿಭೆಗಳನ್ನು ಬಳಸಿಕೊಂಡಿಲ್ಲ ಎಂದೆಲ್ಲಾ ಹೇಳಲಾಗುತ್ತಿದೆ. ಆದರೆ ಚಿತ್ರದಲ್ಲಿ ಇರುವ ಬಹುಪಾಲು ಮಂದಿ ಕುಂದಾಪ್ಮರಿಗರೆ. ಕುಂದಾಪುರ ಭಾಷೆಯನ್ನು ಎಲ್ಲರ ಬಾಯಲ್ಲಿ ಕೇಳುವುದಷ್ಟೇ ನಮ್ಮ ಆಸೆ. ಕಮರ್ಶಿಯಲ್ ಚಿತ್ರವೆಂದು ಉಳಿದ ಚಿತ್ರಗಳಿಗೆ ಹೋಲಿಕೆ ಮಾಡಬೇಡಿ. ನಾವಿನ್ನು ಎರಡನೇ ಚಿತ್ರ ಮಾಡುತ್ತಿರುವುದಷ್ಟೇ. ಕಲಿಯುವುದು ಸಾಕಷ್ಟಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಿಲಿಂಡರ್ ಚಿತ್ರತಂಡ ಸದಸ್ಯರುಗಳು ಹಾಜರಿದ್ದರು. // ಕುಂದಾಪ್ರ ಡಾಟ್ ಕಾಂ ಸುದ್ದಿ.
ಇದನ್ನೂ ಓದಿ:
► ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾನೆ ಕುಂದಾಪುರದ ಕುವರ – http://kundapraa.com/?p=4479
► ನಮ್ ಕುಂದಗನ್ನಡದಲ್ಲೂ ಹಾಡಿರ್ ಪವರ್ಸ್ಟಾರ್ ಪುನಿತ್ ರಾಜ್ಕುಮಾರ್. ಇದ್ ಬಿಲಿಂಡರ್ ಖದರ್ – http://kundapraa.com/?p=12184
► ಎ.22ರಿಂದ ಕುಂದಾಪ್ರ ಕನ್ನಡದ ಬಹುನಿರೀಕ್ಷೆಯ ಚಿತ್ರ ’ಬಿಲಿಂಡರ್’ ತೆರೆಗೆ – http://kundapraa.com/?p=13447
► ಕುಂದಾಪುರ ಕನ್ನಡದ ಸಿನೆಮಾ ಗರ್ಗರ್ಮಂಡ್ಲ (ಸಂದರ್ಶನ)- http://kundapraa.com/?p=2383
► ವೀಡಿಯೋ ನೋಡಿ | ಬಿಲಿಂಡರ್ ಚಿತ್ರಕ್ಕೆ ಪುನಿತ್ ರಾಜಕುಮಾರ್ ಹಾಡು! – http://kundapraa.com/?p=12604
► ವೀಡಿಯೋ: ಕನ್ನಡ ಸಿನೆಮಾ ಬಿಲಿಂಡರ್ ಗೆ ನಟ ಶ್ರೀಮರಳಿ ಹಾಡು – http://kundapraa.com/?p=12920