ರಾಜಕಾರಣದಲ್ಲಿ ಸ್ಪಂದನೆ ಬಹುಮುಖ್ಯ: ಸಚಿವ ಜೆ. ಸಿ. ಮಾಧುಸ್ವಾಮಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೇಶ ನಮಗೇನು ಕೊಟ್ಟಿದೆ ಎಂದು ಕೇಳದೇ ದೇಶಕ್ಕಾಗಿ ನಾನೇನು ಮಾಡಬಲ್ಲೆ ಎಂದು ಚಿಂತಿಸುವ ಸಮಯವಿದು. ವಿಶ್ವಪಟಲದಲ್ಲಿ ಭಾರತ ಒಂದು ಶಕ್ತಿಯಾಗಬೇಕಾದರೆ ಮಾನವ ಇತಿಹಾಸದ ಅವಿಭಾಜ್ಯ ಅಂಗವಾಗಿರುವ ಮತ್ತು ಅಸಹಜತೆ ದೂರ ಮಾಡುವ ಸುಧಾರಣೆ ಹಾಗೂ ಬದಲಾವಣೆಗಳು ಆಗಬೇಕು. ಇದಕ್ಕಾಗಿ ಕಲಿಯುಗದ ದೊಡ್ಡ ಶಕ್ತಿಯಾಗಿರುವ ನಮ್ಮ ಸಂಘಟನೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ. ಸಿ. ಮಾಧುಸ್ವಾಮಿ ಹೇಳಿದರು.

ಉಪ್ಪುಂದ ಮಡಿಕಲ್ ಕಡಲ ತೀರದಲ್ಲಿ ಮಂಗಳವಾರ ಸಾಯಂಕಾಲ ಬಿಜೆಪಿ ಬೈಂದೂರು ಮಂಡಲ ಆಯೋಜಿಸಿದ ಕುಟುಂಬ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೆಲವು ಚುನಾಯಿತ ಪ್ರತಿನಿಧಿಗಳು ಒಮ್ಮೆ ಚುನಾವಣೆಯಲ್ಲಿ ಗೆದ್ದ ನಂತರ ಮುಂದಿನ ಚುನಾವಣೆ ವರೆಗೆ ತಾವು ಯಾರಿಗೂ ಜವಾಬ್ದಾರರಲ್ಲ ಎಂದು ಭಾವಿಸುತ್ತಾರೆ. ಕ್ಷೇತ್ರದ ಮತದಾರರಿಗೆ ಚುನಾಯಿತ ಪ್ರತಿನಿಧಿಗಳಿಂದ ವಯಕ್ತಿಕ ಅಪೇಕ್ಷೆಗಳು ಇರುವುದಿಲ್ಲ. ಜನರ, ಸಮಾಜದ ಅಭಿವೃದ್ಧಿ ಕಾರ್ಯ ಮಾಡಲಿ ಎನ್ನುವ ಅಭಿಲಾಷೆ ಇರುತ್ತದೆ. ಈ ನೆಲೆಯಲ್ಲಿ ಜನಪ್ರತಿನಿಧಿಗಳು ಸಾಮಾನ್ಯ ಜನತೆಯೊಂದಿಗೆ ಬೆರೆಯುವುದು, ಅವರ ನೋವು ನಲಿವಿನಲ್ಲಿ ಭಾಗಿಯಾಗುವ ಮೂಲಕ ಸರಳವಾಗಿ ಜನರ ಮಧ್ಯೆ ಹೋಗುವುದರಿಂದ ಜನಮನ್ನಣೆ ಗಳಿಸಲು ಸಾದ್ಯ

ದೇಶಕ್ಕೆ ಒಳಿತಾಗುವ ದೃಷ್ಠಿಯಿಂದ ಸ್ವಯಾರ್ಜಿತ ಸಂಪತ್ತಿನಲ್ಲಿ ಬಹು ದೊಡ್ಡ ಪಾಲನ್ನು ಶಿಕ್ಷಣ, ಸಮಾಜ ಕಲ್ಯಾಣಕ್ಕಾಗಿ ವ್ಯಯಿಸುವ ಅನೇಕರೂ ಇಲ್ಲಿದ್ದಾರೆ. ಆದರೆ ಅದರಲ್ಲಿ ಕೆಲವರು ಎಲೆ ಮರೆಯ ಕಾಯಿಯಂತೆ ಸೇವೆಯಲ್ಲೆ ಪರಮಾನಂದ ಕಾಣುತ್ತಿದ್ದಾರೆ. ಸಮಾಜದ ಮೇಲೆ ನಮ್ಮೆಲ್ಲರ ಋಣವಿದೆ. ಇದನ್ನು ಕಿಂಚಿತ್ತಾದರೂ ತೀರಿಸುವ ಉದ್ದೇಶವಿದ್ದರೆ ಖಂಡಿತವಾಗಿಯೂ ನಮ್ಮ ಸಮಾಜ ಸುಖ, ಸಮೃದ್ಧಿ ಹೊಂದಬಲ್ಲದು. ಸ್ವಾರ್ಥಕ್ಕಾಗಿ ಜೀವನ ಪೂರ್ತಿ ಯೋಚಿಸಿ ದುಡಿಯುತ್ತೇವೆ. ಕೆಲವೊಮ್ಮೆ ಸಮಾಜಕ್ಕಾಗಿ ಇತರರ ಸಂತೋಷಕ್ಕಾಗಿ ಕೆಲಸ ಮಾಡಿದರೆ ಅದರಲ್ಲಿಯೂ ಆನಂದ ಪಡಬಹುದಾಗಿದೆ. ಜೀವನದ ವಿಶೇಷ ಸಂದರ್ಭವನ್ನು ನಮ್ಮ ಧಾರ್ಮಿಕ, ಸಾಂಸ್ಕೃತಿಕ ಚೌಕಟ್ಟಿನಲ್ಲಿ ಆಚರಿಸಿ ಸಂಭ್ರಮಿಸಬೇಕು. ದುಬಾರಿ ಖರ್ಚು, ವಿದೇಶಿ ಅನುಕರಣೆ, ಅಡಂಬರ ತೊರೆದು ಎಲ್ಲವನ್ನೂ ಹಿತ-ಮಿತವಾಗಿ ಆಚರಿಸಲು ಪ್ರತಿಯೊಬ್ಬರೂ ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದರು.

ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಬಿಜೆಪಿ ಹಿರಿಯ ಕಾರ್ಯಕರ್ತರನ್ನು ಸಂಸದ ಬಿ. ವೈ. ರಾಘವೇಂದ್ರ ಸನ್ಮಾನಿಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಸದಸ್ಯರಾದ ಕೆ. ಬಾಬು ಶೆಟ್ಟಿ, ಸುರೇಶ ಬಟ್ವಾಡಿ, ಶಂಕರ ಪೂಜಾರಿ, ತಾಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ತಾಪಂ ಸದಸ್ಯರು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

1 + 18 =