ಕರಾವಳಿಯಲ್ಲಿ ಓಟಿಗಾಗಿ ಬಿಜೆಪಿ ಧರ್ಮ ರಾಜಕೀಯ ಮಾಡುತ್ತಿದೆ: ಸಿಎಂ ಕುಮಾರಸ್ವಾಮಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮತಗಳಿಸುವ ಒಂದೇ ಕಾರಣಕ್ಕೆ ಭಾವನಾತ್ಮಕ ವಿಚಾರವನ್ನಿಟ್ಟುಕೊಂಡು, ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡದೆ ಅಶಾಂತಿ ಎಬ್ಬಿಸುವ ಕೆಲಸವನ್ನು ಬಿಜೆಪಿ ಪಕ್ಷ ಮಾಡುತ್ತಿದೆ. ಸಮಾಜದಲ್ಲಿ ಅಶಾಂತಿ ಉಂಟುಮಾಡುವವರ ವಿರುದ್ಧ ಧ್ವನಿ ಎತ್ತಬೇಕಾದ ಕರ್ತವ್ಯ ಸರಕಾರ ಮಾತ್ರವಲ್ಲದೇ ಜನಸಾಮಾನ್ಯರದ್ದೂ ಆಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಪರವಾಗಿ ತ್ರಾಸಿ ಕೊಂಕಣ ಖಾರ್ವಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಕರಾವಳಿಯಲ್ಲಿ ಹಿಂದುತ್ವದ ಹೆಸರಿನಲ್ಲಿ ಸಂಘರ್ಷ ಮಾಡಿ ಜನಸಾಮಾನ್ಯರನ್ನು ಕಷ್ಟಕ್ಕೆ ಸಿಲುಕಿಸುವವರಿಗೆ ಬೆಂಬಲ ನೀಡಬೇಡಿ. ಎಲ್ಲರೂ ಧರ್ಮ ಪಾಲಿಸಬೇಕಾದ್ದೇ ಆ ವಿಚಾರದಲ್ಲಿ ನಾವೇನು ಕಡಿಮೆಯಿಲ್ಲ. ಅಭಿವೃದ್ಧಿಗಾಗಿ ಸರಕಾರ, ಪಕ್ಷದದ ವಿರುದ್ಧ ಧ್ವನಿ ಎತ್ತಿ ಆದರೆ ಧರ್ಮ ವಿಚಾರದಲ್ಲಿ ಹೊಡೆದಾಡಿಹೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

ರಾಜ್ಯದಲ್ಲಿ ಮೈತ್ರಿ ಸರಕಾರವನ್ನು ಎರಡೂ ಪಕ್ಷಗಳ ನಾಯಕರ ಸಹಮತದೊಂದಿಗೆ ರಚಿಸಲಾಗಿದೆ. ಸರಕಾರ ಬೀಳುತ್ತೆ ಅಂತ ಬಿಜೆಪಿ ನಾಯಕರು ಕನಸು ಕಾಣುತ್ತಿದ್ದಾರೆ. ನಾನು ಮನೆಗೆ ಹೋಗುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ಮೈತ್ರಿ ಸರಕಾರ ಸುಭದ್ರವಾಗಿದೆ. ನಾನು ಮನೆಗೆ ಹೋಗದೆ ಜನರ ಮನೆಗೆ ಹೋಗಿ ಸಮಸ್ಯೆ ಆಲಿಸಿ ಬಗೆಹರಿಸುವ ಕೆಲಸ ಮಾಡುತ್ತೇನೆ ಎಂದರು.

ಕಳೆದ ನಲ್ಕೂವರೆ ವರ್ಷದಿಂದ ಈ ಭಾಗದ ಸಂಸದರು ಬೈಂದೂರು ಜನರ ಸಮಸ್ಯೆಗೆ ಸ್ಪಂದಿಸಿಲ್ಲ. ಕೇಂದ್ರದಿಂದ ಈ ಭಾಗಕ್ಕೆ ಯಾವ ಯೋಜನೆಯನ್ನು ತಂದಿಲ್ಲ ಎಂದ ಅವರು ರಾಜ್ಯದ ಮೈತ್ರಿ ಸರಕಾರ ರಾಜ್ಯದ ಖಜಾನೆಯಲ್ಲಿ ಜನರ ಹಣವಿದೆ. ಅಭಿವೃದ್ಧಿ ಮಾಡಲು ತೊಂದರೆ ಇಲ್ಲ. ನಿಮ್ಮ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ. ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಆರಿಸಿದ ಬಳಿಕ ನಾಲ್ಕೂವರೆ ತಿಂಗಳಿನಲ್ಲಿ ಜನರ ಕಷ್ಟಗಳಿಗೆ ಸರಕಾರ ಸ್ಪಂದಿಸದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಮುಂದೆ ಓಟು ಕೇಳಲು ಬರುವುದಿಲ್ಲ ಎಂದರು.

ಮೀನುಗಾರರ ಸೀಮೆಎಣ್ಣೆ ಸಮಸ್ಯೆ, ಬೋಟ್ ತಯಾರಿಗೆ ಅಗತ್ಯ ನೆರವು, ಮೀನುಗಾರ ಕುಟುಂಬಗಳಿಗೆ ಬೇಕಾಗಿರುವ ಯೋಜನೆ, ಮೀನುಗಾರರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸರಕಾರದಿಂದ ಬೇಕಾಗಿರುವ ಸೌಲಭ್ಯ ಮೊದಲಾದ ಸಮಸ್ಯೆಗಳಿಗೆ ಪರಿಹಾರ ಹಾಗೂ ಸಲಹೆಗಳ ಅನುಷ್ಠಾನಕ್ಕೆ ಬದ್ಧನಾಗಿದ್ದೇನೆ ಎಂದರು.

ರಾಜ್ಯದಲ್ಲಿ ಮರಳು ದಂದೆ ಆರಂಭವಾಗಲು ಬಿಜೆಪಿಯೇ ಕಾರಣ. ಕೇಂದ್ರ ಪರಿಸರ ಇಲಾಖೆಯ ನೀತಿಯಿಂದಾಗಿ ಮರಳು ಬಡವರಿಗೆ ದೊರೆಯಲು ವಿಳಂಬವಾಗುತ್ತಿದೆ. ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುವವರಿಗೆ ಈಗಲೂ ಅನುಮತಿ ನೀಡಲು ಜಿಲ್ಲಾಡಳಿತ ಸಿದ್ಧವಿದೆ. ಆದರೆ ಲೈನನ್ಸ್ ಪಡೆದ ಎಲ್ಲರಿಗೂ ಮರಳುಗಾರಿಕೆ ನಡೆಸಲು ಅನುಮತಿ ನೀಡಬೇಕೆಂಬ ಒತ್ತಾಯದ ಹಿನ್ನೆಲೆಯಲ್ಲಿ ಅನುಮತಿ ದೊರಕಿಸಿಕೊಡುವುದು ವಿಳಂಬವಾಗುತ್ತಿದೆ ಎಂದರು.

ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಉತ್ತರಕನ್ನಡ ಜಿಲ್ಲೆಯಲ್ಲಿ ಮೃತರಾದ ಪರೇಶ್ ಮೇಸ್ತನ ವಿಚಾರವನ್ನು ಇಟ್ಟುಕೊಂಡು ಚುನಾವಣಾ ರಾಜಕೀಯ ಮಾಡಿರುವ ಬಿಜೆಪಿ ಇಂದು ಆತನ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ. ರಾಜ್ಯ ಸರಕಾರ ಸಿಬಿಐ ತನಿಕೆಗೆ ನೀಡಿ ಎಂಟು ತಿಂಗಳಾದರೂ ತನಿಕೆ ಆರಂಭಗೊಂಡಿಲ್ಲ. ತನಿಕೆ ಆರಂಭಿಸದೇ ಇದ್ದಲ್ಲಿ ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮಂದುವರಿದು ಮಾತನಾಡಿದ ಅವರು ಮೀನುಗಾರ ಸಮುದಾಯಕ್ಕೆ ನ್ಯಾಯ ಒದಗಿಸುವ ಉದ್ದೇಶದಿಂದ ಶಾಸಕನಾಗಿದ್ದ ಸಂದರ್ಭ ಹತ್ತಾರು ಭಾರಿ ಬೆಂಗಳೂರು, ಡೆಲ್ಲಿಗೆ ನಿಯೋಗದೊಂದಿಗೆ ತೆರಳಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿದ್ದೇನೆ. ನಾಡದೋಣಿಗೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಿಯಮಿತವಾಗಿ ಸೀಮೆಎಣ್ಣೆ ಒದಗಿಸಲಾಗಿತ್ತು. ಈಗಲೂ ಸೀಮೆಎಣ್ಣೆ ದೊರಕಿಸಿಕೊಡಲು ಮೀನುಗಾರಿಕಾ ಸಚಿವರೊಂದಿಗೆ ಚರ್ಚಿಸಿ ಮತ್ತೆ ರಾಜ್ಯಸರಕಾರದಿಂದ ದೊರೆಯುವಂತೆಯೂ ಮಾಡಲಾಗಿದೆ. ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಿ ಕಾಂಗ್ರೆಸ್ ಜೆಡಿಎಸ್‌ಗೆ ಶಕ್ತಿ ತುಂಬುವ ಕೆಲಸ ಮಾಡುವಂತೆ ಕೋರಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ, ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ, ಎಂಎಲ್‌ಸಿ ಭೋಜೆಗೌಡ, ಮಾಜಿ ಸಚಿವರುಗಳಾದ ರಮಾನಾಥ ರೈ, ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಕಾಂಗ್ರೆಸ್ ಮುಖಂಡ ಜಿ.ಎ. ಗಫೂರ್ ಕಾರ್ಯಕ್ರಮ ನಿರೂಪಿಸಿದರು.

 

Leave a Reply

Your email address will not be published. Required fields are marked *

eighteen − 10 =