ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಬಡಾಕೆರೆ ರೈಲ್ವೆ ಸೇತುವೆ ಮೇಲೆ ಮಂಗಳವಾರ ನಸುಕಿನ ಸಮಯ ಅಪರೂಪದ ಕರಿ ಚಿರತೆಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಅಸುನೀಗಿದೆ.
3 ರಿಂದ 4 ವರ್ಷದ ಗಂಡು ಕರಿ ಚಿರತೆ ಮೃತಪಟ್ಟಿದ್ದು, ಆಹಾರ ಅರಸಿ ನಾಡಿಗೆ ಬಂದಿದ್ದು ರೈಲು ಸೇತುವೆ ಮೇಲೆ ಸಿಕ್ಕಿಕೊಂಡಿದ್ದರಿಂದ ತಪ್ಪಿಸಿಕೊಳ್ಳಲಾಗಿದೆ ಮೃತಪಟ್ಟಿದೆ. ಸ್ಥಳೀಯರು ರೈಲ್ವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ರೈಲ್ವೆ ಅಧಿಕಾರಿಗಳು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿರತೆ ಮೃತದೇಹ ವಶಕ್ಕೆ ಪಡೆದು ವಂಡ್ಸೆ ವಲಯ ಅರಣ್ಯ ಇಲಾಖೆಗೆ ಸಾಗಿಸಿದ್ದಾರೆ.
ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದರು.
ಕರಿ ಚಿರತೆ ನಮ್ಮಲ್ಲಿ ಶೇ.10ರಷ್ಟಿದ್ದು, ಜನರ ಕಣ್ಣಿಗೆ ಕಾಣಸಿಗುವುದು ತುಂಬಾ ಅಪರೂಪ. ಬಡಾಕೆರೆ ಹೊಳೆ ದಾಟಲು ಚಿರತೆ ಲೈಲ್ವೆ ಸೇತುವೆ ಮಾರ್ಗ ಬಳಸಿಕೊಳ್ಳುತ್ತಿದ್ದು, ರೈಲು ಬರುವ ಸಮಯ ಸೇತುವೆ ಮೇಲಿದ್ದರಿಂದ ತಪ್ಪಿಸಿಕೊಳ್ಳಲಾಗದೆ ರೈಲು ಡಿಕ್ಕಿಯಾಗಿ ಅಸುನೀಗದೆ. ವನ್ಯಜೀವ ನಿಯಮದ ಪ್ರಕಾರ ವಂಡ್ಸೆ ವಲಯ ಅರಣ್ಯ ಇಲಾಖೆಗೆ ತಂದು ಅಂತಿಮ ಸಂಸ್ಕಾರ ಮಾಡಲಾಗುತ್ತದೆ ಎಂದು ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಪ್ರತಿಕ್ರಿಯಿಸಿದರು.
ಸ್ಥಳೀಯರಾದ ರಾಮ, ನಾಗರಾಜ್, ಸಂತೋಷ್, ಗುರುಪ್ರಸಾದ್, ಹರೀಶ್, ಮಂಜುನಾಥ್ ಇದ್ದರು.