ಸಂಘಟನಾತ್ಮಕ ಕಾರ್ಯದಿಂದ ಪಕ್ಷ ಸದೃಢ: ಶ್ರೀನಿವಾಸ ಪೂಜಾರಿ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಾರತೀಯ ಜನತಾ ಪಕ್ಷವನ್ನು ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ತರುವ ಮಹತ್ತರವಾದ ಜವಾಬ್ದಾರಿ ಬಿಜೆಪಿಯ ಕಾರ್ಯಕರ್ತರಿಗಿದ್ದು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಿದೆ. ಬಿಜೆಪಿಯ ವಿವಿಧ ಮೋರ್ಚಾಗಳು ಸಂಘಟನಾತ್ಮವಾಗಿ ಕಾರ್ಯನಿರ್ವಹಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ನಾಗೂರು ಮಹಾಲಸಾ ಕಲ್ಚರಲ್ ಹಾಲ್ನಲ್ಲಿ ನಡೆದ ಬೈಂದೂರು ಕ್ಷೇತ್ರ ಬಿಜೆಪಿ ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾಗಳ ಪದಗ್ರಹಣ ಸಮಾರಂಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಬಡವರು ಹಾಗೂ ದುರ್ಬಲ ವರ್ಗದವರನ್ನು ಮರೆತಿದೆ. ಕುಂದಾಪುರ ತಾಲೂಕಿನಲ್ಲಿ 2,000ಕ್ಕೂ ಹೆಚ್ಚು ಮಂದಿ ಹಕ್ಕುಪತ್ರಕ್ಕಾಗಿ ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಸರಣಿ ರೈತರ ಆತ್ಮಹತ್ಯೆಗಳು ನಡೆದಿವೆ. ಕಾವೇರಿ ನೀರಿನ ವಿಷಯದಲ್ಲಿಯೂ ರಾಜಕೀಯ ಮಾಡಿದೆ ಎಂದ ಅವರು ಜನಪರ ಕಾಳಜಿಯ ಕಾರ್ಯಗಳಬೇಕಾದರೆ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕಿದೆ ಎಂದರು.
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ.ಎಂ. ಸುಕುಮಾರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತಿ ಬೂತ್ ಮಟ್ಟದಲ್ಲಿಯೂ ಬಿಜೆಪಿಯ ಕಾರ್ಯಕರ್ತರು ಸಂಘಟಿತ ಹೋರಾಟ ನಡೆಸಬೇಕಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವಂತೆ ಕಾಯೋನ್ಮಕವಾಗಬೇಕಿದೆ ಎಂದ ಅವರು ಬೈಂದೂರು ಬಿಜೆಪಿ ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ಅಧ್ಯಕ್ಷರುಗಳು ಆರಂಭದಿಂದಲೇ ಹುರುಪಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಇದು ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷದ ಯಶಸ್ಸಿಗೆ ಕಾರಣವಾಗಲಿ ಎಂದರು.
ಬಿಜೆಪಿ ಯುವಮೋರ್ಚಾದ ನೂತನ ಅಧ್ಯಕ್ಷ ಶರತಕುಮಾರ್ ಶೆಟ್ಟಿ ಅವರಿಗೆ ನಿಕಟಪೂರ್ವಾಧ್ಯಕ್ಷ ರಾಘವೇಂದ್ರ ನೆಂಪು ಅಧಿಕಾರ ಹಸ್ತಾಂತರಿಸಿದರು. ಬಿಜೆಪಿ ಮಹಿಳಾ ಮೋರ್ಚಾದ ನೂತನ ಅಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರು ಅವರಿಗೆ ನಿಕಟಪೂರ್ವಾಧ್ಯಕ್ಷೆ ನಯನಾ ಶ್ಯಾನುಭೋಗ್ ಅಧಿಕಾರ ಹಸ್ತಾಂತರಿಸಿದರು. ಶಕ್ತಿಕೇಂದ್ರ ಅಧ್ಯಕ್ಷರು, ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ, ಜಿಪಂ ಸದಸ್ಯರುಗಳಾದ ಶಂಕರ ಪೂಜಾರಿ, ಸುರೇಶ್ ಬಟ್ವಾಡಿ, ಬಾಬು ಹೆಗ್ಡೆ, ಗೀತಾಂಜಲಿ ಸುವರ್ಣ, ಬಿಜೆಪಿ ಬೈಂದೂರು ಯುವ ಮೋರ್ಚಾದ ಪ್ರಬಾರಿ ಸುರೇಶ್ ಶೆಟ್ಟಿ, ಯುವ ಮೊರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶ್ ಪೂಜಾರಿ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ನಯನಾ ಗಣೇಶ್, ಪ್ರಧಾನ ಕಾರ್ಯದರ್ಶಿ ವೀಣಾ, ಬೈಂದೂರು ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಕಾರ್ಯದರ್ಶಿ ದೀಪಕ್ಕುಮಾರ್ ಶೆಟ್ಟಿ, ಬೈಂದೂರು ಮಹಿಳಾ ಮೋರ್ಚಾದ ಕಾರ್ಯದರ್ಶಿ ಸಂಧ್ಯಾ ಭಾಸ್ಕರ್ ಪುತ್ರನ್, ಯುವ ಮೋರ್ಚಾದ ಕಾರ್ಯದರ್ಶಿ ಹರೀಶ್ ತೋಳಾರ್, ಬಿಜೆಪಿ ಮುಂದಾಳುಗಳಾದ ವೀರಭದ್ರ ಶೆಟ್ಟಿ ಮುಂತಾದವರು ವೇದಿಕೆಯಲ್ಲಿದ್ದರು.
ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ ಪ್ರಸ್ತಾವಿಕ ಮಾತುಗಳನ್ನಡಿದರು. ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರು ಸ್ವಾಗತಿಸಿದರು. ಉಪನ್ಯಾಸಕ ದಿವ್ಯಾಧರ ಶೆಟ್ಟಿ ಕೆರಾಡಿ ನಿರೂಪಿಸಿದರು.