ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಬಡಕೆರೆ, ಕೋಣ್ಕಿ, ಚಿಕ್ಕಳ್ಳಿ, ನಾವುಂದ ಭಾಗದ ನೆರೆ ಪೀಡಿತ ಪ್ರದೇಶಗಳಿಗೆ ಬೈಂದೂರು ಶಾಸಕರಾದ ಬಿ. ಎಮ್. ಸುಕುಮಾರ ಶೆಟ್ಟಿ ಅವರು ಸೋಮವಾರ ಭೇಟಿ ನೀಡಿದರು.
ಈ ಸಂದರ್ಭ ಜನರ ಸಮಸ್ಯೆ ಆಲಿಸಿದ ಬಳಿಕ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ನೆರೆ ಬಂದ ಸಂದರ್ಭದಲ್ಲಿ ನಾಡ, ನಾವುಂದ ಗ್ರಾಮಗಳಿಗೆ ನೆರವಾಗುವ ಸ್ಥಳದಲ್ಲಿ ಪುನರ್ವಸತಿ ಕೇಂದ್ರ ಮತ್ತು ಜಾನುವಾರು ಕೊಟ್ಟಿಗೆ ಮಾಡಿ ಅಲ್ಲಿಗೆ ಸ್ಥಳಾಂತರಗೊಳಿಸಿ ಅವರಿಗೆ ಸೂಕ್ತ ಸ್ಥಳಾವಕಾಶ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ನಾವುಂದ ಗ್ರಾಮದ ಸಾಲ್ಬುಡದಲ್ಲಿ ನೆರೆಯಿಂದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳಲು ದೋಣಿಯ ಅವಶ್ಯಕತೆಯಿದ್ದು ಅದನ್ನು ಕೂಡಲೇ ವ್ಯವಸ್ಥೆ ಮಾಡುವಂತೆ ಸ್ಥಳೀಯ ತಹಶೀಲ್ದಾರ್ ಅವರಿಗೆ ಸೂಚಿಸಿದರು.
ಕಳೆದ ಬಾರಿ ದೋಣಿ ನಾವಿಕರಿಗೆ ಸಂಭಾವನೆ ನೀಡಿಲ್ಲ ಎನ್ನುವ ಸ್ಥಳೀಯರ ದೂರಿಗೆ ಈ ಬಾರಿ ಅದನ್ನು ಕೂಡಲೇ ವ್ಯವಸ್ಥೆ ಮಾಡಬೇಕು. ಅಲ್ಲದೇ ಸ್ಥಳೀಯರ ಸಮಸ್ಯೆಗಳನ್ನು ನಮ್ಮ ಗಮನಕ್ಕೆ, ಇಲ್ಲಿಯ ಪಂಚಾಯತ್ ಅಧಿಕಾರಿಗಳು ಗಮನಕ್ಕೆ ತಂದರೆ, ಸರಕಾರದ ಗಮನ ಸೆಳೆದು ಪರಿಹರಿಸಲಾಗುವುದು. ಪ್ರತಿ ಬಾರಿ ಮಳೆಗೂ ತೊಂದರೆ ಅನುಭವಿಸುವ ಸ್ಥಳದ ಪಟ್ಟಿ ಮಾಡಿ, ಪ್ರತಿ ಬಾರಿ ನಾವು ಭೇಟಿ ಮಾಡುವ ಬದಲು ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಸೂಕ್ತ ನೆಲೆಯಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು. ಕೃಷಿ ಭೂಮಿ ನಾಶ ಆಗಿರುವುದರ ಬಗ್ಗೆ ಸರಿಯಾದ ಮಾಹಿತಿ ತಿಳಿದು ಕೃಷಿಕರಿಗೆ ಸೂಕ್ತ ಪರಿಹಾರವನ್ನು ಅವಧಿಯೊಳಗೆ ನೀಡುವಂತೆ ತಾಕೀತು ಮಾಡಿದರು.
ಬೈಂದೂರು ತಹಸೀಲ್ದಾರ್ ಬಸಪ್ಪ ಪಿ ಪೂಜಾರ್, ಕಂದಾಯ ನಿರೀಕ್ಷಕ ಈ ಕುಮಾರ್, ಗಂಗೊಳ್ಳಿ ಠಾಣಾಧಿಕಾರಿ ಭಿಮಾಶಂಕರ್, ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಸ್ಥಳೀಯ ಜನಪ್ರತಿನಿಧಿಗಳು, ಪ್ರಮುಖರು ಉಪಸ್ಥಿತರಿದ್ದರು.
ಇದನ್ನೂ ಓದಿ:
► ನೆರೆಪೀಡಿತ ಪ್ರದೇಶಗಳಿಗೆ ಮಾಜಿ. ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ – https://kundapraa.com/?p=40186 .
► ಉಪ್ಪುಂದದ ಸುರಭಿ ಎಸ್. ಶೆಟ್ಟಿ ರಾಜ್ಯಕ್ಕೆ ದ್ವಿತೀಯ. 625ರಲ್ಲಿ 624 ಅಂಕ – https://kundapraa.com/?p=40173 .
► ಎಸ್ಎಸ್ಎಲ್‌ಸಿ: ಶ್ರಾವ್ಯ ಎಸ್. ಮೊಗವೀರ ಜಿಲ್ಲೆಗೆ ದ್ವಿತೀಯ. 621 ಅಂಕ – https://kundapraa.com/?p=40194 .
► ಎಸ್.ಎಸ್.ಎಲ್‌ಸಿ ಪರೀಕ್ಷೆ ಫಲಿತಾಂಶ: ಉಡುಪಿ ಜಿಲ್ಲೆಗೆ ಎ ಗ್ರೇಡ್, 7ನೇ ಸ್ಥಾನ – https://kundapraa.com/?p=40160 .