ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮೀಪದ ಒತ್ತಿನಣೆ ಗುಡ್ಡ ಜರಿದು ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಬ್ಲಾಕ್ ಆಗಿರುವ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಗುಡ್ಡ ಜರಿದಿದ್ದು ಯಾವುದೇ ಹಾನಿ ಸಂಭವಿಸಿಲ್ಲ.
ರಾತ್ರಿ ಸುರಿದ ಭಾರಿ ಮಳೆಗೆ ಗುಡ್ಡ ಜರಿದಿದ್ದು ಸುಮಾರು ಒಂದು ಕಿ.ಮೀ. ತನಕ ಎರಡೂ ಬದಿಗಳಲ್ಲಿ ವಾಹನಗಳು ಬ್ಲಾಕ್ ಆಗಿದ್ದವು. ಜೆಸಿಬಿ ಮೂಲಕ ಕುಸಿದಿರುವ ಮಣ್ಣು ತೆರವು ಕಾರ್ಯಾಚರಣೆ ನಡೆಸಿ ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಒತ್ತಿನಣೆಯಲ್ಲಿ ಹೆದ್ದಾರಿ ಕಾಮಗಾರಿ ಸಲುವಾಗಿ ಗುಡ್ಡವನ್ನು ಆಳವಾಗಿ ಕಡಿದು ರಸ್ತೆ ನಿರ್ಮಿಸಲಾಗಿತ್ತು. ಗುಡ್ಡದ ತಳಭಾದಲ್ಲಿ ಜೇಡಿ ಮಣಿರುವುದರಿಂದ ಅದು ಕುಸಿಯುವ ಮನ್ಸೂಚನೆಯನ್ನೂ ಸ್ಥಳೀಯರು ಹಾಗೂ ಜನಪ್ರತಿನಿಧಿಗಳು ಆಗಾಗ್ಗೆ ನೀಡಿದ್ದರು. ಆದಾಗ್ಯೂ ಎಚ್ಚೆತ್ತುಕೊಳ್ಳದ ಕಾಮಗಾರಿ ಹೊಣೆಹೊತ್ತ ಇಂಜಿನಿಯರ್‌ಗಳು ತಟಸ್ಥ ನಿಲುವು ಅನುಸರಿಸಿದ್ದರು. ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಕುಸಿಯುವ ಮೂನ್ಸೂಚನೆ ಸಿಕ್ಕ ಕೂಡಲೇ ಅಧಿಕಾರಿಗಳು ಪಕ್ಕದಲ್ಲಿಯೇ ತರಾತುರಿಯಲ್ಲಿ ಕೆಲವು ದಿನಗಳ ಹಿಂದಷ್ಟೇ ರಸ್ತೆ ನಿರ್ಮಿಸಿದ್ದರು. ಇದೀಗ ಆ ರಸ್ತೆಯಲ್ಲಿ ಬಿದ್ದರುವ ಮಣ್ಣನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕಾದಿದೆ ಭಾರಿ ಅವಘಡ:
ಮೊದಲ ಮಳೆಗೆ ಗುಡ್ಡದ ಕುಸಿತ ಆರಂಭಿಸಿದ್ದು ಅಪಾಯ ಕಟ್ಟಿಡ್ಡ ಬುತ್ತಿ ಎನಿಸಿದೆ. ಜಿಲ್ಲಾಡಳಿತ, ಇಲಾಖಾ ಇಂಜಿನಿಯರ್‌ಗಳು ಹಾಗೂ ಕಾಮಗಾರಿ ವಹಿಸಿಕೊಂಡಿರುವ ಐಆರ್‌ಬಿ ಕಂಪೆನಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ಹೋದಲ್ಲಿ ಭಾರಿ ಅಪಾಯ ಎದುರಾಗಲಿದೆ.
ಒತ್ತಿನಣೆ ಗುಡ್ಡ ಜರಿಯುವ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಸ್ಥಳೀಯರು ಹಾಗೂ ಜನಪ್ರತಿನಿಧಿಗಳ ಸಲಹೆಯನ್ನು ಕಡೆಗಣಿಸಿರುವ ಐ.ಆರ್.ಬಿ ಕಂಪೆನಿ ಮಳೆಗಾಲದ ಅವಘಡಕ್ಕೆ ಎಡೆಮಾಡಿಕೊಟ್ಟಿದೆ. ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಮಂಜಾಗ್ರತಾ ಕ್ರಮ ವಹಿಸಬೇಕು ಹಾಗೂ ಯಾವುದೇ ಅಪಾಯ ಸಂಭವಿಸದಂತೆ ನೋಡಿಕೊಳ್ಳಲು ಮಳೆಗಾಲ ಮುಗಿಯುವ ತನಕ ಒಬ್ಬ ನೋಡೆಲ್ ಅಧಿಕಾರಿಯನ್ನು ನೇಮಿಸಬೇಕು. ಶಿರೂರು ದೊಂಬೆ ಮೂಲಕ ಬೈಂದೂರು ಸಂಚರಿಸುವ ಮಾರ್ಗವನ್ನು ಐ.ಆರ್.ಬಿ ಕಂಪೆನಿಯವರೇ ದುರಸ್ತಿಗೊಳಿಸಿ ಪರ್ಯಾಯ ಮಾರ್ಗವನ್ನು ಅಣಿಗೊಳಿಕೊಳ್ಳಬೇಕು. – ಎಸ್. ರಾಜು ಪೂಜಾರಿ, ಮಾಜಿ ಅಧ್ಯಕ್ಷರು ಜಿಲ್ಲಾ ಪಂಚಾಯತ್ ಉಡುಪಿ, ಸದಸ್ಯರು ಜಿಲ್ಲಾ ಕೆಡಿಪಿ