ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾರಿನಲ್ಲಿ ಗೋಮಾಂಸ ಸಾಗಿಸುತ್ತಿದ್ದ ಆರೋಪಿಗಳನ್ನು ಬೈಂದೂರು ಪೊಲೀಸರು ಶನಿವಾರ ರಾತ್ರಿ ಶಿರೂರು ಚೆಕ್ ಪೋಸ್ಟ್ ಬಳಿ ಬಂಧಿಸಿದ್ದಾರೆ. ಭಟ್ಕಳದ ನಿವಾಸಿಗಳಾದ ಸೈಯದ್ ಮೊಸ್ಸಿನ್ ಲಂಕಾ (52) ಹಾಗೂ ಇಷ್ತಿಯಾಕ್ ಅಹಮ್ಮದ್ ಇಕ್ಕೇರಿ (41) ಬಂಧಿತ ಆರೋಪಿಗಳು.
ಶನಿವಾರ ರಾತ್ರಿ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಕರ್ತವ್ಯದ್ದಾಗ ದನದ ಮಾಂಸ ತುಂಬಿಸಿಕೊಂಡ ಕಾರು ಬೈಂದೂರು ಕಡೆಗೆ ಬರುತ್ತಿರುವ ಮಾಹಿತಿ ಪಡೆದಿದ್ದು, ಅದರಂತೆ ಸಿಬ್ಬಂದಿಗಳ ಸಹಾಯದಿಂದ ಶಿರೂರು ಚೆಕ್ಪೋಸ್ಟ್ ಬಳಿ ರಾತ್ರಿ 9.45ರ ಹೊತ್ತಿಗೆ ಭಟ್ಕಳ ಕಡೆಯಿಂದ ಬರುತ್ತಿದ್ದ ಸಂಶಯಾಸ್ಪದ ಇಟಿಯಾಸ್ ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದ್ದಾರೆ. ಪರಿಶೀಲನೆ ವೇಳೆ ಕಾರಿನಲ್ಲಿ ಇಬ್ಬರು ವ್ಯಕ್ತಿಗಳಿದ್ದು ಡಿಕ್ಕಿಯಲ್ಲಿ 3 ಪ್ಲಾಸ್ಟಿಕ್ ಚೀಲದಲ್ಲಿ ಜಾನುವಾರು ಮಾಂಸ ಇರುವುದು ಕಂಡು ಬಂದಿದೆ.
ಕಾರಿನಲ್ಲಿ ಸುಮಾರು 40 ಸಾವಿರ ರೂಪಾಯಿ ಅಂದಾಜು ಮೌಲ್ಯದ ಒಟ್ಟು ಸುಮಾರು 150 ಕೆ.ಜಿ ತೂಕದ ಮಾಂಸ, 5 ಲಕ್ಷ ಮೌಲ್ಯದ ಕಾರು ವಶಕ್ಕೆ ಪಡೆಯಲಾಗಿದೆ. ಕಾರಿನಲ್ಲಿದ್ದವರಲ್ಲಿ ಮಾಂಸದ ಬಗ್ಗೆ ವಿಚಾರಿಸಿದಾಗ ನಾವು ಹಾವೇರಿಯಿಂದ ಖರೀದಿಸಿ ಎಂದಿದ್ದಾರೆ. ಆದರೆ ಈ ಬಗ್ಗೆ ಯಾವುದೇ ದಾಖಲೆ ಇರಲಿಲ್ಲ. ಗೋಕಳ್ಳತನದಲ್ಲಿ ಭಾಗಿಯಾಗಿರುವ ವ್ಯಕ್ತಿಗಳೇ ಜಾನುವಾರನ್ನು ಕೊಂದು ಮಾಂಸ ಮಾರಾಟ ದಂಧೆಯಲ್ಲಿ ತೊಡಗಿಕೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಕೆ ನಡೆಸುತ್ತಿದ್ದಾರೆ.
ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಎಸ್ಐ ಸಂಗೀತಾ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.