ಸಾಮರಸ್ಯದಿಂದ ಮಾಡುವ ಸಮಾಜ ಸೇವೆಯಲ್ಲಿ ಸಾರ್ಥಕತೆ: ಬಾಲಕೃಷ್ಣ ಮದ್ದೋಡಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಾಯುಮಾಲೀನ್ಯ, ಪರಿಸರ ರಕ್ಷಣೆ, ಸ್ವಚ್ಛತೆಯ ಬಗ್ಗೆ ಕೇವಲ ಮಾತನಾಡಿದರೆ ಅದು ಪ್ರಯೋಜನವಾಗದು. ಇದರಲ್ಲಿ ಮೊದಲು ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ನಂತರ ನಮ್ಮ ಕುಟುಂಬ ಸದಸ್ಯರ ಒಗ್ಗೂಡುವಿಕೆಯಲ್ಲಿ ಕೈಜೋಡಿಸಿದಾಗ ಮಾತ್ರ ಬದಲಾವಣೆ ತರಬಹುದು. ಸಾಮರಸ್ಯದಿಂದ ಒಟ್ಟಾಗಿ ಮಾಡುವ ಸಮಾಜ ಸೇವೆಯಲ್ಲಿ ಸಾರ್ಥಕತೆ ಕಾಣಲು ಸಾಧ್ಯ ಎಂದು ರೋಟರಿ ವಲಯ ೪ರ ಸಹಾಯಕ ಗವರ್ನರ್ ಬಾಲಕೃಷ್ಣ ಮದ್ದೋಡಿ ಹೇಳಿದರು.

ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಅಂತರಾಷ್ಟ್ರೀಯ ರೋಟರಿ ಜಾಗತಿಕ ತಿಳುವಳಿಕೆ (ವರ್ಡ್ ಅಂಡರ್‌ಸ್ಟ್ಯಾಂಡಿಗ್ ಡೇ) ದಿನಾಚರಣೆ ಅಂಗವಾಗಿ ನಡೆದ ಕುಟುಂಬ ಸ್ನೇಹ ಸಮ್ಮಿಲನ, ಶಾಂತಿ, ಸೇವೆ, ಸಾಂಗತ್ಯ ಮತ್ತು ಸಾಮರಸ್ಯಗಳಿಗಾಗಿ ರೋಟರಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಬೃಹತ್ ಗಾತ್ರದ ನಮ್ಮ ಜನಸಂಖ್ಯೆ ವಾತಾವರಣದಿಂದ ಉಷ್ಣತೆ ಅತ್ಯಂತ ವೇಗವಾಗಿ ಹೆಚ್ಚಿಸುತ್ತಿದೆ ಎಂಬ ಸತ್ಯ ನಮಗೆ ಇನ್ನೂ ಕೂಡಾ ಅರಿವಾಗಲಿಲ್ಲ. ಪ್ರಕೃತಿಯಲ್ಲಾಗುತ್ತಿರುವ ಸೂಕ್ಷ್ಮ ಪರಿವರ್ತನೆ ಅರ್ಥಮಾಡಿಕೊಳ್ಳುವ ವೈಚಾರಿಕತೆ ನಮ್ಮಲ್ಲಿ ಬೆಳೆಯಬೇಕಾಗಿದೆ

ಜಾಗತಿಕ ಸಿಹಿ ನೀರಿನ ಮೂಲಗಳನ್ನು ಸಂರಕ್ಷಿಸಲು ಹಾಗೂ ನೀರಿನ ಕೊರತೆ ನೀಗಿಸಲು ಅರಣ್ಯಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಮಹತ್ವದ ಕ್ರಮವಾಗಿದೆ. ಜಾಗತಿಕ ಜನಸಂಖ್ಯೆಯ ಮೂರನೇ ಎರಡರಷ್ಟು ಭಾಗ ನೀರಿನ ಕೊರತೆಯ ಪರಿಸ್ಥಿತಿಯಲ್ಲಿ ಬದುಕಬೇಕಾಗುತ್ತದೆ. ಜನರು ದಿನಂಪ್ರತಿ ಬಳಸುವ ಸಿಹಿ ನೀರು ಮುಕ್ಕಾಲು ಭಾಗ ಅರಣ್ಯಾವೃತ ಜಲಾನಯನ ಪ್ರದೇಶದಿಂದ ಒದಗುತ್ತಿದೆ. ಹಾಗೂ ಅಧಿಕ ಜನರು ಆಹಾರ, ನೀರು, ಔಷಧಗಳು ಮತ್ತು ಇಂಧನಕ್ಕಾಗಿ ಅರಣ್ಯವನ್ನೇ ಆಶ್ರಯಿಸಿದ್ದಾರೆ. ಈ ನೆಲೆಯಲ್ಲಿ ಅಂತರಾಷ್ಟ್ರೀಯ ರೋಟರಿ ಜಾಗತಿಕ ತಿಳುವಳಿಕೆ ದಿನವನ್ನು ವಿಶ್ವದಾದ್ಯಂತ ಅಚರಿಸುತ್ತಿದೆ. ರೋಟರಿ ಕುಟುಂಬ ಸದಸ್ಯರು ಸ್ನೇಹ, ಬಾಂಧವ್ಯದಿಂದ ಈ ವಿಚಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದು, ಇತರರಿಗೂ ತಿಳುವಳಿಕೆ ನೀಡುವ ಮೂಲಕ ಸಾರ್ಥಕ ಸೇವೆ ಮಾಡುತ್ತಾ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುತ್ತಿದ್ದೇವೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಹುಂಚನಿ ಕೃಷ್ಣಪ್ಪ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ದುಬೈ ಕುಂದಾಪ್ರ ಕನ್ನಡ ಹಾಗೂ ದುಬೈ ಕನ್ನಡ ಸಂಘದ ಅಧ್ಯಕ್ಷ ಸಾಧನ್‌ದಾಸ್ ಶಿರೂರು ಮತ್ತು ಕಾರ್ಯದರ್ಶಿ ದಿನೇಶ್ ದೇವಾಡಿಗ ನಾಗೂರು ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ನಿವೃತ್ತ ಅರಣ್ಯ ವಲಯಾಧಿಕಾರಿ ಬಿ. ಜಗನ್ನಾಥ ಶೆಟ್ಟಿ, ಇನ್ನರ್‌ವೀಲ್ ಅಧ್ಯಕ್ಷೆ ಶಾಂತಿ ಪಿರೇರಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಡಾ. ಪ್ರವೀಣ್ ಶೆಟ್ಟಿ ವಂದಿಸಿದರು.

 

Leave a Reply

Your email address will not be published. Required fields are marked *

thirteen + sixteen =