ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕನ್ನಡನಾಡಿನ ಪಡುಗಡಲ ತಡಿಯ ಪ್ರಕೃತಿ ಸೌಂದರ್ಯವನ್ನು ಹಾಸಿಹೊದ್ದು ಮಲಗಿದ ನಯನ ಮನೋಹರ ಭೂಪ್ರದೇಶ ಹಾಗೂ ಉಡುಪಿ ಜಿಲ್ಲೆಯ ತುತ್ತ ತುದಿಯಲ್ಲಿ ಬೆಟ್ಟದ ಕೆಳಗೆ ಹರವಿಕೊಂಡು ಅರಬೀ ಸಮುದ್ರದ ಅಲೆಗಳಿಂದ ಸದಾ ಮುತ್ತಿಕ್ಕಿಕೊಳ್ಳುವ ಬೈಂದೂರು, ಕಲಾವಿದರ, ಕಲಾಸಂಸ್ಥೆಗಳ, ಕಲಾಪೋಷಕರ ಹಾಗೂ ವಿವಿಧ ಕಲೆಗಳ ತವರೂರು ಎಂಬಲ್ಲಿ ಎರಡು ಮಾತಿಲ್ಲ.
ಇಲ್ಲಿನ ಅರ್ಚಕ ರಾಜೇಶ್ ಐತಾಳ್ ಎಂಬುವವರ ಕೋರಿಕೆಯಂತೆ ಕಾರ್ಪೆಂಟರಿ ಹರಿದಾಸ್ ಆಚಾರ್ಯ ತನ್ನ ಸಹಪಾಠಿ ಪಂಚ ಯುವ ಆಚಾರ್ಯರಾದ ಹರೀಶ್, ರಮೇಶ್, ಅಕ್ಷತ್, ಪ್ರಮೋದ್ ಹಾಗೂ ಮಂಜುನಾಥ ಒಟ್ಟಾಗಿ ಸೇರಿ ಗ್ರಾಮದೊಡೆಯ ಮಹತೋಭಾರ ಶ್ರೀ ಸೇನೇಶ್ವರ ದೇವರಿಗೆಂದು ಸುಂದರವಾದ ಶಿಲ್ಪಕೆತ್ತನೆಗಳಿಂದ ಕೂಡಿದ ಪುಷ್ಪರಥ ನಿರ್ಮಾಣ ಮಾಡಿದ್ದಾರೆ.
ಟಾಟಾ ಏಸ್ ವಾಹನದ ಚೆಸ್ಸನ್ನು ತಳಭಾಗದಲ್ಲಿ ಆಧಾರವಾಗಿಟ್ಟುಕೊಂಡು ಅದರ ಮೇಲೆ ಸಂಪೂರ್ಣ ಹೆಬ್ಬೆಲಸು ಮರದಿಂದ ರಥ ನಿರ್ಮಾಣವಾಗಿದೆ. ೧೫ ಅಡಿ ಎತ್ತರವುಳ್ಳ ಈ ರಥದ ಸುತ್ತಲೂ ಹಾಗೂ ಗೋಪುರವು ಸುಂದರ ಶಿಲ್ಷಕಲಾ ಕೆತ್ತನೆಯಿಂದ ಕೂಡಿದ್ದು, ಹಿಂದಿನಿಂದ ರಥದ ನಿಯಂತ್ರಣ ಮತ್ತು ತಿರುಗುವಿಕೆಗಾಗಿ ಹ್ಯಾಂಡಲ್ ಅಳವಡಿಸಲಾಗಿದೆ. ಮುಂದಿನ ಎರಡೂ ಭಾಗಗಳಲ್ಲಿ ಹೆಡ್ಲೈಟ್, ಗೋಪುರದ ಸುತ್ತುಲೂ ಹಾಗೂ ಒಳಗಡೆ ವಿದ್ಯುದ್ದೀಪ ಅಳವಡಿಸಲಾಗಿದೆ. ರಥದ ಮೇಲಿನ ಇಕ್ಕೆಗಳಲ್ಲಿ ಅರ್ಚಕರಿಗೆ ಕುಳಿತುಕೊಳ್ಳವ ವ್ಯವಸ್ಥೆಯಿದೆ. ಮೂರು ಲಕ್ಷ ವೆಚ್ಚದ ಈ ರಥವು ಬರೋಬ್ಬರಿ ಮೂರು ತಿಂಗಳುಗಳ ಕಾಲದ ಪರಿಶ್ರಮದಿಂದ ಸಿದ್ದವಾದ ನೂತನ ರಥದಲ್ಲಿ ಮುಂದಿನ ದಿನಗಳಲ್ಲಿ ಸೇನೇಶ್ವರನು ವಿರಾಜಮಾನನಾಗಿ ನಗರ ಸಂಚಾರ ಮಾಡಲಿದ್ದಾನೆ.
ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಸುಶೀಲಾ ಐತಾಳ್ ಮತ್ತು ಮಕ್ಕಳು ರುದ್ರೈಕಾದಶನೀ ಹೋಮ ನೆರವೇರಿಸಿ ನಂತರ ಸೇವಾರೂಪದಲ್ಲಿ ಈ ಪುಷ್ಪರಥವನ್ನು ಶ್ರೀದೇವರಿಗೆ ಸಮರ್ಪಿಸಲಿದ್ದಾರೆ.
ಚಾಲುಕ್ಯರ ಕಾಲದಲ್ಲಿ ಅದ್ಭುತ ಶಿಲ್ಪಕಲೆಗಳಿಂದ ನಿರ್ಮಾಣವಾದ ಶ್ರೀ ಸೇನೇಶ್ವರ ದೇವರಿಗಾಗಿ ಪುಷ್ಪರಥ ನಿರ್ಮಾಣ ಮಾಡುತ್ತೇನೆಂಬ ಕನಸು ಕಂಡವನಲ್ಲ. ಅರ್ಚಕ ರಾಜೇಶ್ ಐತಾಳ ಆಶಯದಂತೆ ಅವರ ಕೋರಿಕೆಯಂತೆ ರಥದ ನಿರ್ಮಾಣ ಕಾರ್ಯ ಸವಾಲಾಗಿ ಸ್ವೀಕರಿಸಿದೆ. ಪ್ರಥಮ ನಿರ್ಮಾಣವಾದ್ದರಿಂದ ಮೊದಲು ಭಯವಿತ್ತು. ಸಮಾನ ಮನಸ್ಕ ಸಹೋದ್ಯೋಗಿಗಳ ಸಹಕಾರದಿಂದ ಸಂಕಲ್ಪ ಈಡೇರಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯ ಸಾಧನೆಗೆ ಧೈರ್ಯ ಬಂದಿದೆ. – ಹರಿದಾಸ್ ಅಚಾರ್ಯ
ವರದಿ: ನರಸಿಂಹ. ಬಿ. ನಾಯಕ್