ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಸಮಾಜವನ್ನು ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ಸಣ್ಣ ಸಣ್ಣ ಗುಂಪುಗಳಾಗಿ ಒಡೆಯುವ ಕೆಲಸವನ್ನು ಪ್ರಭುತ್ವ ಮಾಡುತ್ತಿರುವ ಹೊತ್ತಿನಲ್ಲಿ ರಂಗಭೂಮಿಯ ಬೆಸೆಯುವ ಗುಣವನ್ನು ಇನ್ನಷ್ಟು ಜಾಗೃತಗೊಳ್ಳಬೇಕಿದೆ ಎಂದು ಸಮುದಾಯ ಕರ್ನಾಟಕದ ಸಂಘಟನಾ ಕಾರ್ಯದರ್ಶಿ ವಿಠ್ಠಲ ಭಂಡಾರಿ ಕೆರೆಕೋಣ ಹೇಳಿದರು.
ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಶನಿವಾರ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಆಯೋಜಿಸಲಾದ ರಂಗಸುರಭಿ 2021 ಮೂರು ದಿನಗಳ ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ ನಾಟಕಗಳು ಚರಿತ್ರೆಯ ಭಾಗವಾಗುವ ಬದಲು ಜನರ ಮನಸ್ಸಿನಲ್ಲಿ ಸ್ಥಾನ ಪಡೆಯುವಂತಾಗಬೇಕು. ಪ್ರಭುತ್ವವನ್ನು ಪ್ರಶ್ನಿಸಿದಾಗಲೇ ಅದು ಸಾಧ್ಯವಾಗುತ್ತದೆ. ಮನುಷ್ಯ ಮನುಷ್ಯರ ನಡುವಿನ ಕಂದಕವನ್ನು ಮುಚ್ಚುವ ಅರ್ಥಪೂರ್ಣ ಕೆಲಸವನ್ನು ರಂಗಭೂಮಿ ಮಾಡಬೇಕಿದೆ ಎಂದರು.
ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ನ ಅಧ್ಯಕ್ಷರಾದ ಬಿ. ರಾಮಕೃಷ್ಣ ಶೇರುಗಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಲಾ ಪ್ರಕಾರಗಳು ಮನುಷ್ಯ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಯಾವುದೇ ಪ್ರಕಾರವಾದರೂ ಅದನ್ನು ಆಸ್ಪಾದಿಸುವ ವರ್ಗವಿದೆ. ಕಲೆಯನ್ನು ಸವಿಯುವುದರೊಂದಿಗೆ ಪ್ರೋತ್ಸಾಹಿಸುವ ಕೆಲಸವೂ ಕಲಾಭಿಮಾನಿಗಳಿಂದ ಆದರೆ ಅದು ಮತ್ತಷ್ಟು ಗಟ್ಟಿಗೊಳ್ಳುತ್ತದೆ ಎಂದರು.
ವೇದಿಕೆಯಲ್ಲಿ ಉದ್ಯಮಿ ರಾಮಕೃಷ್ಣ ಶೆಟ್ಟಿ ವಂಡ್ಸೆ, ಉದ್ಯಮಿ ಪ್ರಸಾದ್ ಪ್ರಭು ಶಿರೂರು, ಶಿರೂರು ಜೆಸಿಐ ಅಧ್ಯಕ್ಷ ರಾಜು ವಿ.ಪಿ, ಸುರಭಿ ಕಾರ್ಯದರ್ಶಿ ಭಾಸ್ಕರ ಬಾಡ ಉಪಸ್ಥಿತರಿದ್ದರು.
ಉಪನ್ಯಾಸಕಿ, ಸಾಹಿತಿ ಸುಧಾ ಆಡುಕಳ ಅವರನ್ನು ಸನ್ಮಾನಿಸಲಾಯಿತು. ಮಂಗಳೂರು ವಿವಿ ಬಿಎ ಪದವಿಯಲ್ಲಿ ನಾಲ್ಕನೇ ರ್ಯಾಂಕ್ ಪಡೆದ ಕೀರ್ತಿ ಭಟ್ ಅವರನ್ನು ಗೌರವಿಸಲಾಯಿತು.
ಸುರಭಿ ರಿ. ಬೈಂದೂರು ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಸುಬ್ರಹ್ಮಣ್ಯ ಗಾಣಿಗ ತಗ್ಗರ್ಸೆ ವಂದಿಸಿದರು. ಉಪಾಧ್ಯಕ್ಷ ಅಬ್ದುಲ್ ರವೂಫ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪೂರ್ಣಚಂದ್ರ ತೇಜಸ್ವಿ ಅವರ ಕೃತಿಯಾಧಾರಿತ ಜುಗಾರಿ ಕ್ರಾಸ್ ನಾಟಕವನ್ನು ಸುರಭಿ ಕಲಾವಿದರು ಅಭಿನಯಿಸಿದರು. ನಟರಾಜ ಹೊನ್ನವಳ್ಳಿ ನಾಟಕವನ್ನು ರಂಗರೂಪಕ್ಕೆ ತಂದಿದ್ದರೇ, ಯೋಗೀಶ್ ಬಂಕೇಶ್ವರ ನಿರ್ದೇಶನ ಹಾಗೂ ಸದಾನಂದ ಬೈಂದೂರು ಬೆಳಕಿನ ವಿನ್ಯಾಸ ಮಾಡಿದ್ದಾರೆ.