ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 5 ವರ್ಷದಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಒಂದೇ ಸರಕಾರದ ಅವಧಿಯಲ್ಲಿ ಅನುಮೋದನೆ ದೊರೆತು ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲು, ಜನರ ತೆರಿಗೆ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಿದೆ ಎಂಬುದನ್ನು ಡಬ್ಬಲ್ ಇಂಜಿನ್ ಸರಕಾರ ತೋರಿಸಿ ಕೊಟ್ಟಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಬುಧವಾರ ಬೈಂದೂರು ತಾಲೂಕು ಆಡಳಿತ ಸೌಧದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ತಾಲೂಕು ಕೇಂದ್ರಕ್ಕೆ ಅವಶ್ಯವಿದ್ದ ನೂತನ ಆಡಳಿತ ಸೌಧಕ್ಕೆ 10 ಕೋಟಿ ಅನುದಾನ ಮಂಜೂರಾಗಿ ಎರಡು ವರ್ಷದಲ್ಲಿ ಸುಂದರ ಕಟ್ಟಡ ತಲೆಯೆತ್ತಿದೆ. 785 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಈಗಾಗಲೇ ಚಾಲನೆ ದೊರೆತಿದ್ದು, 43 ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರತಿ ಮನೆಗೂ ನೀರಿನ ಪೂರೈಕೆ ಮಾಡಲಾಗುತ್ತದೆ. ಮೀನುಗಾರರಿಗೆ ಅನುಕೂಲವಾಗುವ ಯೋಜನೆ, ಬಂದರು ಸೇರಿದಂತೆ ಮೂಲಭೂತ ಸೌಲಭ್ಯಗಳೊಂದಿಗೆ ಪ್ರವಾಸೋದ್ಯಮ, ಕೈಗಾರಿಕೋದ್ಯಮ ಅವಭಿವೃದ್ಧಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನೆರವಿನಿಂದಾಗಿ ವಿಶೇಷ ಒತ್ತು ನೀಡಲಾಗಿದೆ ಎಂದರು.
ಬೈಂದೂರು ತಾಲೂಕಿನ ಅಭಿವೃದ್ಧಿಗೆ ಯಾರೂ ಕಲ್ಲು ಹಾಕುವ ಕೆಲಸ ಮಾಡಬಾರದು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಭಿವೃದ್ಧಿಯಲ್ಲಿ ರಾಜಕೀಯ ಮಾಡದೇ ಒಂದಾಗಿ ಸರಕಾರದ ಯೋಜನೆಯನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದರು.
ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಹುತೇಕ ಮನೆಗಳಿಗೆ ವಿದ್ಯುತ್ ಸೌಲಭ್ಯ ಶೈಕ್ಷಣಿಕ ಅಭಿವೃದ್ಧಿಯಡಿಯಲ್ಲಿ ಪ್ರತಿ ಶಾಲೆಗಳಿಗೆ ಸುಸಜ್ಜಿತ ಕೊಠಡಿ ನಿರ್ಮಾಣ, ರಸ್ತೆ, ಏತ ನೀರಾವರಿ ಮೊದಲಾದ ಯೋಜನೆಗಳನ್ನು ಬೈಂದೂರಿನಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ ಎಂದರು.
ಈ ವೇಳೆ ಆಡಳಿತ ಸೌಧವನ್ನು ಅಚ್ಚುಕಟ್ಟಾಗಿ ನಿರ್ಮಿಸಿದ ಗೃಹ ಮಂಡಳಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು. ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಲಾಯಿತು.
ಈ ವೇಳೆ ಜಿಲ್ಲಾಧಿಕಾರಿ ಕೂರ್ಮರಾವ್ ಎಂ., ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ. ಹಾಕೆ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಕುಂದಾಪುರದ ಸಹಾಯಕ ಆಯುಕ್ತೆ ರಶ್ಮಿ ಎಸ್. ಆರ್., ಕರ್ನಾಟಕ ಗೃಹ ಮಂಡಳಿಯ ಕಾರ್ಯಪಾಲಕ ಅಭಿಯಂತರೆ ಸಿ.ಕೆ. ಮಂಜುಳ, ಸಹಾಯಕ ಕಾರ್ಯಪಾಲಕ ಅಭಿಯಂತರೆ ಎಮ್. ಸಹನ, ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಕೆ. ಉದಯ ಕುಮಾರ್ ಶೆಟ್ಟಿ, ಯೋಜನಾ ಆಯೋಗದ ಅಧಿಕಾರೇತರ ಸದಸ್ಯೆ ಪ್ರಿಯದರ್ಶಿನಿ ಬೆಸ್ಕೂರು, ಗುತ್ತಿಗೆದಾರ ಸುಜಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಬೈಂದೂರು ತಾಲೂಕು ಶಿಕ್ಷಕಿಯರು ಪ್ರಾರ್ಥನೆಗೈದರು. ಬೈಂದೂರು ತಹಶಿಲ್ದಾರ್ ಶ್ರೀಕಾಂತ ಎಸ್. ಹೆಗ್ಡೆ ಸ್ವಾಗತಿಸಿ, ಶಿಕ್ಷಕ ಸುಬ್ರಹ್ಮಣ್ಯ ಉಪ್ಪುಂದ ವಂದಿಸಿದರು. ಶಿಕ್ಷಕರುಗಳಾದ ಸುಧಾಕರ ಪಿ ಹಾಗೂ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಸಿದರು.