ಬೈಂದೂರು ತಾ.ಪಂ ಸಭೆ: ಗ್ರಾಮ ಪಂಚಾಯತಿಗಳಲ್ಲಿ ಪಿಡಿಓ ಇಲ್ಲದೇ ಸಾರ್ವಜನಿಕರಿಗೆ ತೊಂದರೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನೂತನ ಬೈಂದೂರು ತಾಲೂಕು ಪಂಚಾಯತಿಯ ಎರಡನೇ ಸಾಮಾನ್ಯ ಸಭೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಕುಂದಾಪುರದ ತಾ.ಪಂ ಸಭಾಂಗಣದಲ್ಲಿ ಗುರುವಾರ ಜರುಗಿತು.

ಕುಂದಾಪುರ ತಾಲ್ಲೂಕು ಪಂಚಾಯಿತಿ ವಿಭಜನೆಯಿಂದ ಬೈಂದೂರು ತಾಲ್ಲೂಕು ಪಂಚಾಯಿತಿ ಅಸ್ತಿತ್ವಕ್ಕೆ ಬಂದಿರುವುದರಿಂದ ಸ್ಥಿರ ಚರ ಆಸ್ತಿಗಳು, ನಿಧಿಯ ಅರ್ಧಾಂಶವನ್ನು ತಕ್ಷಣ ವರ್ಗಾಯಿಸಬೇಕು. ಬೈಂದೂರಿನಲ್ಲಿ ಕಚೇರಿಗೆ ಸೂಕ್ತ ಸ್ಥಳಾವಕಾಶ ಹೊಂದಿಸಿಕೊಳ್ಳಬೇಕು, ನಿವೃತ್ತ ಯೋಧರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಬೇಕು. ವರ್ಷದಿಂದ ಸ್ಥಗಿತವಾಗಿರುವ ಪಿಂಚಣಿ ಅದಾಲತ್ ನಡೆಸಬೇಕು ಸೇರಿದಂತೆ ಹಲವು ವಿಷಯಗಳೂ ಸಭೆಯಲ್ಲಿ ಚರ್ಚೆಗೆ ಬಂದವು.

ಬೈಂದೂರು ತಾಲ್ಲೂಕು ವ್ಯಾಪ್ತಿಯ ಕೆಲವು ಗ್ರಾಮ ಪಂಚಾಯತಿ ಪಿಡಿಒಗಳನ್ನು ಶಾಸಕರ, ಸಚಿವರ ಆಪ್ತ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಇವರ ಹುದ್ದೆ ಖಾಲಿ ಎಂದು ಪರಿಗಣಿಸುತ್ತಿಲ್ಲ. ಇದರಿಂದ ಬದಲಿ ನೇಮಕಕ್ಕೂ ಅವಕಾಶ ಇಲ್ಲ. ಇದರಿಂದ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಅಭಿವೃದ್ಧಿ ಕಾರ್ಯಗಳೂ ಕುಂಠಿತಗೊಂಡಿದೆ‘ ಎಂದು ಸದಸ್ಯ ಪ್ರವೀಣಕುಮಾರ ಶೆಟ್ಟಿ ಸಭೆಯ ಗಮನ ಸೆಳೆದರು. ಜಿಲ್ಲಾ ಪಂಚಾಯಿತಿ ಸಿಇಒ ಗಮನಕ್ಕೆ ಈ ವಿಷಯ ತಂದು ಕ್ರಮಕ್ಕೆ ಆಗ್ರಹಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಅರಿವಳಿಕೆ ತಜ್ಞರು ಕೇಂದ್ರದಲ್ಲಿ ಇರುವುದಕ್ಕಿಂತ ಹೆಚ್ಚು ಸಮಯ ಖಾಸಗಿ ವೃತ್ತಿ ನಡೆಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು. ಆರೋಗ್ಯ ಕೇಂದ್ರದ ಎರಡು ತಿಂಗಳ ಸಿಸಿಟಿವಿ ದಾಖಲೆ ಪಡೆದು ಪರಿಶೀಲಿಸಲಾಗುವುದು. ಹಾಜರಾತಿ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ ಚರ್ಚೆಯನ್ನು ಮುಕ್ತಾಯಗೊಳಿಸಿದರು.

ಪಡುವರಿ ಗ್ರಾಮದಲ್ಲಿ ಅಕ್ರಮವಾಗಿ ಬಾಕ್ಸೈಟ್ ತೆಗೆದು ಸಾಗಿಸಲಾಗುತ್ತಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಇದರ ತನಿಖೆ ನಡೆಸಬೇಕು ಎಂದು ಜಗದೀಶ ದೇವಾಡಿಗ ಅವರು ಪ್ರಸ್ತಾಪಿಸಿದರು. ಇದರ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯರು ಇದ್ದಾರೆ ಎಂಬ ಆರೋಪ ಕೆಲಕಾಲ ಸದಸ್ಯರ ನಡುವೆ ಪರ– ವಿರುದ್ಧದ ಚರ್ಚೆ ಹುಟ್ಟು ಹಾಕಿತು. ಅಂತಿಮವಾಗಿ ತಹಶೀಲ್ದಾರ್ ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು.

Call us

ಕಾನೂನು ಸುವ್ಯವಸ್ಥೆ ವಿಷಯಕ್ಕೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯ ಸಿಬ್ಬಂದಿಗಳು ತಾಲೂಕು ಪಂಚಾಯತ್ ಸಭೆಯಲ್ಲಿ ಭಾಗವಹಿಸಬೇಕಿದ್ದರೂ ಕಾರಣ ತಿಳಿಸದೇ ಗೈರಾಗಿದ್ದಾರೆ. ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲು ಇಲಾಖೆಯಿಂದ ಯಾರೋಬ್ಬರೂ ಬಂದಿಲ್ಲ. ಇದು ತಾಲೂಕು ಪಂಚಾಯತಿಗೆ ತೋರುವ ಅಗೌರವವಾಗಿದ್ದು, ಗೈರಾಗಿರುವುದಕ್ಕೆ ಕಾರಣ ತಿಳಿದು ನೋಟಿಸ್ ನೀಡುವಂತೆ ಅಧ್ಯಕ್ಷ ಮಹೇಂದ್ರ ಪೂಜಾರಿ ತಿಳಿಸಿದರು.

ಕೊಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 94ಸಿ ಸೇರಿದಂತೆ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಕೆಲವರಿಗಷ್ಟೇ ಜಾಗ ದೊರೆತಿದೆ. ಸರ್ವೇ ನಡೆದಿದ್ದರೂ ಹಕ್ಕುಪತ್ರ ನೀಡುತ್ತಿಲ್ಲ ಎಂದು ಸದಸ್ಯೆ ಗ್ರೀಷ್ಮಾ ಭೀಡೆ ಆರೋಪಿಸಿದರು. ತಾಲೂಕಿನ ಎಲ್ಲೆಡೆಯೂ ಇದೇ ಪರಿಸ್ಥಿತಿ ಇದ್ದು ಬಡವರಿಗೆ ಹಕ್ಕುಪತ್ರ ದೊರೆಯುವಂತಾಗಬೇಕು ಎಂದು ಸಭೆಯ ಸದಸ್ಯರು ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ಕೆಲವೆಡೆ ಹಕ್ಕುಪತ್ರ ನೀಡುವಲ್ಲಿ ತಕರಾರು ಇದ್ದು, ಅದನ್ನು ಬಗೆಹರಿಸಿ ವಿತರಿಸಲಾಗುವುದು ಎಂದರು.

ಪಡುವರಿಯ ಸೋಮೇಶ್ವರದಲ್ಲಿ 28 ವರ್ಷಗಳಿಂದ ನಡೆಯುತ್ತಿರುವ ಅಂಗನವಾಡಿ ನಿವೇಶನದ ಬಗೆಗಿನ ವಿವಾದ ಪ್ರಸ್ತಾಪಿಸಿದ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಇದನ್ನು ಪರಿಹರಿಸುವಂತೆ ತಹಶೀಲ್ದಾರ್ ಬಸಪ್ಪ ಪಿ. ಪೂಜಾರ್ ಅವರಿಗೆ ಮನವಿ ಮಾಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಅವರು ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿದರು. ಉಪಾಧ್ಯಕ್ಷೆ ಮಾಲಿನಿ ಕೆ, ಕಾರ್ಯನಿರ್ವಹಣಾಧಿಕಾರಿ ಭಾರತಿ, ಕುಂದಾಪುರ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್ ಇದ್ದರು.

Leave a Reply

Your email address will not be published. Required fields are marked *

5 × five =