ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು, ಅ11: ನೂತನವಾಗಿ ರಚನೆಗೊಂಡ ಬೈಂದೂರು ತಾಲೂಕಿನಲ್ಲಿ ಎರಡೂವರೆ ವರ್ಷಗಳ ಬಳಿಕ ಸ್ವಂತ ತಾಲ್ಲೂಕು ಪಂಚಾಯಿತಿ ಅಸ್ವಿತ್ವಕ್ಕೆ ಬಂದಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ತಾಲೂಕು ಪಂಚಾಯತ್ ಸಭೆಯಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ.
ಒಂದು ವರ್ಷದ ಹಿಂದೆ ಸರ್ಕಾರ 14 ತಾಲೂಕು ಪಂಚಾಯತ್ ಕ್ಷೇತ್ರಗಳನ್ನು ಒಳಗೊಂಡ ಬೈಂದೂರು ತಾಲ್ಲೂಕು ಪಂಚಾಯಿತಿ ರಚನೆಯ ಆದೇಶ ಹೊರಡಿಸಿ, ಉಡುಪಿ ಜಿಲ್ಲಾ ಪಂಚಾಯಿತಿಯ ಯೋಜನಾ ವಿಭಾಗದ ಅಧಿಕಾರಿ ಭಾರತಿ ಅವರನ್ನು ಮೊದಲ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಿತ್ತು.
ಪಂಚಾಯಿತ್ 14 ಕ್ಷೇತ್ರಗಳನ್ನು ಮೌಲಾನಾ ದಸ್ತಗೀರ್ (ಶಿರೂರು 1), ಪುಷ್ಪರಾಜ ಶೆಟ್ಟಿ (ಶಿರೂರು 2), ಗಿರಿಜಾ ಖಾರ್ವಿ (ಪಡುವರಿ), ಪ್ರಮೀಳಾ ದೇವಾಡಿಗ (ಉಪ್ಪುಂದ), ಜಗದೀಶ ದೇವಾಡಿಗ (ಕೆರ್ಗಾಲ್), ಗ್ರೀಷ್ಮಾ ಬಿಡೆ (ಕೊಲ್ಲೂರು), ವಿಜಯ ಶೆಟ್ಟಿ (ಕಾಲ್ತೋಡು), ಮಹೇಂದ್ರ ಪೂಜಾರಿ (ಖಂಬದ ಕೋಣೆ), ಶ್ಯಾಮಲಾ ಕುಂದರ್ (ನಾವುಂದ), ಜಗದೀಶ ಪೂಜಾರಿ (ಮರವಂತೆ), ಸುಜಾತಾ ದೇವಾಡಿಗ (ಯಡ್ತರೆ), ಮಾಲಿನಿ ಕೆ (ಬೈಂದೂರು ) ಪೂರ್ಣಿಮಾ (ಹಳ್ಳಿಹೊಳೆ), ಪ್ರವೀಣ್ಕುಮಾರ ಶೆಟ್ಟಿ (ನಾಡ) ಪ್ರತಿನಿಧಿಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಹಾಲಿ ಅಧ್ಯಕ್ಷೆ ಇಲ್ಲಿ ಸದಸ್ಯೆ: ಕುಂದಾಪುರ ತಾಲ್ಲೂಕು ಪಂಚಾಯಿತಿಯ ಹಾಲಿ ಅಧ್ಯಕ್ಷೆಯಾಗಿದ್ದ ಶ್ಯಾಮಲಾ ಕುಂದರ್ ಅವರು ಆ ಸ್ಥಾನ ಕಳೆದುಕೊಂಡು ಬೈಂದೂರು ತಾಲ್ಲೂಕು ಪಂಚಾಯಿತಿಯ ಸದಸ್ಯೆ ಆಗಲಿದ್ದಾರೆ. ಪ್ರಸ್ತುತ 37 ಸದಸ್ಯಬಲ ಹೊಂದಿದ ಕುಂದಾಪುರ ತಾ.ಪಂ. ಕಿರಿದಾಗಲಿದೆ. 14 ತಾಲೂಕು ಪಂಚಾಯತ್ ಸದಸ್ಯರು, 3 ಜಿಲ್ಲಾ ಪಂಚಾಯತ್ ಸದಸ್ಯರು ಹೊಸ ತಾ.ಪಂ.ನಲ್ಲಿ ಇರಲಿದ್ದಾರೆ. ನೂತನ ತಾಲೂಕು ವ್ಯಾಪ್ತಿಯಲ್ಲಿ ಜಿ.ಪಂ. ಸದಸ್ಯರಾದ ಸುರೇಶ್ ಬಟವಾಡಿ, ಗೌರಿ ದೇವಾಡಿಗ, ಶಂಕರ ಪೂಜಾರಿಅವರ ಪೂರ್ಣ ಕ್ಷೇತ್ರ ಹಾಗೂ ಕೆ. ಬಾಬು ಶೆಟ್ಟಿ, ರೋಹಿತ್ ಕುಮಾರ್ ಶೆಟ್ಟಿ ಅವರ ಭಾಗಶಃ ವ್ಯಾಪ್ತಿಗಳು ಇರಲಿವೆ.
2017ರ ಡಿ.16ರಂದು ಬೈಂದೂರು ತಾಲೂಕು ಪ್ರತ್ಯೇಕ ಘೋಷಣೆಯಾಗಿತ್ತು. 2018ರ ಜ.27ರಂದು ಈ ಕುರಿತು ಅಧಿಸೂಚನೆ ಹೊರಡಿಸಿತು. ಕುಂದಾಪುರ ತಾಲೂಕಿನಲ್ಲಿದ್ದ 101 ಗ್ರಾಮಗಳ ಪೈಕಿ 26 ಗ್ರಾಮಗಳನ್ನು ಹೊಸ ತಾಲೂಕಿಗೆ ಸೇರಿಸಲಾಗಿತ್ತು.
ಬಿಜೆಪಿಯಿಂದ ಅಭ್ಯರ್ಥಿಗಳು ಫೈನಲ್:
ಬೈಂದೂರು ತಾಲೂಕು ಪಂಚಾಯತ್ 14 ಕ್ಷೇತ್ರಗಳಲ್ಲಿ 9 ಬಿಜೆಪಿ ಹಾಗೂ 5 ಕಾಂಗ್ರೆಸ್ ಬಲಾಬಲವಿದೆ. ಬಹುಮತವಿರುವ ಬಿಜೆಪಿ ಪಕ್ಷ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಮಹೇಂದ್ರ ಕುಮಾರ್, ಉಪಾಧ್ಯಕ್ಷರಾಗಿ ಮಾಲಿನಿ ಕೆ. ಅವರ ಹೆಸರು ಅಂತಿಮಗೊಳಿಸಿದೆ. ಅ.11ರ ಮಧ್ಯಾಹ್ನ ನಡೆಯುವ ಪ್ರಥಮ ತಾಲೂಕು ಪಂಚಾಯತ್ ಸಭೆಯಲ್ಲಿ ಈರ್ವರೂ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಬಿಜೆಪಿ ಪಕ್ಷದ ತಾ.ಪಂ ಸದಸ್ಯರಿಗೆ ವಿಪ್ ಹೊರಡಿಸಿದೆ/ಕುಂದಾಪ್ರ ಡಾಟ್ ಕಾಂ ಸುದ್ದಿ/