ಮೀನುಗಾರರ ಸೀಮೆಎಣ್ಣೆ ಹಾಗೂ ಇನ್ನಿತರ ಸಮಸ್ಯೆ ಪರಿಹಾರಕ್ಕೆ ಬದ್ಧ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮುದ್ರವೇ ದೇವರು ಎಂಬ ನಂಬಿಕೆ ಹಾಗೂ ವಿಶ್ವಾಸದೊಂದಿಗೆ ನಿತ್ಯ ಹೋರಾಟ ನಡೆಸುವ ಮೀನುಗಾರರ ಅಗತ್ಯತೆಗಳನ್ನು ಪೂರೈಸುವುದು ಸರಕಾರ ಹಾಗೂ ಜನಪ್ರತಿನಿಧಿಗಳ ಕರ್ತವ್ಯವಾಗಿದ್ದು, ಮೀನುಗಾರಿಕೆಗೆ ತೊಡಕಾಗುತ್ತಿರವ ಸೀಮೆಎಣ್ಣೆ ಕೊರತೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಕ್ಷೇತ್ರದ ಸಂಸದರ ಮೂಲಕ ಕೇಂದ್ರ ಸರಕಾರದ ಗಮನಕ್ಕೆ ತರಲಾಗುವುದು ಎಂದು ಶಿಕಾರಿಪುರ ಕ್ಷೇತ್ರದ ಶಾಸಕ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಬಿ. ವೈ ರಾಘವೇಂದ್ರ ಹೇಳಿದರು.

ಅವರು ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಕೊಡೇರಿ ಬಂದರು ಬಳಿ ಆಯೋಜಿಸಲಾಗಿದ್ದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ಮೀನುಗಾರರ ಧ್ವನಿಯಾಗಿ, ಶಕ್ತಿಯಾಗಿ ೨೫ ವರ್ಷಗಳನ್ನು ಪೂರೈಸಿದೆ. ಸಂಘದ ಕಾರ್ಯವ್ಯಾಪ್ತಿಯನ್ನು ಒಂದು ಕ್ಷೇತ್ರಕ್ಕಷ್ಟೇ ಸೀಮಿತಗೊಳಿಸದೇ ರಾಜ್ಯದ ಮೀನುಗಾರರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ ಎಂದವರು ಶ್ಲಾಫಿಸಿದರು.

ಜೀವರಕ್ಷಕ ಪ್ರಶಸ್ತಿ ವಿತರಿಸಿದ ಬೈಂದೂರು ಕ್ಷೇತ್ರದ ಶಾಸಕ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಮಾತನಾಡಿ ಕರಾವಳಿಯ ಮೀನುಗಾರರ ಸಮಸ್ಯೆ ಪರಿಹಾರಕ್ಕಾಗಿ ನಿರಂತರವಾಗಿ ಶ್ರಮಿಸುತ್ತಾ ಬರಲಾಗುತ್ತಿದೆ. ಸಾಂಪ್ರದಾಯಿಕ ಮೀನುಗಾರಿಕೆಗೆ ಸೀಮೆಎಣ್ಣೆ ಅಗತ್ಯ ಎಂಬುದನ್ನು ಮನಗಂಡು ರಾಜ್ಯ ಮುಖ್ಯಮಂತ್ರಿಗಳನ್ನು ಸಾಕಷ್ಟು ಭಾರಿ ಭೇಟಿಯಾಗಿ ಮೀನುಗಾರರ ಸಮಸ್ಯೆಗಳನ್ನು ವಿವರಿಸಲಾಗಿದೆ. ಅದರ ಫಲವಾಗಿ ಮೀನುಗಾರರಿಗೆ ಈವರಗೆ ಸೀಮೆಎಣ್ಣೆ ದೊರೆತಿದೆ. ಮುಂದಿನ ಮಾರ್ಚ್ ತನಕವೂ ಸೀಮೆಎಣ್ಣೆ ದೊರೆಯಲಿದ್ದು ಆ ಬಳಿಕವೂ ದೊರಕಿಸಿಕೊಡುವಂತೆ ಮತ್ತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು ಎಂದರು.

ಮೀನುಗಾರ ಮಹಿಳೆಯರಿಗೆ ೨% ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತಿದ್ದು ಅದನ್ನು ಶೂನ್ಯ ಬಡ್ಡಿದರಕ್ಕೆ ಇಳಿಸುವಂತೆ ಬೇಡಿಕೆ ಇಡಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಅತಿ ಹೆಚ್ಚು ಮಸ್ಯಾಶ್ರಯ ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ಮೀನುಗಾರಿಕಾ ರಸ್ತೆ ಅಭಿವೃದ್ಧಿ ಸೇರಿದಂತೆ ಮೀನುಗಾರರ ಇನ್ನಿತರ ಸಮಸ್ಯೆಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರದ ಮುಂದಿರಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಾಗುವುದು ಎಂದವರು ಹೇಳಿದರು.

ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸೋಮಶೇಖರ ಕೆ. ಎಂ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉಪ್ಪುಂದ ಗ್ರಾಪಂ ಅಧ್ಯಕ್ಷ ದುರ್ಗಮ್ಮ, ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಲಲಿತಾ ಖಾರ್ವಿ, ಶಿರೂರು ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಭಾಸ್ಕರ ಖಾರ್ವಿ, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ, ಶಿರೂರು ಅಲ್ಪಸಂಖ್ಯಾತ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಅಬ್ದುಲ್ ಅಜೀದ್, ಉಡುಪಿ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಚಂದ್ರಕಾಂತ್ ಕರ್ಕೇರ, ಉತ್ತರ ಕನ್ನಡ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸದಾನಂದ ಜಟ್ಟಿ ಹರಿಕಂತ್ರ, ಬೈಂದೂರು ನಾಡದೋಣಿ ಮೀನುಗಾರರ ಸಂಘದ ಮಾಜಿ ಅಧ್ಯಕ್ಷರುಗಳಾದ ರಾಮಚಂದ್ರ ಖಾರ್ವಿ, ಕುಮಾರ ಖಾರ್ವಿ, ಕಾರ್ಯದರ್ಶಿ ನರೇಶ್ ಕೊಠಾರಿ, ಕೋಶಾಧಿಕಾರಿ ಅಣ್ಣಯ್ಯ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

ಮೀನುಗಾರರ ಪರಿಹಾರ ನಿಧಿ ಯೋಜನೆ, ಮೀನುಗಾರರ ಮಾಹಿತಿ ಕೇಂದ್ರ, ಸಂಘದ ಸದಸ್ಯರ ವೆಬ್ಸೈಟ್ ಅನಾವರಣಗೊಳಿಸಲಾಯಿತು. ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಸ್ಥಾಪಕಾಧ್ಯಕ್ಷ ಮದನಕುಮಾರ್ ಉಪ್ಪುಂದ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಜಿ ಅಧ್ಯಕ್ಷ ನವೀನ್‌ಚಂದ್ರ ಉಪ್ಪುಂದ ಸ್ವಾಗತಿಸಿದರು. ಪತ್ರಕರ್ತ ಅರುಣಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

nineteen − two =