ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಗು ಬದುಕನ್ನು ಪ್ರತಿಬಿಂಬಿಸಿದರೇ ವ್ಯಂಗ್ಯಚಿತ್ರ ನಗುವಿನ ಪ್ರತಿಬಿಂಬ. ಹಾಸ್ಯಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು ವ್ಯಂಗ್ಯಚಿತ್ರಕಾರರು ಅದರ ಬೆಸುಗೆಯ ಕೊಂಡಿಯಾಗಿ ರೇಖೆಗಳ ಮೂಲಕ ನಗಿಸುವ ಜೊತೆಗೆ ಸಮಾಜಕ್ಕೊಂದು ಸಂದೇಶ ನೀಡುತ್ತಾರೆ ಎಂದು ಉಡುಪಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್ ಹೇಳಿದರು.
ಅವರು ಕಾರ್ಟೂನು ಕುಂದಾಪ್ರ ಆಶ್ರಯದಲ್ಲಿ ಸ್ವಸ್ತಿಕ್ ಯೂತ್ ಕ್ಲಬ್ ಸಹಯೋಗದೊಂದಿಗೆ ಇಲ್ಲಿನ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಕ್ಯಾರಿಕೇಚರ್ ಮೂಲಕ ನಿಧಿ ಸಂಗ್ರಹಿಸಿ ಬಿಆರ್ ರಾಯರ ಹಿಂದೂ ಶಾಲೆಗೆ ದೇಣಿಗೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುರ್ತು ಪರಿಸ್ಥಿತಿಯ ಕಾಲದಲ್ಲಿ ವ್ಯಂಗ್ಯಚಿತ್ರಕಾರರು ಹಾಗೂ ಮಾಧ್ಯಮ ಸ್ವತಂತ್ರ್ಯಕ್ಕೆ ನಿರ್ಬಂಧ ಹೇರುವ ಕೆಲಸ ನಡೆಯಿತು. ಕಾರ್ಟೂನು ಬರೆಯುವಾಗ ನನ್ನನ್ನೂ ಬಿಡಬೇಡ ಎನ್ನುತ್ತಿದ್ದ ನೆಹರೂ ಅವರ ಮಗಳೇ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರಿದ್ದರು. ಇದು ರಾಜಕಾರಣಿಗಳಲ್ಲಿ ಹಾಸ್ಯಪ್ರಜ್ಞೆ ಇಲ್ಲದ್ದನ್ನು ಸೂಚಿಸುತ್ತದೆ ಎಂದರು.
ಸಮಾಜ ಸೇವಕ ಆರ್ಬೆಟ್ಟು ಜ್ಞಾನದೇವ ಕಾಮತ್ ಅವರ ಕ್ಯಾರಿಕೇಚರ್ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ರಾಜೀವ ಕೋಟ್ಯಾನ್, ಉದ್ಯಮಿ ಇಬ್ರಾಹಿಂ ಸಾಹೇಬ್, ಸ್ವಸ್ತಿಕ್ ಯುತ್ ಕ್ಲಬ್ ಅಧ್ಯಕ್ಷ ಪ್ರದೀಪ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
ವ್ಯಂಗ್ಯಚಿತ್ರಕಾರ ಚಂದ್ರ ಗಂಗೊಳ್ಳಿ ಅವರನ್ನು ಸನ್ಮಾನಿಸಲಾಯಿತು. ಶಶಿಧರ ಮಯ್ಯ ಸ್ವಾಗತಿಸಿ ನಿರೂಪಿಸಿದರು. ನ್ಯಾಯವಾದಿ ರವಿಕುಮಾರ್ ಗಂಗೊಳ್ಳಿ ಸನ್ಮಾನ ಪತ್ರ ವಾಚಿಸಿದರು. ವ್ಯಂಗ್ಯಚಿತ್ರಕಾರರಾದ ಸತೀಶ್ ಆಚಾರ್ಯ, ಕೇಶವ ಸಸಿಹಿತ್ಲು ಹಾಗೂ ಚಂದ್ರಶೇಖರ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು.