ಕುಂದಾಪುರದಲ್ಲಿ ಮೂರು ದಿನ ನಗುವಿನ ಚಾಟಿ ಚಟಾಕಿಯ ಕಲರವ – ಕಾರ್ಟೂನು ಹಬ್ಬ

ಕುಂದಾಪ್ರ ಡಾಟ್ ಕಾಂ ಲೇಖನ.
ಒಂದೇ ನೋಟಕ್ಕೆ ಮನತುಂಬಿದ ನಗು, ಒಮ್ಮೊಮ್ಮೆ ಸೆಡವು, ಬಾಗುವ ರೇಖೆಗೆ ತಕ್ಕಂತೆ ಬದಲಾಗುವ ಭಾವಲಹರಿ. ಕಾರ್ಟೂನ್ ಎಂದರೆ ಹಾಗೆ. ಆಳುವವರಿಗೊಂದು ಚಾಟಿ. ಜನಸಾಮಾನ್ಯನಿಗೆ ನಗುವಿನ ಚಟಾಕಿ. ಕಾರ್ಟೂನಿಷ್ಠರಲಲ್ಲಿ ಕಲಾವಿದ, ಪತ್ರಕರ್ತ ಏಕಕಾಲಕ್ಕೆ ಜಾಗೃತನಾಗಿರುತ್ತಾನೆ. ನೂರು ಪದಗಳಲ್ಲಿ ಹೇಳುವುದನ್ನು ಒಂದು ರೇಖೆಯಲ್ಲಿ ಹೇಳಿ ಮುಗಿಸುವ ಛಾತಿ ಕಾರ್ಟೂನಿಷ್ಠರದ್ದು. ಇಂತಹ ಕಾರ್ಟೂನಿಷ್ಠರನ್ನು ಕಾರ್ಟೂನಿಷ್ಠರ ತವರು, ಕುಂದಾಪುರದಲ್ಲಿ ಒಗ್ಗೂಡಿಸಿ ಕಳೆದ ನಾಲ್ಕು ವರ್ಷಗಳಿಂದ ಆಯೋಜಿಸುತ್ತಿರುವ ಕಾರ್ಟೂನು ಹಬ್ಬ ಮತ್ತೆ ಬಂದಿದೆ. ವಿನೋದ, ಪುಳಕ, ಕಲಿಕೆ, ಸ್ವರ್ಧೆ, ಅರಿವಿನ ಜೊತೆಗೆ ಕಾರ್ಟೂನು ಪ್ರೀಯರಿಗೆ ಭರಪೂರ ಮನೋರಂಜನೆಯನ್ನು ನೀಡುತ್ತಿರುವ ಕಾರ್ಟೂನು ಹಬ್ಬ ಈ ಭಾರಿಯೂ ನವೆಂಬರ್ 16ರಿಂದ ಮೂರು ದಿನಗಳ ಕಾಲ ನಡೆಯಲಿದೆ.

ಖ್ಯಾತ ವ್ಯಂಗ್ಯಚಿತ್ರಕಾರ ಕುಂದಾಪುರದ ಸತೀಶ್ ಆಚಾರ‍್ಯ ಅವರ ಸಾರಥ್ಯದಲ್ಲಿ ವಿಭಿನ್ನ ಐಡಿಯಾಸ್ ಹಾಗೂ ಕಾರ್ಟೂನು ಕುಂದಾಪ್ರ ತಂಡದ ಕಾರ್ಟೂನಿಷ್ಠರ ನೇತೃತ್ವದಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಕಾರ್ಟೂನು ಹಬ್ಬ ಹತ್ತಾರು ವಿಶೇಷತೆಗಳೊಂದಿಗೆ ರಂಗು ರಂಗಾಗಿ ನಡೆಯುತ್ತಿದ್ದು ಈ ಭಾರಿಯೂ ಮೂರು ದಿನಗಳ ಕಾಲ ಕುಂದಾಪುರದ ಕಲಾಮಂದಿರದಲ್ಲಿ ಕಾರ್ಯಕ್ರಮ ಜರುಗಲಿದೆ. ಮೂರು ದಿನಗಳ ಕಾಲ ಕಾರ್ಟೂನು ಪ್ರದರ್ಶನ, ಸ್ಕೂಲ್‌ಟೂನ್ ಚಾಂಪಿಯನ್‌ಶಿಪ್ ಸ್ವರ್ಧೆ, ಸಾರ್ವಜನಿಕರಿಗೆ ಕ್ಯಾರಿಕೇಚರ್ ಸ್ವರ್ಧೆ, ಲೈವ್ ಕ್ಯಾರಿಕೇಚರಿಂಗ್, ಸೈಬರ್ ಖಬರ್, ಸಾರ್ವಜನಿಕರಿಗೆ ಕಾರ್ಟೂನು ಡೈಲಾಗ್ ಸ್ವರ್ಧೆ, ಓಪನ್ ಕಾರ್ಟೂನು ಕ್ಲಾಸುಗಳು, ಮಾಸ್ಟರ್ ಸ್ಟ್ರೋಕ್, ಸೆಲ್ಫಿ ಕಾರ್ನರ್, ಓಪನ್ ಕ್ಯಾನ್ವಾಸ್ ಹೀಗೆ ಮೂರು ದಿನವೂ ಕಾರ್ಟೂನು ಪ್ರಿಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ರಂಜನೆ ಹಾಗೂ ಅರಿವಿಗಾಗಿ ಇದರ ಜೊತೆ ಜೊತೆಗೆ ಕಾರ್ಟೂನಿನ ಬಗೆಗೆ ಒಲವು ಮೂಡಿಸುವುದಕ್ಕಾಗಿ ಕಾರ್ಟೂನು ಕುಂದಾಪ್ರ ತಂಡ ಸಿದ್ದವಾಗಿದೆ.

ನವೆಂಬರ್ 16ರ ಬೆಳಿಗ್ಗೆ ತರಂಗದ ಕಾರ್ಯನಿರ್ವಾಹಕ ಸಂಪಾದಕಿ ಡಾ. ಸಂಧ್ಯಾ ಎಸ್. ಪೈ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ವ್ಯಂಗ್ಯಚಿತ್ರಕಾರರಾದ ಗಣೇಶ್ ಹೆಬ್ಬಾರ್ ಹಾಗೂ ರವಿರಾಜ್ ಹಾಲಂಬಿ ಅವರಿಗೆ ಸನ್ಮಾನ ಜರುಗಲಿದೆ. ಅದೇ ದಿನ ಮಧ್ಯಾಹ್ನ ಕಾರ್ಟೂನು ಮೊಗ್ಗು ಉದಯೋನ್ಮುಖ ವ್ಯಂಗ್ಯಚಿತ್ರಕಾರರಿಗಾಗಿ ಸ್ವರ್ಧೆ ಹಾಗೂ ವಿದ್ಯಾರ್ಥಿನಿಯರಿಗಾಗಿ ಮಾಯಾ ಕಾಮತ್ ಸ್ಮರಣಾರ್ಥ ಕಾರ್ಟೂನು ಸ್ವರ್ಧೆ ಜರುಗಲಿದೆ. ನ.17ರಂದು ಜರುಗುವ ಸೈಬರ್ ಖಬರ್ ಕಾರ್ಯಕ್ರಮದಲ್ಲಿ ಚಿಕ್ಕಮಂಗಳೂರು ಎಸ್ಪಿ ಕೆ. ಅಣ್ಣಾಮಲೈ ಪ್ರಧಾನ ಭಾಷಣ ಮಾಡಲಿದ್ದಾರೆ. ಅಂದು ಕಾರ್ಟೂನಿಷ್ಠ್ ಸತೀಶ್ ಆಚಾರ‍್ಯ ಅವರ ವೆಬ್ಸೈಟ್, ಡಾ. ಅರುಣ್ ಕುಮಾರ್ ಅವರಿಂದ ಲೋಕಾರ್ಪಣೆಗೊಳ್ಳಿದೆ. ವ್ಯಂಗ್ಯಚಿತ್ರಕಾರ ಹಾಗೂ ವೆಬ್ಸೈಟ್ ರಚಿಸಿದ ದಿನೇಶ್ ಸಿ ಹೊಳ್ಳ ಅವರಿಗೆ ಸನ್ಮಾನ ಇರಲಿದೆ. ಅಂದು ಮಧ್ಯಾಹ್ನ ಕ್ಯಾರಿಕೇಚರ್ ಬಿಡಿಸಿ ಸೈಂಟ್ ಮೇರಿಸ್ ಕನ್ನಡ ಮಾಧ್ಯಮ ಶಾಲೆಗೆ ನಿಧಿ ಸಂಗ್ರಹಿಸುವ ವಿಶಿಷ್ಟ ಕಾರ್ಯಕ್ರಮ ಚಿತ್ರನಿಧಿ ಇರಲಿದ್ದು ವೈದ್ಯೆ ಡಾ. ಪ್ರಮೀಳಾ ನಾಯಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಂದು ವೈದ್ಯರಾದ ಡಾ. ಜಯಶಂಕರ ಮಾರ್ಲ, ಡಾ. ಇಸ್ತಿಯಾಕ್ ಅಹ್ಮದ್ ಅವರಿಗೆ ಸನ್ಮಾನ ಇರಲಿದೆ. ನ. 18ರ ಬೆಳಿಗ್ಗೆ ವ್ಯಂಗ್ಯಚಿತ್ರಕಾರರಾದ ಜಯರಾಂ ಉಡುಪ, ರಾಮಧ್ಯಾನಿ ಹಾಗೂ ಗುಜ್ಜಾರಪ್ಪ ಅವರೊಂದಿಗೆ ಮಾಸ್ಟರ್‌ಸ್ಟ್ರೋಕ್ ಕಾರ್ಯಕ್ರಮ ಇರಲಿದ್ದು, ವ್ಯಂಗ್ಯಚಿತ್ರಕಾರರ ಹಾಸ್ಯದ ಹಿಂದಿನ ನೋವು ನಲಿವಿನ ಕ್ಷಣಗಳನ್ನು ತೆರದಿಡುವ ಪ್ರಯತ್ನ ನಡೆಯಲಿದೆ. ಈ ಸಂದರ್ಭ ಸುಬ್ರಹ್ಮಣ್ಯ ಮೇಗರವಳ್ಳಿ ಅವರಿಗೆ ಸನ್ಮಾನವಿರಲಿದೆ. ಅಂದು ಮಧ್ಯಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ವರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ, ವ್ಯಂಗ್ಯಚಿತ್ರಕಾರ ಸುರೇಶ್ ಕೋಟ ಅವರಿಗೆ ಸನ್ಮಾನ ಇರಲಿದೆ. ಹೀಗೆ ಮೂರು ದಿನಗಳೂ ವಿವಿಧ ಕಾರ್ಯಕ್ರಮಗಳೊಂದಿಗೆ ಕಾರ್ಟೂನು ಹಬ್ಬ ಜರುಗಲಿದೆ.

  • ದಿನಾಂಕ: ನವೆಂಬರ್ 16, 17, 18
  • ಸ್ಥಳ: ಕಲಾಮಂದಿರ, ಕುಂದಾಪುರ

Leave a Reply

Your email address will not be published. Required fields are marked *

nineteen − 10 =