ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಸೆ.12: ಉದ್ಯಮಿಯೋರ್ವರಿಗೆ ಕಳೆದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಎಂಎಲ್ಎ ಟಿಕೆಟ್ ಕೊಡಿಸುವ ಭರವಸೆ ನೀಡಿ ಬಹುಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚೈತ್ರಾ ಕುಂದಾಪುರ ಸಹಿತ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ, ಗಗನ್ ಕಡೂರು, ಶ್ರೀಕಾಂತ್ ನಾಯಕ್, ರಮೇಶ್ ಹಾಗೂ ಧನರಾಜ್ ಎಂಬ ಐವರನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ದೊರೆತಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ 3ನೇ ಆರೋಪಿ ಹೊಸಪೇಟೆಯ ಅಭಿನವ ಹಾಲಶ್ರೀ ಸ್ವಾಮೀಜಿ, 5ನೇ ಆರೋಪಿ ನಾಯ್ಕ್ ಎಂಬುವವನ್ನು ಇನ್ನಷ್ಟೇ ಬಂಧಿಸಬೇಕಿದ್ದು 8ನೇ ಆರೋಪಿ ಪ್ರಸಾದ್ ಬೈಂದೂರು ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಸೆ.8ರಂದು ಬೈಂದೂರು ಬಿಜೆಪಿ ಮುಖಂಡ, ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಬೆಂಗಳೂರಿನಲ್ಲಿ ಬಂಡೇಪಾಳ್ಯ ಪೊಲೀಸರಿಗೆ ದೂರು ನೀಡಿದ್ದು, ಇದರ ಬೆನ್ನಲ್ಲೇ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ತಲೆಮರೆಸಿಕೊಂಡಿದ್ದ ಚೈತ್ರ ಕುಂದಾಪುರ ಹಾಗೂ ತಂಡವನ್ನು ಉಡುಪಿ ಕೃಷ್ಣ ಮಠದ ಹಾಗೂ ಬೇರೊಂದು ಸ್ಥಳದಲ್ಲಿ ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:
► ಬಿಜೆಪಿ ಎಂಎಲ್ಎ ಟಿಕೆಟ್ ಹೆಸರಲ್ಲಿ ವಂಚನೆ: ಬಿದಿಬದಿ ವ್ಯಾಪಾರಿ, ಮಿಮಿಕ್ರಿ ಆರ್ಟಿಸ್ಟ್‌ಗೆ ವೇಷ ಹಾಕಿಸಿ 5 ಕೋಟಿ ವಂಚನೆ – https://kundapraa.com/?p=68995 .
ಉದ್ಯಮದ ಜೊತೆಗೆ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಬಿಲ್ಲವ ನಾಯಕ ಗೋವಿಂದ ಬಾಬು ಪೂಜಾರಿ ಅವರ ಮುಗ್ದತೆಯನ್ನು ಬಳಸಿಕೊಂಡು 6-7 ಜನರ ತಂಡ ದೊಡ್ಡ ಷಡ್ಯಂತ್ರವನ್ನೇ ನಿರ್ಮಿಸಿತ್ತು. ಗೋವಿಂದ ಪೂಜಾರಿ ಅವರ ಸಹಾಯಕನಾಗಿದ್ದ ಪ್ರಸಾದ್ ಬೈಂದೂರು ಎಂಬಾತನ ಮೂಲಕ ಸಂಪರ್ಕ ಸಾಧಿಸಿ ವಂಚನೆ ಎಸಗುವ ಯೋಜನೆ ರೂಪಿಸಲಾಗಿತ್ತು. ಮೊದಲು ಗಗನ್ ಕಡೂರು ಎಂಬಾತನನ್ನು ಚಿಕ್ಕಮಂಗಳೂರಿನ ಅತಿಥಿ ಗೃಹದಲ್ಲಿ ಜೂನ್ 2022ರಲ್ಲಿ ಭೇಟಿ ಮಾಡಿಸಲಾಗಿತ್ತು. ಇದಕ್ಕೆ ಕೇಂದ್ರದ ನಾಯಕರು, ಆರೆಸ್ಸೆಸ್ ಪ್ರಮುಖರ ಹೆಸರನ್ನು ಬಳಸಿಕೊಂಡದ್ದಲ್ಲದೇ, ಆರ್ ಎಸ್ ಎಸ್ ಪ್ರಮುಖ ವಿಶ್ವನಾಥ ಜೀ [ಬಂಧಿತ ರಮೇಶ್] ಎಂಬ ನಕಲಿ ನಾಯಕರನ್ನು ಸೃಷ್ಟಿಸಿ ಅತನನ್ನೂ ಭೇಟಿ ಮಾಡಿಸಿ ನಂಬಿಸಲಾಗಿತ್ತು. ಚೈತ್ರಾ ಕುಂದಾಪುರ ಹಾಗೂ ಇಬ್ಬರೂ ಸೇರಿ ಕೇಂದ್ರದ ಅಭ್ಯರ್ಥಿ ಆಯ್ಕೆ ಸಮಿತಿಯಲ್ಲಿರುವ ವಿಶ್ವನಾಥ ಜೀ ಮೂಲಕ ಟಿಕೆಟ್ ಕೊಡಿಸುವ ಕಥೆ ಕಟ್ಟಿದ್ದರು. ಟಿಕೆಟ್ ಪಡೆಯಲು ಹಣ ನೀಡಿಲೇಬೇಕು ಎಂಬ ಕಥೆ ಕಟ್ಟಿ ಮೊದಲು 50 ಲಕ್ಷ, ಆಯ್ಕೆ ಪ್ರಕ್ರಿಯೆ ವೇಳೆ 3 ಕೋಟಿ ನೀಡುವಂತೆ ಬೇಡಿಕೆ ಇರಿಸಿದ್ದಲ್ಲದೇ, ಟಿಕೆಟ್ ದೊರೆಯದಿದ್ದರೆ ಹಣ ಹಿಂದಿರುಗಿಸುವ ಭರವಸೆ ನೀಡಿದ್ದರು. ಹಣ ನೀಡಿದ ಮಾತ್ರ ಟಿಕೆಟ್ ದೊರೆಯುವುದಾಗಿ ನಂಬಿಸಿದ್ದರಿಂದ, ಸ್ವಂತ ಆಸ್ತಿ ಹಾಗೂ ಖಾಸಗಿ ಫೈನಾನ್ಸ್ ಮೂಲಕ ಲೋನ್ ಪಡೆದು ಈ ತಂಡಕ್ಕೆ ಹಣ ಸಂದಾಯ ಮಾಡಲಾಗಿತ್ತು. ಮಾತಿನಂತೆ ಮೊದಲು 50 ಲಕ್ಷವನ್ನು ಪ್ರಸಾದ್ ಬೈಂದೂರು ಮೂಲಕ ಗಗನ್ ಎಂಬಾತನಿಗೆ ನೀಡಲಾಗಿತ್ತು.
ಕೆಲ ದಿನದ ಬಳಿಕ ಅಭಿನವ ಹಾಲಶ್ರೀ ಸ್ವಾಮೀಜಿ ಟಿಕೆಟ್ ಹಂಚಿಕೆಯಲ್ಲಿ ಕರ್ನಾಟಕದ ಜವಾಬ್ದಾರಿ ಹೊಂದಿದ್ದು ಅವರನ್ನು ಸಂಪರ್ಕಿಸುವಂತೆ ತಿಳಿಸಲಾಗಿತ್ತು. ಅದರಂತೆ ಅವರನ್ನು ಭೇಟಿಯಾದ ಸಂದರ್ಭ ತಮಗೆ 1.50 ಕೋಟಿ ನೀಡುವಂತೆ ಭೇಟಿ ಇರಿಸಿದ್ದರು. ಅದರಂತೆ ಬೆಂಗಳೂರಿನಲ್ಲಿ 16.01.2023ರಂದು ಅವರಿಗೆ 1.50ಕೋಟಿ ಹಣ ನೀಡಲಾಗಿತ್ತು. ಈ ನಡುವೆ ಚೈತ್ರಾ ಮತ್ತು ಗ್ಯಾಂಗ್ ನಾಯ್ಕ್ ಎಂಬಾತನನ್ನು ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ಪರಿಚಯಿಸಿ ಬಿಜೆಪಿ ಟಿಕೆಟ್ ದೊರೆಯುವುದು ಖಾತರಿಯಾಗಿದೆ ಎಂದು ನಂಬಿಸಿದ್ದರು. ಅದರಂತೆ 29.10.2022ರಂದು 3 ಕೋಟಿ ಹಣವನ್ನು ಮಂಗಳೂರಿನಲ್ಲಿ ಭೇಟಿಯಾಗಿ ನೀಡಲಾಗಿತ್ತು. 08.03.2023ರಂದು ವಿಶ್ವನಾಥ ಜೀ ಎಂಬಾತನಿಗೆ ದುಡ್ಡು ನೀಡಿರುವುದಾಗಿ, ಬಳಿಕ ಆತನೇ ಕಾಶ್ಮೀರದಲ್ಲಿ ಸತ್ತು ಹೋಗಿರುವುದಾಗಿ ವಂಚಕ ತಂಡವು ಗೊವಿಂದ ಪೂಜಾರಿ ಅವರನ್ನು ನಂಬಿಸಿ ತಿಪ್ಪೆ ಸಾರಿಸುವ ಕೆಲಸ ಮಾಡಿದ್ದರು.
ವಿಶ್ವನಾಥ ಜೀ ಎಂಬ ವ್ಯಕ್ತಿಯೇ ಇಲ್ಲ ಎಂಬುದನ್ನು ಅನುಮಾನಗೊಂಡ ಗೋವಿಂದ ಬಾಬು ಪೂಜಾರಿ ಅವರು ಹಣ ಹಿಂತಿರುಗಿಸುವಂತೆ ತಿಳಿಸಿದಾಗ ಚೈತ್ರಾ ಕುಂದಾಪುರ ಎಂಬಾಕೆ ವಿಷದ ಬಾಟಲಿ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಳು. ಕೆಲ ಸಮಯದಲ್ಲಿ ಹಣ ಹಿಂದಿರುಗಿಸುವುದಾಗಿ ಹೇಳಿ ಕಾಲ್ಕಿತ್ತಿದ್ದ ಚೈತ್ರಾ ಮತ್ತು ಗ್ಯಾಂಗ್ ಮತ್ತು ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿತ್ತು. ಈನಡುವೆ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಭೇಟಿ ಮಾಡಿದಾಗ ವಿಶ್ವನಾಥ ಜೀ ಎಂಬುವವರ ಪರಿಚಯವಿಲ್ಲ. ಒಂದು ತಿಂಗಳಲ್ಲಿ ಹಣ ಹಿಂದಿರುಗಿಸುವುದಾಗಿ ಹೇಳಿಕೊಂಡಿದ್ದರು. ಒಟ್ಟು 5 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಂಚನೆಗೈಯಲಾಗಿತ್ತು ಎನ್ನಲಾಗಿದೆ./
ಕುಂದಾಪ್ರ ಡಾಟ್ ಕಾಂ ಸುದ್ದಿ/
ಚುನಾವಣೆಯ ಬಳಿಕ ಗೋವಿಂದ ಬಾಬು ಪೂಜಾರಿ ಅವರು ತಮಗಾದ ಅನ್ಯಾಯದ ಬಗ್ಗೆ ಸಂಘಟನೆಯ ಹಿರಿಯರಿಗೆ ಬರೆದ ಪತ್ರವೊಂದು ವೈರಲ್ ಆದ ಬಳಿಕ ವಂಚನೆಯ ಜಾಲ ಬೆಳಕಿಗೆ ಬಂದಿತ್ತು. ಅಂತಿಮವಾಗಿ ಅವರು ನೀಡಿದ ದೂರಿನಂತೆ ಸಿಸಿಬಿ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆಯ ಬಳಿಕ ಪೂರ್ಣ ಮಾಹಿತಿ ಹೊರಬಿಳಲಿದೆ.
One thought on “ಉದ್ಯಮಿಯೋರ್ವರಿಗೆ ಕೋಟ್ಯಂತರ ರೂ. ವಂಚನೆ. ಚೈತ್ರಾ ಕುಂದಾಪುರ ಸಹಿತ ಐವರು ಪೊಲೀಸರ ವಶಕ್ಕೆ”