ಬಸ್ರೂರಿನ ನೆಲದಲ್ಲಿ ಪರಕೀಯರ ವಿರುದ್ಧ ಮೊದಲ ವಿಜಯ ಸಾಧಿಸಿದ್ದ ಛತ್ರಪತಿ ಶಿವಾಜಿ

ಕುಂದಾಪ್ರ ಡಾಟ್ ಕಾಂ ವರದಿ.
ಶತಮಾನಗಳ ಹಿಂದೆ ಮೋರ್ಚುಗೀಸರ ಪ್ರಾಬಲ್ಯ ಮುರಿದ ಮತ್ತು ಡಚ್ಚರನ್ನು ಹಿಮ್ಮೆಟ್ಟಿಸಿ ಬಸ್ರೂರು ಪಟ್ಟಣವನ್ನು ಬಂಧಮುಕ್ತಗೊಳಿಸಿದ ಕೀರ್ತಿಯು ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜನಿಗೆ ಸಲ್ಲುತ್ತದೆ. ತನ್ನ ಸಾಮ್ರಾಜ್ಯ ಸ್ಥಾಪನೆಗೂ ಮೊದಲೇ ಪರಕೀಯರ ವಿರುದ್ಧ ಸೆಣಸಾಡಿ ಅಸಮಾನ್ಯ ಸಾಧನೆಗೈದು ನೌಕಾಬಲದ ಶಕ್ತಿ ಪ್ರದರ್ಶಿಸಿದ ಹೆಗ್ಗಳಿಕೆಯೂ ಶಿವಾಜಿ ಮಹಾರಾಜನದ್ದಾಗಿದೆ.

ಕುಂದಾಪುರ ತಾಲೂಕಿನ ಬಸ್ರೂರು ಒಂದು ಕಾಲದಲ್ಲಿ ಪ್ರಮುಖ ವ್ಯಾಪಾರ ಪಟ್ಟಣವಾಗಿದೆ. ಅಂದು ಬಸ್ರೂರು ಕೆಳದಿ ರಾಜರ ಅಧೀನದಲ್ಲಿತ್ತು. ಆಗ ಕೇರಳದಿಂದ ಮಹಾ ರಾಷ್ಟ್ರದವರೆಗಿನ ಕಡಲತೀರದಲ್ಲಿ ನಂಬರ್ 1 ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿ ವಿದೇಶೀಯರ ವ್ಯಾಪಾರವೂ ಭರದಿಂದ ಸಾಗುತ್ತಿತ್ತು. ಗೋವೆಯಲ್ಲಿ ನೆಲೆಸಿದ್ದ ಫೋರ್ಚುಗೀಸರು ಮತ್ತು ವೆನಗೊರಲಾದಲ್ಲಿ ನೆಲೆಸಿದ್ದ ಡಚ್ಚರು ವ್ಯಾಪಾರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಪೈಪೋಟಿ ನಡೆಸಿದರು. ಇವರಿಬ್ಬರೂ ಭೂಪ್ರದೇಶಕ್ಕಿಂತ ಹೆಚ್ಚು ಸಮುದ್ರ ವ್ಯಾಪ್ತಿಯಲ್ಲಿ ಮೇಲ್ಗೆ  ಸಾಧಿಸಿದ್ದರು. ಕೆಳದಿ ಅರಸ ಸೋಮಶೇಖರನು ಫೋರ್ಚುಗೀಸರಿಗೆ ವ್ಯಾಪಾರ ಮಾಡಲು ಅವಕಾಶ ಕೊಟ್ಟಿದ್ದ. ಇದರಿಂದ ಕುಪಿತರಾದ ಡಚ್ಚರು ಕೆಳದಿ ಅರಸರಿಗೆ ಆಗಾಗ್ಗೆ ಕಿರು ಕುಳ ನೀಡುತ್ತಿದ್ದರು. ಒಂದು ಮಾಹಿತಿ ಪ್ರಕಾರ ಸೋಮಶೇಖರನೇ ವಿದೇಶೀಯರ ಕಿರುಕುಳ ತಡೆ ಯಲಾಗದೆ ಶಿವಾಜಿಗೆ ಮನವಿ ಮಾಡಿದ್ದನೆಂದೂ ತಿಳಿದುಬರುತ್ತದೆ.

1510ರಲ್ಲಿ ಫೋರ್ಚು ಗೀಸರು ಬಸ್ರೂರಿನ ಮಹತ್ವ ಅರಿತಿದ್ದನು. 1525 ರಲ್ಲಿ ಅವರು ವರ್ತಕರಿಂದ ಅಕ್ಕಿ ಪಡೆದರು. ಫೋರ್ಚುಗೀಸರಿಗೆ ನೀಡಿದ ಅಕ್ಕಿಯನ್ನು ಕಪ್ಪವೆಂದು ಫೋರ್ಚುಗೀಸ್ ದಾಖಲೆ ತಿಳಿಸುತ್ತದೆ. ಅನಂತರ ವ್ಯಾಪಾರ ನೀತಿಯಲ್ಲಿ ಕೊಳ್ಳೆಹೊಡೆಯುವ ಉದ್ದೇಶ ಕಂಡುಬಂತು. ವ್ಯಾಪಾರಸ್ಥರನ್ನು ಹೆದರಿಸಿ ಅಕ್ಕಿಗೆ ತಾವೇ ಮೌಲ್ಯ ನಿಗದಿಪಡಿಸಿ ಕಡಿಮೆ ದರಕ್ಕೆ ಖರೀದಿ ಸುತ್ತಿದ್ದರು. 1583ರಲ್ಲಿ ಸಮುದ್ರ ಕಿನಾರೆಯ ಕೊಡಂಡೇಶ್ವರ ದೇವಸ್ಥಾನಕ್ಕೆ ಬೆಂಕಿ ಇಟ್ಟಾಗ ಸ್ಥಳೀಯರು ಫೋರ್ಚುಗೀಸರನ್ನು ಹೊರದಬ್ಬಲು ಯತ್ನಿಸಿದ್ದರು.

ಶಿವಾಜಿ ಬಸ್ರೂರಿನ ಮೇಲೆ ದಾಳಿ ಮಾಡಿದಾಗ ಇನ್ನೂ ಸಾಮ್ರಾಜ್ಯವನ್ನು ಸ್ಥಾಪಿಸಿರಲಿಲ್ಲ. 1674ರಲ್ಲಿ ಸಾಮ್ರಾಜ್ಯ ಸ್ಥಾಪನೆ ಮಾಡಿದ್ದರೆ 9 ವರ್ಷ ಮುಂಚೆ ಬಸ್ರೂರು ದಾಳಿ ನಡೆದಿತ್ತು. 35ನೆಯ ವಯಸ್ಸಿಗೆ ಬಸ್ರೂರು ದಾಳಿಯಂತಹ ಅಸಾಮಾನ್ಯ ಸಾಹಸಕ್ಕೆ ಶಿವಾಜಿ ಕೈಹಾಕಿ ಯಶಸ್ವಿಯಾಗಿದ್ದರು, 4,000 ನಾವಿಕರನ್ನು ಕಲೆ ಹಾಕಿದ್ದರು ಎನ್ನುವುದು ಸಂಘಟನಾ ಚಾತುರ್ಯವನ್ನು ಎತ್ತಿ ತೋರಿಸುತ್ತದೆ.

ಅಫ್ಸಲ್ಖಾನ್ ವಿರುದ್ಧ ಗೆಲುವು ಸಾಧಿಸಿದ್ದು 1659ರಲ್ಲಿ. ಹೆಚ್ಚಾ ಕಡಿಮೆ ಇದೇ ವೇಳೆ ಕಲ್ಯಾಣ್ನಲ್ಲಿ ಫೋರ್ಚುಗೀಸರ ಮೇಲೆ ದಾಳಿ ನಡೆಸಲು ನೌಕಾಪಡೆಯ ಸಿದ್ಧತೆ ಆರಂಭವಾಯಿತು. 1664ರ ನವೆಂಬರ್ 25ರಂದು ಸಿಂಧುದುರ್ಗದ ಕೋಟೆಗೆ ಶಂಕುಸ್ಥಾಪನೆ ನಡೆಯಿತು. 1665ರ ಫೆಬ್ರವರಿ 8ರಂದು ಮಲಾಂಡ್ನಿಂದ ಬಸ್ರೂರಿಗೆ ಶಿವಾಜಿಯ ದಿಗ್ವಿಜಯ ಮೂರು ದೊಡ್ಡ ನೌಕೆ, 85 ಸಣ್ಣ ನೌಕೆಗಳೊಂದಿಗೆ ಆರಂಭವಾಯಿತು. ಗೋವಾದಲ್ಲಿ ಯಾವುದೇ ಅಡೆತಡೆ ಇಲ್ಲದೆ ಉತ್ತರ ಕನ್ನಡದ ಕರಾವಳಿಯನ್ನು (ಕಾರವಾರ, ಹೊನ್ನಾವರ, ಭಟ್ಕಳ) ದಾಟಿ ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟ ಕುಂದಾಪುರ ಬಳಿಯ ಬಸ್ರೂರಿಗೆ ತಂದು ತಲುಪಿದ. ಫೆ. 13 ಅಥವಾ 14ರಂದು ಆಕ್ರಮಣ ನಡೆಯಿತು. ಆದರೆ 1664ರ ನವೆಂಬರ್ನಲ್ಲಿಯೇ ನಾಲ್ಕು ನೌಕೆಗ ಳೊಂದಿಗೆ ಶಿವಾಜಿ ಸರ್ವೆ ನಡೆಸಿದ್ದ ಎಂದು ಪುಣೆ ಡೆಕ್ಕನ್ ಕಾಲೇಜು ಸಂಶೋಧನ ಸಂಸ್ಥೆ (ಡೀಮ್ಡ್ ವಿ.ವಿ.) 1942ರಲ್ಲಿ ನಡೆಸಿದ ಅಧ್ಯಯನದಲ್ಲಿ ಟಿ.ಎಸ್.ಶೇಜ್ವಾಲ್ಕರ್ ತಿಳಿಸಿದ್ದಾರೆ.

ಆಗ ಅಲ್ಲಲ್ಲಿ ಇದ್ದ ಮರಳು ದಿಬ್ಬಗಳು, ಬಂಡೆಗಳು ನೌಕೆಗಳನ್ನು ಚಲಾಯಿಸಲು ಅಡ್ಡಿಯಾಗಿದ್ದವು ಎನ್ನುವಾಗ ಹಟ್ಟಿಕುದ್ರು, ಹೇರಿಕುದ್ರು, ಉಪ್ಪಿನಕುದ್ರು ವಲ್ಲದೆ ಹಲವು ದ್ವೀಪಗಳಿದ್ದವು ಎಂಬ ಉಲ್ಲೇಖ ಬರುತ್ತದೆ. ಹೀಗಾಗಿ ಅಮಾವಾಸ್ಯೆ ಸಮಯದಲ್ಲಿ ಬೆಳ್ಳಂಬೆಳಗ್ಗೆ (ಭರತ=ನೀರಿನ ಏರಿಕೆ ಹೆಚ್ಚಿದ್ದಾಗ) ಶಿವಾಜಿಯ ಸೈನ್ಯ ದಾಳಿ ನಡೆಸಿತ್ತು. ಬಳಿಕವೇ ಅಲ್ಲಿದ್ದವರಿಗೆ ತಿಳಿದದ್ದು. ಇದನ್ನು ಸರ್ಜಿಕಲ್ ಸ್ಟ್ರೈಕ್ಗೆ ಹೋಲಿಸಬಹುದು. ಶಿವರಾತ್ರಿ ಸಮಯದಲ್ಲಿ ಗೋಕರ್ಣಕ್ಕೆ ಸಾರ್ವಜನಿಕರ, ವರ್ತಕರ ಜತೆ ಸಂಪತ್ತಿನ ಜಮಾವಣೆ ಯಾಗುವುದರಿಂದ ಶಿವಾಜಿ ಈ ಸಮಯವನ್ನು ಆಯ್ದುಕೊಂಡ ಎಂದು ತಿಳಿದು ಬರುತ್ತದೆ. ಒಂದು ಕೋಟಿ ಹೊನ್ನು, ಫೋರ್ಚು ಗೀಸರಿಗೆ ಅರಬ್ ರಾಷ್ಟ್ರಗಳಿಂದ ಬರುತ್ತಿದ್ದ ಕುದುರೆ ಗಳನ್ನೂ ಆತ ಕೊಂಡೊಯ್ದಿದ್ದ ಎನ್ನಲಾಗುತ್ತಿದೆ. ಬಸ್ರೂರು ಬಳಿಕ ಭಟ್ಕಳ, ಹೊನ್ನಾವರದ ಮೇಲೂ ದಾಳಿ ನಡೆದಿದೆ ಎನ್ನಬಹುದಾದರೂ ದಾಖಲೆಗಳಿಲ್ಲ. ಬಳಿಕ ಗೋಕರ್ಣಕ್ಕೆ (ಫೆ. 18?) ಹೋಗಿ ಪೂಜೆ ನಡೆಸಿದ. ವಾಪಸು ಹೋಗುವಾಗ ಅಂಕೋಲಕ್ಕೆ ಭೂಮಾರ್ಗದಲ್ಲಿ ತೆರಳಿದ. ಒಂದೆಡೆ ಸಮುದ್ರ ಮಾರ್ಗದಲ್ಲಿ ಸಂಪತ್ತಿನ ರವಾನೆ, ಇನ್ನೊಂದೆಡೆ 12 ಸಣ್ಣ ನೌಕೆಗಳು ನದಿ ತಟಾಕದಲ್ಲಿ ಶಿವಾಜಿ ಜತೆಗೆ ಹೋಗಿದ್ದವು. ಹೋಳಿ ಹಬ್ಬ ಮುಗಿದು ಕಾರವಾರಕ್ಕೆ ಫೆ. 22ರಂದು ತೆರಳಿ ಮರುದಿನವೇ ಮಹಾರಾಷ್ಟ್ರಕ್ಕೆ ಹಿಂದಿರುಗಿದ. ಬಸ್ರೂರು ದಾಳಿ ನಡೆದು 355 ವರ್ಷಗಳು ಕಳೆದರೂ ಇತಿಹಾಸವನ್ನು ಮರೆಯಲಾಗದು.

Leave a Reply

Your email address will not be published. Required fields are marked *

1 + 20 =