ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕಳಿ-ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ತಯಾರಿಸಲಾದ ನೈಸರ್ಗಿಕ ಹಾಗೂ ಸಾವಯವ ವಸ್ತುಗಳಿಂದ ತಯಾರಿಸಲಾದ ಚಿತ್ರಕೂಟ ‘ಶಿಶು ಪೋಷಕ್’ ಮಕ್ಕಳ ಆಹಾರ ಉತ್ಪನ್ನವನ್ನು ಶುಕ್ರವಾರ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಬಿಡುಗಡೆಗೊಳಿಸಿದರು.
ಬಳಿಕ ಅವರು ಮಾತನಾಡಿ, ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯೂ ನಾನು, ನನ್ನದು ಎನ್ನುವ ಭಾವನೆಯನ್ನು ಮೀರಿ ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯ ಮಾಡಬೇಕು. ಚಿತ್ತೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯವು ದೇಶ ವಿದೇಶದ ಜನರಿಗೆ ಶುಶ್ರೂಷೆ ನೀಡಿ ವಿದೇಶಿ ವಿನಿಮಯಕ್ಕೆ ತನ್ನದೆಯಾದ ಕೊಡುಗೆ ನೀಡುತ್ತಿದೆ. ಆಯುರ್ವೇದದ ಸಾಕಷ್ಟು ಉತ್ಪನ್ನಗಳನ್ನು ತಯಾರಿಸಿ ಆರೋಗ್ಯ ವೃದ್ದಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಜಪ್ತಿ ಸತ್ಯನಾರಾಯಣ ಉಡುಪ ಅವರು ಮಾತನಾಡಿ ಜನರಿಗೆ ಆಯುರ್ವೇದದ ಮಹತ್ವ ತಿಳಿಸುವ, ಹೊಸ ಹೊಸ ಪ್ರಯೋಗಳನ್ನು ಚಿತ್ರಕೂಟ ಮಾಡುತ್ತಿದೆ. ಕೋವಿಡ್‌ಸಮಯದಲ್ಲಿ ಇಲ್ಲಿ ತಯಾರಿಸಲಾದ ಪಂಚರಕ್ಷಕ್ ಕಿಟ್ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಪ್ರಧಾನಿಯವರ ಆತ್ಮನಿರ್ಭರ ಭಾರತ್ ಕಲ್ಪನೆಯಂತೆ ವಿವಿಧ ಉತ್ಪನ್ನ ತಯಾರಿ, ಸ್ಥಳೀಯರಿಗೆ ಉದ್ಯೋಗ ಸೃಷ್ಠಿಯ ಮೂಲಕ ಚಿತ್ರಕೂಟವೂ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಚಿತ್ತೂರು ಮೂಕಾಂಬಿಕ ಕ್ಲಿನಿಕ್‌ನ ವೈದ್ಯರಾದ ಡಾ. ಅತುಲ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಾವಯವ ಕೃಷಿಕ ಮಹಾಬಲ ಬಾಯರಿ ಉಪಸ್ಥಿತರಿದ್ದರು.
‘ಶಿಶು ಪೋಷಕ್’ ಉತ್ಪನ್ನದ ಬಗ್ಗೆ ಚಿತ್ರಕೂಟದ ರೂವಾರಿ, ಆಯುರ್ವೇದ ವೈದ್ಯರಾದ ಡಾ| ರಾಜೇಶ ಬಾಯರಿ ಅವರು ಮಾತನಾಡಿ, ‘ಶಿಶು ಪೋಷಕ್’ ಮೊಳಕೆ ಬರಿಸಿದ ಧಾನ್ಯಗಳಿಂದ ತಯಾರಿಸಿದ ಆರು ತಿಂಗಳ ಮೇಲಿನ ಮಕ್ಕಳ ಆಹಾರವಾಗಿದೆ. ಇದು ಸಂಪೂರ್ಣ ನೈಸರ್ಗಿಕ ಉತ್ಪನ್ನವಾಗಿದ್ದು ಮಗುವಿಗೆ ಬೇಕಾದ ಪೌಷ್ಠಿಕಾಂಶ ಮತ್ತು ಖನಿಜಾಂಶಗಳನ್ನು ಒಳಗೊಂಡಿದ್ದು, ಮಗುವಿನ ಸಂಪೂರ್ಣ ಬೆಳವಣಿಗೆಗೆ ಸಹಕಾರಿಯಾಗಿದೆ. ಮಗುವಿನ ದೈಹಿಕ ಬೆಳವಣಿಗೆಗೆ ಬೇಕಾಗುವ ಮೊಳಕೆ ಬರಿಸಿದ ಧಾನ್ಯಗಳು ಮಾತ್ರವಲ್ಲದೆ ಮಾನಸಿಕ ಬೆಳವಣಿಗೆಗೆ ಬೇಕಾಗುವ ಬ್ರಾಹ್ಮಿ ಮತ್ತು ಒಣ ಹಣ್ಣು ಇತ್ಯಾದಿ ಪದಾರ್ಥಗಳನ್ನೊಳಗೊಂಡ ಒಂದು ಉತ್ಪನ್ನ. ಯಾವುದೇ ಕೃತಕ ಬಣ್ಣ ಮತ್ತು ರಾಸಾಯನಿಕಗಳನ್ನು ಒಳಗೊಂಡಿಲ್ಲ. ಕಳೆದ ಮೂರು ವರ್ಷಗಳಿಂದ ಈ ಉತ್ಪನ್ನವನ್ನು ತಯಾರಿಸಲಾಗುತ್ತಿದ್ದು ಹಲವಾರು ಜನ ಇದನ್ನು ಬಳಕೆ ಮಾಡಿದ್ದಾರೆ. ಪ್ರಯೋಗಾಲಯಗಳಿಂದ ಪರೀಕ್ಷೆಗೆ ಒಳಪಡಿಸಿ ಸರಕಾರದ ಎಲ್ಲಾ ಪರವಾನಿಗೆ ಪಡೆಯಲಾಗಿದೆ ಎಂದರು. ರಾಗಿ ರಿಚ್, ಅಕ್ಕಿ ರಿಚ್ ಪ್ಲೇವರ್ ಮಾರುಕಟ್ಟೆಗೆ ಬಂದಿದ್ದು ಹಾಗೂ ಬನಾನ ರಿಚ್ ಸದ್ಯದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದರು.
ಆರಾಧ್ಯ ಬಾಯರಿ ಪ್ರಾರ್ಥಿಸಿದರು. ಡಾ| ಅನುಲೇಖ ಬಾಯರಿ ವಂದಿಸಿದರು. ಪತ್ರಕರ್ತ ಪ್ರಭಾಕರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.