ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆನೆಗುಡ್ಡೆ ಶ್ರೀ ವಿನಾಯಕ ದೇವಳಕ್ಕೆ ಮಂಗಳವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ನೀಡಿ ೧೦೦೮ ಕಾಯಿ ಗಣಹೋಮದಲ್ಲಿ ಪಾಲ್ಗೊಂಡರು.
ಆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ ವಿಧಾನ ಮಂಡಲ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ನೂತನ ಸಚಿವರಿಗೆ ಇನ್ನೆರಡು ದಿನದಲ್ಲಿ ಖಾತೆ ಹಂಚಿಕೆ ಮಾಡಲಾಗುತ್ತದೆ. ಕರೋನಾ ವೈರಸ್ ಲಾಕ್‌ಡೌನ್ ಇನ್ನಿತರ ಕಾರಣದಿಂದ ಆರ್ಥಿಕ ಹಿನ್ನೆಡೆಯ ಕಾರಣ ಎಚ್ಚರಿಕೆಯಿಂದ ಇತಿಮಿತಿಯಲ್ಲಿ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕಳೆದ ಎರಡು ದಿನದಿಂದ ಲೋಕಕಲ್ಯಾಣ ಹಾಗೂ ರಾಜ್ಯದ ಮಳೆ ಬೆಳೆ ಸಂಮೃದ್ದಿಗಾಗಿ ಉಡುಪಿ ಜಿಲ್ಲೆಯಲ್ಲಿ ಧಾರ್ಮಿಕ ಪ್ರವಾಸ ಮಾಡಿದ್ದು, ದೇವರ ಬಗ್ಗೆ ವಿಶ್ವಾಸ ಇರುವ ಸಮಾಜ ಬಂಧುಗಳು ನಾವಾಗಿರುವುದರಿಂದ ಜೀವನದ ಪ್ರತಿ ಹಂತದಲ್ಲಿಯೂ ಹೆಜ್ಜೆ ಹೆಜ್ಜೆಗಳಿಗೂ ಇರುವ ಸವಾಲಗಳನ್ನು ಎದುರಿಸಲು ದೇವರ ಮೊರೆ ಹೋಗುತ್ತೇವೆ. ವಿಘ್ನ ನಿವಾರಕನಾದ ಕುಂಭಾಸಿಯ ವಿನಾಯಕನಲ್ಲಿಯೂ ವಿಘ್ನ ನಿವಾರಣೆ ಮಾಡಿ ಲೋಕ ಕಲ್ಯಾಣಾವಾಗಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡುತ್ತೇವೆ ಎಂದರು.
ಕರೋನಾ ಕಾರಣ ದೇಶದಲ್ಲಿ ಸಾಕಷ್ಟು ಸಾವು-ನೋವುಗಳಾಗಿದೆ. ಆರ್ಥಿಕ ಸಮಸ್ಯೆಯೂ ಆಗಿದೆ. ಇದೀಗ ಆತ್ಮ ನಿರ್ಭರ ಭಾರತದ ಸಾಕಾರದಲ್ಲಿ ಕೋವಿಡ್-19 ಕ್ಕೆ ವ್ಯಾಕ್ಸಿನ್ ಕಂಡು ಹಿಡಿಯಲಾಗಿದೆ. ಹಲವು ವರ್ಷಗಳ ಕನಸಾಗಿರುವ ಗೋ ಹತ್ಯೆ ನಿಷೇಧ ಕಾಯಿದೆಗೂ ರಾಜ್ಯಪಾಲರ ಅಂಕಿತ ದೊರೆಕಿದೆ ಎಂದರು.
ರಾಜ್ಯ ಬಿಜೆಪಿ ಸರ್ಕಾರ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದ ಅವರು, ಹಣಕಾಸಿನ ಇತಿಮಿತಿಯಲ್ಲಿ ಬಜೆಟ್ ಘೋಷಣೆ ಮಾಡಬೇಕಾಗಿದೆ. ರಾಜ್ಯಕ್ಕೆ ಹಾಗೂ ಎಲ್ಲರಿಗೂ ಹಿತವಾಗುವ ಬಜೆಟ್ ಮಂಡನೆ ಮಾಡುತ್ತೇನೆ ಎಂದು ಹೇಳಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮಾಜಿ ಶಾಸಕ ಜೀವರಾಜ್, ಬಿಜೆಪಿ ಮುಖಂಡರು ಇದ್ದರು.