ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯ 16 ಗ್ರಾಮ ಪಂಚಾಯತ್ ಸಂಪೂರ್ಣ ಲಾಕ್ಡೌನ್ ಅವಧಿ ಜೂ.14ರ ತನಕ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
50ಕ್ಕಿಂತ ಹೆಚ್ಚಿನ ಕೋವಿಡ್ ಪ್ರಕರಣಗಳಿರುವ ಕುಂದಾಪುರ ತಾಲೂಕಿನ ಗಂಗೊಳ್ಳಿ, ಆಲೂರು ಗ್ರಾಮ ಪಂಚಾಯತ್, ಬೈಂದೂರು ತಾಲೂಕಿನ ಶಿರೂರು, ಜಡ್ಕಲ್ ಹಾಗೂ ನಾಡ ಗ್ರಾಮ ಪಂಚಾಯತ್, ಹೆಬ್ರಿ ತಾಲೂಕಿನ ಬೆಳ್ವೆ, ವರಂಗ ಗ್ರಾಮ ಪಂಚಾಯತ್, ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ, ಆವರ್ಸೆ ಗ್ರಾಮ ಪಂಚಾಯತ್, ಕಾಪು ತಾಲೂಕಿನ ಶಿರ್ವ ಗ್ರಾಮ ಪಂಚಾಯತ್ ಹಾಗೂ ಕಾರ್ಕಳ ತಾಲೂಕನ ಬೆಳ್ಮಣ್ಣು, ಮಿಯಾರು, ಪಳ್ಳಿ, ಕಕ್ಕಂದೂರು, ನಲ್ಲೂರು, ಮರ್ಣೆ ಗ್ರಾಮ ಪಂಚಾಯತ್ ಸಂಪೂರ್ಣ ಲಾಕ್ಡೌನ್ ಮಾಡಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ವಿಸ್ತರಿಸಲಾದ ಗ್ರಾಮ ಪಂಚಾಯತಿಗಳಿಗೆ ಅಗತ್ಯ ವಸ್ತುಗಳ ಖರೀದಿಗೆ ಜೂ.9ರ ಬುಧವಾತ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಬಳಿಕ ಜೂ.10 ರಿಂದ 14ರ ವರೆಗೆ ಸಂಪೂರ್ಣ ಲಾಕ್ ಡೌನ್ ಮುಂದುವರೆಯಲಿದೆ.
ಗ್ರಾಮ ಪಂಚಾಯತಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗದಿರುವ ಕಾರಣ ಸಂಪೂರ್ಣ ಲಾಕ್ಡೌನ್ ವಿಸ್ತರಿಸಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಜೂ.10 ರಿಂದ ಜೂ.14ರ ವರೆಗೆ ಸಂಪೂರ್ಣ ಲಾಕ್ ಡೌನ್ ವಿಸ್ತರಿಸಲಾಗಿದೆ.
ಉಳಿದ ಪಂಚಾಯತಿಗಳಿಗೂ ಎಲ್ಲಾ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ರಲ್ಲಿ ಅರಿವು, ಜಾಗೃತಿ ಮೂಡಿಸುತ್ತಿದ್ದೇವೆ. ಹಾಗೂ ಹೆಚ್ಚು ಸೋಂಕಿನ ಪ್ರಕರಣಗಳಿರುವ ಗ್ರಾಮ ಪಂಚಾಯತ್ ಗಳನ್ನು ಕೊರೋನಾ ಮುಕ್ತ ಮಾಡಬೇಕು ಎಂದು ನಿರ್ಧರಿಸಲಾಗಿದೆ ಎಂದವರು ತಿಳಿಸಿದ್ದಾರೆ.