ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಸೆ.2: ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕ, ಜಿ.ಪಂ ಮಾಜಿ ಸದಸ್ಯ ಹರ್ಕೂರು ಮಂಜಯ್ಯ ಶೆಟ್ಟಿ ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದ ಮಂಜಯ್ಯ ಶೆಟ್ಟಿ ಅವರು, ಕಾಂಗ್ರೆಸ್ ಪಕ್ಷದಿಂದ ಒಂದು ಬಾರಿ ಜಿ.ಪಂ ಹಾಗೂ ಒಂದು ಬಾರಿ ತಾ.ಪಂ ಸದಸ್ಯರಾಗಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ದುಡಿದಿದ್ದರು. ಆಲೂರು ಹರ್ಕೂರು ಭಾಗದಲ್ಲಿ ಪ್ರಭಾವಿ ನಾಯಕರೆನಿಸಿಕೊಂಡಿದ್ದರು.
ಬುಧವಾರ ನೆಂಪುವಿನ ಶಾಸಕ ಬಿ. ಎಂ ಸುಕುಮಾರ್ ಶೆಟ್ಟಿ ಅವರ ನಿವಾಸದಲ್ಲಿ ಶಾಸಕರ ಸಮ್ಮುಖದಲ್ಲಿ ಹರ್ಕೂರು ಮಂಜಯ್ಯ ಶೆಟ್ಟಿ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅವರೊಂದಿಗೆ ಕಾಂಗ್ರೆಸ್ ಪಕ್ಷದ ಉಳ್ಳೂರು-೭೪ ಗ್ರಾಮದ ಪ್ರಸಾದ್, ಮುಖಂಡರಾದ ಕೆಂಚನೂರು ಸುಬ್ಬಣ್ಣ ಶೆಟ್ಟಿ, ಸುಧೀರ್, ನವೀನ್ ಆಚಾರ್ಯ ಮೊದಲಾದವರು ಬಿಜೆಪಿಗೆ ಸೇರ್ಪಡೆಗೊಂಡರು.
ಈ ಸಂದರ್ಭ ಜಿ.ಪಂ ಸದಸ್ಯರಾದ ಶಂಕರ್ ಪೂಜಾರಿ, ರೋಹಿತ್ ಶೆಟ್ಟಿ, ಶೋಭಾ ಜಿ ಪುತ್ರನ್ ಕುಂದಾಪುರ ತಾ.ಪಂ ಸದಸ್ಯ ಉಮೇಶ್ ಕಲ್ಗದ್ದೆ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಪ್ರಕಾಶ್ ಜೆಡ್ಡು ಮೊದಲಾದವರು ಉಪಸ್ಥಿತರಿದ್ದರು.
- ಈ ಹಿಂದಿನ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನನ್ನ ವಿರುದ್ಧ ಕಾಂಗ್ರೆಸ್ ಪಕ್ಷದವರು ಷಡ್ಯಂತ್ರ ರೂಪಿಸಿ ಸೋಲಿಗೆ ಕಾರಣರಾಗಿದ್ದಾರೆ. ಬಿಜೆಪಿಯಷ್ಟು ಪ್ರಾಮಾಣಿಕತೆ ಕಾಂಗ್ರೆಸ್ ಪಕ್ಷದಲ್ಲಿಲ್ಲ. ನನ್ನ ಕಾರ್ಯಕರ್ತರ ಅಭಿಪ್ರಾಯವನ್ನು ಕ್ರೋಢೀಕರಿಸಿ ಅವರ ಅಭಿಪ್ರಾಯದಂತೆ ನಾನು ಬಿಜೆಪಿ ಸೇರಿದ್ದೇನೆ. – ಹರ್ಕೂರು ಮಂಜಯ್ಯ ಶೆಟ್ಟಿ
- ಹರ್ಕೂರು ಮಂಜಯ್ಯ ಶೆಟ್ಟಿ ಅವರಂತಹ ಜನಸಾಮಾನ್ಯರ ನೋವು ಅರಿಯುವ ನಾಯಕನ್ನು ಪಕ್ಷ ಸಂತೋಷದಿಂದ ಸ್ವಾಗತಿಸುತ್ತದೆ. ಅವರು ಯಾವುದೇ ಬೇಡಿಕೆ ಇಟ್ಟು ಪಕ್ಷಕ್ಕೆ ಬಂದಿಲ್ಲ. ಆದರೆ ಅವರಿಗೆ ಸೂಕ್ತವಾದ ಸ್ಥಾನಮಾನವನ್ನು ಪಕ್ಷ ನೀಡುತ್ತದೆ. – ಬಿ. ಎಂ. ಸುಕುಮಾರ ಶೆಟ್ಟಿ, ಶಾಸಕರು
- ಹರ್ಕೂರು ಮಂಜಯ್ಯ ಶೆಟ್ಟಿ ಅವರು ಬಿಜೆಪಿ ಪಕ್ಷಕ್ಕೆ ತೆರಳಿರುವು ಬಗ್ಗೆ ನಮ್ಮ ಅಭ್ಯಂತರವಿಲ್ಲ. ಆದರೆ ಪಕ್ಷಾಂತರ ಮಾಡುವ ಸಲುವಾಗಿ ಕಾಂಗ್ರೆಸ್ ಪಕ್ಷವನ್ನೂ ಹಾಗೂ ಕಾರ್ಯಕರ್ತರನ್ನೂ ದೂಷಿಸುವುದು ಸರಿಯಲ್ಲ. ಪಕ್ಷದ ಅವರನ್ನು ಜಿ.ಪಂ, ತಾ.ಪಂ ಸದಸ್ಯರನ್ನಾಗಿ ಮಾಡಿದೆ. ಕೆಪಿಸಿಸಿ ಸದಸ್ಯರನ್ನಾಗಿಸಿದೆ. ಕಾರ್ಯಕರ್ತರು ಅವರಿಗಾಗಿ ದುಡಿದಿದ್ದಾರೆ. ಅವರು ಸೋತಿದ್ದು ಕೆಲವೇ ಮತಗಳ ಅಂತರದಿಂದ. ಅದು ಕೂಡ ಅವರೇ ಹಿಂದೆ ಪ್ರತಿನಿಧಿಸಿದ್ದ ತಾ.ಪಂ ಕ್ಷೇತ್ರದಲ್ಲಿ ಕಡಿಮೆ ಮತಗಳು ಬಂದಿತ್ತು. ಇದರ ಬಗ್ಗೆ ಅವರು ಪರಾಮರ್ಶೆ ಮಾಡಿಕೊಳ್ಳಲಿ – ಕೆ. ಗೋಪಾಲ ಪೂಜಾರಿ, ಮಾಜಿ ಶಾಸಕರು
ಇದನ್ನೂ ಓದಿ:
► ಹಕ್ಲಾಡಿ ಗ್ರಾಮದಲ್ಲೊಂದು ಹೈಕ್ಲಾಸ್ ಬಸ್ ತಂಗುದಾಣ ಉದ್ಘಾಟನೆ – https://kundapraa.com/?p=40668 .