ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಚುನಾವಣೆಯಲ್ಲಿ ಪಕ್ಷದತ್ತ ಬದ್ಧತೆಯಿಂದ ದುಡಿದ ಕಾರ್ಯಕರ್ತರನ್ನು ಸಂಘಟನೆಯಲ್ಲಿ ತೊಡಗಿಸಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲಾಗುವುದು ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ನಾವುಂದದ ಸ್ಕಂದ ಸಭಾಭವನದಲ್ಲಿ ಭಾನುವಾರ ನಡೆದ ಬೈಂದೂರು ವ್ಯಾಪ್ತಿಯ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಮತ್ತು ಸ್ಪರ್ಧಾಳುಗಳ ಅಭಿನಂದನಾ ಸಭೆಯಲ್ಲಿ ಮಾತನಾಡಿ ರಾಜಕೀಯ ಹೋರಾಟದಲ್ಲಿ ಸೋಲು, ಗೆಲುವು ಸಹಜ. ಅವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಚುನಾವಣಾ ಪ್ರಚಾರದ ಆರಂಭದ ಹಂತದಲ್ಲಿ ಪಕ್ಷದೆಡೆಗೆ ಕಂಡುಬಂದ ಜನಬೆಂಬಲ, ಬಿಜೆಪಿಯ ಪೊಳ್ಳು ಆಶ್ವಾಸನೆಗಳ, ಹಣ, ಹೆಂಡ ಹಂಚಿಕೆಯ ಎದುರು ಕುಸಿಯತೊಡಗಿತು. ಶಾಸಕರು ಮತ್ತು ಇತರ ನಾಯಕರು ಕೂಡ ಪ್ರತ್ಯಕ್ಷ ಪ್ರಚಾರ ನಡೆಸುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಇದರ ನಡುವೆ ಕಾಂಗ್ರೆಸ್ ಬೆಂಬಲಿತ ಸದಸ್ಯರ ಸಾಧನೆ ದೊಡ್ಡದು ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕಕುಮಾರ ಕೊಡವೂರು ಅವರು ಸಭೆಯನ್ನು ಉದ್ಘಾಟಿಸಿ ಮಾತನಾಡಿ ಈಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಸಂಖ್ಯೆ ಮತ್ತು ಎಲ್ಲ ಸ್ಪರ್ಧಾಳುಗಳು ಪಡೆದ ಮತಗಳನ್ನು ಪರಿಗಣಿಸಿದಾಗ ಪಕ್ಷದ ಸಾಧನೆಯ ಬಗ್ಗೆ ಅಭಿಮಾನ ಮೂಡುತ್ತದೆ. ಪಕ್ಷ ಅಧಿಕಾರದಲ್ಲಿ ಇಲ್ಲದ ಕಾಲದಲ್ಲಿ, ಸಂಪನ್ಮೂಲ ಕೊರತೆ ಮತ್ತು ಬಿಜೆಪಿಯ ವಾಮಮಾರ್ಗಗಳನ್ನು ಎದುರಿಸಿ ನಡೆಸಿದ ಈ ಹೋರಾಟದಲ್ಲಿ ಕಾಂಗ್ರೆಸ್‌ಗೆ ಜನಬೆಂಬಲದ ಕೊರತೆ ಇಲ್ಲ ಎನ್ನುವುದು ಸಾಬೀತಾಗಿದೆ. ಇದರ ಎಲ್ಲ ಗೌರವ ಪಕ್ಷದ ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್‌ಕುಮಾರ್ ಸ್ವಾಗತಿಸಿದರು. ಎನ್. ನರಸಿಂಹ ದೇವಾಡಿಗ ವಂದಿಸಿದರು. ಈಶ್ವರ ದೇವಾಡಿಗ ನಿರೂಪಿಸಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಯುವ ಘಟಕದ ಅಧ್ಯಕ್ಷ ಶೇಖರ ಪೂಜಾರಿ, ಎಸ್‌ಸಿಎಸ್‌ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ವಿನಯಚಂದ್ರ, ಪ್ರಶಾಂತ ಜತ್ತನ್ನ, ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಗ್ರೀಷ್ಮಾ ಬಿಡೆ, ಪ್ರಮೀಳಾ ದೇವಾಡಿಗ, ಜಗದೀಶ ದೇವಾಡಿಗ, ವಿಜಯ ಶೆಟ್ಟಿ ಇದ್ದರು. ಸಂಪನ್ಮೂಲ ವ್ಯಕ್ತಿ ಜಯವಂತ ರಾವ್ ಮಾಹಿತಿ ನೀಡಿದರು.