ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ರೆಡ್ ಕ್ರಾಸ್ ಘಟಕ, ಕಮಲಶಿಲೆ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, ರಿವರ್ ಸೈಡ್ ರೋಟರಿ ಆಶ್ರಯದಲ್ಲಿ ಕುಂದಾಪುರ ಮಿನಿ ವಿಧಾನ ಸೌಧ ಎದುರು ಮಂಗಳವಾರ ನಡೆದ ಕರೋನಾ, ಹೆಚ್1 ಎನ್1, ಹಕ್ಕಿ ಜ್ವರ, ಮಂಗನ ಕಾಯಿಲೆ ಜಾಗೃತಿ ರಥಕ್ಕೆ ಚಾಲನೆ ನೀಡಲಾಯಿತು.
ಚಾಲನೆ ನೀಡಿದ ಕುಂದಾಪುರ ಉಪ ವಿಭಾಗಾಧಿಕಾರಿ ಕೆ. ರಾಜು ಮಾತನಾಡಿ ಕರೋನಾ ಬಗ್ಗೆ ಪ್ರಸಕ್ತ ಮಾಧ್ಯಮ ಯಾವ ರೀತಿ ಕೆಲಸ ಮಾಡುತ್ತಿದೆ ಎನ್ನುವುದನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಸತ್ಯ ಸುಳ್ಳುಗಳು ಜನರ ನಡುವೆ ಹರಿದಾಡುವಂತಾಗಿದೆ. ಯಾರೂ ದೈರ್ಯ ಕಳೆದುಕೊಳ್ಳಬಾರದು. ಕರೋನಾ ಬಗ್ಗೆ ಜಾಗೃತಿ ಬೇಕು, ಭಯ ಬೇಡ. ಎಲ್ಲರೂ ಒಟ್ಟಾಗಿ ಕರೋನ ವಿರುದ್ಧ ಹೋರಾಡುವ ಮೂಲಕ ಹಿಮ್ಮೆಟ್ಟಿಸೋಣ ಎಂದರು.
ಜಾಗೃತಿ ರಥ ಎಲ್ಲಾ ಕಡೆ ಸಂಚರಿಸಿ ಮಾಹಿತಿ ನೀಡಲಿದೆ. ತಾಲೂಕು ಆರೋಗ್ಯ ಅಧಿಕಾರಿ ನೇತೃತ್ವದಲ್ಲಿ ಜಾಗೃತಿ ರಥಕ್ಕೆ ಚಾಲನೆ ನೀಡಿದ್ದು, ಕರೋನ ಹರಡುವುದು ಹೇಗೆ ತಡಗಟ್ಟಬೇಕು ಹಾಗೇ ಜಾಗೃತಿ ಮೂಡಿಸಬೇಕು ಎನ್ನುವ ನಿಟ್ಟಲ್ಲಿ ರಥದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತದೆ.ಕೆಮ್ಮು ಜ್ವರ ಇನ್ನಿತರ ರೋಗ ಲಕ್ಷಣ ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆದು, ಹರಡದಂತೆ ನೋಡಿಕೊಳ್ಳಬೇಕು. ಎಲ್ಲರೂ ದೇಶದ ಹಿತದೃಷ್ಟಿಯಲ್ಲಿ ಜಾಗೃತರಾದರೆ ಕರೋನ ಹಿಮ್ಮೆಟ್ಟಿಸಲು ಸಾಧ್ಯ ಎಂದು ಹೇಳಿದರು.
ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಮಾತನಾಡಿ, ರಥ ಕುಂದಾಪುರ ಆಯ್ದ ಭಾಗಗಳಲ್ಲದೆ, ಪೇಟೆ ಪಟ್ಟಣಗಳಿಗೆ ಹೋಗಿ ಕರೋನ ಇನ್ನಿತರ ಜ್ವರದ ಬಗ್ಗೆ ಜಾಗೃತಿ ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಮಾಹಿತಿ ನೀಡಲಿದೆ.
ಕುಂದಾಪುರ ರೆಡ್ಕ್ರಾಸ್ ಘಟಕ ಸಭಾಪತಿ ಎಸ್. ಜಯಕರ ಶೆಟ್ಟಿ, ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೊ, ರೋಟರಿ ಮಾಜಿ ಗೌವರ್ನರ್ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ತಾಲೂಕು ದಂಡಾಧಿಕಾರಿ ತಿಪ್ಪೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಮುಂತಾದವರು ಇದ್ದರು.