ಅಂತರಾಷ್ಟ್ರೀಯ ಮಾದರಿಯ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಕೂಟದ ಸಿದ್ದತೆಗಳು ಪೂರ್ಣ
ಕುಂದಾಪ್ರ ಡಾಟ್ ಕಾಂ
ಕುಂದಾಪುರ: ಚಕ್ರವರ್ತಿ ಕ್ರಿಕೆಟ್ ಕ್ಲಬ್ ವತಿಯಿಂದ ಕುಂದಾಪುರದ ಗಾಂಧಿ ಮೈದಾನದಲ್ಲಿ ಡಿ. 24ರಿಂದ 27ರವರೆಗೆ ನಡೆಯಲಿರುವ 5ನೇ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಕೂಟದ ಸಿದ್ಧತೆಗಳು ಪೂರ್ಣಗೊಂಡಿದ್ದು 4 ದಿನಗಳ ಕಾಲ ಕ್ರಿಕೆಟ್ ಪ್ರಿಯರಿಗೆ ರಸದೌತಣ ಸಿಗಲಿದೆ. ಪಂದ್ಯಾಟಕ್ಕಾಗಿ 43 ತಂಡಗಳು ದೇಶದ ಮೂಲೆ ಮೂಲೆಯಿಂದ ಆಗಮಿಸುತ್ತಿದ್ದು ಚಕ್ರವರ್ತಿ ಟ್ರೋಫಿಗಾಗಿ ವೀರಾವೇಶದ ಸೆಣಸಾಟ ನೀಡಲಿದೆ.
ಈಗಾಗಲೇ ಕ್ರಿಕೆಟ್ ಆಟಗಾರರು, ಕ್ರಿಕೆಟ್ ಅಭಿಮಾನಿಗಳು ಕುಂದಾಪುರಕ್ಕೆ ದೌಡಾಯಿಸುತ್ತಿದ್ದಾರೆ. ನಾಲ್ಕು ದಿನಗಳ ಕಾಲ ಸುಮಾರು 600 ಆಟಗಾರರು ಭಾಗವಹಿಸುವ ನಿರೀಕ್ಷೆಯಿದ್ದು, ಸುಮಾರು 150 ಚಕ್ರವರ್ತಿ ಕ್ರಿಕೆಟ್ ಕ್ಲಬ್ನ ಸ್ವಯಂ ಸೇವಕರ ಪಡೆ ಅವರ ಅನುಕೂಲತೆಗಾಗಿ ಸರ್ವ ಸುಸಜ್ಜಿತ ವ್ಯವಸ್ಥೆಯನ್ನು ನೀಡಲು ಸನ್ನದ್ಧವಾಗಿದೆ.
ಕುಂದಾಪುರದ ಇತಿಹಾಸದಲ್ಲಿ ಪ್ರಥಮ: ಉಡುಪಿ ಮಂಗಳೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕುಂದಾಪುರದಲ್ಲಿ ಅಂತರಾಷ್ಟ್ರೀಯ ಪಂದ್ಯಕೂಟದ ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿರುವುದು ಕುಂದಾಪುರದ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ ಎಂಬುವುದು ಕ್ರಿಕೆಟ್ ಪ್ರೇಮಿಗಳ ಅಭಿಮತ. ತೃತೀಯ ಅಂಪೈರ್, ಮೈದಾನದಲ್ಲಿ ನೇರಪ್ರಸಾರ ವೀಕ್ಷಿಸಲು ಎರಡು ಬೃಹತ್ ಎಲ್ಇಡಿ ಡಿಜಿಟಲ್ ವಾಲ್, ಪಂದ್ಯಾಟದಲ್ಲಿ ತೊಡಗಿರುವ ಎರಡು ತಂಡಗಳಿಗೆ ಡಗೌಟ್ಸ್, ಐಪಿಎಲ್ ಮಾದರಿಯಲ್ಲಿ ಡಿಜೆ ಸಂಗೀತ, ಹೆಲಿಕ್ಯಾಮ್ ಮೂಲಕ ಮೈದಾನದ ಪಕ್ಷಿನೋಟದ ಚಿತ್ರಿಕರಣ, ಬೌಂಡರಿ ಗೆರೆಗಳಿಗೆ ರಂಗುರಂಗಿನ ಕವಚ ಮುಂತಾದ ಹಲವಾರು ವಿನೂತನ ವ್ಯವಸ್ಥೆಯನ್ನು ಈ ಬಾರಿಯ ಟೂರ್ನಿಯಲ್ಲಿ ಮಾಡಲಾಗಿದೆ. ಈ ಪಂದ್ಯಕೂಟದ ಇನ್ನೊಂದು ವಿಶೇಷ ಆಕರ್ಷಣೆಯಾಗಿ ವಿಶಿಷ್ಟ ಮಾದರಿಯ ಪಾನೀಯ ವಾಹನದ ವ್ಯವಸ್ಥೆಯನ್ನು ಮಾಡಲಾಗಿದ್ದು, ಕ್ರೀಡಾಪ್ರೇಮಿಗಳ ಮೆಚ್ಚುಗೆ ಪಾತ್ರವಾಗಲಿದೆ. ಪಂದ್ಯಕೂಟದ ವೀಕ್ಷಣೆಗೆ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸುವ ಸಾಧ್ಯತೆ ಇದ್ದು, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಚಕ್ರವರ್ತಿ ಕ್ರಿಕೆಟ್ ಕ್ಲಬ್ ತನ್ನ ವಿಭಿನ್ನವಾದ ವೈಶಿಷ್ಟತೆಯಿಂದ ಈ ಬಾರಿಯ ಕ್ರಿಕೆಟ್ ಟೂರ್ನಮೆಂಟ್ ಮೂಲಕ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸಲಿದೆ. (ಕುಂದಾಪ್ರ ಡಾಟ್ ಕಾಂ)
ಸಂಜೆ ಚಾಲನೆ: ಈ ಟೂರ್ನಿಯ ಉದ್ಘಾಟನೆಯನ್ನು ಡಿಸೆಂಬರ್ 24ರ ಸಂಜೆ 6:30ಕ್ಕೆ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ನೆರವೇರಿಸಲಿದ್ದಾರೆ. ಕುಂದಾಪುರದ ಜನಪ್ರಿಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಹುಮಾನ ವಿತರಣಾ ಸಮಾರಂಭ ಡಿಸೆಂಬರ್ 27ರ ರಾತ್ರಿ ನಡೆಯಲಿದ್ದು ಕ್ರಿಕೆಟ್ ಹಾಗೂ ಸಿನಿಮಾ ತಾರೆಯರು ಭಾಗವಹಿಸಿ ಸಮಾರಂಭಕ್ಕೆ ಹೆಚ್ಚಿನ ರಂಗು ನೀಡಲಿದ್ದಾರೆ. ಒಟ್ಟಾರೆ ಕುಂದಾಪುರದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದ್ದು, ಈ ದಿನಕ್ಕೆ ಕಾಯುತ್ತಿರುವ ಕ್ರಿಕೆಟ್ ಪ್ರೇಮಿಗಳು ಕುಂದಾಪುರದೆಡೆ ದೌಡಾಯಿಸುತ್ತಿದ್ದಾರೆ. ಚಕ್ರವರ್ತಿಗಳ ಕಿರೀಟಕ್ಕೆ ಇನ್ನೂಂದು ಚಿನ್ನದ ಗರಿ ಸೇರಿಕೊಳ್ಳಲಿದೆ.
ಇದನ್ನೂ ಓದಿ:
ಡಿ.24ರಿಂದ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ 5ನೇ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಟ – http://kundapraa.com/?p=9456 .