ಕೊರೋನಾ ಜಾಗೃತಿ ಸಕಾರಾತ್ಮಕವಾಗಿರಲಿ, ಜಾಗರೂಕತೆ ಹೆಚ್ಚಿಸುವಂತಿರಲಿ

Call us

Call us

ಬೈಂದೂರು ಚಂದ್ರಶೇಖರ ನಾವಡ | ಕುಂದಾಪ್ರ ಡಾಟ್ ಕಾಂ ಲೇಖನ.
ವಿಶ್ವವನ್ನೇ ಭಯಭೀತಗೊಳಿಸಿದ ಕೊರೋನಾ ಭಾರತದಲ್ಲಿ ತಳವೂರದಂತೆ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಡುವೆ ಕೆಲವರು ಈ ಕುರಿತು ಗಂಭೀರರಾಗಿಲ್ಲವೆನ್ನುವುದು ಸಹಾ ಕಾಣಿಸುತ್ತಿದೆ. ಇನ್ನೊಂದೆಡೆ ಸುಳ್ಳು ಸುದ್ದಿಗಳು, ಗಾಭರಿ ಹುಟ್ಟಿಸುವ ವಿಡಿಯೋ ಕ್ಲಿಪ್ಪಿಂಗ್ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಫಾರ್ವರ್ಡ್ ಆಗುತ್ತಲಿವೆ. ಯಾವುದನ್ನು ನಂಬಬೇಕು ಯಾವುದನ್ನು ನಂಬಬಾರದು ಎನ್ನುವುದು ಜನರಿಗೆ ತಿಳಿಯದಾಗಿದೆ. ಕೊರೋನಾ ಮಹಾ ಮಾರಿಯ ಕುರಿತು ಸರಿಯಾದ ಜ್ಞಾನ ಇಲ್ಲದವರೂ ಮನಬಂದಂತೆ ತಮಗೆ ಬಂದ ಮಾಹಿತಿಯನ್ನು ಇತರರಿಗೆ ಕಳಿಸುವುದರಿಂದ ಸಾರ್ವಜನಿಕರ ನಡುವೆ ಗೊಂದಲ ಹೆಚ್ಚುತ್ತಿದೆ.

Call us

Call us

ಜನತಾ ಕರ್ಫ್ಯೂ ಎಂದು ಪ್ರಧಾನಿ ಮೋದಿಯವರು ಘೋಷಿಸಿದ ದಿನ ವಿಮಾನದ ಮೂಲಕ ಔಷದ ಸಿಂಪಡಿಸಲಾಗುವುದು ಎನ್ನುವ ನಕಲಿ ಸುದ್ದಿಗೂ ಸಹಾ ಹವಾ ಸಿಕ್ಕಿತು ಎನ್ನುವುದು ಇಲ್ಲಿ ಗಮನಾರ್ಹ. ಇಟೆಲಿ, ಬ್ರಿಟನ್ ಮತ್ತು ಇದೀಗ ಅಮೇರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲೂ ಸಾವಿರಾರು ಜನ ಕೊರೋನಾ ಸೋಂಕಿಗೊಳಗಾಗಿ ಸಾಯುತ್ತಿದ್ದರೂ ಇತ್ತೀಚೆಗೆ ವೈದ್ಯರೋರ್ವರು ಕೊರೋನಾ ಮಾರಣಾಂತಿಕ ಕಾಯಿಲೆ ಅಲ್ಲ, ಸರ್ಕಾರ ಅನಗತ್ಯ ಕ್ರಮಗಳನ್ನು ಕೈಗೊಂಡು ಜನರನ್ನು ಹೆದರಿಸುತ್ತಿದೆ ಎನ್ನುವ ರೀತಿಯ ಬಾಲಿಶ ಹೇಳಿಕೆಯ ವಿಡಿಯೋ ಜಾರಿ ಮಾಡಿದ್ದು ಕಾಣಬಹುದಾಗಿತ್ತು. ಇನ್ನೋರ್ವ ಮಹಿಳೆ ವಿದೇಶಗಳಿಂದ ಇಪ್ಪತ್ತು ಸಾವಿರ ನಾಗರಿಕರನ್ನು ಕರೆದುಕೊಂಡು ಬಂದು ಅವರ ವೈದ್ಯಕೀಯ ಚೆಕಪ್ ಮಾಡದೇ ಬಿಟ್ಟು ಸರ್ಕಾರ ಸ್ವತಹ ಕೊರೋನಾ ಹಬ್ಬಿಸಿ ಇದೀಗ ಸಂಪೂರ್ಣ ದೇಶವನ್ನೇ ಲಾಕ್ ಡೌನ್ ಮಾಡಿದೆ ಎಂದು ದೂಷಿಸಿದರು.

ಪ್ರಾಯಶ: ಇವೆಲ್ಲವನ್ನು ಗಮನಿಸಿಯೇ ಕುಂದಾಪುರದ ಖ್ಯಾತ ವೈದ್ಯ ಚಿನ್ಮಯಿ ಆಸ್ಪತ್ರೆಯ ಡಾ. ಉಮೇಶ್ ಪುತ್ರನ್ ಒಂದು ವಿಡಿಯೋ ಜಾರಿ ಮಾಡಿ ಜನರ ಗೊಂದಲ ನಿವಾರಿಸಲು ಶ್ರಮಿಸಿದ್ದು ಸಾವಿರಾರು ವೀಕ್ಷಕರ ಗಮನ ಸೆಳೆಯಿತು. ವೈದ್ಯೋ ನಾರಾಯಣ ಹರಿ ಎನ್ನುವ ಮಾತಿನಂತೆ ಕೊರೋನಾ ಕುರಿತು ಅರಿವು ಹುಟ್ಟಿಸುವ, ಗಾಭರಿ ದೂರಮಾಡಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸ್ಪಷ್ಟ ಕಲ್ಪನೆ ಕಟ್ಟಿಕೊಟ್ಟ ಪುತ್ರನ್ ರವರ ಆಶಯ ಸಾವಿರಾರು ಜನರ ಮನ ತಟ್ಟಿತು. ವಿಡಿಯೋ ಸಾರಾಂಶ ಹೀಗಿದೆ.

1. ವೈದ್ಯಕೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಮನುಷ್ಯ ಪ್ರಕೃತಿಯ ಮುಂದೆ ಕೆಲವೊಮ್ಮೆ ಶರಣಾಗತಲಾಗಲೇಬೇಕಾಗುತ್ತದೆ. ಈ ಹಿಂದೆಯೂ ಅನೇಕ ಕಾಯಿಲೆಗಳು ದೊಡ್ಡ ಸಂಖ್ಯೆಯಲ್ಲಿ ಮಾನವ ಪ್ರಾಣಗಳನ್ನು ಬಲಿ ತೆಗೆದುಕೊಂಡಿವೆ. 2000 ದಲ್ಲಿ ಪುಣುಗು ಬೆಕ್ಕಿನಿಂದ ಕಾಣಿಸಿಕೊಂಡ ಸಾರ್ಸ್ ಎನ್ನುವ ರೋಗ ಚೀನಾದಲ್ಲಿ 8000 ಜನರಿಗೆ ತಗಲಿತು ಮತ್ತು ಸುಮಾರು 800 ಜನರ ಸಾವಿಗೆ ಕಾರಣವಾಗಿತ್ತು. ಕೆಲವು ವರ್ಷಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಒಂಟೆಗಳ ಮೂಲಕ ಮರ್ಸ್ ಎನ್ನುವ ರೋಗ ಹರಡಿ ಅನೇಕರು ಸಾವಿಗೀಡಾಗಿದ್ದರು. ಚೀನಾದಲ್ಲಿ ಅಲ್ಲಿನ ಜನರ ಆಹಾರ ಸಂಸ್ಕೃತಿಯ ಕಾರಣದಿಂದ ಶುರುವಾದ ಕೊರೋನಾ ಇದೀಗ ವಿಶ್ವದಾದ್ಯಂತ ಹರಡುತ್ತಿದೆ.

2. ಬಾವಲಿ,ಚಿಪ್ಪು ಹಂದಿಗಳಲ್ಲಿ ಇದ್ದ ವೈರಸ್ ವಂಶಾಭಿವೃದ್ದಿ ಹೊಂದುವಾಗ ರೂಪಾಂತರಗೊಂಡ ಜೀನ್ ನಿಂದ ಹೊಸ ತಳಿಯ ವೈರಸ್ ಹುಟ್ಟಿಕೊಂಡು ಕೊರೋನಾ ಮಹಾಮಾರಿಗೆ ಕಾರಣವಾಗಿದೆ. ಚೀನಾದ ಜನರು ಪ್ರಾಣಿಗಳ ಮಾಂಸವನ್ನು ಹೆಚ್ಚು ಉಪಯೋಗದ ಕುರಿತು ಇರುವ ಅತೀವ ಆಸಕ್ತಿಯಿಂದ ಹಾಗೂ ಅದನ್ನು ಪ್ರತಿಷ್ಠೆಯ ವಿಷಯವಾಗಿಸಿಕೊಂಡಿರುವುದರಿಂದ ಇದು ಚೀನಾದಲ್ಲಿ ಹಾಗೂ ಅಲ್ಲಿಂದ ಜಾಗತೀಕರಣದ ಫಲವಾಗಿ ವಿಶ್ವದಾದ್ಯಂತ ವ್ಯಾಪಿಸಲು ಕಾರಣವಾಗಿದೆ. ಈ ಕಾಯಿಲೆಗೆ ಈಗಾಗಲೇ ವಿಶ್ವದಾದ್ಯಂತ ಲಕ್ಷಾಂತರ ಜನರು ಬಲಿಯಾಗಿದ್ದಾರೆ.

Call us

3. ಕೊರೋನಾ ಸೋಂಕು ತಗಲಿದ 2-14 ದಿನದವರೆಗೆ ವ್ಯಕ್ತಿ ಸಾಮಾನ್ಯರಂತೆ ಇರುತ್ತಾರೆ. ಅರ್ಥಾತ್ ಇಷ್ಟು ದಿನಗಳ ನಂತರವೇ ಅದರ ಪರಿಣಾಮ ಕಾಣಲು ಪ್ರಾರಂಭವಾಗುತ್ತದೆ. ಇಷ್ಟೇ ಅಲ್ಲದೇ ವೈದ್ಯಕೀಯ ಉಪಚಾರದಿಂದ ಸೋಂಕು ಗುಣವಾದ ನಂತರವೂ ಸುಮಾರು ಎರಡು ವಾರಗಳ ಕಾಲ ವೈರಸ್ ರೋಗಿಯ ದೇಹದಲ್ಲಿ ಇರುತ್ತದೆ ಎನ್ನುವುದು ಆತಂಕದ ವಿಷಯ.

4. ಇನ್ನು ಈ ರೋಗದಿಂದ ಸಂಭವಿಸಬಹುದಾದ ಸಾವಿನ ವಿಷಯದ ಕುರಿತು ಹೇಳುವುದಾದರೆ, 2012 ರಲ್ಲಿ ಕಾಣಿಸಿಕೊಂಡ ಮರ್ಸ್ 34% ಅರ್ಥಾತ್ ರೋಗ ತಗಲಿದ ನೂರು ಜನರಲ್ಲಿ 34 ಜನ ಸಾವಿಗೀಡಾಗುತ್ತಿದ್ದರೆ ಕೊರೋನಾ ದಲ್ಲಿ 2-4%ಎನ್ನುವುದು ಗಮನಾರ್ಹ. ಆದರೆ ಚೀನಾದಲ್ಲಿ ಎಂಬತ್ತು ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಸಾವಿಗೀಡಾದವರ ಅನುಪಾತ 22% ಇತ್ತು ಎನ್ನುವುದರಿಂದ ವೃದ್ಧರು ರೋಗನಿರೋಧಕ ಶಕ್ತಿ ಇಲ್ಲದೇ ಹೆಚ್ಚು ಸಂಖ್ಯೆಯಲ್ಲಿ ಸಾವಿಗೀಡಾದರು ಎಂದು ತಿಳಿದು ಬರುತ್ತದೆ. ಹರಡುವಿಕೆಯ ವೇಗ ಇಬ್ಬರಿಂದ ನಾಲ್ವರಿಗೆ, ನಾಲ್ವರು ಎಂಟು ಜನರಿಗೆ ಹರಡುತ್ತಾ ಕ್ಷಿಪ್ರ ಗತಿಯಲ್ಲಿ ಈ ಕಾಯಿಲೆ ವ್ಯಾಪಿಸುತ್ತದೆ ಎನ್ನುವ ಮತ್ತೊಂದು ಗಂಭೀರ ವಿಷಯವನ್ನು ನಾವು ಮನಗಾಣಬೇಕು. ಆದ್ದರಿಂದ ಇದು ತನ್ನ ವಿಷವರ್ತುಲ ಸೃಷ್ಟಿಸುವುದನ್ನು ತಪ್ಪಿಸಬೇಕಾಗಿದೆ. ಈ ದೃಷ್ಟಿಯಲ್ಲಿ ಸರ್ಕಾರದ ಸೋಶಿಯಲ್ ಡಿಸ್ಟೆನ್ಸಿಂಗ್ ಕುರಿತಾದ ಕಠಿಣ ಕ್ರಮಗಳು ಸರಿಯಾದದ್ದು ಎನ್ನಬೇಕಾಗುತ್ತದೆ.

5. ಕೆಮ್ಮು ಮತ್ತು ಸೀನುವಾಗ ಹೊರಹೊಮ್ಮುವ ಜೊಲ್ಲು ದ್ರವದಿಂದ ಕೊರೋನಾ ವೈರಸ್ ಹರಡುವುದರಿಂದ ನಾವು ಒಬ್ಬರಿಗೊಬ್ಬರು ಸುಮಾರು ಒಂದುವರೆ ಮೀಟರ್ ದೂರ ದೂರ ದಲ್ಲಿರಬೇಕು. ಜನಜಂಗುಳಿಯಿಂದ ದೂರ ಇರಬೇಕು. ಮಾಸ್ಕ್ ಧರಿಸಿ ವೈರಾಣುವಿನಿಂದ ರಕ್ಷಣೆ ಪಡೆಯುವುದು ಉತ್ತಮ. ಮಾಸ್ಕನ್ನು ಆಗಾಗ್ಗೆ ಸರಿಸುವುದು ಒಳ್ಳೆಯದಲ್ಲ. ಇದರಿಂದ ಕೈಯ್ಯಲ್ಲಿರುವ ವೈರಾಣು ಮಾಸ್ಕ್ ಗೆ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಕೈಯ್ಯನ್ನು ಆಗಾಗ್ಗೆ ತೊಳೆಯಬೇಕು. ಸರಿ ಸುಮಾರು 20 ಸೆಕೆಂಡ್ ಕಾಲ ಅಂಗೈಯನ್ನು ಹಿಂಭಾಗ, ಮುಂಭಾಗ, ಬೆರಳುಗಳ ನಡುವೆ ಸೆನಿಟೈಸರ್ ನಿಂದ ಚೆನ್ನಾಗಿ ತೊಳೆಯಬೇಕು.

6. ಇನ್ನು ಕೊರೋನಾ ವೈರಸ್ ವಾತಾವರಣದಲ್ಲಿ ಸೊಂಕಿಗೆ ಒಳಗಾದವರ ಕೆಮ್ಮು, ಸೀನು ಮೂಲಕ ಸೇರುತ್ತದೆ. ಜೊಲ್ಲಿನ ಹನಿ ಯಾವ ವಸ್ತುವಿನ ಮೇಲೆ ಬೀಳುತ್ತದೆ ಎನ್ನುವುದರ ಮೇಲೆ ಆ ವೈರಸ್ಸಿನ ಜೀವಿತಾವಧಿ ನಿರ್ಧಾರವಾಗಿರುತ್ತದೆ. ಉಷ್ಣತೆ ಹೆಚ್ಚಾದಂತೆ ಈ ವೈರಾಣುಗಳು ಸಾಯುತ್ತವೆ.

7. ಶುಚಿತ್ವ ಕಾಪಾಡಿಕೊಳ್ಳಬೇಕು. ನಾವಿರುವಲ್ಲಿ ಆಗಾಗ್ಗೆ ಬ್ಲೀಚಿಂಗ್ ದ್ರಾವಣದಿಂದ ಶುದ್ದೀಕರಿಸಿಕೊಳ್ಳಬೇಕು. 70% ಅಲ್ಕೋಹಾಲ್,0.5% ಕಾನ್ಸೆಂಟ್ರೇಶನ್ ನಲ್ಲಿ ಇರುವ ಹೈಡ್ರೋಜನ್ ಪೆರಾಕ್ಸೈಡ್ ಹೊಂದಿದ ಸೈನಿಟೈಸರ್ ಬಳಸಿ ಕೈ ತೊಳೆಯುವುದು ಒಳ್ಳೆಯದು. ಎಲ್ಲಕಿಂತ ಹೆಚ್ಚಾಗಿ ಕೊರೋನಾ ಚೈನ್ ತುಂಡರಿಸುವುದು ಅತ್ಯಂತ ಅವಶ್ಯಕ. ಗುಂಪುಗಳಿಂದ ದೂರವಿರುವುದರಿಂದ ಇದನ್ನು ಸಾಧಿಸಬಹುದು. ಇಟೆಲಿಯಲ್ಲಿ ಎರಡೇ ದಿನದಲ್ಲಿ 12000 ಜನರಿಗೆ ಈ ಸೋಕು ತಗಲಿತ್ತು ಎನ್ನುವುದರಿಂದಲೇ ಇದರ ಚೈನ್ ಎಷ್ಟು ಪ್ರಭಾವೀ ಎಂದು ತಿಳಿಯುತ್ತದೆ.

8. ಕೊನೆಯದಾಗಿ ಕೊರೋನಾ ನಮ್ಮ ಆರ್ಥಿಕತೆಗೆ ಬಲವಾದ ಪೆಟ್ಟು ಕೊಟ್ಟಿದೆ. ಇವತ್ತೇ ದುಡಿದು ಇವತ್ತು ತಿನ್ನಬೇಕು ಎನ್ನುವ ಸ್ಥಿತಿಯ ಶ್ರಮ ಜೀವಿ ವರ್ಗ ತತ್ತರಿಸಿದೆ. ಇದರ ವ್ಯಾಪಕ ಹರಡುವಿಕೆಯ ಪರಿಣಾಮ ಭಯಾನಕವಾಗಬಹುದು. ಪರಿಸ್ಥಿತಿಯ ಗಂಭೀರತೆಯನ್ನು ನಾವೆಲ್ಲರೂ ತಿಳಿಯಬೇಕಾಗಿದೆ. ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಇಲ್ಲಿ ಪ್ರಕಟಗೊಂಡಿರುವುದು ಲೇಖಕರು ಹಾಗೂ ಅವರು ತಿಳಿಸಿದ ವಿಡಿಯೋದಲ್ಲಿನ ವೈದ್ಯರ ಅಭಿಪ್ರಾಯವಾಗಿರುತ್ತದೆ.

  • Aarogya Setu is a mobile application developed by the Government of India to prevent the spread of COVID19 in India. It will help us to stay informed with the latest updates against COVID19, & enable the Govt to plan initiatives. Install it from Play Store: http://bit.ly/AarogyaSetu_PS IoS: https://apple.co/2X1KMzO 

Leave a Reply

Your email address will not be published. Required fields are marked *

17 − 16 =