ಉಡುಪಿ ಜಿಲ್ಲೆಯ ಕೋವಿಡ್ -19 ಸರ್ಕಾರಿ ಪರೀಕ್ಷಾ ಲ್ಯಾಬ್ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಿರುವ ಕೋವಿಡ್-19 ಸರ್ಕಾರಿ ಪರೀಕ್ಷಾ ಲ್ಯಾಬನ್ನು ರಾಜ್ಯದ ಮುಜರಾಯಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಬುಧವಾರ ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ, ರಾಜ್ಯದಲ್ಲೇ ಕೊರೋನಾ ಆರಂಭದಲ್ಲಿ ಕೇವಲ ಒಂದು ಪರೀಕ್ಷಾ ಲ್ಯಾಬ್ ಮಾತ್ರ ಇದ್ದು, ಆದರೆ ಈ ಲ್ಯಾಬಿನೊಂದಿಗೆ ರಾಜ್ಯದಲ್ಲಿನ ಕೋವಿಡ್ ಪರೀಕ್ಷಾ ಲ್ಯಾಬ್ ಗಳ ಸಂಖ್ಯೆ 82 ಕ್ಕೇರಿದೆ. ಜಿಲ್ಲೆಯಲ್ಲಿ ಮೊದಲು ಟೆಸ್ಟಿಂಗ್ ಗಾಗಿ ಮಂಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳನ್ನು ಅವಲಂಬಿಸಬೇಕಿತ್ತು, ಈಗ ಇಲ್ಲಿಯೇ ಲ್ಯಾಬ್ ಆರಂಬಿಸಿರುವುದರಿಂದ ಇನ್ನು ಮುಂದೆ ಇಲ್ಲಿಯೇ ಶೀಘ್ರದಲ್ಲಿ ವರದಿ ಪಡೆಯಬಹುದಾಗಿದೆ. ಹೊರ ರಾಜ್ಯ, ದೇಶಗಳಿಂದ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವವರಿಗಾಗಿ, ಇಲ್ಲಿ ಲ್ಯಾಬ್ ನ ಆರಂಭಿಸಬೇಕಾದ ಅವಶ್ಯಕತೆ ಮನಗಂಡು ಮಾನ್ಯ ಮುಖ್ಯಮಂತ್ರಿಗಳು ಈ ಲ್ಯಾಬ್ ನ್ನು ಉಡುಪಿ ಜಿಲ್ಲೆಗೆ ವಿಶೇಷವಾಗಿ ಮಂಜೂರು ಮಾಡಿದ್ದಾರೆ ಎಂದು ಸಚಿವ ಕೋಟ ತಿಳಿಸಿದರು.

ಕೋರೋನಾ ನಿಯಂತ್ರಣ ಮತ್ತು ನಿರ್ವಹಣೆ ಕುರಿತಂತೆ, ಉಡುಪಿ ಜಿಲ್ಲಾಡಳಿತ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದಕ್ಕಾಗಿ , ಜಿಲ್ಲೆಯ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು ಮತ್ತು ವಿಶೇಷವಾಗಿ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಲ್ಲೆಯಲ್ಲಿ ಕೋವಿಡ್-19 ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ವಿಳಂಬವಾಗದಿರದಂತೆ ರೂಪಿಸಿರುವ, ಅಂಬುಲೆನ್ಸ್ ಮಾನಿಟರಿಂಗ್ ಸಿಸ್ಟಂ ಯೋಜನೆಯನ್ನು ಶಾಸಕ ಸುನೀಲ್ ಕುಮಾರ್ ಉದ್ಘಾಟಿಸಿದರು. ಈ ಯೋಜನೆಗಾಗಿ ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಅಂಬುಲೈನ್ಸ್ ಗಳಿಗೆ ಜಿ.ಪಿ.ಎಸ್. ಅಳವಡಿಸಿದ್ದು, ಅಂಬುಲೆನ್ಸ್ ಯಾವ ಸ್ಥಳದಲ್ಲಿವೆ ಎಂಬ ಮಾಹಿತಿ ಬೆರಳ ತುದಿಯಲ್ಲಿಯೇ ದೊರೆಯಲಿದ್ದು, ಇದರಿಂದ ಕೋವಿಡ್ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ವಿಳಂಬಕ್ಕೆ ಆಸ್ಪದ ನೀಡದಂತೆ ಸಮೀಪದ ಆಂಬುಲೆನ್ಸ್ ಬಳಸಿಕೊಳ್ಳಬಹುದಾಗಿದ್ದು, ರಾಜ್ಯದಲ್ಲೇ ಈ ಯೋಜನೆ ಪ್ರಥಮವಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.

ಜಿಲ್ಲೆಯಲ್ಲಿನ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಬೆಡ್ ಗಳ ಕುರಿತು ಮಾಹಿತಿ ನೀಡಲು ರೂಪಿಸಿರುವ ಬೆಡ್ ಮ್ಯಾನೇಜ್’ಮೆಂಟ್ ಸಿಸ್ಟಂಅನ್ನು ಶಾಸಕ ರಘುಪತಿ ಭಟ್ ಉದ್ಘಾಟಿಸಿದರು. ಈ ಯೋಜನೆಯ ಪ್ರಕಾರ ಜಿಲ್ಲೆಯಲ್ಲಿನ ಕೊರೋನಾ ರೋಗಿಗೆ ಆತನಿಗೆ ಸಮೀಪದ ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಗಳು ರೋಗಿಗಳಿಗೆ ಖಾಲಿ ಇವೆ, ಏನು ಅಗತ್ಯ ಸೌಲಭ್ಯಗಳಿವೆ ಎಂಬ ಮಾಹಿತಿ ದೊರೆಯಲಿದೆ.

ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಡಿಹೆಚ್‌ಓ ಡಾ.ಸುಧೀರ್ ಚಂದ್ರ ಸೂಡಾ, ಕೋವಿಡ್-19 ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ , ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಕೋವಿಡ್ ಲ್ಯಾಬ್ ನಿರ್ಮಾಣಕ್ಕೆ ₹ 1 ಕೋಟಿ ತಗುಲಿದ್ದು, ಅತ್ಯಾಧುನಿಕ ಯಂತ್ರಗಳು ಹಾಗೂ ಉಪಕರಣಗಳನ್ನು ಅಳವಡಿಸಲಾಗಿದೆ. ‘ಲ್ಯಾಬ್ ಕಟ್ಟಡ ಕಾಮಗಾರಿಗೆ ₹ 45 ಲಕ್ಷ ವೆಚ್ಚವಾಗಿದೆ. ಪ್ರಯೋಗಾಲಯದಲ್ಲಿ ಒಬ್ಬರು ಮೈಕ್ರೊಬಯಾಲಜಿಸ್ಟ್ ಹಾಗೂ 8 ಲ್ಯಾಬ್ ಟೆಕ್ನಿಷಿಯನ್‌ಗಳ‌ ನೇಮಕ ಮಾಡಲಾಗಿದ್ದು, ಮೈಕ್ರೊ ಬಯಾಲಜಿಸ್ಟ್ ಹಾಗೂ ಇಬ್ಬರು ಲ್ಯಾಬ್ ಟೆಕ್ನಿಷಿಯನ್‌ಗಳಿಗೆ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ತರಬೇತಿ ನೀಡಲಾಗಿದೆ’. ‘ಸಂಪೂರ್ಣ ಹವಾನಿಯಂತ್ರಿತ ಲ್ಯಾಬ್‌ನಲ್ಲಿ ಒಂದು ಬಾರಿಗೆ 96 ಸ್ಯಾಂಪಲ್‌ಗಳ ಪರೀಕ್ಷೆ ಮಾಡಬಹುದಾಗಿದ್ದು, ವರದಿಗೆ 4 ರಿಂದ 6 ಗಂಟೆ ಬೇಕಾಗುತ್ತದೆ. ಅದರ ಪ್ರಕಾರ, ಲ್ಯಾಬ್‌ನಲ್ಲಿ ದಿನಕ್ಕೆ ಗರಿಷ್ಠ 300 ಮಾದರಿ ಪರೀಕ್ಷಿಸಿ ವರದಿ ಪಡೆಯಬಹುದು. ಮಾದರಿ ಸಂಗ್ರಹದಿಂದ ವರದಿಯ ಫಲಿತಾಂಶದವರೆಗಿನ ಎಲ್ಲ ಪ್ರಕ್ರಿಯೆಗಳು ಆನ್‌ಲೈನ್‌ನಲ್ಲಿ ದಾಖಲಾಗಲಿದ್ದು, ಐಸಿಎಂಆರ್ ಮಾರ್ಗಸೂಚಿಯನ್ವಯ ನಡೆಯಲಿದೆ. ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಪರೀಕ್ಷೆ ನಡೆಸಲಿದ್ದಾರೆ. ‘ಆರಂಭದಲ್ಲಿ ರೋಗಿಗಳ ಮಾದರಿಯನ್ನು ಪ್ರೊಸೆಸಿಂಗ್ ಕೊಠಡಿ ಯಲ್ಲಿ ಸ್ವೀಕರಿಸಿ, ಬಯೋ ಸೇಪ್ಟಿ ಕ್ಯಾಬಿನೆಟ್‌ನಲ್ಲಿಟ್ಟು, ಬಳಿಕ ಪಾಸ್ ಬಾಕ್ಸ್ ಮೂಲಕ ಪರೀಕ್ಷಾ ಕೊಠಡಿಗೆ ರವಾನಿಸಲಾಗುವುದು. ನಂತರ ಆರ್‌ಟಿಪಿಸಿಆರ್ ಯಂತ್ರದಿಂದ ಮಾದರಿ ಪರೀಕ್ಷೆ ಗೊಳಪಡಿಸಲಾಗುವುದು’

 

Leave a Reply

Your email address will not be published. Required fields are marked *

13 + 16 =