ಮಿತಿ ಮೀರಿದ ಟೇಸ್ಟಿ ಪೌಡರ್ ಬಳಸಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಜಿಲ್ಲೆಯಲ್ಲಿ ಯಾವುದೇ ಬಗೆಯ ಆಹಾರ ತಯಾರಿಕೆಯಲ್ಲಿ ಮಿತಿ ಮೀರಿದ ಟೇಸ್ಟಿ ಪೌಡರ್ ಬಳಕೆ ಕಂಡು ಬಂದಲ್ಲಿ ಅಂತಹ ಆಹಾರ ತಯಾರಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಸಿದ್ದಾರೆ

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ , ಆಹಾರ ಸುರಕ್ಷತೆ ಕುರಿತ ಜಿಲ್ಲಾ ಮಟ್ಟದ ಸಲಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗೋಬಿ ಮಂಚೂರಿ, ಚೈನೀಸ್ ತಿನಿಸುಗಳು ಮುಂತಾದ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ರುಚಿಯ ಹೆಚ್ಚಳಕ್ಕೆ ಟೇಸ್ಟಿ ಪೌಡರ್ನ ಬಳಕೆ ನಡೆಯುತ್ತಿದೆ, ಆದರೆ ನಿಗಧಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಬಳಸಿದ್ದಲ್ಲಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದ್ದು, ಅಹಾರ ಸುರಕ್ಷತಾ ಅಧಿಕಾರಿಗಳು ಈ ಬಗ್ಗೆ ದಿಢೀರ್ ದಾಳಿ ನಡೆಸಿ, ಆಹಾರ ಪದಾರ್ಥಗಳ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿ, ತಪ್ಪಿತಸ್ಥರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ, ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು. ಅಲ್ಲದೇ ಅನುಮತಿಯಿಲ್ಲದೇ ಅನಧಿಕೃತವಾಗಿ ಟೇಸ್ಟಿ ಪೌಡರ್ ಮಾರಾಟ ಮಾಡುವವರ ವಿರುದ್ದ ಸಹ ಕ್ರಮ ಕೈಗೊಳ್ಳುವಂತೆ ಹೇಳಿದರು.

ಜಿಲ್ಲೆಯ ಬೇಕರಿ ಉತ್ಪನ್ನಗಳ ಗುಣಮಟ್ಟ ಕುರಿತಂತೆ ನಿಯಮಿತವಾಗಿ ಪರಿಶೀಲನೆ ನಡೆಸಬೇಕು, ಆಹಾರ ಪದಾರ್ಥಗಳ ಪ್ಯಾಕೇಟ್ ಮೇಲೆ ಬಳಕೆಗೆ ನಿಗದಿತ ಯೋಗ್ಯ ದಿನಾಂಕ ನಮೂದಿಸಿರುವ ಕುರಿತು ಪರಿಶೀಲಿಸಬೇಕು, ಜಿಲ್ಲೆಯಾದ್ಯಂತ ಪ್ರತೀ ತಿಂಗಳು ನಿರ್ದಿಷ್ಟ ಸಂಖ್ಯೆಯ ವಿವಿಧ ಆಹಾರ ಉತ್ಪನ್ನಗಳ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಸಲ್ಲಿಸಿ, ಅವು ಯಾವುದೇ ರೀತಿಯಲ್ಲಿ ಕಲುಷಿತವಾಗಿರದೇ, ಬಳಕೆಗೆ ಯೋಗ್ಯ ಇದೆಯೇ ಎಂಬ ಬಗ್ಗೆ ವರದಿ ಪಡೆಯುವಂತೆ ತಿಳಿಸಿದರು.

ಹಣ್ಣುಗಳನ್ನು ರಾಸಾಯನಿಕ ಸಿಂಪಡಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ, ಬಾಳೆ ಕಾಯಿಗಳು ಹಣ್ಣು ಮಾಡಲು ರಾಸಾಯನಿಕಗಳ ಬಳಕೆ ನಡೆಯುತ್ತಿದ್ದು ಅಂತಹ ಸ್ಥಳಗಳ ಮೇಲೆ ದಾಳಿ ನಡೆಸಿ, ಬಾಳೆಕಾಯಿ ಮಂಡಿಗಳ ಮೇಲೆ ನಿಗಾ ಇಡುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಎಎಸ್ಪಿ ಕುಮಾರಚಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ್ ಉಡುಪ, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್, ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

seven + 7 =