ನಿರ್ಭಯವಾಗಿ ಪರೀಕ್ಷೆ ಬರೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು. ವಿದ್ಯಾರ್ಥಿನಿಯರನ್ನು ದೋಣಿಯಲ್ಲಿ ಕರೆತಂದ ಅಧಿಕಾರಿಗಳು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಜು.22:
ಎಸ್‌ಎಸ್‌ಎಲ್‌ಸಿ ಎರಡನೇ ದಿನದ ಪರೀಕ್ಷೆಯನ್ನು ಕುಂದಾಪುರ ಹಾಗೂ ಬೈಂದೂರು ತಾಲೂಕು ಸೇರಿದಂತೆ ಉಡುಪಿ ಜಿಲ್ಲಾದ್ಯಂತ ವಿದ್ಯಾರ್ಥಿಗಳು ನಿರ್ಭಯವಾಗಿ ಬರೆದಿದ್ದಾರೆ. ಈ ನಡುವೆ ತುಂಬಿ ಹರಿಯುತ್ತಿದ್ದರಿಂದ ಸೌಪರ್ಣಿಕಾ ನದಿಯ ನಡುವಿನ ಕುರು ದ್ವೀಪದಲ್ಲಿ ಪರೀಕ್ಷೆ ಬರೆಯಲಾಗದ ಆತಂಕದಲ್ಲಿದ್ದ ವಿದ್ಯಾರ್ಥಿಗಳನ್ನು ಸ್ವಯಃ ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಹೆಚ್. ಎಸ್ ಹಾಗೂ ಉಡುಪಿ ಡಿ.ಎಚ್.ಓ ಎನ್. ಎಚ್ ನಾಗೂರು ದೋಣಿಯಲ್ಲಿ ಕರೆತಂದ ಪ್ರಸಂಗ ನಡೆದಿದೆ.

ಸೌಪರ್ಣಿಕ ನದಿಯ ನಡುವಿನ ಕುರು ದ್ವೀಪದ ನಿವಾಸಿಗಳು ದೋಣಿಯನ್ನೇ ನಂಬಿ ಬದುಕು ಸವೆಸುತ್ತಿದ್ದಾರೆ. ಮಳೆಯಿಂದಾಗಿ ನೀರಿನ ಹರಿವು ಹೆಚ್ಚಿದ್ದರಿಂದ ದ್ವೀಪದ ನಿವಾಸಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಾದ ಶಿಲ್ಪಾ ಹಾಗೂ ಸಂಜನಾ ಆತಂಕದಲ್ಲಿದ್ದರು. ಪರೀಕ್ಷಾ ಸಂಯೋಜಕರ ಮೂಲಕ ವಿಷಯ ತಿಳಿದ ಶಿಕ್ಷಣಾಧಿಕಾರಿಗಳು ಹಾಗೂ ತಹಶೀಲ್ದಾರ್ ವಿದ್ಯಾರ್ಥಿಗಳ ಮನೆಗೆ ತೆರಳಿ ದೋಣಿಯಲ್ಲಿ ಅವರನ್ನು ಕರೆತಂದಿದ್ದು, ಬಳಿಕ ಡಿಡಿಪಿಐ ಅವರ ವಾಹನದಲ್ಲಿ ನಾವುಂದ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದಿದ್ದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂದರ್ಭ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಮುಂದಿನಮನಿ, ಶಿಕ್ಷಕ ವಿಶ್ವನಾಥ ಪೂಜಾರಿ ಸೇರಿದಂತೆ ಇತರರು ಜೊತೆಗಿದ್ದರು.

ಉಡುಪಿ ಜಿಲ್ಲೆಯಲ್ಲಿ ಒಟ್ಟು 256 ಪ್ರೌಢ ಶಾಲೆಗಳಿಂದ ಕಲಿಯುತ್ತಿರುವ ವಿದ್ಯಾರ್ಥಿಗಳು ಒಟ್ಟು 77 ಕೇಂದ್ರಗಳಲ್ಲಿ ಪರೀಕ್ಷೆಯನ್ನು ಬರೆದಿದ್ದಾರೆ. ಬೆಳಿಗ್ಗೆ ಜಿಲ್ಲಾ ಖಜಾನೆ, ಕಾರ್ಕಳ, ಕುಂದಾಪುರ ಉಪ ಖಜಾನೆಯಿಂದ ಸಕಾಲಕ್ಕೆ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಒಟ್ಟು 23 ಮಾರ್ಗಗಳಲ್ಲಿ ನಮ್ಮ ಅಧಿಕಾರಿಗಳು ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಿದರು. ಜಿಲ್ಲೆಯ 77 ಕೇಂದ್ರಗಳಲ್ಲಿ ಮಕ್ಕಳು ಕೇಂದ್ರಕ್ಕೆ ಬರಲು ಸಾರಿಗೆ ವ್ಯವಸ್ಥೆಯನ್ನು ಆಯಾ ಕೇಂದ್ರ ಮತ್ತು ಶಾಲೆಯವರು ಹಾಗೂ ಶಿಕ್ಷಕರುಗಳೇ ಮಾಡಿಕೊಂಡಿದ್ದು ವಿಶೇಷವಾಗಿತ್ತು. ಪ್ರತಿ ಕೇಂದ್ರದಲ್ಲಿಯೂ ಸಹ ಪರೀಕ್ಷೆಯ ನಂತರ ಎಲ್ಲ ವಿದ್ಯಾರ್ಥಿಗಳಿಗೆ ಬಿಸ್ಕತ್ತು, ಬಾಳೆಹಣ್ಣು ಕೊಟ್ಟಿದ್ದರು ವಿಶೇಷವಾಗಿತ್ತು. ಕೇಂದ್ರಗಳನ್ನು ತಳಿರು ತೋರಣಗಳಿಂದ, ಬಲೂನ್ ಗಳಿಂದ ಅಲಂಕರಿಸಿದ್ದರು ಮಕ್ಕಳಿಗೆ ಹೂ ನೀಡಿ ಸ್ವಾಗತ ನೀಡಿದ್ದರು.

ಉಡುಪಿ ಡಿಡಿಪಿಐ ಎನ್. ಎಚ್. ನಾಗೂರ ಅವರು ಬೈಂದೂರು ತಾಲೂಕಿನ ಸಪಪೂ ಕಾಲೇಜು ನಾವುಂದ, ಸ ಪ ಪೂ ಕಾಲೇಜು ಉಪ್ಪುಂದ, ಸ ಪ ಪೂ ಕಾಲೇಜು ಕಂಬಂದಕೋಣೆ, ಸ ಪ ಪೂ ಕಾಲೇಜು ಬೈಂದೂರು, ತೌಹಿದ್ ಪಬ್ಲಿಕ್ ಸ್ಕೂಲ್ ಶಿರೂರು, ಹೆಚ್.ಎಂ.ಎಂ. ಆ ಮಾ ಶಾಲೆ ಬೈಂದೂರು, ರತ್ತು ಬಾಯಿ ಪ್ರೌಢ ಶಾಲೆ ಬೈಂದೂರು, ಶ್ರೀ ಮೂಕಾಂಬಿಕಾ ದೇವಳ ಪ್ರೌಢ ಶಾಲೆ ಕೊಲ್ಲೂರು, ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಶೀಲಿಸಿದ್ದಾರೆ.

ಸಿಟಿಒ ಮಂಗಳೂರು ಸಹನಿರ್ದೇಶಕರು ಸಿಪ್ರಿಯನ್ ಮೆಂತೆರೋ, ಅವರು ಕುಂದಾಪುರ ತಾಲೂಕಿನ್ ಮದರ್ ಥೆರೆಸಾ ಪ್ರೌಢ ಶಾಲೆ ಶಂಕರನಾರಾಯಣ, ಸ ಪ ಪೂ ಕಾಲೇಜು ಶಂಕರನಾರಾಯಣ, ಸೈಂಟ್ ಮೇರಿಸ್ ಪ್ರೌಢ ಶಾಲೆ ಕುಂದಾಪುರ, ಸಪ ಪೂ ಕಾಲೇಜು ಕುಂದಾಪುರ, ವೆಂಕಟರಮಣ ಪ್ರೌಢ ಶಾಲೆ ಕುಂದಾಪುರ ಶಾಲೆಗಳಿಗೆ ಭೇಟಿ ನೀಡಿದರು. ಅವರೊಂದಿಗೆ ಕುಂದಾಪುರ ಬಿ.ಇ.ಓ, ಪದ್ಮನಾಭ ಅವರು ಹಾಜರಿದ್ದರು.

ಎಲ್ಲಾ ಕೇಂದ್ರಗಳಲ್ಲಿ ಎಸ್.ಓ.ಪಿ ಪಾಲನೆ ಮಾಡಿ, ಪರೀಕ್ಷೆಯನ್ನು ನಡೆಸುತ್ತಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಉಡುಪಿ ತಾಲೂಕಿನಲ್ಲಿ 21 ಕೇಂದ್ರಗಳಲ್ಲಿ, ಕಾರ್ಕಳ 16 ಕೇಂದ್ರಗಳಲ್ಲಿ, ಬೈಂದೂರ 13, ಕುಂದಾಪುರ 13, ಬ್ರಹ್ಮಾವರ 14 ಕೇಂದ್ರಗಳಲ್ಲಿ ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ನಡೆಸಲಾಯಿತು. ಯಾವುದೇ ಸಾರಿಗೆ ತೊಂದರೆ ಆಗಿಲ್ಲ. ಯಾವುದೇ ಮಕ್ಕಳಿಗೆ ಕೋವಿಡ್ ಲಕ್ಷಣಗಳು ಕಂಡುಬಂದಿಲ್ಲ. ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ನಡೆಸಲಾಗಿದೆ.

ರೆಗ್ಯುಲರ್ ವಿದ್ಯಾರ್ಥಿಗಳ ಹಾಜರಾತಿ ಶೇ. 99.90 ಇದ್ದು ಕಾರ್ಕಳ ಮತ್ತು ಕುಂದಾಪುರ ವಲಯದಲ್ಲಿ ಈ ದಿನ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 100 ಹಾಜರಾತಿ ಇತ್ತು. ಕಾರ್ಕಳ ತಾಲೂಕಿನ 2, ಬ್ರಹ್ಮಾವರ ತಾಲೂಕಿನ 2, ಕುಂದಾಪುರ ತಾಲೂಕಿನ 1 ಒಟ್ಟು 5 ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದರಿಂದ ಆ ಎಲ್ಲ 5 ವಿದ್ಯಾರ್ಥಿಗಳನ್ನು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಅವರನ್ನು ಕೋವಿಡ್ ಕೇರ್ ಸೆಂಟರ್ ನಲ್ಲಿ ಪರೀಕ್ಷೆಯನ್ನು ಬರೆಸಲಾಗಿದೆ.

Leave a Reply

Your email address will not be published. Required fields are marked *

five × four =