ದೇವರ ಅನುಗ್ರಹ ಸಾಧಿಸಲು ಭಜನೆ ಸುಲಭ ಮಾರ್ಗ: ಡಾ. ಡಿ. ವೀರೇಂದ್ರ ಹೆಗ್ಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೇವರ ಸಾಮಿಪ್ಯ ಸಾಧಿಸಲು ಅನುಸರಿಸುವ ನವವಿಧ ಭಕ್ತಿಮಾರ್ಗಗಳಲ್ಲಿ ಭಜನೆಯೂ ಒಂದು. ಅನ್ಯ ಮಾರ್ಗಗಳ ಅನುಸರಣೆ ಸಾಮಾನ್ಯರಿಗೆ ಕಷ್ಟವೆನಿಸುವುದರಿಂದ ಭಜನೆ ಸುಲಭದ ಮಾರ್ಗವೆನಿಸಿ, ನಮ್ಮ ಕಾಲಕ್ಕೆ ತುಂಬ ಪ್ರಶಸ್ತವೆನಿಸಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಹೇರಂಜಾಲು ಗ್ರಾಮದ ಗುಡೇ ಮಹಾಲಿಂಗೇಶ್ವರ ಭಜನಾ ಮಂಡಳಿಯ ಆಶ್ರಯದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಅಖಂಡ ಭಜನಾ ಸಪ್ತಾಹದ ನಡುವೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಅಂದಾಜು ಒಂದು ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ ರಾಜಗೋಪುರ ಕಾಮಗಾರಿಗೆ ಬುಧವಾರ ಶಿಲಾನ್ಯಾಸ ನೆರವೇರಿಸಿದ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿ ಕೀರ್ತನೆಯ ಮೂಲಕ ದೇವರನ್ನು ಒಲಿಸಿಕೊಂಡ ಹಲವು ದೃಷ್ಟಾಂತಗಳಿವೆ. ಅದು ಸಾಧ್ಯವಾಗಬೇಕಾದರೆ ದುಶ್ಚಟಗಳಿಂದ ದೂರರಾಗಿ, ದೀಕ್ಷಾಬದ್ಧರಾಗಿ ಅದನ್ನು ಅನುಸರಿಸಬೇಕು. ದೇವರನ್ನು ತನ್ನೊಳಗೆ ಆಹ್ವಾನಿಸಿಕೊಳ್ಳಬೇಕು ಎಂದರು.

ಭಜನೆಯ ಮಹತ್ವ ಅರಿತ ಕಾರಣ ಧರ್ಮಸ್ಥಳ ಕ್ಷೇತ್ರ ಸಾಮೂಹಿಕ ಭಜನೆಗೆ ತರಬೇತಿಯ ಮೂಲಕ ಜನರನ್ನು ಅಣಿಗೊಳಿಸುತ್ತಿದೆ. ಭಜನೆಯಲ್ಲಿ ಎಲ್ಲ ವರ್ಗದ ಜನರು ಭೇದ ಮರೆತು ಒಂದಾಗುತ್ತಾರೆ. ಸಂಘಟಿತರಾಗಿ ಸಮಾಜಪರ ಕೆಲಸಗಳನ್ನು ಮಾಡುತ್ತಾರೆ. ಅದಕ್ಕೆ ಹೇರಂಜಾಲಿನ ಇಂದಿನ ಕಾರ್ಯಕ್ರಮ ಉತ್ತಮ ಉದಾಹರಣೆ. ಭಜನೆ ಮನೆಯೊಳಗೂ ಶಾಂತಿ, ನೆಮ್ಮದಿ, ಸುಭಿಕ್ಷೆ ತರುತ್ತದೆ ಎಂದು ಅವರು ಹೇಳಿದರು.

ದೇವಾಲಯಕ್ಕೆ ರಾಜಗೋಪುರದ ಅಗತ್ಯವನ್ನು ಪ್ರಸ್ತಾಪಿಸಿದ ಹೆಗ್ಗಡೆಯವರು ಅದರ ಎತ್ತರ ಮತ್ತು ಭವ್ಯತೆ ಆಕಾಶಮಾರ್ಗದಲ್ಲಿ ಸಂಚರಿಸುವ ದೇವತೆಗಳನ್ನು ದೇವಾಲಯದತ್ತ ಆಕರ್ಷಿಸುತ್ತದೆ ಎಂದು ನಂಬಲಾಗುತ್ತದೆ. ದೇವಾಲಯದಲ್ಲಿ ಒಬ್ಬ ದೇವರಿದ್ದರೆ ಗೋಪುರದಲ್ಲಿ ಎಲ್ಲ ದೇವರುಗಳೂ ಇರುತ್ತಾರೆ. ಅದು ನಾಮ ಹಲವಿದ್ದರೂ ದೇವರು ಒಬ್ಬನೇ ಎಂಬ ಕಲ್ಪನೆ ಮೂಡಿಸುತ್ತದೆ. ರಾಜಗೋಪುರ ದೇವಾಲಯ ಪ್ರವೇಶಿಸುವ ಭಕ್ತರಲ್ಲೂ ದೇವರ ದೊಡ್ಡತನದ ಭಾವ ಹುಟ್ಟಿಸುತ್ತದೆ ಎಂದು ಹೇಳಿದರು.

ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ, ದೇವಸ್ಥಾನದ ಗೌರವಾಧ್ಯಕ್ಷ ಎಚ್. ಜಯಶೀಲ ಶೆಟ್ಟಿ, ಆಗಮ ವಿದ್ಯಾ ವಾರಿಧಿ ಕಟ್ಟೆ ಶಂಕರ ಭಟ್ಟ, ಧರ್ಮದರ್ಶಿ ಎಚ್. ಪದ್ಮನಾಭ ಮೆರ್ಟ, ಉದ್ಯಮಿ ಕೃಷ್ಣ ಪೂಜಾರಿ, ಖಜಾಂಚಿ ಎಚ್. ವಿಜಯ ಶೆಟ್ಟಿ ಇದ್ದರು.

ವಿನಾಯಕ ಮೆರ್ಟ ಸ್ವಾಗತಿಸಿದರು. ಭಜನಾ ಮಂಡಳಿಯ ಅಧ್ಯಕ್ಷ ಶ್ರೀನಾಥ ಮೆರ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಮೆರ್ಟ ವಂದಿಸಿದರು. ವಿಶ್ವನಾಥ ಶೆಟ್ಟಿ ನಿರೂಪಿಸಿದರು. ಆಗಮಿಸಿದ ಹೆಗ್ಗಡೆಯವರನ್ನು ದೇವಸ್ಥಾನದ ಸ್ವಾಗತ ಗೋಪುರದಿಂದ ಅಲಂಕೃತ ವಾಹನದಲ್ಲಿ ವೈಭವೋಪೇತ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಗಿತ್ತು.

Leave a Reply

Your email address will not be published. Required fields are marked *

seven − six =