ಭಾರತದ ಚಿಂತನೆ ಜಗತ್ತಿಗೆ ಸ್ಫೂರ್ತಿ. ಸರ್ವರ ಶ್ರೇಯಸ್ಸು ಬಯಸುವ ಹಿಂದೂಗಳದ್ದು ವಿಶಾಲ ಮನೋಭಾವ: ಡಾ. ಕಲ್ಲಡ್ಕ ಪ್ರಭಾಕರ ಭಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಂದಿನ ದಿನಗಳಲ್ಲಿ ಹಿಂದೂ ಎಂದು ಹೇಳಿಕೊಂಡರೂ ಕೋಮುವಾದಿ ಎಂದು ಬಿಂಬಿಸುವ ವಾತಾವರಣ ಸೃಷ್ಠಿಯಾಗಿದೆ. ಹಿಂದೂ ಧರ್ಮವೆಂಬುದು ಒಂದು ಮತ, ಜಾತಿ ಹಾಗೂ ಪ್ರದೇಶಕ್ಕೆ ಸೀಮಿತವಾಗಿಲ್ಲ. ಜಗತ್ತಿನ ಶ್ರೇಯಸ್ಸನ್ನು ಬಯಸುವ ಹಿಂದೂಗಳು ಎಂದಿಗೂ ಸಂಕುಚಿತ ಮನೋಭಾವದವರಾಗಲು ಸಾಧ್ಯವೂ ಇಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ದಕ್ಷಿಣ ಮಧ್ಯಕ್ಷೇತ್ರಿಯ ಕಾರ್ಯಕಾರಣಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಅವರು ಬೈಂದೂರು ಶ್ರೀ ಸೀತಾರಾಮಚಂದ್ರ ಸಭಾಭವನದಲ್ಲಿ ಜರುಗಿದ ವಿಶ್ವ ಹಿಂದೂ ಪರಿಷತ್ – ಬಜರಂಗದಳ ಬೈಂದೂರು ಪ್ರಖಂಡದ ಕಾರ್ಯಕರ್ತರ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಭಾರತದ ಚಿಂತನೆ ಹಾಗೂ ದೃಷ್ಠಿಕೋನವೇ ಭಿನ್ನವಾಗಿದ್ದು ಇಂತಹ ವೈಶಿಷ್ಟ್ಯವನ್ನು ಪ್ರಪಂಚದ ಯಾವುದೇ ದೇಶದಲ್ಲಿಯೂ ಕಾಣಲು ಸಾಧ್ಯವಿಲ್ಲ. ಗೋವನ್ನು ತಾಯಿ ಎಂದು ಪೂಜೆಸುವ, ನದಿನೀರಿನ ಮೂಲವನ್ನು ತೀರ್ಥ ಎಂದು ಸೇವಿಸುವ, ಭೂಮಿಯೆಂಬುದು ಕಲ್ಲು ಮಣ್ಣಿಗೂ ಮಿಗಿಲಾದದ್ದು ಎಂದು ಗೌರವದಿಂದ ಕಾಣುವುದು ನಮ್ಮ ದೇಶದ ಸಂಸ್ಕೃತಿ. ಇಲ್ಲಿನ ಸಂಪ್ರದಾಯಗಳಲ್ಲಿ ವೈರುಧ್ಯವಿದೆ ಆದರೆ ಸಂಸ್ಕೃತಿ ಮಾತ್ರ ಒಂದೇ ಎಂದವರು ನುಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಮಹಾತ್ಮ ಗಾಂಧಿಜಿ ರಾಮರಾಜ್ಯದ ಕನಸು ಕಂಡಿದ್ದರು. ಆದರೆ ಇಂದು ಹಿಂದೂಗಳೇ ತಮ್ಮ ಧರ್ಮಾಚರಣೆಗಳನ್ನು ಸ್ವತಂತ್ರವಾಗಿ ನಡೆಸದ ಸ್ಥಿತಿಗೆ ತಲುಪಿದೆ. ಇಂತಹ ಸ್ಥಿತಿಯಲ್ಲಿ ಹಿಂದೂಗಳಿಗೆ ಧೈರ್ಯ ವಿಶ್ವಾಸವನ್ನು ತುಂಬುವ ಕೆಲಸವನ್ನು ವಿವಿಧ ಹಿಂದೂಪರ ಸಂಘಟನೆಗಳು ನಿರಂತರವಾಗಿ ಮಾಡುತ್ತಿದೆ. ಇದನ್ನು ಸಹಿಸದವರು ಕೋಮುವಾದಿ ಕೆಲಸ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದರು.

ನಮಗೆ ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಾದರೂ ರಾಮ ಜನ್ಮಭೂಮಿಯನ್ನು ರಾಮಮಂದಿರ ನಿರ್ಮಿಸಲು ಸಾಧ್ಯವಾಗಿಲ್ಲ. ದೇಶದ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಉಳಿಸಿಕೊಳ್ಳುವ ಸಲುವಾಗಿ ಬೇಕಿದ್ದ ಸ್ವಾತಂತ್ರ್ಯ, ಅಧಿಕಾರದ ಹಸ್ತಾಂತರದ ಪ್ರಕ್ರಿಯಷ್ಟೇ ಆಗಿದ್ದರಿಂದ ಈವರೆಗೆ ನಮ್ಮ ಉದ್ದೇಶ ಈಡೇರಿಲ್ಲ. ಆದರೆ ಈಗ ಮತ್ತೆ ರಾಮಮಂದಿರ ನಿರ್ಮಾಣಕ್ಕೆ ಪ್ರತಿಕೂಲ ವಾತಾವರಣ ನಿರ್ಮಾಣವಾಗಿದ್ದು, ಧರ್ಮ ಸಂಸದ್ ಮೂಲಕ ರಾಮಮಂದಿರ ಯಾವಾಗ ನಿರ್ಮಾಣ ಮಾಡಬೇಕು ಎಂಬುದು ನಿರ್ಣಯವಾಗಲಿದೆ ಎಂದರು

ಮಕ್ಕಳ ಅನ್ನಕ್ಕೆ ಕಲ್ಲು ಹಾಕಿದ ಸರಕಾರ:
ಕೊಲ್ಲೂರು ದೇವಸ್ಥಾನದಿಂದ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳಿಗೆ ಬರುತ್ತಿದ್ದ ಅನ್ನಪ್ರಸಾದವನ್ನು ತಡೆಹಿಡಿಯುವ ಮೂಲಕ ರಾಜ್ಯ ಸರಕಾರ ಊಟದಲ್ಲಿಯೂ ರಾಜಕೀಯ ಮಾಡಿದೆ. ಮಕ್ಕಳ ಅನ್ನವನ್ನು ಕಸಿದುಕೊಂಡು ಈಗ ಬಿಸಿಯೂಟಕ್ಕೆ ಮನವಿ ಸಲ್ಲಿಸುವಂತೆ ಕೇಳಿಕೊಳ್ಳುತ್ತಿದೆ. ಆದರೆ ಇದು ನಮ್ಮ ಸ್ವಾಭಿಮಾನದ ಪ್ರಶ್ನೆ. ಭಿಕ್ಷೆ ಬೇಡಿಯಾದರೂ ಮಕ್ಕಳಿಗೆ ಊಟ ಹಾಕುತ್ತೇಯೇ ಹೊರತು ಸರಕಾರದಿಂದ ನೆರವು ಪಡೆಯಲಾರೆವು ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಚಾರದ ಗೋಪಾಲಕೃಷ್ಣ ಶಿರೂರು, ಬಜರಂಗದಳದ ಪ್ರಮುಖಾದ ಶರಣ ಪಂಪ್‌ವೆಲ್, ಸುನಿಲ್ ಕೆ.ಆರ್, ಮರವಂತೆ ಶ್ರೀರಾಮ ಭಜನಾ ಕೇಂದ್ರದ ಅಧ್ಯಕ್ಷ ವೆಂಕಟರಮಣ ಖಾರ್ವಿ, ವಿಶ್ವ ಹಿಂದೂ ಪರಿಷತ್ – ಬಜರಂಗದಳದ ಬೈಂದೂರು ಪ್ರಖಂಡ ಸಂಚಾಲಕ ನಿತ್ಯಾನಂದ ಉಪ್ಪುಂದ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ ಬಜರಂಗದಳದ ವಿವಿಧ ಘಟಕಗಳಿಗೆ ಧ್ವಜ ನೀಡಲಾಯಿತು.

ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಂದೂರು ಪ್ರಖಂಡದ ಅಧ್ಯಕ್ಷ ಶ್ರೀಧರ ಬಿಜೂರು ಸ್ವಾಗತಿಸಿದರು. ವಿಜಯ ಕಂಚಿಕಾನ್ ನಿರೂಪಿಸಿದರು.

Leave a Reply

Your email address will not be published. Required fields are marked *

1 × 2 =