ಕುಂದಾಪುರ: ಗಾಯಕ ರಾಜೇಶ್ ಕೃಷ್ಣನ್‌ಗೆ ಡಾ. ಎಸ್. ಜಾನಕಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂಗೀತ ಕ್ಷೇತ್ರದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಮೂಲಕ ಕರಾವಳಿಯಲ್ಲಿನ ಉದಯೋನ್ಮುಖ ಪ್ರತಿಭೆ ಗಳಿಗೆ ಅವಕಾಶ ನೀಡುವ ಕಾರ್ಯ ವಾಗಬೇಕು ಎಂದು ನಾಡೋಜಾ ಡಾ. ಜಿ. ಶಂಕರ್ ಹೇಳಿದರು.

ಮನಸ್ಮಿತ ಫೌಂಡೇಶನ್ ಕೋಟ, ಗೀತಾನಂದ ಫೌಂಡೇಶನ್ ಮಣೂರು ಹಾಗೂ ಯುವ ಮೆರಿಡಿಯನ್ ಸಹಭಾಗಿತ್ವದಲ್ಲಿ ಕೋಟೇಶ್ವರದ ಯುವ ಮೆರಿಡಿಯನ್ ಒಪೆರಾ ಪಾರ್ಕ್‌ನಲ್ಲಿ ಶನಿವಾರ ರಾತ್ರಿ ಹಮ್ಮಿಕೊಳ್ಳಲಾದ ಡಾ. ಎಸ್. ಜಾನಕಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಗಾನಕೋಗಿಲೆ ಬಿರುದಿಗೆ ಪಾತ್ರರಾದ ಎಸ್. ಜಾನಕಿ ಹೆಸರಿನಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಮಿತ ಭಾಷಿ, ಸಹೃದಯಿಯಾಗಿರುವ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಲಭಿಸಿರುವುದು ನಿಜಕ್ಕೂ ಶ್ಲಾಘನೀಯ ವಾಗಿದ್ದು ಇದು ಜಾನಕಿ ಅಮ್ಮನಿಗೂ ತೃಪ್ತಿದಾಯಕ ವಿಚಾರ ಎಂದರು.

ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ ಗಾಯಕ ರಾಜೇಶ್ ಕೃಷ್ಣನ್, ಹಲವಾರು ಪ್ರಶಸ್ತಿಗಳು ಈ ಹಿಂದೆ ಸಿಕ್ಕಿದ್ದರೂ ಕೂಡ ಈ ಪ್ರಶಸ್ತಿಗೆ ಅದರದ್ದೇ ಆದ ಗೌರವವಿದೆ. ಸುಮಾರು ೨೬ ವರ್ಷಗಳ ಹಿಂದೆ ಹಳ್ಳಿಮೇಷ್ಟ್ರು ಚಿತ್ರದ ವೇಳೆ ಎಸ್. ಜಾನಕಿ ಯವರನ್ನು ಮೊದಲು ಭೇಟಿಯಾಗಿದು, ಅವರು ನಾನು ಹಾಡಿದ ಹಾಡನ್ನು ಮೆಚ್ಚಿದ್ದರು. ಇದೇ ವೇಳೆ ನನ್ನ ಕೋರಿಕೆ ಮೇರೆಗೆ ಮನೆಗೆ ಬಂದಿದ್ದಲ್ಲದೇ ನೀನೊಬ್ಬ ಒಳ್ಳೆಯ ಗಾಯಕನಾಗುವೆ ಎಂದು ಆಶೀರ್ವಾದ ಮಾಡಿದ್ದರು. ಇಂದು ಅವರ ಹೆಸರಿನಲ್ಲಿ ಪಡೆದ ಪ್ರಶಸ್ತಿಯಿಂದ ಖುಷಿಯಾಗಿದೆ. ಸಂಗೀತಕ್ಕೆ ಈ ಭಾಗದ ಜನರು ತೋರುತ್ತಿರುವ ಅಭಿಮಾನ, ಕಾಳಜಿ ಅಪಾರ ಎಂದ ರಾಜೇಶ್ ಕೃಷ್ಣನ್ ಆ ಕ್ಷಣ ಭಾವುಕರಾದರು.

ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ, ಉದ್ಯಮಿಗಳಾದ ಸುಕುಮಾರ ಶೆಟ್ಟಿ, ಆದರ್ಶ ಶೆಟ್ಟಿ ಮುಂಬಯಿ, ಯುವ ಮೆರಿಡಿಯನ್ ಸ್ಥಾಪಕ ಸಹೋದರರಾದ ಉದಯ ಕುಮಾರ್ ಶೆಟ್ಟಿ, ವಿನಯಕುಮಾರ್ ಶೆಟ್ಟಿ, ಚಿತ್ರ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ, ಉದ್ಯಮಿ ಕಾರ್ತಿಕೇಯ ಮದ್ಯಸ್ಥ, ಪ್ರಶಾಂತ್ ಕುಂದರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವೈದ್ಯ ಹಾಗೂ ಗಾಯಕ ಡಾ. ಸತೀಶ್ ಪೂಜಾರಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಕೋಟದ ಮನಸ್ಮಿತ ಫೌಂಡೇಶನ್ ಪ್ರವರ್ತಕ ಡಾ. ಪ್ರಕಾಶ್ ತೋಳಾರ್ ಸ್ವಾಗತಿಸಿ, ಉಪನ್ಯಾಸಕ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಹಾಗೂ ಬಳಿಕ ರಸಮಂಜರಿ ಕಾರ್ಯಕ್ರಮ ನಡೆಯಿತು. ಇದೇ ವೇಳೆ ರಾಜೇಶ್ ಕೃಷ್ಣನ್ ಹಾಡಿದ ಹಾಡುಗಳು ಸಂಗೀತ ಪ್ರಿಯರನ್ನುರಂಜಿಸಿತು.

Leave a Reply

Your email address will not be published. Required fields are marked *

2 + sixteen =