ತೌಕ್ತೆ ಚಂಡಮಾರುತದಿಂದ ವಿವಿಧೆಡೆ ಹಾನಿ: ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ತೌತೆ ಚಂಡಮಾರುತದಿಂದ ಬಾಧಿತವಾದ ಬೈಂದೂರು ಕ್ಷೇತ್ರದ ಪ್ರದೇಶಗಳಿಗೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಇಲ್ಲಿನ ನಿವಾಸಿಗಳೊಡನೆ, ಆಗಿರುವ ಹಾನಿ ಕುರಿತು ಮಾಹಿತಿ ಪಡೆದರು. ಸ್ಥಳದಿಂದಲೇ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ತೀವ್ರ ಹಾನಿ ಸಂಭವಿಸಿದ ಪ್ರದೇಶಗಳಲ್ಲಿ ತಕ್ಷಣ ಪರಿಹಾರಾತ್ಮಕ ಕಾಮಗಾರಿ ನಡೆಸಿ ಅವುಗಳನ್ನು ಹಿಂದಿನ ಸ್ಥಿತಿಗೆ ತರಬೇಕು. ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ತೀವ್ರವಾಗಿ ಜರ್ಝರಿತವಾಗಿರುವ ಮರವಂತೆ ಮೀನುಗಾರಿಕಾ ಹೊರಬಂದರು ಪ್ರದೇಶವನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗಂಗೊಳ್ಳಿಯಿಂದ ಶಿರೂರು ವರೆಗಿನ ಕಡಲತೀರ ಚಂಡಮಾರುತದಿಂದ ಘಾಸಿಗೊಂಡಿದೆ. ಮರವಂತೆಯಲ್ಲಿ ಬಂದರಿನ ಉತ್ತರ ದಿಕ್ಕಿನ ತೀರ ಕೊಚ್ಚಿಹೋಗಿದೆ. ನೂರಾರು ತೆಂಗಿನ ಮರಗಳು ಉರುಳಿ ಸಮುದ್ರ ಸೇರಿವೆ. 26 ಮೀನುಗಾರಿಕಾ ಶೆಡ್‌ಗಳಿಗೆ ಹಾನಿಯಾಗಿದೆ. ರಸ್ತೆ ಸಂಪರ್ಕ ಕಡಿದಿದೆ. ಹತ್ತು ಮೀನುಗಾರರ ಮನೆಗಳು ಕುಸಿಯುವ ಭೀತಿ ಎದುರಿಸುತ್ತಿವೆ. ಗಂಗೊಳ್ಳಿ, ಹೊಸಾಡಿನ ಕಂಚುಗೋಡು, ಉಪ್ಪುಂದದ ಮಡಿಕಲ್, ಅಳ್ವೆಕೋಡಿ, ತಾರಾಪತಿ, ದುರ್ಮಿಗಳಲ್ಲೂ ಮನೆಗಳಿಗೆ, ಶೆಡ್‌ಗಳಿಗೆ ಹಾನಿಯಾಗಿ ಆಸ್ತಿಪಾಸ್ತಿಗೆ ನಷ್ಟ ಸಂಭವಿಸಿದೆ. ಅಳ್ವೆಕೋಡಿಯಲ್ಲಿ ಸಮುದ್ರ ಉಕ್ಕೇರಿ ಹರಿದು ತೋಟ, ಮನೆಗಳಿಗೆ ನೀರು ನುಗ್ಗಿದೆ. ಆಗಿರುವ ಹಾನಿಯ ವಿವರಗಳನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಿ, ಕೊರೆತ ಸಂಭವಿಸಿದಲ್ಲಿ ತಡೆಗೋಡೆ ನಿರ್ಮಿಸಬೇಕು, ಕಡಿದು ಹೋದ ರಸ್ತೆಯನ್ನು ಶೀಘ್ರ ಪುನರ್ ರಚಿಸಬೇಕು, ನಷ್ಟ ಅನುಭವಿಸಿದವರಿಗೆ ಪರಿಹಾರ ನೀಡಬೇಕು, ಕೊರೆತದಿಂದ ಅಪಾಯಕ್ಕೀಡಾದ ಮನೆಗಳ ನಿವಾಸಿಗಳಿಗೆ ಬದಲಿ ನಿವೇಶನ ಮತ್ತು ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದ್ದೇನೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್‌ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಪೂಜಾರಿ ಕರ್ಕಿಕಳಿ, ಬ್ಲಾಕ್ ಮೀನುಗಾರಿಕಾ ಘಟಕದ ಅಧ್ಯಕ್ಷ ನಾಗೇಶ ಖಾರ್ವಿ, ಪ್ರಮುಖರಾದ ಎಂ. ವಿನಾಯಕ ರಾವ್, ರಾಮಕೃಷ್ಣ ಖಾರ್ವಿ ಇದ್ದರು.

► ಮರವಂತೆ ಕೊರೆತ ತಡೆಗೆ ಸುಸ್ಥಿರ ಯೋಜನೆಗೆ ಯತ್ನ: ಸಚಿವ ಕೋಟ, ದೊಂಬೆಯಲ್ಲಿ ಶಾಶ್ವತ ತಡೆಗೆ ಪ್ರಸ್ತಾವನೆ: ಶಾಸಕ ಬಿಎಂಎಸ್ – https://kundapraa.com/?p=48261 .

Leave a Reply

Your email address will not be published. Required fields are marked *

8 + 12 =