ಕಿರಿಮಂಜೇಶ್ವರ: ಕುಟುಂಬದ ಸದಸ್ಯರ ಮೇಲೆ ಗಂಭೀರ ಹಲ್ಲೆ, ಮಹಿಳೆ ಗಂಭೀರ, ನಾಲ್ವರಿಗೆ ಗಾಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜಾಗದ ತಕರಾರಿನ ಕಾರಣ 6 ಜನರ ತಂಡ ಶನಿವಾರ ಕಿರಿಮಂಜೇಶ್ವರದ ಮನೆಯೊಂದಕ್ಕೆ ನುಗ್ಗಿ ತಲವಾರಿನಿಂದ ಹಲ್ಲೆ ನಡೆಸಿ ಐದು ಮಂದಿಯ ಮೇಲೆ ಗಂಭೀರ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಕಿರಿಮಂಜೇಶ್ವರದ ಗಂಗೆಬೈಲು ಗಾಂಧಿನಗರದ ಕೋಣೆಗದ್ದೆಮನೆಯ ಶಾರದಾ(32) ಗಂಭೀರವಾಗಿ ಗಾಯಗೊಂಡಿದ್ದು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಶೀಲಾ (52), ಗಣೇಶ(45), ಉಷಾ (52), ಶಾರದಾ(45) ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೋಣೆಗದ್ದೆ ಮನೆಯವರು ಕಿರಿಮಂಜೇಶ್ವರ ಜಾತ್ರೆಗೆ ಹೋಗಿ ಮನೆಗೆ ಬಂದು ಊಟ ಮಾಡುತ್ತಿದ್ದಾಗ ನಾಣನ ಮನೆಯ ಶೋಭಾ, ಅವರ ಸಹೋದರರಾದ ಸತೀಶ, ದಾಮೋದರ, ರತ್ನಾಕರ, ಶಿವರಾಮ ಮತ್ತು ಪತಿ ನವೀನಚಂದ್ರ ಇದ್ದ ತಂಡ ಮನೆಗೆ ನುಗ್ಗಿ ತಲವಾರ, ದೊಣ್ಣೆ, ಕತ್ತಿಯಿಂದ ದಾಳಿ ನಡೆಸಿದೆ. ಗಾಬರಿಗೊಂಡ ಮನೆಯವರು ದಿಕ್ಕುಪಾಲಾಗಿ ಓಡುತ್ತಿದ್ದಾಗ ಮಹಿಳೆಯರೆಂದು ನೋಡದೆ ತಲವಾರು ಬೀಸಿದ ಪರಿಣಾಮ ಶಾರದಾ ಅವರ ತಲೆ, ಕುತ್ತಿಗೆಗೆ ತೀವ್ರವಾದ ಗಾಯವಾಗಿದ್ದು, ಮೂಗಿನಲ್ಲಿ ರಕ್ತ ಸ್ರಾವವಾಗಿದೆ. ಸುಶೀಲಾ, ಶಾರದಾ ಅವರ ಕೈ ಹಾಗೂ ಕಾಲಿನಲ್ಲಿ ಗಾಯಗಳಾಗಿವೆ. ಗಣೇಶ, ಉಷಾ ಅವರ ಕೈ, ದೇಹದ ಭಾಗಗಳಿಗೆ ಪೆಟ್ಟು ಬಿದ್ದಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ನಾಣನ ಮನೆಯ ಮುಂದೆ ಸಂಜೆ ವೇಳೆ ವಾಹನ ನಿಲ್ಲಿಸಿದ ವಿಷಯಕ್ಕೆ ಎರಡು ಮನೆಯವರ ನಡುವೆ ಜಗಳ ನಡೆದಿತ್ತು. ಆ ಸಂಬಂಧ ಕೋಣೆಗದ್ದೆಮನೆ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಈ ಕುರಿತು ಬೆಳಗ್ಗೆ ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ಮನೆ ಮಂದಿ ಕಿರಿಮಂಜೇಶ್ವರ ಜಾತ್ರಗೆ ಹೋಗಿ ಬಂದು ಊಟ ಮಾಡುತ್ತಿದ್ದಾಗ ಹಲ್ಲೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ದೇವಾಡಿಗ ಸಂಘದಿಂದ ಪ್ರತಿಭಟನೆಯ ಎಚ್ಚರಿಕೆ :
ಬಡ ಕುಟುಂದ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿರುವ ಅಮಾನವಿಯ ಕೃತ್ಯವನ್ನು ಖಂಡಿಸಿರುವ ದೇವಾಡಿಗ ಸಂಘಟನೆಗಳು ಆರೋಪಿಗಳನ್ನು ತಕ್ಷಣ ಬಂಧಿಸಿ ಕ್ರಮಕೈಗೊಳ್ಳದಿದ್ದರೆ ರಾಜ್ಯದ ದೇವಾಡಿಗ ಸಮುದಾಯದವರು ಒಟ್ಟಾಗಿ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯ ದೇವಾಡಿಗ ಸಮಾಜದ ಸಂಘಟನೆಯ ಅಧ್ಯಕ್ಷ ರಾಜು ದೇವಾಡಿಗ ಎಚ್ಚರಿಸಿದ್ದಾರೆ.

 

Leave a Reply

Your email address will not be published. Required fields are marked *

three × one =