ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೇಂದ್ರ ಸರ್ಕಾರ ಹಲವು ಬಾರಿ ರೈತರೊಂದಿಗೆ ಸಭೆ ನಡೆಸಿರುವುದಲ್ಲದೇ ಮಾತುಕತೆಗೆ ಸಿದ್ದವಿರುವುದಾಗಿ ತಿಳಿಸಿದೆ. ನೂತನ ಕಾಯ್ದೆಯಲ್ಲಿ ಲೋಪದೋಷಗಳಿದ್ದರೆ ತಿದ್ದುಪಡಿ ಮಾಡುವುದಾಗಿಯೂ ಹೇಳಿದೆ. ಆದರೆ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ರೈತ ಹೋರಾಟವು ರಾಜಕೀಯ ಹೋರಾಟವಾಗಿ ಮಾರ್ಪಟ್ಟಿರುವುದರಿಂದ ಅದು ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ರೈತರೇ ಹೋರಾಟ ಮಾಡುತ್ತಿದ್ದರೆ ಸಮಸ್ಯೆ ಎಂದೋ ಬಗೆಹರಿಯುತ್ತಿತ್ತು. ಆದರೆ ರೈತರ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ವಿದ್ರೋಹಿ ಶಕ್ತಿಗಳು ಅನಗತ್ಯವಾಗಿ ಹೋರಾಟ ಮುಂದುವರಿಯುವಂತೆ ಮಾಡಿದ್ದಾರೆ. ರೈತಪರ ಹೋರಾಟದಲ್ಲಿ ಭಯೋತ್ಪಾಕರ ಬಿಡುಗಡೆಯ ಕೂಗು ಕೇಳುತ್ತಿರುವುದು ಹೋರಾಟದ ಹಾದಿಗೆ ಹಿಡಿದ ಕನ್ನಡಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಅವರು ಕುಂದಾಪುರ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಕೃಷಿ ಮಸೂದೆ 2020ರ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವ ಕಾಂಗ್ರೆಸ್ ರೈತರ ಹೋರಾಟದ ದಿಕ್ಕುತಪ್ಪಿಸುತ್ತಿದೆ. ಕೇಂದ್ರದಲ್ಲಿ ಅಂದು ಕೃಷಿ ಮಂತ್ರಿಯಾಗಿದ್ದ ಶರತ್ ಪವಾರ್ ಎಪಿಎಂಸಿ ರದ್ದು ಮಾಡುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರೇ, ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಎಪಿಎಂಸಿ ಕಾಯ್ದೆಯಿಂದ ಹಣ್ಣು ತರಕಾರಿ ತೆಗೆಯಬೇಕು ಎಂದಿದ್ದರು. ಕಾಂಗ್ರೆಸ್ ಚುನಾವಣೆ ಪ್ರನಾಳಿಕೆಯಲ್ಲಿಯೂ ಕೃಷಿಯಲ್ಲಿ ಖಾಸಗೀಕರಣಕ್ಕೆ ಒತ್ತುಕೊಡುತ್ತೇವೆ ಎಂಬ ಭರವಸೆ ನೀಡಿತ್ತು. ಹೀಗಿದ್ದರೂ ಪ್ರಸಕ್ತ ಕೇಂದ್ರ ಸರ್ಕಾರ ತಂದ ಹೊಸ ಕೃಷಿ ನೀತಿಯ ವಿರೋಧಿಸುವ ಹಿಂದಿನ ಉದ್ದೇಶ ಏನು ಎಂದು ಅವರು ಪ್ರಶ್ನಿಸಿದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ ಕೂಡಾ ದೆಹಲಿಯಲ್ಲಿ ಕೇಂದ್ರದ ಕೃಷಿ ನೀತಿ ಅನುಮೋದಿಸಿದ್ದು, ರಾಜಕೀಯ ಲಾಭಕ್ಕಾಗಿ ಹೋರಾಟದ ಹಿನ್ನೆಲೆಯಲ್ಲಿ ನೂತನ ಕೃಷಿ ನೀತಿ ಪ್ರತಿಗಳ ಹರಿದು ಹಾಕಿದ್ದಾರೆ. ಅಕಾಲಿದಳ ಕೂಡಾ ಎಪಿಎಂಸಿ ಲಾಭಿಗೆ ಮಣಿದಿದೆ. ಎಪಿಎಂಸಿಯಲ್ಲಿ ದಲ್ಲಾಳಿ ಹಾವಳಿ ನಿಯಂತ್ರಣ ಹಾಗೂ ಬೆಂಬಲ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲದ, ರೈತರ ಸ್ವಾವಲಂಭಿ ಹಾಗೂ ಆರ್ಥಿಕ ಸದೃಢತೆಗಾಗಿ ನೂತನ ಕಾಯ್ದೆಯಿದ್ದು, ಇದನ್ನು ವಿರೋಧಿಸುವ ಮೂಲಕ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಆಂಕದಕಟ್ಟೆ, ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್. ಪೂಜಾರಿ, ಪುರಸಭೆ ಮಾಜಿ ಅಧ್ಯಕ್ಷೆ ಗುಣರತ್ನಾ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ಪೈ ಇದ್ದರು.