ಬೈಂದೂರು ಪಟ್ಟಣ ಪಂಚಾಯಿತಿ ಅಸ್ತಿತ್ವಕ್ಕೆ. ಅಂತಿಮ ಅಧಿಸೂಚನೆ ಪ್ರಕಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು, ಯಡ್ತರೆ ಮತ್ತು ಪಡುವರಿ ಗ್ರಾಮ ಪಂಚಾಯಿತಿಗಳನ್ನು ಒಗ್ಗೂಡಿಸಿ ಬೈಂದೂರು ಪಟ್ಟಣ ಪಂಚಾಯಿತಿ ಅಸ್ತಿತ್ವಕ್ಕೆ ತರುವ ಅಧಿಸೂಚನೆ ಬುಧವಾರದ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟವಾಗಿದೆ. ಅದರೊಂದಿಗೆ ಬೈಂದೂರು ಪಟ್ಟಣ ಪಂಚಾಯಿತಿ ಅಸ್ತಿತ್ವಕ್ಕೆ ಬಂದಿದೆ.

ಕಳೆದ ವರ್ಷ ಡಿ. 31ರಂದು ಸಚಿವಾಲಯವು ಪಟ್ಟಣ ಪಂಚಾಯಿತಿ ರಚನೆ ಪ್ರಸ್ತಾವನೆಯನ್ನು ಪ್ರಕಟಿಸಿ ಬಾಧಿತರಾಗುವವರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಈಗ ಏಳು ತಿಂಗಳ ಬಳಿಕ ಅಂತಿಮ ಅಧಿಸೂಚನೆ ಹೊರಡಿಸಿದೆ. ಸರ್ಕಾರದ ಇಂದಿನ ನಡೆಯಿಂದ ತಾಲ್ಲೂಕು ಕೇಂದ್ರವಾಗಿರುವ ಬೈಂದೂರು ಪ್ರದೇಶದ ಅಭಿವೃದ್ಧಿಗೆ ವೇಗ ಸಿಗುತ್ತದೆ ಎಂದು ಕನಸು ಕಂಡವರಿಗೆ ಸಂತಸವಾಗಿದೆ.

1971ರಲ್ಲಿ ಬೈಂದೂರು, ಯಡ್ತರೆ ಗ್ರಾಮ ಪಂಚಾಯಿತಿಗಳು ಸೇರಿ ಪುರಸಭೆಯಾಯಿತು. ಅದರ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳೂ ನಡೆದಿದ್ದುವು. ಆದರೆ ಗ್ರಾಮೀಣ ಪ್ರದೇಶಕ್ಕೆ ಸಿಗುವ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ ಎಂದು ಭಾವಿಸಿದ ಇಲ್ಲಿನ ಜನರ ಆಗ್ರಹಕ್ಕೆ ಮಣಿದ ಸರ್ಕಾರ ಅವುಗಳನ್ನು 1997ರಲ್ಲಿ ಪೂರ್ವ ಸ್ಥಿತಿಗೆ ಮರಳಿಸಿತು. ಈಚಿನ ದಿನಗಳಲ್ಲಿ ಪ್ರದೇಶದ ಅಭಿವೃದ್ಧಿಗೆ ಪಟ್ಟಣ ಪಂಚಾಯಿತಿ ಅಥವಾ ಪುರಸಭೆ ಆಗುವುದೇ ಒಳಿತು ಎಂಬ ಭಾವನೆ ಬಂದ ಕಾರಣ ಜನರು ತಮ್ಮ ಪ್ರತಿನಿಧಿಗಳ ಮೇಲೆ ತಂದ ಒತ್ತಡದ ಫಲವಾಗಿ ಪಟ್ಟಣ ಪಂಚಾಯಿತಿ ರೂಪು ತಳೆದಿದೆ.

ಲಾಭ ನಷ್ಟದ ಲೆಕ್ಕಾಚಾರ: ಪಟ್ಟಣ ಪಂಚಾಯಿತಿಗಳಿಗೆ ಗ್ರಾಮ ಪಂಚಾಯಿತಿಗಳಿಗಿಂತ ಅಧಿಕ ವರಮಾನ ಮತ್ತು ಅನುದಾನ ಬರುತ್ತದೆ. ನಿರ್ದಿಷ್ಟ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ, ಕೇಂದ್ರ ಮತ್ತು ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದಲೂ ಧಾರಾಳ ನೆರವು ಸಿಗುತ್ತದೆ. ಕರಾವಳಿ ನಿಯಂತ್ರಣ ವಲಯ ನಿರ್ಬಂಧದಿಂದ ಮುಕ್ತವಾಗುತ್ತದೆ ಎಂಬ ಲಾಭದ ಲೆಕ್ಕಾಚಾರ ಒಂದೆಡೆಯಾದರೆ, ಅಕ್ರಮ ಸಕ್ರಮ ಯೋಜನೆ, ಗ್ರಾಮೀಣ ಕೃಪಾಂಕ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಿಂದ ಹೊರಹೋಗುವಂತಹ ನಷ್ಟವನ್ನೂ ಅನುಭವಿಸಬೇಕಾಗುತ್ತದೆ ಎಂಬ ಲೆಕ್ಕಾಚಾರ ಈ ಹಂತದಲ್ಲಿ ನಡೆದಿದೆ.

ಬೈಂದೂರು ಪಟ್ಟಣ ಪಂಚಾಯಿತಿಯ ವ್ಯಾಪ್ತಿ 54.24 ಚದರ ಕಿಲೋಮೀಟರು ಇರಲಿದೆ. 2011ರ ಜನಗಣತಿಯ ಪ್ರಕಾರ ಅದರ ಜನಸಂಖ್ಯೆ 24,957 ಮತ್ತು ಜನಸಾಂದ್ರತೆ 433 ವ್ಯಾಪ್ತಿಯ ಕೃಷಿಯೇತರ ಚಟುವಟಿಕೆಗಳ ಉದ್ಯೋಗ ಪ್ರಮಾಣ ಶೇ. 55 ಪೂರ್ವದಲ್ಲಿ ಪಶ್ಚಿಮ ಘಟ್ಟ ಮತ್ತು ಯಳಜಿತ ಗ್ರಾಮ, ಪಶ್ಚಿಮದಲ್ಲಿ ಅರಬೀ ಸಮುದ್ರ, ಉತ್ತರದಲ್ಲಿ ಭಾಗಶ: ಶಿರೂರು ಗ್ರಾಮ ಮತ್ತು ಪಶ್ಚಿಮ ಘಟ್ಟ ಹಾಗೂ ದಕ್ಷಿಣದಲ್ಲಿ ಸುಮನಾವತಿ ನದಿ ಈ ಪಟ್ಟಣ ಪಂಚಾಯಿತಿಯ ಗಡಿಗಳಾಗಿವೆ.

ಬೈಂದೂರು ಪಟ್ಟಣ ಪಂಚಾಯಿತಿ ಈ ಪ್ರದೇಶದ ಜನರ ಹಲವು ವರ್ಷಗಳ ಕನಸು. ಬೈಂದೂರು ಜನರ ಬೇಡಿಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಸಂಸದ ಬಿ. ವೈ. ರಾಘವೇಂದ್ರ ಅವರ ಮೂಲಕ ಈಡೇರಿದೆ. ಇದರಿಂದ ವ್ಯಾಪ್ತಿಯ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ. – ಬಿ. ಎಂ. ಸುಕುಮಾರ ಶೆಟ್ಟಿ, ಶಾಸಕರು

 

Leave a Reply

Your email address will not be published. Required fields are marked *

8 + 4 =