ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಹಕಾರಿ ಸಂಸ್ಥೆಯು ಲಾಭದ ಹಾದಿಯಲ್ಲಿ ಮುನ್ನಡೆದು, ಆರ್ಥಿಕ ದೃಢತೆ ಸಾಧಿಸಿ ಉತ್ತಮ ಸೇವಾ ದಾಖಲೆ ಹೊಂದಬೇಕಾದರೆ ಆಡಳಿತ ಮಂಡಳಿ, ಸಿಬ್ಬಂದಿ, ಸದಸ್ಯರ ಮತ್ತು ಸಾರ್ವಜನಿಕರ ಬೆಂಬಲ ಅಗತ್ಯ. ಇಪ್ಪತ್ತೈದು ವರ್ಷಗಳಿಂದ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹುದ್ದೆಯಲ್ಲಿ ಅಂತಹ ಸಹಕಾರ ದೊರೆತ ಕಾರಣ ಅದನ್ನು ಜಿಲ್ಲೆಯ ಯಶಸ್ವೀ ಸಹಕಾರಿ ಸಂಸ್ಥೆಯಾಗಿ ರೂಪಿಸಲು ಸಾಧ್ಯವಾಗಿದೆ ಎಂದು ಎಸ್. ರಾಜು ಪೂಜಾರಿ ಹೇಳಿದರು.
ಸೋಮವಾರ ನಡೆದ ಸಂಘದ ಮರವಂತೆ ಶಾಖೆಯ ನೂತನ ಕಚೇರಿ ಕಟ್ಟಡ ನಿರ್ಮಾಣದ ಶಂಕು ಸ್ಥಾಪನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಂಘದ ನಾವುಂದದ ಪ್ರಧಾನ ಕಚೇರಿ ಮತ್ತು ಹೇರೂರು ಶಾಖಾ ಕಚೇರಿ ಸಾಲ ಪಡೆದು ನಿರ್ವಹಿಸಿದ್ದರೆ, ಬಡಾಕೆರೆ ಕಚೇರಿ ಮತ್ತು ಮರವಂತೆ ಪ್ರಸಕ್ತ ಕಟ್ಟಡವನ್ನು ಸಂಘದ ಕಟ್ಟಡ ನಿಧಿಯಿಂದ ಮಾಡಲು ಸಾಧ್ಯವಾಗಿದೆ. ಇದು ಸಂಘ ಸಾಧಿಸಿದ ಬೆಳವಣಿಗೆ ಮತ್ತು ದೃಢತೆಯ ದ್ಯೋತಕ ಎಂದ ಅವರು ಮರವಂತೆಯ ನಿವೇಶನವನ್ನು ಉಚಿತವಾಗಿ ನೀಡಿದ ಗ್ರಾಮ ಪಂಚಾಯಿತಿಗೆ ಕೃತಜ್ಞತೆ ಸಲ್ಲಿಸಿದರು.
ಶಿಲಾನ್ಯಾಸಗೈದ ಸಂಘದ ಹಿರಿಯ ಸದಸ್ಯ ಎಸ್. ಜನಾರ್ದನ ಶುಭ ಕೋರಿ, ನೂತನ ಕಟ್ಟಡದಿಂದ ಸಂಘದ ಮರವಂತೆ ಭಾಗದ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ಸೇವೆ ಸಿಗುವಂತಾಗಲಿ ಎಂದರು.
ನಿರ್ದೇಶಕ ಎಂ. ಅಣ್ಣಪ್ಪ ಬಿಲ್ಲವ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು. ನಾಗೇಂದ್ರ ಭಟ್ ಪೂಜಾವಿಧಿ ನೆರವೇರಿಸಿದರು. ಗ್ರಾಮ ಪಂಚಾಯಿತಿ ನಿರ್ಗಮನ ಅಧ್ಯಕ್ಷೆ ಅನಿತಾ ಆರ್. ಕೆ, ವಲಯ ಮೇಲ್ವಿಚಾರಕ ವಿಠಲ ಗೌಡ, ಸಂಘದ ಉಪಾಧ್ಯಕ್ಷ ಚಂದ್ರಶೀಲ ಶೆಟ್ಟಿ, ನಿರ್ದೇಶಕರಾದ ವಾಸು ಪೂಜಾರಿ, ಜಗದೀಶ ಪೂಜಾರಿ, ಪ್ರಕಾಶ ದೇವಾಡಿಗ, ನರಸಿಂಹ ದೇವಾಡಿಗ, ನಾಗಮ್ಮ, ಸರೋಜಾ ಗಾಣಿಗ, ನಾರಾಯಣ ಶೆಟ್ಟಿ, ಭೋಜ ನಾಯ್ಕ್, ರಾಮಕೃಷ್ಣ ಖಾರ್ವಿ, ರಾಮ ಗಾಂಧಿನಗರ, ಮಾಜಿ ಅಧ್ಯಕ್ಷರಾದ ಎಂ. ವಿನಾಯಕ ರಾವ್, ಎಂ. ಲಕ್ಷ್ಮೀನಾರಾಯಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ ಮಡಿವಾಳ, ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಜಗದೀಶ ಅವಭೃತ, ಶಾಖಾಧಿಕಾರಿ ಎಂ. ಸೋಮಯ್ಯ ಬಿಲ್ಲವ ಇದ್ದರು.