ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಾಹಿತಿ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರ ಸ್ಮರಣಾರ್ಥವಾಗಿ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಗಾಂಧಿ ಮೈದಾನದ ಸಮೀಪ ₹4.95 ಕೋಟಿ ವೆಚ್ಚದಲ್ಲಿ ಪುರಭವನ ನಿರ್ಮಾಣಕ್ಕೆ ಸಂಸದ ಬಿ. ವೈ. ರಾಘವೇಂದ್ರ ಅವರು ಶಂಕುಸ್ಥಾಪನೆ ನೆರವೇರಿಸಲಾಯಿತು.
ಈ ಸಂದರ್ಭ ಅವರು ಮಾತನಾಡಿ, ನವ್ಯ ಕಾವ್ಯದ ಮೂಲಕ ಮನೆಮಾತಾದ ಸಾಹಿತಿ ಕವಿ ಗೋಪಾಲಕೃಷ್ಣ ಅಡಿಗ ಅವರ ಹೆಸರನ್ನು ಶಾಶ್ವತವಾಗಿಸುವ ನಿಟ್ಟಿನಲ್ಲಿ ಪುರಭವನ ನಿರ್ಮಿಸಲಾಗುತ್ತಿದೆ. ಬೈಂದೂರು ಕ್ಷೇತ್ರದ ಜನರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹಾಗೂ ತಾಲೂಕು ಕೇಂದ್ರಕ್ಕೆ ಅವಶ್ಯವಿರುವ ಎಲ್ಲಾ ಸರಕಾರಿ ಕಛೇರಿಗಳನ್ನು ಈ ಭಾಗಕ್ಕೆ ತರಲು ಶ್ರಮಿಸಲಾಗುತ್ತಿದೆ ಎಂದರು.
ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರು ಮಾತನಾಡಿ ಬೈಂದೂರು ಕ್ಷೇತ್ರದ ಅಭಿವೃದ್ಧಿಗಾಗಿ ನೀಡಲಾದ ಭರವಸೆಗಳನ್ನು ಬಹುಪಾಲು ಈಡೇರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್., ಯೋಜನಾ ಆಯೋಜದ ಅಧಿಕಾರೇತರ ಸದಸ್ಯೆ ಪ್ರಿಯದರ್ಶಿನಿ ಕಮಲೇಶ್, ಜಿಪಂ ಮಾಜಿ ಸದಸ್ಯರುಗಳಾದ ಬಾಬು ಶೆಟ್ಟಿ ತಗ್ಗರ್ಸೆ, ಶಂಕರ ಪೂಜಾರಿ, ಸುರೇಶ್ ಬಟವಾಡಿ, ತಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಹಿರಿಯ ಸಾಹಿತಿ ಯು. ಚಂದ್ರಶೇಖರ ಹೊಳ್ಳ, ಮೊಗೇರಿ ಗೋಪಾಲಕೃಷ್ಣ ಅಡಿಗರ ಕುಟುಂಬದ ಜಯರಾಮ ಅಡಿಗ, ನಿವೃತ್ತ ಉಪನ್ಯಾಸಕ ಜನಾರ್ದನ ಮರವಂತೆ, ಬೈಂದೂರು ಬಿಜೆಪಿ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.